ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹31,000 ಕೋಟಿ ವೆಚ್ಚದಲ್ಲಿ ಭಾರತ–ಮ್ಯಾನ್ಮಾರ್ ಗಡಿಯ 1,643 ಕಿ.ಮೀ ಬೇಲಿ

Published : 18 ಸೆಪ್ಟೆಂಬರ್ 2024, 10:58 IST
Last Updated : 18 ಸೆಪ್ಟೆಂಬರ್ 2024, 10:58 IST
ಫಾಲೋ ಮಾಡಿ
Comments

ನವದೆಹಲಿ: ಮಾದಕ ವಸ್ತುಗಳು, ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಕಳ್ಳಸಾಗಣೆ ಮೂಲಕ ಕುಖ್ಯಾತಿ ಪಡೆದಿರುವ ಭಾರತ–ಮ್ಯಾನ್ಮಾರ್ ನಡುವಿನ 1,643 ಕಿ.ಮೀ ಗಡಿಯುದ್ದಕ್ಕೂ ₹31,000 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರವು ಬೇಲಿ ನಿರ್ಮಾಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಜನಾಂಗೀಯ ಹಿಂಸೆಗೆ ಸಾಕ್ಷಿಯಾದ ಮಣಿಪುರ ರಾಜ್ಯವು ಮ್ಯಾನ್ಮಾರ್ ಜೊತೆ ಹಂಚಿಕೊಂಡಿರುವ 30 ಕಿ.ಮೀ ಗಡಿಯ ಬೇಲಿ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದರು.

ಅಂದಾಜು ₹31,000 ಕೋಟಿ ವೆಚ್ಚದಲ್ಲಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ 1,643 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಬೇಲಿ ಮತ್ತು ರಸ್ತೆಗಳ ನಿರ್ಮಾಣಕ್ಕೆ ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿಯು ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮೊರೆಹ್ ಪ್ರದೇಶದಲ್ಲಿ 10 ಕಿ.ಮೀ ಬೇಲಿ ನಿರ್ಮಾಣ ಮುಗಿಯುವ ಹಂತಕ್ಕೆ ಬಂದಿದೆ. ಇನ್ನುಳಿದ 21 ಕಿ.ಮೀ ಬೇಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಮ್ಯಾನ್ಮಾರ್ ಜೊತೆ ಗಡಿ ಹಂಚಿಕೊಂಡಿವೆ.

ಭಾರತ–ಮ್ಯಾನ್ಮಾರ್ ಮುಕ್ತ ಸಂಚಾರ ಆಡಳಿತವನ್ನು(ಎಫ್‌ಎಂಆರ್) ಕೇಂದ್ರ ಸರ್ಕಾರ ಈಗಾಗಲೇ ರದ್ದು ಮಾಡಿದೆ. ಇದರನ್ವಯ ಉಭಯ ದೇಶಗಳ ಗಡಿ ಸಮೀಪದಲ್ಲಿ ನೆಲೆಸಿರುವ ಜನರು 16 ಕಿ.ಮೀ ಒಳಗೆ ಯಾವುದೇ ದಾಖಲಾತಿಗಳಿಲ್ಲದೆ ಸಂಚಾರ ಮಾಡಬಹುದಿತ್ತು. 2018ರಲ್ಲಿ ಪೂರ್ವ ನೀತಿ ಅನ್ವಯ ಕೇಂದ್ರ ಸರ್ಕಾರವು ಈ ನಿಯಮವನ್ನು ಜಾರಿಗೊಳಿಸಿತ್ತು.

ಮಣಿಪುರ ಗಡಿಯ ಭದ್ರತೆ ಕುರಿತಂತೆ ಅಮಿತ್ ಶಾ ನಿರಂತರ ಸಭೆ ನಡೆಸುತ್ತಿದ್ದು, ಅಗತ್ಯ ಕ್ರಮ ಜರುಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಣಿಪುರದಲ್ಲಿ ಸಿಆರ್‌ಪಿಎಫ್‌ನ 2 ಬೆಟಾಲಿಯನ್ ನಿಯೋಜಿಸಲಾಗಿದೆ. ಸುಮಾರು 200 ಕಂಪನಿಗಳಷ್ಟು ಕೇಂದ್ರೀಯ ಪೊಲೀಸ್ ಪಡೆಯನ್ನು ರಾಜ್ಯದ ಇತರೆಡೆಗೆ ನಿಯೋಜಿಸಲಾಗಿದೆ.

ಸಾರ್ವಜನಿಕರಿಗೆ ನ್ಯಾಯ ಬೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ 25 ವ್ಯಾನ್‌ಗಳಲ್ಲಿ ಮೊಬೈಲ್ ಶಾಪ್‌ಗಳನ್ನು ಮಣಿಪುರ ಸರ್ಕಾರ ಬಳಸುತ್ತಿದೆ. ಮಣಿಪುರದ ಎಲ್ಲ ಜಿಲ್ಲೆಗಳಲ್ಲೂ ಈ ಮೊಬೈಲ್ ಶಾಪ್‌ಗಳು ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT