ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಎ ಬಗ್ಗೆ ಸುಳ್ಳು ಹಬ್ಬಿಸಿ ಗಲಭೆ ಎಬ್ಬಿಸಲು ಎಸ್‌ಪಿ, ಕಾಂಗ್ರೆಸ್ ಯತ್ನ: ಮೋದಿ

Published 16 ಮೇ 2024, 9:30 IST
Last Updated 16 ಮೇ 2024, 9:30 IST
ಅಕ್ಷರ ಗಾತ್ರ

ಆಜಂಗಢ (ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಕಾಯ್ದೆ(CAA) ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಬುಧವಾರ ಅಧಿಕೃತವಾಗಿ ಆರಂಭಿಸಿದೆ. ಆದರೆ ಪ್ರತಿಪಕ್ಷಗಳಾದ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಕಾಂಗ್ರೆಸ್ ಈ ಕಾನೂನಿನ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ದೇಶದಲ್ಲಿ ಗಲಭೆ ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಲಾಲ್‌ಗಂಜ್ ಪ್ರದೇಶದಲ್ಲಿ ಲೋಕಸಭೆ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇವರು ದೀರ್ಘಕಾಲದಿಂದ ನಿರಾಶ್ರಿತರಾಗಿ ದೇಶದಲ್ಲಿ ವಾಸಿಸುತ್ತಿದ್ದಾರೆ. ಈ ನಿರಾಶ್ರಿತರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದೂ ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ಸಿಎಎ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಲು ಯತ್ನಿಸಿದವು. ಅಲ್ಲದೇ ಉತ್ತರ ಪ್ರದೇಶ ಸೇರಿದಂತೆ ದೇಶದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದರು ಎಂದು ಪ್ರಧಾನಿ ದೂರಿದ್ದಾರೆ.

‘ನೀವು ಮೋಸಗಾರರು... ದೇಶವನ್ನು ಕೋಮುವಾದದ ಬೆಂಕಿಯಲ್ಲಿ ಸುಡುವಂತೆ ಮಾಡಿದ್ದೀರಿ’ ಎಂದು ಹೆಸರು ಹೇಳದೆಯೇ ವಿರೋಧ ಪಕ್ಷಗಳನ್ನು ಟೀಕಿಸಿದ ಪ್ರಧಾನಿ, ‘ಸಿಎಎ ಅಡಿಯಲ್ಲಿ ಸಾವಿರಾರು ಮಂದಿ ನಿರಾಶ್ರಿತರು ಭಾರತದ ಪೌರತ್ವ ಪಡೆಯಲಿದ್ದಾರೆ’ ಎಂದು ತಿಳಿಸಿದರು.

'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೆ ಅದು ಅಸಾಧ್ಯ. ನೀವು ಏನು ಬೇಕಾದರೂ ಮಾಡಿ. ಆದರೆ ಸಿಎಎ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಬಗ್ಗೆ ಮಾತನಾಡಿ, ‘ಕಾಶ್ಮೀರದಲ್ಲಿ ಈಚೆಗೆ ಮತದಾನ ನಡೆದಾಗ ಜನರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಬಹಳ ಸಂಭ್ರಮದಿಂದ ಪಾಲ್ಗೊಂಡರು. 370 ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ಮರಳಿ ತರಲು ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಶ್ರೀನಗರದ ಜನರು ಮತದಾನದ ವೇಳೆ ತೋರಿದ ಉತ್ಸಾಹವೇ ಸಾಕ್ಷಿ’ ಎಂದು ಹೇಳಿದರು.

ಪ್ರಧಾನಿ ಮಾತು...

  • ದೇಶದ ಯಾವುದೇ ಭಾಗದಲ್ಲಿ ಬಾಂಬ್‌ ಸ್ಫೋಟ ನಡೆದರೂ ಜನರು ಉತ್ತರ ಪ್ರದೇಶದ ಆಜಂಗಢವನ್ನು ನೆನಪಿಸುತ್ತಿದ್ದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಆಜಂಗಢ ಚಿತ್ರಣವೇ ಬದಲಾಗಿದೆ.

  • ಎಸ್‌ಪಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ‘ಗೂಂಡಾ ರಾಜ್’ ಇತ್ತು. ಯೋಗಿ ಆದಿತ್ಯನಾಥ್‌ ಅವರು ಮಾಫಿಯಾ, ದಂಗೆಕೋರರು ಮತ್ತು ಸುಲಿಗೆಕೋರರ ವಿರುದ್ಧ ಹೋರಾಟ ನಡೆಸಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಮರಳಿ ಸ್ಥಾಪಿಸಿದರು.

  • ಈ ಲೋಕಸಭಾ ಚುನಾವಣೆಯು ‘ಭಾರತದ ಶಕ್ತಿಯನ್ನು ಜಗತ್ತಿಗೆ ತಿಳಿಯಪಡಿಸುವ’ ಬಲಿಷ್ಠ ಸರ್ಕಾರವನ್ನು ಮುನ್ನಡೆಸಬಲ್ಲ ನಾಯಕನ ಆಯ್ಕೆ ಮಾಡಲು ಮತದಾರರಿಗೆ ಲಭಿಸಿದ ಒಂದು ಅವಕಾಶ. 

  • ಒಂದು ಬಲಿಷ್ಠ ಸರ್ಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾಶಿ ಮತ್ತು ಅಯೋಧ್ಯೆಯನ್ನು ನೋಡಿದಾಗ ನಿಮಗೆ ತಿಳಿಯುತ್ತದೆ.

  • ಕಾಂಗ್ರೆಸ್‌ ಮತ್ತು ಎಸ್‌ಪಿ, ಉತ್ತರ ಪ್ರದೇಶದಲ್ಲಿ ‘ಟಿಎಂಸಿ ಮಾದರಿ ರಾಜಕಾರಣ’ ಮಾಡಲು ಪ್ರಯತ್ನಿಸುತ್ತಿವೆ.  ಟಿಎಂಸಿ ರಾಜಕಾರಣ ಎಂದರೆ ಹಿಂದೂಗಳ ಕೊಲೆ, ದಲಿತರು ಮತ್ತು ಆದಿವಾಸಿಗಳಿಗೆ ಕಿರುಕುಳ ನೀಡುವುದು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಆಗಿದೆ.

  • ಅಮೇಠಿಯನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ ರಾಯ್‌ಬರೇಲಿಯಲ್ಲೂ ಸೋಲಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT