ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದಿಂದಲ್ಲ:ಸದ್ಗುರು ಜಗ್ಗಿ ವಾಸುದೇವ್

Published : 22 ಸೆಪ್ಟೆಂಬರ್ 2024, 7:26 IST
Last Updated : 22 ಸೆಪ್ಟೆಂಬರ್ 2024, 7:26 IST
ಫಾಲೋ ಮಾಡಿ
Comments

ನವದೆಹಲಿ: ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದದ ಬಗ್ಗೆ ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಪ್ರತಿಕ್ರಿಯಿಸಿದ್ದಾರೆ.

‘ತಿರುಪತಿಯ ಪ್ರಸಾದ ‘ಲಾಡು’ ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದು ಅಸಹ್ಯಕರವಾಗಿದೆ. ಹಾಗಾಗಿ ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ. ಎಲ್ಲಿ ಭಕ್ತಿ ಇಲ್ಲವೋ ಅಲ್ಲಿ ಪಾವಿತ್ರ್ಯತೆ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಧರ್ಮನಿಷ್ಠ ಹಿಂದೂಗಳು ನಡೆಸುತ್ತಾರೆ, ಸರ್ಕಾರದ ಆಡಳಿತದಿಂದಲ್ಲ’ ಎಂದು ಜಗ್ಗಿ ವಾಸುದೇವ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತ ತಿರುಪತಿ ಲಾಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ, 'ಈ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನು ಉಂಟು ಮಾಡಿದೆ' ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸ್ವ-ಹಿತಾಸಕ್ತಿಯ ಅಧಿಕಾರಿಗಳು, ನಿರ್ದಯಿ ವ್ಯಾಪಾರಸ್ಥರು ಮತ್ತು ರಾಜಕಾರಣಿಗಳ ಬದಲು ದೇವಾಲಯದ ನಿರ್ವಹಣೆಯನ್ನು ಧಾರ್ಮಿಕ ಮುಖಂಡರು ಹಾಗೂ ಭಕ್ತರಿಗೆ ವಹಿಸಿಕೊಡುವ ಸಮಯ ಬಂದಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪವನ್ನು ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಈ ವಿಷಯ ಭಾರಿ ವಿವಾದಕ್ಕೀಡಾಗಿತ್ತು.

ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದವು ಆಂಧ್ರ ಪ್ರದೇಶವಷ್ಟೇ ಅಲ್ಲದೇ ದೇಶದಾದ್ಯಂತ ಸದ್ದುಮಾಡಿದೆ.

ದೇವಸ್ಥಾನದ ಪಾವಿತ್ರ್ಯ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ವಿವಿಧೆಡೆ ಕೇಳಿಬಂದಿದೆ. ಆಂಧ್ರ ಮತ್ತು ದೇಶದ ವಿವಿಧೆಡೆ ರಾಜಕೀಯ ನಾಯಕರ ವಾಗ್ವಾದವೂ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT