ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳನ್ನು ಗೆದ್ದಿದ್ದರೂ EVM ನಂಬುವುದಿಲ್ಲ: ಅಖಿಲೇಶ್

Published 2 ಜುಲೈ 2024, 9:44 IST
Last Updated 2 ಜುಲೈ 2024, 9:44 IST
ಅಕ್ಷರ ಗಾತ್ರ

ನವದೆಹಲಿ: ‘ಉತ್ತರ ಪ್ರದೇಶ ದಲ್ಲಿನ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದರೂ ಇವಿಎಂಗಳನ್ನು ನಂಬೋದಿಲ್ಲ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರದ (ಇವಿಎಂ) ವಿಶ್ವಾಸರ್ಹತೆ ಕುರಿತಂತೆ ಪ್ರಶ್ನೆ ಎತ್ತಿದ್ದಾರೆ.

‘ನಿನ್ನೆಯೂ ಇವಿಎಂಗಳನ್ನು ನಂಬಿರಲಿಲ್ಲ. ಇಂದು ಸಹ ನಂಬಲ್ಲ. ಎಲ್ಲ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ನಂಬಲ್ಲ. ಇವಿಎಂಗಳ ಸಮಸ್ಯೆ ಮುಗಿದ ಅಧ್ಯಾಯವಲ್ಲ. ಈ ವಿಷಯದಲ್ಲಿ ಸಮಾಜವಾದಿಗಳ ನಿಲುವು ಅಚಲವಾಗಿರುತ್ತದೆ’ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ‘2024ರ ಲೋಕಸಭೆ ಚುನಾವಣೆಯು ದೇಶದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದೆ. ಈ ಚುನಾವಣಾ ಫಲಿತಾಂಶ ಇಂಡಿಯಾ ಮೈತ್ರಿಕೂಟದ ನೈತಿಕ ವಿಜಯವಾಗಿದೆ’ ಎಂದಿದ್ದಾರೆ.

‘ಚುನಾವಣಾ ಫಲಿತಾಂಶ ಪ್ರಕಟವಾದ ಜೂನ್ 4 ಭಾರತಕ್ಕೆ ಕೋಮು ರಾಜಕೀಯದಿಂದ ಮುಕ್ತಿ ಸಿಕ್ಕ ದಿನವಾಗಿದೆ. ದೇಶದಲ್ಲಿ ಕೋಮು ರಾಜಕೀಯವೂ ಶಾಶ್ವತವಾಗಿ ಅಂತ್ಯ ಕಂಡಿದೆ. ರಾಮಮಂದಿರ ನಿರ್ಮಾಣವಾಗಿರುವ ಅಯೋಧ್ಯೆಯ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿರುವುದು ಮತದಾರರ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಬಿಜೆಪಿಯ ಸೋಲು ಶ್ರೀರಾಮನ ಆಶಯವೂ ಆಗಿರಬಹುದು’ ಎಂದು ಹೇಳಿದ್ದಾರೆ.

‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಆಯೋಗವು ಕೆಲವರಿಗೆ ಅನುಕೂಲ ಮಾಡಿಕೊಟ್ಟಂತಿತ್ತು. ಈ ಬಗ್ಗೆ ಹೆಚ್ಚಿನ ವಿವರಣೆಗೆ ನಾನು ಮುಂದಾಗಲ್ಲ. ಆ ಸಂಸ್ಥೆಯ ಬಗ್ಗೆ ಎಲ್ಲೋ ಒಂದು ಪ್ರಶ್ನೆ ಎದ್ದಿದೆ’ ಎಂದು ‌ಚುನಾವಣಾ ಆಯೋಗದ ಕುರಿತಂತೆಯೂ ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ನೀಟ್‌ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಕಿಡಿಕಾರಿದ ಅವರು, ‘ಶಿಕ್ಷಣ ಮಾಫಿಯಾ ಹುಟ್ಟಿರುವುದೇ ಈ ಸರ್ಕಾರದ ಕಳೆದ ಹತ್ತು ವರ್ಷಗಳ ಸಾಧನೆಯಾಗಿದೆ. ದೇಶದ ಅತಿ ದೊಡ್ಡ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೂಡ ಸೋರಿಕೆಯಾಗಿದೆ. ಯುವಕರಿಗೆ ಉದ್ಯೋಗ ನೀಡಬಾರದು ಎಂಬ ಕಾರಣಕ್ಕೆ ಸರ್ಕಾರ ಇಂತಹ ಕೆಲಸಗಳನ್ನು ಮುಂದುವರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಉದ್ಯೋಗ ಕೊಡುವುದಾದರೆ ಮೀಸಲಾತಿಯೂ ಕೊಡಬೇಕು. ಉದ್ಯೋಗ ಮತ್ತು ಮೀಸಲಾತಿ ಕುರಿತಂತೆ ಸರ್ಕಾರ ಆಟವಾಡುತ್ತಿದೆ’ ಎಂದು ಹೇಳಿದ್ದಾರೆ.

‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸುತ್ತದೆ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ತರುತ್ತದೆ’ ಎಂದು ಪುನರುಚ್ಛರಿಸಿದ್ದಾರೆ.

ಇದೇ ವೇಳೆ ಜಾತಿ ಗಣತಿ ನಡೆಸುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT