ಬೆಂಗಳೂರು: ಕೊಳವೆಬಾವಿಗೆ ಕಂದಮ್ಮ ಗಳು ಬಿದ್ದು ಸಂಭವಿಸುವ ದುರಂತಗಳನ್ನು ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ, ಕೊಳವೆಬಾವಿ ಕೊರೆಸುವ ಜಮೀನಿನ ಮಾಲೀಕರು, ಅನುಷ್ಠಾನಗೊಳಿಸುವ ಸಂಸ್ಥೆಗಳು ಮತ್ತು ಕೊರೆಯುವ ಏಜೆನ್ಸಿಗಳು ಷರತ್ತುಗಳನ್ನು ಉಲ್ಲಂಘಿಸಿದರೆ ₹25 ಸಾವಿರವರೆಗೆ ದಂಡ, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲು ನಿರ್ಧರಿಸಿದೆ.

ಈ ಉದ್ದೇಶದಿಂದ, ಬೆಳಗಾವಿಯಲ್ಲಿ ಡಿ.9ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ‘ಕರ್ನಾಟಕ ಅಂತರ್ಜಲ (ನಿಯಂತ್ರಣ, ಅಭಿವೃದ್ಧಿ ಮತ್ತು ನಿರ್ವಹಣೆ) ಕಾಯ್ದೆ 2011’ಕ್ಕೆ ತಿದ್ದುಪಡಿಗೆ ಮಸೂದೆ ಮಂಡಿಸಲು ಸರ್ಕಾರ ತೀರ್ಮಾನಿಸಿದೆ.

ಕೊಳವೆಬಾವಿ ದುರಂತ ಮರು ಕಳಿಸಲು ಕಾರಣವಾದ ಏಜೆನ್ಸಿಯ ಕೊರೆಯುವ ಉಪಕರಣಗಳು ಮತ್ತು ಇತರ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲು ಕೂಡಾ ಈ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಕಳೆದ ಎರಡು ದಶಕಗಳಲ್ಲಿ ಎಂಟು ಕೊಳವೆಬಾವಿ ದುರಂತಗಳು ಸಂಭವಿಸಿವೆ. ಈ ಪೈಕಿ, ಐದು ಪ್ರಕರಣಗಳು ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಎರಡು ಪ್ರಕರಣಗಳಲ್ಲಿ ಮಾತ್ರ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಇದೇ ಏಪ್ರಿಲ್ 3ರಂದು ತೆರೆದ ಕೊಳವೆಬಾವಿಗೆ ತಲೆಕೆಳಗಾಗಿ ಬಿದ್ದು, ಜೀವನ್ಮರಣ ಹೋರಾಟ ನಡೆಸಿದ್ದ 14 ತಿಂಗಳ ಮಗು ಸಾತ್ವಿಕ್ ಪವಾಡ ಸದೃಶವಾಗಿ ಬದುಕಿ ಬಂದಿದ್ದ. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಇಂತಹ ದುರಂತ ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಗಂಭೀರ ಚಿಂತನೆ ನಡೆಸಿತ್ತು.

ಕಾಯ್ದೆಗೆ ತಿದ್ದುಪಡಿ ಯಾದರೆ, ಜಮೀನು ಮಾಲೀ ಕರು ಅಥವಾ ಅನುಷ್ಠಾನ ಸಂಸ್ಥೆಯು ಅಧಿಸೂಚಿತ ಪ್ರದೇಶವನ್ನು ಹೊರತುಪಡಿಸಿ ಇತರ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವುದಕ್ಕಿಂತ ಕನಿಷ್ಠ 15 ದಿನ ಮುಂಚಿತವಾಗಿ ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗೆ ಲಿಖಿತವಾಗಿ ತಿಳಿಸಬೇಕು. ಯಾವುದೇ ಅನಾಹುತ ಸಂಭವಿಸಬಾರದೆಂಬ ಕಾರಣಕ್ಕೆ, ಕೊಳವೆಬಾವಿ ಕೊರೆದ 24 ಗಂಟೆಯ ಒಳಗೆ ಜಮೀನಿನ ಮಾಲೀಕರು, ಕೊರೆದ ಏಜೆನ್ಸಿ ಅಥವಾ ಅನುಷ್ಠಾನ ಸಂಸ್ಥೆಯು ಬೋಲ್ಟ್ಗಳು ಮತ್ತು ನಟ್ಗಳ ಸ್ಟೀಲ್ ಕ್ಯಾಪ್ನಿಂದ ಅಥವಾ ಥ್ರೆಡ್ ಕ್ಯಾಪ್ನಿಂದ ಆ ಕೊಳವೆಬಾವಿಯನ್ನು ಸರಿಯಾಗಿ ಮುಚ್ಚಬೇಕು.

ವಿಫಲವಾದ ಅಥವಾ ಕೈಬಿಡಲಾದ ಅಥವಾ ಅಪೂರ್ಣ ಕೊಳವೆಬಾವಿ ಅಥವಾ ಕೊಳವೆ ಬಾವಿಯ ಗುಂಡಿ ಮತ್ತು ಕುಸಿತವನ್ನು ತಪ್ಪಿಸಲು, ಅದನ್ನು ಕಲ್ಲುಗಳು ಮತ್ತು ಕೆಸರಿನಿಂದ ತುಂಬಿಸಬೇಕು. ಅಲ್ಲದೆ, ಸುತ್ತ ನೆಲಮಟ್ಟದಿಂದ ಎರಡು ಅಡಿ ಎತ್ತರದಲ್ಲಿ ಗುಡ್ಡ ನಿರ್ಮಿಸಬೇಕು. ಬಳಿಕ ಮುಳ್ಳುತಂತಿ ಅಥವಾ ಮುಳ್ಳಿನ ಗಿಡಗಳಿಂದ ಬೇಲಿ ಹಾಕಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಂಬಂಧಪಟ್ಟ ಪ್ರಾಧಿಕಾರವು ತಪಾಸಣೆ ನಡೆಸಿ, ಕೊಳವೆಬಾವಿ ಸರಿಯಾಗಿ ಮುಚ್ಚಿರುವ ಬಗ್ಗೆ ದೃಡೀಕರಿಸುವ ಪ್ರಮಾಣಪತ್ರ ನೀಡಬೇಕು.

ಕೊಳವೆಬಾವಿಯನ್ನು ಮುಚ್ಚಿರುವ ಕುರಿತು ಕೊರೆಯುವ ಏಜೆನ್ಸಿ ಮತ್ತು ಜಮೀನು ಮಾಲೀಕರು ಆಯಾ ನಗರಸಭೆಯ ಆಯುಕ್ತ ಅಥವಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡುವ ಕಿರಿಯ ಎಂಜಿನಿಯರ್ಗೆ ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಆಡಳಿತಾಧಿಕಾರಿಗೆ ಜಂಟಿ ಘೋಷಣೆ ಸಲ್ಲಿಸಬೇಕು. ಕೊಳವೆ ಬಾವಿಯನ್ನು ದುರಸ್ತಿ ಮಾಡಲು ಸಬ್ ಮರ್ಸಿಬಲ್ ಪಂಪ್ ತೆಗೆದ ತಕ್ಷಣ ಮಾಲೀಕರು ಅಥವಾ ಸೇವಾ ಏಜೆನ್ಸಿಯು ಸ್ಟೀಲ್ ಕ್ಯಾಪ್ ಮೂಲಕ ಅಥವಾ ಥ್ರೆಡ್ ಕ್ಯಾಪ್ನಿಂದ ಸರಿಯಾಗಿ ಮುಚ್ಚಬೇಕು. ವಿಫಲ ಕೊಳವೆ ಬಾವಿಯನ್ನು ಪುನರುಜ್ಜೀವನ ಗೊಳಿಸಲು ಜಮೀನಿನ ಮಾಲೀಕರು ಬಯಸಿದರೂ ಕೂಡಾ ಸುರಕ್ಷಿತವಾಗಿ ಮುಚ್ಚಬೇಕು ಎಂದೂ ತಿದ್ದುಪಡಿ ಮಸೂದೆಯಲ್ಲಿದೆ.

ಕಾಯ್ದೆ ತಿದ್ದುಪಡಿಯಾದರೆ ಏನೇನು ಶಿಕ್ಷೆ?

ಕೊಳವೆಬಾವಿ ಕೊರೆಯಲು ವಿಧಿಸಿದ ಷರತ್ತುಗಳನ್ನು ಪಾಲಿಸದಿದ್ದರೆ ಜಮೀನಿನ ಮಾಲೀಕರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 10 ಸಾವಿರ ದಂಡ

ಕೊರೆಯುವ ಏಜೆನ್ಸಿಯವರು ಷರತ್ತುಗಳನ್ನು ಉಲ್ಲಂಘಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹ 25 ಸಾವಿರ ದಂಡ

ಕೊಳವೆಬಾವಿ ಕೊರೆಯುವ ಸ್ಥಳದಲ್ಲಿ ಅನುಷ್ಠಾನ ಸಂಸ್ಥೆ ಅಥವಾ ಮಾಲೀಕರ ಸಂಪೂರ್ಣ ವಿಳಾಸದ ಫಲಕವನ್ನು ಕೊರೆಯುವ ಏಜೆನ್ಸಿಯವರು ಸ್ಥಾಪಿಸ ದಿದ್ದರೆ 3 ತಿಂಗಳು ಜೈಲು, ₹ 5 ಸಾವಿರ ದಂಡ

ಕೊಳವೆಬಾವಿ ದುರಂತಕ್ಕೆ ಅಧಿಕಾರಿಗಳು ಕಾರಣರಾದರೆ, ದುಷ್ಕೃತ್ಯವೆಂದು ಪರಿಗಣಿಸಿ ಶಿಸ್ತು ಕ್ರಮ

11 ಮಸೂದೆ ಸಿದ್ಧ

‘ಕರ್ನಾಟಕ ಅಂತರ್ಜಲ (ನಿಯಂತ್ರಣ, ಅಭಿವೃದ್ಧಿ ಮತ್ತು ನಿರ್ವಹಣೆ) ಕಾಯ್ದೆ 2011’ಕ್ಕೆ ತಿದ್ದುಪಡಿಯೂ ಸೇರಿದಂತೆ ಒಟ್ಟು 11 ಮಸೂದೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧಪಡಿಸಿದೆ. ಈ ಪೈಕಿ, ಬಿಬಿಎಂಪಿ (ಎರಡನೇ ತಿದ್ದುಪಡಿ), ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ರೋಪ್ವೇ ಮಸೂದೆ, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣೆ (ತಿದ್ದುಪಡಿ) ಮಸೂದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರವೇ ಕುಲಪತಿಯನ್ನು ನೇಮಿಸುವ ಅಧಿಕಾರಕ್ಕೆ ಸಂಬಂಧಿಸಿದ ಕಾಯ್ದೆ ತಿದ್ದುಪಡಿಗೆ ಮಸೂದೆ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಕರ್ನಾಟಕ ಕಾರ್ಮಿಕ ಅಭಿವೃದ್ಧಿ ನಿಧಿ (ತಿದ್ದುಪಡಿ), ಚಾಣಕ್ಯ, ಅಲಯನ್ಸ್ ಮತ್ತು ಅಜೀಂ ಪ್ರೇಮ್ಜಿ ಈ ಮೂರೂ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗೆ ಸರ್ಕಾರದ ಪ್ರತಿನಿಧಿಯನ್ನು ನೇಮಿಸಲು ಈ ವಿಶ್ವವಿದ್ಯಾಲಯಗಳ ಕಾಯ್ದೆ ತಿದ್ದುಪಡಿಗೆ ಮಸೂದೆ ಮಂಡಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.