ಬೆಂಗಳೂರು: ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಸಾಗುವಾನಿ, ಬೀಟೆ, ಹುಣಸೆ ಮೊದಲಾದ ಮರಗಳ ವಿವರವನ್ನು ಪಹಣಿಯಲ್ಲಿ (ಆರ್ಟಿಸಿ) ನಮೂದಿಸಲು ಸಾಧ್ಯವಾಗದೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ.

1999– 2000ನೇ ಸಾಲಿನಿಂದಲೇ ಕೈಬರಹದ ಪಹಣಿಗೆ ತಿಲಾಂಜಲಿ ಹೇಳಿ, ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡು ಎರಡೂವರೆ ದಶಕ ಕಳೆದರೂ, ಜಮೀನುಗಳಲ್ಲಿನ ಮರಗಳ ವಿವರ, ಸಂಖ್ಯೆ ನಮೂದಿಸುವಲ್ಲಿ ಹಲವು ತೊಡಕುಗಳನ್ನು ರೈತರು ಎದುರಿಸುತ್ತಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಕಂದಾಯ ಇಲಾಖೆ ಅಗತ್ಯ ಕ್ರಮಗಳನ್ನೇ ಕೈಗೊಂಡಿಲ್ಲ ಎನ್ನುವುದು ರೈತರ ದೂರು.

ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಪಹಣಿಯಲ್ಲಿ ನಮೂದಿಸಲು 2021 ರಿಂದ ‘ಬೆಳೆ ದರ್ಶಕ್’ ಆ್ಯಪ್ ಬಳಸಲಾಗುತ್ತಿದೆ. ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಬಳಸಿ ರೈತರೇ ಆ್ಯಪ್ ಮೂಲಕ ಬೆಳೆ ನಮೂದಿಸಬಹುದು. ಆರಂಭದಲ್ಲಿ ಮೊಬೈಲ್ ಬಳಸಲು ಬಾರದ ರೈತರು, ಆ್ಯಪ್ ಬಳಕೆಗೆ ಹಿಂದೇಟು ಹಾಕಿದ್ದರಿಂದ ಅವರಿಗೆ ಸಹಕಾರ ನೀಡಲು ಕೃಷಿ ಇಲಾಖೆ ಖಾಸಗಿ ವ್ಯಕ್ತಿ (ಪಿಆರ್) ನಿಯೋಜಿಸಿತ್ತು.

ಈಗ ಶೇ 80ರಷ್ಟು ರೈತರೇ ಬೆಳೆ ನಮೂದು ಮಾಡುತ್ತಿದ್ದಾರೆ. ಕೃಷಿ ಬೆಳೆಯ ಜತೆಗೆ, ಅಡಿಕೆ, ತೆಂಗು ಮೊದಲಾದ ತೋಟಗಾರಿಕಾ ಬೆಳೆಗಳ ನಮೂದಿಗೂ ಸಮಸ್ಯೆ ಇಲ್ಲ. ಆದರೆ, ಅದೇ ಜಮೀನಿನ ಬದುಗಳಲ್ಲಿ, ಹಳ್ಳಕೊಳ್ಳದ ಸಮೀಪ ಬಿಡಿಯಾಗಿ ಬೆಳೆದ ಮರಗಳ ವಿವರಗಳನ್ನು ಕಾಲಂ 7ರಲ್ಲಿ ನಮೂದಿಸಲು ‘ಬೆಳೆ ದರ್ಶಕ್’ ಆ್ಯಪ್ನಲ್ಲಿ ಅವಕಾಶವೇ ಇಲ್ಲ.

ಗ್ರಾಮೀಣ ಪ್ರದೇಶದ ಜಮೀನುಗಳಲ್ಲಿನ ಮರಗಳ ಮಾಹಿತಿಯನ್ನು ಆರ್ಟಿಸಿ ದಾಖಲೆಗಳಿಗೆ ನಮೂದಿಸುವ ಅಧಿಕಾರವನ್ನು ತಹಶೀಲ್ದಾರ್ಗಳಿಗೆ, ಪಟ್ಟಣ, ನಗರ ಪ್ರದೇಶ ಒಳಗೊಂಡ ಕಸಬಾ ಹೋಬಳಿ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆದ ಮರಗಳ ಮಾಹಿತಿ ನಮೂದಿಸುವ ಅಧಿಕಾರವನ್ನು ಆಯಾ ಭಾಗದ ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ.

ತಮ್ಮ ಜಮೀನಿನಲ್ಲಿರುವ ಮರಗಳು ಆರ್ಟಿಸಿ ದಾಖಲೆಗಳಲ್ಲಿ ನಮೂದಿಸಲು ರೈತರು ಮೊದಲು ಗ್ರಾಮ ಆಡಳಿತಾಧಿಕಾರಿಗೆ (ವಿಎ) ಅರ್ಜಿ ಸಲ್ಲಿಸಬೇಕು. ಸ್ಥಳ ಸಮೀಕ್ಷೆ ನಡೆಸಿದ ನಂತರ ವಿಎ ಕಡತವನ್ನು ಕಂದಾಯ ನಿರೀಕ್ಷಕರಿಗೆ (ಆರ್ಐ) ಸಲ್ಲಿಸುತ್ತಾರೆ. ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಹೋಗುತ್ತದೆ. ನಂತರ ಉಪ ವಿಭಾಗಾಧಿಕಾರಿ ಪರಿಶೀಲಿಸಿ, ಅರ್ಜಿ ಸಲ್ಲಿಸಿದ ರೈತರ ಜಮೀನಿನಲ್ಲಿ ಯಾವ ಜಾತಿಯ ಎಷ್ಟು ಮರಗಳಿವೆ ಎನ್ನುವುದನ್ನು ಪಹಣಿಯ ಕಾಲಂ 7ರಲ್ಲಿ ನಮೂದಿಸುತ್ತಾರೆ.

ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 6 ರಿಂದ 8 ತಿಂಗಳ ಸಮಯ ತೆಗೆದುಕೊಳ್ಳಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಲಾಗಿನ್ನಲ್ಲೂ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದು, ಮರಗಳ ವಿವರ, ಸಂಖ್ಯೆ ನಮೂದಾಗುತ್ತಿಲ್ಲ.

‘ಜಮೀನಿನಲ್ಲಿ 30 ವರ್ಷಗಳ ಹಿಂದೆ ಹಾಕಿದ್ದ 40 ಸಾಗುವಾನಿ ಮರಗಳಿವೆ. ಈಗಲೂ ಆರ್ಟಿಸಿಯಲ್ಲಿ ನಮೂದಾಗಿಲ್ಲ. ಅರ್ಜಿ ಸಲ್ಲಿಸಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೂ ತಾಂತ್ರಿಕ ತೊಂದರೆಯ ಕಾರಣ ನೀಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲೇ ಕಡತ ಉಳಿದಿದೆ’ ಎನ್ನುತ್ತಾರೆ ಮೈಸೂರಿನ ರೈತ ರಮೇಶ್.
ಕಟಾವು ಅನುಮತಿಗೂ ಹರಸಾಹಸ

ರೈತರು ಆರ್ಟಿಸಿ ದಾಖಲೆಗಳಲ್ಲಿ ಮರಗಳ ವಿವರ ನಮೂದಿಸಲು ಅಲೆದಾಡುವುದಕ್ಕಿಂತಲೂ ಮರಗಳ ಕಟಾವಿಗೆ ಅನುಸರಿಸುವ ಪ್ರಕ್ರಿಯೆ ಸುದೀರ್ಘವಾಗಿದ್ದು, ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ.

ಮರಗಳ ಕಟಾವಿಗೆ ತಹಶೀಲ್ದಾರ್ಗೆ ಸಲ್ಲಿಸಿದ ಅರ್ಜಿ ಸರ್ವೆ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಸರ್ವೆಯ ನಂತರ ರೈತರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆಯಬೇಕು. ನಂತರ ಕಡತ ಅರಣ್ಯಾಧಿಕಾರಿಗೆ ಹೋಗುತ್ತದೆ. ಅಲ್ಲಿಂದ ಅನುಮತಿ ಪಡೆದು, ನಿರ್ದಿಷ್ಟ ಶುಲ್ಕ ಪಾವತಿಸಿದ ನಂತರ ಮರ ಕಟಾವು ಪ್ರಕ್ರಿಯೆ ಆರಂಭಿಸಬೇಕು.

‘ಜಮೀನು ಬದುಗಳಲ್ಲಿ ಬೆಳೆದ ಸಾಗುವಾನಿ ಮರಗಳ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸುವುದು, ಕಟಾವಿಗೆ ಅನುಮತಿ ಪಡೆಯುವುದು ದೊಡ್ಡ ತಲೆನೋವು. ಹಾಗಾಗಿ, ಶೇ 60ಕ್ಕೂ ಹೆಚ್ಚು ರೈತರು ನಮೂದಿಸುವುದೇ ಇಲ್ಲ. ಕಟಾವು ಮಾಡಬೇಕಾದ ಮರಗಳನ್ನು ಸಮೀಪದ ಟಿಂಬರ್ ಮರ್ಚೆಂಟ್ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ’ ಎನ್ನುತ್ತಾರೆ ಶ್ರೀನಿವಾಸಪುರದ ರೈತ ಬಿ.ಪಿ. ಪ್ರಸನ್ನ.

ಜಮೀನು ತೊರೆದರೂ ಪಹಣಿ ಬಿಡದ ‘ನೀಲಗಿರಿ’

‘ತಂದೆಯ ಅವಧಿಯಲ್ಲಿ ಹೊಲದಲ್ಲಿ ಒಂದಷ್ಟು ನೀಲಗಿರಿ ನೆಟ್ಟಿದ್ದರು. ಆಗ ಪಹಣಿಯಲ್ಲಿ ನೀಲಗಿರಿ ಎಂದೇ ನಮೂದಾಗಿತ್ತು. ನಾನು ಬೇಸಾಯ ಆರಂಭಿಸಿದ ಮೇಲೆ ನೀಲಗಿರಿಯನ್ನು ಸಂಪೂರ್ಣ ತೆಗೆದುಹಾಕಿ, ಹತ್ತು ವರ್ಷಗಳಿಂದ ರಾಗಿ ಬೆಳೆಯುತ್ತಿದ್ದೇವೆ. ಆದರೆ, ಎಷ್ಟು ಬಾರಿ ಅರ್ಜಿಕೊಟ್ಟರೂ ಪಹಣಿಯಲ್ಲಿ ಮಾತ್ರ ನೀಲಗಿರಿ ಬದಲಾಗಲೇ ಇಲ್ಲ’ ಎನ್ನುವುದು ಮಾಗಡಿ ತಾಲ್ಲೂಕಿನ ಮೈಲನಹಳ್ಳಿಯ ರೈತ ಎಂ.ಸಿ. ಮಧುಕುಮಾರ ಅವರ ದೂರು.

‘ನೀಲಗಿರಿ ಇದ್ದ ಜಾಗದಲ್ಲಿ ಕಳೆದ ವರ್ಷ ಶ್ರೀಗಂಧ ಹಾಕಿದ್ದೇನೆ. ಪಹಣಿಯಲ್ಲಿ ಅದನ್ನು ಮತ್ತು ಅಂತರ ಬೆಳೆ ರಾಗಿಯನ್ನು ನಮೂದಿಸಲು ಒಂದು ವರ್ಷದಿಂದಲೂ ಅಲೆಯುತ್ತಿದ್ದೇನೆ. ನೀಲಗಿರಿ ಬದಲಾಗದೇ ಬೆಳೆ ವಿಮೆ ಮಾಡಿಸಲು, ಪರಿಹಾರಕ್ಕೆ ಅರ್ಜಿ ಸಲ್ಲಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.