ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಲ್ಲಿಂಗ್ ಕೊಬ್ಬರಿ | ಮತ್ತೆ 7,500 ಟನ್‌ ಖರೀದಿ: ಕೇಂದ್ರ ಸರ್ಕಾರ ಒಪ್ಪಿಗೆ

Published 18 ಜುಲೈ 2024, 14:34 IST
Last Updated 18 ಜುಲೈ 2024, 14:34 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಮತ್ತೆ 7,500 ಟನ್ ಮಿಲ್ಲಿಂಗ್‌ ಕೊಬ್ಬರಿ (ಚಿಕ್ಕ ಚಿಕ್ಕ ತುಂಡು) ಖರೀದಿಸಲು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಗುರುವಾರ ಒಪ್ಪಿಗೆ ನೀಡಿದೆ. 

ಪ್ರಸಕ್ತ ಋತುವಿನಡಿ ರಾಜ್ಯದಲ್ಲಿ ಮಿಲ್ಲಿಂಗ್ ಕೊಬ್ಬರಿಯ ಇಳುವರಿ 11,995 ಟನ್ ಆಗಿದೆ. ಪ್ರತಿ ಕ್ವಿಂಟಲ್‌ಗೆ ₹11,160 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಪೈಕಿ 2,999 ಟನ್ ಖರೀದಿಗೆ ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಿತ್ತು. ರಾಜ್ಯ ಸರ್ಕಾರವು ಈ ಸೌಲಭ್ಯವನ್ನು ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಿತ್ತು. ಅತಿ ಹೆಚ್ಚು ಕೊಬ್ಬರಿ ಬೆಳೆಯುವ ಜಿಲ್ಲೆಗಳಾದ ತುಮಕೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ಈ ಸೌಲಭ್ಯದಿಂದ ವಂಚಿತವಾಗಿದ್ದವು.

ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ಸಿ.ಸೋಮಣ್ಣ ಅವರು ರಾಜ್ಯ ಸರ್ಕಾರದೊಂದಿ್ಎ ಸಮಾಲೋಚಿಸಿ ಹೊಸ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು. ತುಮಕೂರು, ಮಂಡ್ಯ, ರಾಮನಗರ, ಚಿತ್ರದುರ್ಗ, ಮೈಸೂರು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಿಸುವ ಸಲುವಾಗಿ ಖರೀದಿ ಮಿತಿಯನ್ನು 10 ಸಾವಿರ ಟನ್‌ಗೆ ಏರಿಸುವಂತೆ ರಾಜ್ಯ ಸರ್ಕಾರ ಜುಲೈ 10ರಂದು ಪ್ರಸ್ತಾವನೆ ಸಲ್ಲಿಸಿತು. ರಾಜ್ಯದ ಪ್ರಸ್ತಾವನೆಗೆ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ ಚೌಹಾಣ್ ಅವರೊಂದಿಗೆ ಸೋಮಣ್ಣ ಮನವಿ ಮಾಡಿದರು.‌ ಇದೀಗ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ‘ರಾಜ್ಯದ ರೈತರ ಹಿತಾಸಕ್ತಿಗೆ ಪೂರಕವಾಗಿ ತೀರ್ಮಾನವನ್ನು ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ತೆಗೆದುಕೊಂಡಿದೆ’ ಎಂದು ಸೋಮಣ್ಣ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT