ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam|ಸಿಎಂ ವಿರುದ್ಧ ತನಿಖೆಗೆ ಅನುಮತಿ: ರಾಜ್ಯಪಾಲರ ಆದೇಶದಲ್ಲಿ ಹೇಳಿದ್ದೇನು?

Published 17 ಆಗಸ್ಟ್ 2024, 6:20 IST
Last Updated 17 ಆಗಸ್ಟ್ 2024, 6:20 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ತನಿಖೆಗೆ ಅನುಮತಿ ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್‌ ಕುಮಾರ್‌ ಎಸ್‌.ಪಿ., ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಆರು ಪುಟಗಳ ಆದೇಶವನ್ನು ರಾಜ್ಯಪಾಲರು ಹೊರಡಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್‌ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವುದಾಗಿ ಶುಕ್ರವಾರ ಸಹಿ ಮಾಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳು, ಕಾನೂನು ತಜ್ಞರ ಅಭಿಪ್ರಾಯ ಮತ್ತು ಸಂಪುಟದ ನಿರ್ಣಯವನ್ನು ಪರಿಶೀಲಿಸಲಾಗಿದೆ. ಮುಖ್ಯಮಂತ್ರಿಯವರ ವಿರುದ್ಧದ ಆರೋಪಗಳ ವಿಚಾರದಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ದೂರಿನಲ್ಲಿರುವ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳೂ ಇವೆ, ಆದ್ದರಿಂದ ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಗಳ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಜುಲೈ 26ರಂದು ಮುಖ್ಯಮಂತ್ರಿಯವರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ ವಿವರಣೆ ಕೇಳಲಾಗಿತ್ತು. ಆಗಸ್ಟ್‌ 1ರಂದು ಸಂಪುಟದ ನಿರ್ಣಯವು ತಮ್ಮ ಕಚೇರಿಗೆ ತಲುಪಿತು. ಆಗಸ್ಟ್‌ 3ರಂದು ಮುಖ್ಯಮಂತ್ರಿಯವರ ಪ್ರತಿಕ್ರಿಯೆ ತಲುಪಿತು. ಅದರೊಂದಿಗೆ ಕೆಲವು ದಾಖಲೆಗಳನ್ನೂ ಸಲ್ಲಿಸಲಾಗಿತ್ತು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಮುಡಾದಲ್ಲಿನ ಅಕ್ರಮಗಳ ಕುರಿತು ಐಎಎಸ್‌ ಅಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಬಳಿಕ ಏಕಸದಸ್ಯ ಆಯೋಗವನ್ನು ನೇಮಿಸಲಾಗಿದೆ, ಯಾರ ವಿರುದ್ಧ ಆರೋಪಗಳು ಕೇಳಿಬಂದಿವೆಯೋ ಅದೇ ವ್ಯಕ್ತಿ ತನಿಖೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವುದು ಕಾನೂನು ಸಮ್ಮತವಲ್ಲ. ಆದ್ದರಿಂದ ಸಂಪುಟದ ನಿರ್ಧಾರವು ಕಾನೂನುಬಾಹಿರ ಎಂದು ಗೆಹಲೋತ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿಯವರು ಆಗಸ್ಟ್‌ 1ರಂದು ಸಂಪುಟ ಸಭೆ ಕರೆದಿದ್ದರು. ಅಲ್ಲಿ ತಾವು ನೀಡಿದ್ದ ಶೋಕಾಸ್‌ ನೋಟಿಸ್‌ ಅನ್ನು ಮಂಡಿಸಿ ಚರ್ಚಿಸಲಾಗಿದೆ. ವಿಚಾರಣೆಗೆ ಅನುಮತಿ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಅವರ ಸಲಹೆಯಂತೆ ರಚನೆಯಾದ ಸಂಪುಟವು ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದೂರುಗಳನ್ನು ತಿರಸ್ಕರಿಸುವಂತೆ ಸಲಹೆ ನೀಡುವ ನಿರ್ಣಯ ಕೈಗೊಂಡಿದೆ. ಈ ನಿರ್ಣಯವು ವಿಶ್ವಾಸಾರ್ಹವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ವಿಶೇಷ ಪೊಲೀಸ್‌ ಘಟಕ ಮತ್ತು ಮಧ್ಯಪ್ರದೇಶ ಸರ್ಕಾರದ ಮಧ್ಯೆಯ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್‌ 2004ರಲ್ಲಿ ನೀಡಿದ್ದ ತೀರ್ಪನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವ ರಾಜ್ಯಪಾಲರು, ʼಕೆಲವು ವಿಶೇಷ ಸಂದರ್ಭಗಳಲ್ಲಿ ಸಂಫುಟದ ಸಲಹೆಯನ್ನು ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದುʼ ಎಂದಿದ್ದಾರೆ.

ʼಇಂತಹ ಪ್ರಕರಣಗಳಲ್ಲಿ ದಾಖಲೆಗಳು ಲಭ್ಯವಿದ್ದಾಗಲೂ ರಾಜ್ಯಪಾಲರು ವಿವೇಚನಾ ಅಧಿಕಾರ ಬಳಸಲು ಅವಕಾಶ ನೀಡದೆ ಸರ್ಕಾರಕ್ಕೆ ಅನುಮತಿ ನಿರಾಕರಿಸುವ ಅಧಿಕಾರ ನೀಡಿದಲ್ಲಿ ಕಾನೂನಿನ ಆಡಳಿತವು ಕುಸಿದುಬೀಳುತ್ತದೆ. ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಗಳು ಲಭ್ಯವಿದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರೆ ಅದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ತಮ್ಮ ವಿರುದ್ಧ ತನಿಖೆ ನಡೆಸಲು ಅವಕಾಶವೇ ಇಲ್ಲ ಎಂಬ ಭಾವನೆಯಿಂಧ ಅಧಿಕಾರದಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂಘಿಸಲು ಪ್ರೇರಣೆ ದೊರೆಯುತ್ತದೆʼ ಎಂದು ಸುಪ್ರೀಂ ಕೋರ್ಟ್‌ 2004ರ ತೀರ್ಪಿನಲ್ಲಿ ಹೇಳಿದ್ದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT