ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ: ಸಹಜ ಸ್ಥಿತಿಯತ್ತ ಜನಜೀವನ; ಸೆ.14ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

Published : 13 ಸೆಪ್ಟೆಂಬರ್ 2024, 13:52 IST
Last Updated : 13 ಸೆಪ್ಟೆಂಬರ್ 2024, 13:52 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಂಭವಿಸಿದ್ದ ಗಲಭೆಯಿಂದ ಉಂಟಾಗಿದ್ದ ಉದ್ವಿಗ್ವ ವಾತಾವರಣ ಶುಕ್ರವಾರ ತಿಳಿಗೊಂಡಿದ್ದು, ನಿಷೇಧಾಜ್ಞೆ ನಡುವೆಯೂ ಜನಜೀವನ ಸಹಜ ಸ್ಥಿತಿಯತ್ತ ಮರಳಿತು.

ಪಟ್ಟಣ ಬಂದ್‌ ಹಿನ್ನೆಲೆಯಲ್ಲಿ ಗುರುವಾರ ಬಾಗಿಲು ಮುಚ್ಚಿದ್ದ ಅಂಗಡಿಗಳಲ್ಲಿ ಶೇ 50ರಷ್ಟು ಅಂಗಡಿಗಳು ಶುಕ್ರವಾರ ತೆರೆದಿದ್ದವು. ಆತಂಕದ ಕಾರ್ಮೋಡದ ನಡುವೆಯೂ ವ್ಯಾಪಾರಿಗಳು ವಹಿವಾಟು ನಡೆಸಿದರು. ದಿನಸಿ, ಬೇಕರಿ, ಹಾಲು, ಹಣ್ಣು–ಹೂ, ಮೊಬೈಲ್‌ ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳು ತೆರೆದಿದ್ದವು. ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಯಿಂದ ಹೊರಗೆ ಬಂದಿದ್ದರು.

‘ಗ್ರಾಮೀಣ ಬಾಗದ ಜನರು ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಕಾರಣ ವ್ಯಾಪಾರ ವಹಿವಾಟು ಎಂದಿನಂತಿಲ್ಲ’ ಎಂದು ಹಣ್ಣಿನ ವ್ಯಾಪಾರಿ ಮೊಹಮ್ಮದ್‌ ಮಾಜ್‌ ಬೇಸರ ವ್ಯಕ್ತಪಡಿಸಿದರು.

ಸಂಚರಿಸಿದ ಬಸ್‌: ಜಿಲ್ಲಾಧಿಕಾರಿ ರಜೆ ಘೋಷಿಸಿದ್ದ ಕಾರಣ ಗುರುವಾರ ಬಾಗಿಲು ಮುಚ್ಚಿದ್ದ ಶಾಲಾ–ಕಾಲೇಜುಗಳಲ್ಲಿ ಶುಕ್ರವಾರ ತರಗತಿಗಳು ನಡೆದವು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪಟ್ಟಣದ ವ್ಯಾಪ್ತಿಯಲ್ಲಿ ಸಾರಿಗೆ ಬಸ್ಸುಗಳು ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಬಸ್‌ ನಿಲ್ದಾಣದಿಂದ ವಿವಿಧ ತಾಲ್ಲೂಕು ಮತ್ತು ಹೊರಜಿಲ್ಲೆಗಳತ್ತ ಸಾರಿಗೆ ಬಸ್‌ ಸಂಚರಿಸಿದವು.

ಪಟ್ಟಣದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ ಶುಕ್ರವಾರದ ಸಂತೆಗೆ ಅವಕಾಶ ನೀಡಿರಲಿಲ್ಲ. ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಕಾರಣ ಮದ್ಯದಂಗಡಿಗಳು ಬಂದ್‌ ಆಗಿದ್ದವು.

ಪೊಲೀಸ್‌ ಬಂದೋಬಸ್ತ್‌ ಮುಂದುವರಿಕೆ: ಗಲಭೆಯ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವೃತ್ತಗಳಾದ ಟಿ.ಬಿ. ಬಡಾವಣೆ, ಮೈಸೂರು ರಸ್ತೆ, ಮಂಡ್ಯ ವೃತ್ತ, ಮರಿಯಪ್ಪ ವೃತ್ತ, ಕೇಶವಸ್ವಾಮಿ ದೇವಾಲಯದ ರಸ್ತೆ, ಬಸ್ ನಿಲ್ದಾಣ, ಮಸೀದಿ, ದರ್ಗಾ, ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಕೆ.ಎಸ್‌.ಆರ್‌.ಪಿ. ವಾಹನಗಳು ಆಯಕಟ್ಟಿನ ಸ್ಥಳಗಳಲ್ಲಿ ನಿಂತಿವೆ.

ಸಾರ್ವಜನಿಕರ ಆತಂಕ ದೂರ ಮಾಡಲು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ಬೆಂಕಿಗಾಹುತಿಯಾದ ಅಂಗಡಿಗಳ ಸಾಮಗ್ರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಬದ್ರಿಕೊಪ್ಪಲಿಗೆ 144 ಸೆಕ್ಷನ್‌: ಬದ್ರಿಕೊಪ್ಪಲು ಬಡಾವಣೆಗೆ 144 ಸೆಕ್ಷನ್‌ ವಿಸ್ತರಣೆಯಾಗಿದ್ದು, ಹೆಬ್ಬಾಗಿಲಿನಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ ಪೊಲೀಸ್‌ ಗಸ್ತು ವಾಹನ ನಿಂತಿದೆ. ಬಂಧನದ ಭೀತಿಯಿಂದ ಬದ್ರಿಕೊಪ್ಪಲು ಯುವಕರು ಊರು ತೊರೆದಿದ್ದಾರೆ.

ಉರಿಯುತ್ತಿದ್ದ ಬೆಂಕಿ: ಗಲಭೆ ನಡೆದು 40 ಗಂಟೆ ಕಳೆದರೂ ಪಟ್ಟಣದ ಆಟೊ ಮೊಬೈಲ್‌ ಮತ್ತು ಪಂಕ್ಚರ್‌ ಶಾಪ್‌ಗಳಲ್ಲಿ ಬೆಂಕಿ ಉರಿಯುತ್ತಿತ್ತು. ಕಿಡಿಗೇಡಿಗಳು ಬೆಂಕಿ ಹಾಕುವಾಗ ಶಟರ್‌ಗಳನ್ನು ಜಖಂಗೊಳಿಸಿದ್ದರಿಂದ ಚಾವಣಿಯ ಶೀಟುಗಳನ್ನು ತೆಗೆದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ರಿಜ್ವಾನ್‌ ಸಲೀಂ ಮಾಲೀಕತ್ವಕ್ಕೆ ಸೇರಿದ ಈ ಎರಡು ಮಳಿಗೆಗಳಲ್ಲಿ ₹25 ಲಕ್ಷ ಮೌಲ್ಯದ ಟೈರ್‌, ಉಪಕರಣಗಳು ಭಸ್ಮವಾಗಿವೆ.

ಮುತಾಲಿಕ್‌ಗೆ ಸೂಚನೆ: ಗಲಭೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಶುಕ್ರವಾರ ನಾಗಮಂಗಲಕ್ಕೆ ಬರಲು ಮುಂದಾಗಿದ್ದರು. ‘ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ. ಸದ್ಯಕ್ಕೆ ನೀವು ಪಟ್ಟಣಕ್ಕೆ ಭೇಟಿ ನೀಡಬೇಕು. ಸ್ವಲ್ಪ ದಿನಗಳ ನಂತರ ಬನ್ನಿ’ ಎಂದು ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಮುತಾಲಿಕ್‌ ಶುಕ್ರವಾರ ನಾಗಮಂಗಲಕ್ಕೆ ಬರಲಿಲ್ಲ.

ಕರ್ತವ್ಯಲೋಪ: ಇನ್‌ಸ್ಪೆಕ್ಟರ್‌ ಅಮಾನತು

ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಇನ್‌ಸ್ಪೆಕ್ಟರ್‌ ಅಶೋಕ್‌ಕುಮಾರ್‌ ಅವರನ್ನು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರು ಅಮಾನತು ಮಾಡಿದ್ದಾರೆ.

ಆರೋಪಿಯ ಮಾವ ನಿಧನ

ನಾಗಮಂಗಲ ಗಲಭೆ ಪ್ರಕರಣದ 15ನೇ ಆರೋಪಿ ದಿವಾಕರ್‌ ಅವರ ಮಾವ ಪುಟ್ಟರಾಜು (ಪತ್ನಿಯ ಅಪ್ಪ) ಶುಕ್ರವಾರ ಮೈಸೂರಿನಲ್ಲಿ ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ತೆರಳಲು ನ್ಯಾಯಾಲಯ ಅನುವು ಮಾಡಿಕೊಟ್ಟಿತು.

ದಿವಾಕರ್‌ ಪತ್ನಿ ದಿವ್ಯಾ ಮಾತನಾಡಿ, ‘ಬುಧವಾರ ಮಧ್ಯರಾತ್ರಿ ಮನೆಯಲ್ಲಿದ್ದ ಬದ್ರಿಕೊಪ್ಪಲು ನಿವಾಸಿಯಾದ ನನ್ನ ಪತಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ನನ್ನ ತಂದೆ ತೀರಿಕೊಂಡಿದ್ದಾರೆ. ಚಿಕ್ಕಮಕ್ಕಳನ್ನು ಹೊಂದಿರುವ ನಾನು ಹೇಗೆ ಜೀವನ ಮಾಡಲಿ. ಪೊಲೀಸರು ವಿಚಾರಣೆಗೆ ಎಂದು ಕರೆದೊಯ್ದು, ಈಗ ಪತಿಯನ್ನು ಬಂಧನದಲ್ಲಿಟ್ಟಿದ್ದಾರೆ. ಅದೇ ಕೊರಗಿನಲ್ಲಿ ನನ್ನ ತಂದೆ ಸಾವನ್ನಪ್ಪಿದ್ದಾರೆ. ನನ್ನ ತಂದೆ ಸಾವಿಗೆ ಪೊಲೀಸರೇ ಕಾರಣ’ ಎಂದು ಕಣ್ಣೀರು ಸುರಿಸುತ್ತಾ ಆರೋಪಿಸಿದರು.

ಹಿಂದೂ ಯುವಕರೇ ಟಾರ್ಗೆಟ್‌!

‘ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 150ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು, ಈಗಾಗಲೇ 54 ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಎ–1ನಿಂದ ಎ–23ರವರೆಗೆ ಹಿಂದೂ ಯುವಕರನ್ನೇ ಗುರಿಯಾಗಿಸಿಕೊಂಡು ಆರೋಪಿಗಳನ್ನಾಗಿ ಮಾಡಿದ್ದಾರೆ. ನಮ್ಮ ಮಗ ಕಿರಣ್‌ನನ್ನು ವಿನಾಕಾರಣ ಆರೋಪಿ ಪಟ್ಟಿಗೆ ಸೇರಿಸಿದ್ದಾರೆ’ ಎಂದು ಕಿರಣ್‌ ಅವರ ಪೋಷಕರು ದೂರಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆಗೆ ಪೊಲೀಸರ ಒತ್ತಡ

‘ಮಂಡ್ಯ ಜಿಲ್ಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವವರು ಭಾನುವಾರದೊಳಗೆ ಕಡ್ಡಾಯವಾಗಿ ವಿಸರ್ಜನೆ ಮಾಡಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಸೋಮವಾರ (ಸೆ.16) ‘ಈದ್‌ ಮಿಲಾದ್‌’ ಇರುವ ಕಾರಣ ಪೊಲೀಸರು ಹೊಸ ನಿಯಮ ಜಾರಿಗೆ ತಂದು ಒತ್ತಡ ಹೇರುತ್ತಿದ್ದಾರೆ’ ಎಂದು ಬಜರಂಗದಳ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ಕಿಡಿಕಾರಿದ್ದಾರೆ.

ಗಣೇಶ ಮೆರವಣಿಗೆ ವೇಳೆ ಡಿಜೆ, ತಮಟೆಗೆ ನಿಷೇಧ ಹೇರಿದ್ದಾರೆ. ಹಿಂದೂಗಳ ಭಾವನೆಗೆ ಕಾಂಗ್ರೆಸ್‌ ಸರ್ಕಾರ ಧಕ್ಕೆ ತರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT