ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಲೋಕಾ’ದಿಂದ ಪ್ರಾಸಿಕ್ಯೂಷನ್‌ಗೆ ಕೋರಿಕೆ: 329ಕ್ಕೆ ಅನುಮತಿ; 190 ಬಾಕಿ

ಸರ್ಕಾರದಿಂದ ವಿವರ ಕೇಳಿದ್ದ ರಾಜ್ಯಪಾಲ
Published : 6 ಅಕ್ಟೋಬರ್ 2024, 23:30 IST
Last Updated : 6 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೆ ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು 525 ಪ್ರಸ್ತಾವಗಳನ್ನು ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸಿದ್ದಾರೆ. ಈ ಪೈಕಿ 329ಕ್ಕೆ ಒಪ್ಪಿಗೆ ಸಿಕ್ಕಿದ್ದರೆ, ಆರನ್ನು ತಿರಸ್ಕರಿಸಲಾಗಿದೆ. 190 ಪ್ರಸ್ತಾವಗಳು ಸಕ್ಷಮ ಪ್ರಾಧಿಕಾರಗಳ ಬಳಿಯೇ ಬಾಕಿ ಉಳಿದಿವೆ.

ಲಂಚ ಪ್ರಕರಣ, ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು, ಅಧಿಕಾರ ದುರ್ಬಳಕೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದಾಖಲಿಸಿದ್ದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಸಕ್ಷಮ ಪ್ರಾಧಿಕಾರಗಳಿಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಪೈಕಿ ಶೇ 36.19ರಷ್ಟು ಪ್ರಸ್ತಾವಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧದ ಪ್ರಕರಣವೂ ಸೇರಿ ರಾಜ್ಯ ಸರ್ಕಾರದ ಹಂತದಲ್ಲಿ ಪ್ರಾಸಿಕ್ಯೂಷನ್ ಕೋರಿಕೆಯ ಪ್ರಸ್ತಾವಗಳು ಬಾಕಿ ಇವೆ. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಂದ ಪಡೆದ ಈ ಮಾಹಿತಿಯನ್ನು ಲೋಕಾಯುಕ್ತದ ರಿಜಿಸ್ಟ್ರಾರ್‌ ಅವರು ಸೆ. 21ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಜಾಗೃತ ವಿಭಾಗ) ಕಾರ್ಯದರ್ಶಿಗೆ ರವಾನಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸೆ. 5ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ (2023ರ ಮೇ 20) ಇಲ್ಲಿಯವರೆಗೆ ಸರ್ಕಾರಿ ಅಧಿಕಾರಿ, ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ಕೋರಿ ಲೋಕಾಯುಕ್ತದಿಂದ ಬಂದ ಪ್ರಸ್ತಾವಗಳ ಸಮಗ್ರ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದ್ದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿದ್ದ ರಿಟ್‌ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಈ ಮಾಹಿತಿ ಕೇಳಿದ್ದರು. ರಾಜ್ಯಪಾಲರ ನಿರ್ದೇಶನವನ್ನು ‘ತುರ್ತು’ ಎಂದು ಪರಿಗಣಿಸಿ, ಅವರ ಪತ್ರದ ಜೊತೆ ನೀಡಿರುವ ನಮೂನೆಯಲ್ಲಿ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಟಿಪ್ಪಣಿ ಹೊರಡಿಸಿದ್ದರು. ರಾಜ್ಯಪಾಲರ ಪತ್ರವನ್ನು ಉಲ್ಲೇಖಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಜಾಗೃತ ವಿಭಾಗ) ಕಾರ್ಯದರ್ಶಿ ಸೆ. 10ರಂದು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರು.

ವರದಿಯಲ್ಲಿ ಏನಿದೆ: ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದ ವಿಷಯ, ಪ್ರಸ್ತಾವ ಸಲ್ಲಿಸಿದ್ದ ದಿನಾಂಕ, ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ (ಪ್ರಸ್ತಾವವನ್ನು ತಿರಸ್ಕರಿಸಲಾಗಿದೆಯೇ? ಒಪ್ಪಲಾಗಿದೆಯೇ?), ಒಪ್ಪಿಗೆ ನೀಡಿದ್ದರೆ ಶಿಕ್ಷೆಯ ಸ್ವರೂಪ, ತಿರಸ್ಕರಿಸಿದ್ದರೆ ಅದಕ್ಕೆ ಕಾರಣ ಎಂಬ ಮಾಹಿತಿಯನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ ಒದಗಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. 

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ –1988ರ ಯಾವುದೆಲ್ಲ ಸೆಕ್ಷನ್‌ಗಳ ಅಡಿಯಲ್ಲಿ ಯಾರೆಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂಬ ಸಮಗ್ರ ವಿವರಗಳ ಸಹಿತ ಎಲ್ಲ ಮಾಹಿತಿಗಳನ್ನು ಲೋಕಾಯುಕ್ತ ಒದಗಿಸಿದೆ. ಆದರೆ, ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ನೀಡಿರುವ ಪ್ರಸ್ತಾವಗಳಲ್ಲಿನ ಶಿಕ್ಷೆಯ ಸ್ವರೂಪ ತನಗೆ ಸಂಬಂಧಿಸಿಲ್ಲ ಎಂದೂ ತಿಳಿಸಿದೆ.

ನೇರವಾಗಿ ಉತ್ತರಿಸುವಂತಿಲ್ಲ: ಲೋಕಾಯುಕ್ತ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದ ಪ್ರಸ್ತಾವಗಳಿಗೆ ಸಂಬಂಧಿಸಿದ ಮಾಹಿತಿಯೂ ಸೇರಿ ಹಲವು ವಿಚಾರಗಳಲ್ಲಿ ವಿವರಣೆ ಕೇಳಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಇತ್ತೀಚೆಗೆ ಹಲವು ಪತ್ರ ಬರೆದಿದ್ದರು. ಇಲ್ಲಿಯವರೆಗೆ ಇಂತಹ ಪತ್ರಗಳಿಗೆ ಮುಖ್ಯ ಕಾರ್ಯದರ್ಶಿ ಅಥವಾ ಸಂಬಂಧಿಸಿದ ಅಧಿಕಾರಿಗಳೇ ನೇರವಾಗಿ ಉತ್ತರಿಸುತ್ತಿದ್ದರು. ಆದರೆ, ಇನ್ನು ಅಧಿಕಾರಿಗಳು ನೇರವಾಗಿ ಉತ್ತರಿಸುವಂತಿಲ್ಲ ಎಂದು ಸೆ. 26ರಂದು ನಡೆದಿದ್ದ ಸಚಿವ ಸಂಪುಟ ಸಭೆ ನಿರ್ಣಯಕೈಗೊಂಡಿದೆ.

ರೆಡ್ಡಿ ಪ್ರಕರಣ: ಭಾಷಾಂತರಿಸಲು ವಾಪಸ್‌

ಜನಾರ್ದನ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(1)(ಇ), ಸೆಕ್ಷನ್ 13(2)– 1988ರಡಿ 2015ರಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ಕೋರಿ 2024ರ ಮೇ 15ರಂದು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಸಕ್ಷಮ ಪ್ರಾಧಿಕಾರವಾಗಿರುವ ರಾಜ್ಯಪಾಲರು, ಅಂತಿಮ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ನೀಡುವಂತೆ ವಾಪಸ್‌ ಕಳುಹಿಸಿದ್ದರು.

ಬಹುಕೋಟಿ ರೂಪಾಯಿ ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಮಾಜಿ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ, ಬೆಂಗಳೂರು ಜಲಮಂಡಳಿಯ ಹಿಂದಿನ ಮುಖ್ಯ ಲೆಕ್ಕಾಧಿಕಾರಿ ಎಂ.ವಿ.ಪ್ರಶಾಂತ್‌ ಮಾಡಾಳ್‌ ಅವರ ಮೇಲೆ ತನಿಖೆಗೆ ಅನುಮತಿ ಕೋರಿ ಜುಲೈ 27ರಂದು ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ಡಿ. 20ರಂದು ವಜಾಗೊಳಿಸಿದೆ. ಪ್ರಶಾಂತ್‌ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ಅಲ್ಲದೆ, ಪ್ರಶಾಂತ್‌ ವಿರುದ್ಧ ಅನುಮತಿ ಕೋರಿ ಇದೇ ಏಪ್ರಿಲ್ 6ರಂದು ಮತ್ತೆ ಪ್ರಸ್ತಾವ ಸಲ್ಲಿಸಲಾಗಿದೆ. ಮಾಜಿ ಅಬಕಾರಿ ಸಚಿವ ಎಂ.ಪಿ.ರೇಣಕಾಚಾರ್ಯ ಮತ್ತು ಅವರ ಸಹೋದರ ಎಂ.ಪಿ.ರಮೇಶ್‌ ವಿರುದ್ಧ 2015ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 2023ರ ಡಿ.30ರಂದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಲಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

‘ಕೋಟಿ ಕುಳ’ಗಳ ಪ್ರಸ್ತಾವಗಳು ಬಾಕಿ

ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ, ಲಂಚ ಪ್ರಕರಣಗಳಲ್ಲಿ ಬಲೆಗೆ ಬಿದ್ದ ಹಲವು ‘ಕೋಟಿ ಕುಳ’ಗಳ ಮೇಲೆ ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಗಳಿಗೆ ಲೋಕಾಯುಕ್ತ ಪ್ರಸ್ತಾವ ಸಲ್ಲಿಸಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ‘ಕುಬೇರರು’ ಈ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮುಖ್ಯ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌, ಕೆಎಎಸ್‌ ಅಧಿಕಾರಿಗಳು, ತಹಶೀಲ್ದಾರ್‌, ಶಿರಸ್ತೇದಾರ್‌, ಭೂಮಾಪಕರು, ಭೂಸ್ವಾಧೀನಾಧಿಕಾರಿಗಳು, ಲೆಕ್ಕ ಪರಿಶೋಧಕರು, ಉಪ ನೋಂದಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಬೆಸ್ಕಾಂ, ಕೆಐಎಡಿಬಿ, ಬಿಡಿಎ ಅಧಿಕಾರಿಗಳು ಹೀಗೆ ಎಲ್ಲ ಸ್ತರಗಳಲ್ಲಿರುವ ಅಧಿಕಾರಿ, ನೌಕರರು ಇದ್ದಾರೆ. ಕೆಲವು ಪ್ರಸ್ತಾವಗಳು 8–9 ತಿಂಗಳುಗಳ ಹಿಂದೆಯೇ ಸಲ್ಲಿಕೆ ಆಗಿವೆ. ಆದರೆ, ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದು ಲೋಕಾಯುಕ್ತ ಸಲ್ಲಿಸಿರುವ ಪಟ್ಟಿಯಿಂದ ಬಹಿರಂಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT