ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2015ರ ಕಾಯ್ದೆ ಮರು ಜಾರಿ: ಸಿಬಿಎಸ್‌ಇ, ಐಸಿಎಸ್‌ಇಗೂ ಕನ್ನಡ ಕಡ್ಡಾಯ

Published 29 ಜೂನ್ 2024, 15:06 IST
Last Updated 29 ಜೂನ್ 2024, 15:06 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಖಾಸಗಿ ಶಾಲೆಗಳು ಇನ್ನು ಮುಂದೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದು ಕಡ್ಡಾಯ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ನಿಯಂತ್ರಣದ ವಿತರಣೆ) ಕಾಯ್ದೆಯನ್ನು ಮರು ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಿಯಮಗಳು ಕನ್ನಡ ಭಾಷಾ ಕಲಿಕೆ ಕಾಯಿದೆ–2015ಕ್ಕೆ ಅನುಗುಣವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದೆ.

ನಿಯಮಗಳನ್ನು ಪಾಲನೆ ಮಾಡುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲಿದೆ. ಯಾವುದೇ ಹೊಸ ಶಾಲೆ ಅಥವಾ ಅಸ್ತಿತ್ವದಲ್ಲಿರುವ ಶಾಲೆಯು ಸಿಬಿಎಸ್‌ಇ, ಐಸಿಎಸ್‌ಇಗೆ ಸಂಯೋಜಿತವಾಗಲು ನಿರಾಕ್ಷೇಪಣಾ ಪತ್ರ ಅತ್ಯಗತ್ಯ.

ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ 2015ರಲ್ಲೇ ಕಾಯ್ದೆ ರೂಪಿಸಿದ್ದರೂ, ನಿಯಮಗಳನ್ನು ಖಾಸಗಿ ಶಾಲೆಗಳು ಪಾಲಿಸಿರಲಿಲ್ಲ. ಕಾಯ್ದೆ ವಿರೋಧಿಸಿ ಹಲವು ಶಾಲಾ ಆಡಳಿತ ಮಂಡಳಿಗಳು, ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದಿಗೂ ಬಾಕಿ ಇವೆ.

‘ಶಾಲೆಗಳಲ್ಲಿ ಕನ್ನಡ ಕಲಿಸಲು ನಮ್ಮ ವಿರೋಧವಿಲ್ಲ. ಆದರೆ, ಅದನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ಒತ್ತಡಬೇಡ. ಆಯ್ಕೆಯ ವಿಷಯವನ್ನು ಶಾಲೆಗಳು ಮತ್ತು ಪೋಷಕರಿಗೆ ಬಿಡಬೇಕು’ ಎಂದು ಸ್ವತಂತ್ರ ಸಿಬಿಎಸ್‌ಇ ಶಾಲೆಗಳ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಕನ್ನಡಿಗರಷ್ಟೇ ಇಲ್ಲ. ಇತರೆ ರಾಜ್ಯಗಳಿಂದ ವಲಸೆ ಬಂದಿರುವ ಸಾಕಷ್ಟು ಕುಟುಂಬಗಳಿವೆ. ಅವರ ಮಕ್ಕಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯಲು ಕಷ್ಟವಾಗುತ್ತದೆ. ಈಗ ಬಲವಂತವಾಗಿ ಕಲಿಸಿದರೂ 10ನೇ ತರಗತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎನ್ನುವುದು ಖಾಸಗಿ ಶಾಲೆಗಳ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT