ಮೈಸೂರು: ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯು ಕ್ಷೇತ್ರವನ್ನು ಬಿಟ್ಟುಕೊಡುವ ಬದಲಿಗೆ ಆ ಪಕ್ಷದ ಪ್ರಮುಖರನ್ನು ತಮ್ಮ ಚಿಹ್ನೆಯಲ್ಲೇ ಕಣಕ್ಕಿಳಿಸುವ ತಂತ್ರ ರೂಪಿಸಿದೆ. ಈ ಪ್ರಯೋಗವನ್ನು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಲು ಯೋಜಿಸಲಾಗಿದ್ದು, ಮಾಜಿ ಸಚಿವ ಜೆಡಿಎಸ್‌ನ ಸಾ.ರಾ.ಮಹೇಶ್ ಅವರಿಗೆ ಟಿಕೆಟ್ ನೀಡಲು ಚರ್ಚೆ ನಡೆದಿದೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಡೆದಿರುವ ಈ ಬೆಳವಣಿಗೆಯು ಕುತೂಹಲಕ್ಕೆ ಕಾರಣವಾಗಿದೆ. ವರಿಷ್ಠರ ಲೆಕ್ಕಾಚಾರದಂತೆ ನಡೆದಲ್ಲಿ ಹಾಲಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ ಎನ್ನಲಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಸಮ್ಮತಿ ಸೂಚಿಸಿದರೆ ಕ್ಷೇತ್ರದಲ್ಲಿ ‘ಅದಲು–ಬದಲು (ಜೆಡಿಎಸ್ ವ್ಯಕ್ತಿಗೆ ಬಿಜೆಪಿ ಟಿಕೆಟ್)’ ಆಟದ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ನಾಯಕರು ಮೈಸೂರು –ಕೊಡಗು ಕ್ಷೇತ್ರವನ್ನು ತಮಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ತಮ್ಮ ಆಪ್ತ ಸಾ.ರಾ.ಮಹೇಶ್ ಅವರನ್ನು ಇಲ್ಲಿ ಕಣಕ್ಕಿಳಿಸಬೇಕು ಎಂಬುದು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಇಂಗಿತವಾಗಿದೆ. ಆದರೆ, ಮೈಸೂರು ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಇದರಿಂದ ಉಂಟಾಗಿರುವ ಕಗ್ಗಂಟನ್ನು ಬಿಡಿಸಲು ಹೊಸ ಸೂತ್ರವೊಂದನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಸಿದ್ಧಪಡಿಸಿದ್ದು, ಟಿಕೆಟ್ ಆಫರ್ ಮುಂದಿಟ್ಟಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಹೇಶ್ ಜೊತೆ ಚರ್ಚೆಯನ್ನೂ ನಡೆಸಿದ್ದಾರೆ. ಆದರೆ, ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ.

ಇಲ್ಲಿ ಪ್ರತಾಪ ಸಿಂಹ ಸತತ 3ನೇ ಬಾರಿಗೆ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸಗಳ ಮಾಹಿತಿಯನ್ನು ಒಳಗೊಂಡ ‘ರಿಪೋರ್ಟ್ ಕಾರ್ಡ್’ ಮುದ್ರಿಸಿ ಪಕ್ಷದ ವರಿಷ್ಠರು, ಮಠಾಧೀಶರು ಸೇರಿದಂತೆ ಪ್ರಮುಖರಿಗೆ ನೀಡುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ವೈಯಕ್ತಿಕ ನೆಲೆಯಲ್ಲಿ ಪ್ರಚಾರವನ್ನೇ ಆರಂಭಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೂ ತೆರಳುತ್ತಿರುವ ಅವರು, ಮತ್ತೊಮ್ಮೆ ಬೆಂಬಲ ನೀಡುವಂತೆ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಪ್ರತಾಪ ಅವರಿಗೆ ಸ್ವಪಕ್ಷೀಯರಲ್ಲೇ ಇರುವ ಅಪಸ್ವರ ಹಾಗೂ ವಿರೋಧವನ್ನು ಮುಂದಿಟ್ಟುಕೊಂಡು ಅವರಿಗೆ ಟಿಕೆಟ್ ತಪ್ಪಿಸುವ ‘ತಂತ್ರ’ವೂ ಪಕ್ಷದ ಮಟ್ಟದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಹೇಶ್ ಈ ಹಿಂದೆ ಬಿಜೆಪಿಯಲ್ಲೇ ಇದ್ದವರು. ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷದ ಮುಖಂಡರು– ಕಾರ್ಯಕರ್ತರಿಂದ ಅಷ್ಟೇನೂ ವಿರೋಧ ವ್ಯಕ್ತವಾಗಲಾರದು ಎನ್ನುವುದು ವರಿಷ್ಠರ ಲೆಕ್ಕಾಚಾರ ಎನ್ನಲಾಗಿದೆ. ಅಲ್ಲದೇ, ‘ಪಕ್ಷದಲ್ಲೇ ಇರುವ ಪ್ರತಾಪ ಸಿಂಹ ವಿರೋಧಿ ಬಣ’ವು ಮಹೇಶ್ ಪರವಾಗಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬಹುದು ಎಂಬ ನಿರೀಕ್ಷೆಯೂ ವರಿಷ್ಠರಾಗಿದೆ. ಈ ವಿಷಯದಲ್ಲಿ ವರಿಷ್ಠರಿಂದ ಅಧಿಕೃತ ಹೇಳಿಕೆಗಳೇನೂ ಹೊರಬಿದ್ದಿಲ್ಲ.

ಚರ್ಚೆಯಾಗಿದೆ, ಕುಮಾರಸ್ವಾಮಿ ಹೇಳಿದಂತೆ ಕೇಳುವೆ: ಸಾರಾ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್, ‘ಮೈಸೂರು–ಕೊಡಗು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ವರಿಷ್ಠರು ಪ್ರಯತ್ನ ಮುಂದುವರಿಸಿದ್ದಾರೆ. ಈ ನಡುವೆ, ಬಿಜೆಪಿಯ ನಾಯಕರು ಕಮಲದ ಚಿಹ್ನೆಯಲ್ಲಿ ಸ್ಪರ್ಧಿಸುವಂತೆ ನನ್ನೊಂದಿಗೆ ಚರ್ಚಿಸಿದ್ದಾರೆ. ನನ್ನ ನಾಯಕ ಕುಮಾರಸ್ವಾಮಿ ಅವರು ಹೇಳಿದಂತೆ ಕೇಳುತ್ತೇನೆ; ನನ್ನ ತಕರಾರೇನಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಆದರೆ, ವರಿಷ್ಠರು ಸೂಚಿಸಿದಂತೆ ನಡೆದುಕೊಳ್ಳುವೆ’ ಎಂದು ಹೇಳಿದರು.

ಗಾಳಿ ಸುದ್ದಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಪ್ರತಾಪ

‘ಇನ್ನೂ 10 ದಿನಗಳವರೆಗೆ ಇಂತಹ ಇನ್ನೂ ಹತ್ತಾರು ಗಾಳಿಸುದ್ದಿಗಳು ಹರಡುತ್ತಿರುತ್ತವೆ. 10 ವರ್ಷಗಳಿಂದ ನಿಷ್ಠೆ, ಪ್ರಾಮಾಣಿಕತೆಯಿಂದ ಕೊಡಗು–ಮೈಸೂರು ಜನರ ಸೇವೆ ಮಾಡಿದ್ದೇನೆ. ನಾನು ಮಾಡಿರುವ ಕೆಲಸದ ಶೇ 10ರಷ್ಟನ್ನಾದರೂ ಈ ಹಿಂದೆ ಇದ್ದ ಮೈಸೂರು ಭಾಗದ ಇನ್ನೊಬ್ಬ ಸಂಸದರು ಮಾಡಿದ್ದರೆ ತೋರಿಸಿ ನೋಡೋಣ? ಕ್ಷೇತ್ರದ ಜನರು ಹಾಗೂ ಚಾಮುಂಡೇಶ್ವರಿ–ಕಾವೇರಿ ತಾಯಿಯ ಆಶೀರ್ವಾದ ನನ್ನ ಮೇಲಿದೆ. ಗಾಳಿಸುದ್ದಿಗಳಿಗೆ ತಲೆಕೆಡಿಸಿಕೊಳ್ಳದೇ ನನ್ನ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದೇನೆ’ ಎಂದು ಪ್ರತಾಪ ಸಿಂಹ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.