ನವದೆಹಲಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ ಆರನೇ ಕರಡು ಅಧಿಸೂಚನೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ರಾಜ್ಯಗಳ ಅಹವಾಲು ಆಲಿಸಿ ಮನವೊಲಿಕೆಗೆ ಕೇಂದ್ರ ಸರ್ಕಾರ ಕಸರತ್ತು ನಡೆಸಿದೆ. ಕರಡುವಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯಗಳ ಸಲಹೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಮನವೊಲಿಸಲು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಸಮಿತಿಯನ್ನು ರಚಿಸಿದೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ ಸಚಿವಾಲಯವು ಜುಲೈ 31ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಗೆ ಕರ್ನಾಟಕ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು ಹಾಗೂ ಕರಡು ಅಧಿಸೂಚನೆಯನ್ನು ತಿರಸ್ಕರಿಸಿತ್ತು.

‘ಕಸ್ತೂರಿರಂಗನ್ ವರದಿಯು ರಾಜ್ಯದ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದರೆ 10 ಜಿಲ್ಲೆಗಳ 33 ತಾಲ್ಲೂಕುಗಳ 1,499 ಗ್ರಾಮಗಳಲ್ಲಿರುವ ಲಕ್ಷಾಂತರ ಜನರಿಗೆ ಭಾರಿ ತೊಂದರೆ ಆಗಲಿದೆ. ಈ ವರದಿ ಬಗ್ಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಇದಲ್ಲದೆ, ವರದಿಯಲ್ಲಿ ಗುರುತಿಸಿರುವ ಬಹುತೇಕ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಈಗಾಗಲೇ ಸಂರಕ್ಷಣೆ ಮಾಡಲಾಗುತ್ತಿದೆ’ ಎಂದು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದು ತನ್ನ ನಿಲುವನ್ನು ತಿಳಿಸಿತ್ತು. 12 ಜಿಲ್ಲೆಗಳ 98 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಕೇರಳ ಸರ್ಕಾರವು ನವೆಂಬರ್ 2ರಂದು ಸಮ್ಮತಿ ಸೂಚಿಸಿತ್ತು. ಉಳಿದ ನಾಲ್ಕು ರಾಜ್ಯಗಳು ಕರಡು ಅಧಿಸೂಚನೆಯನ್ನು ವಿರೋಧಿಸಿದ್ದವು.

ಕರಡು ಅಧಿಸೂಚನೆಯನ್ನು ಅಂತಿಮಗೊಳಿಸುವಾಗ ಆಯಾ ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಸಂಘಟನೆಗಳು ಎತ್ತಿರುವ ಆತಂಕಗಳನ್ನು ಬಗೆಹರಿಸಲು ಸಮಿತಿ ರಚಿಸಲಾಗಿದೆ. ಆ ಪ್ರದೇಶದ ಪರಿಸರ ವ್ಯವಸ್ಥೆ, ಅಲ್ಲಿನ ಜನರ ಹಕ್ಕುಗಳು, ಸವಲತ್ತುಗಳು ಮತ್ತು ಅಭಿವೃದ್ಧಿ ಆಕಾಂಕ್ಷೆ ಕುರಿತ ಸಲಹೆಗಳನ್ನು ಸಮಗ್ರ ರೀತಿಯಲ್ಲಿ ಸಮಿತಿ ಪರಿಶೀಲಿಸಲಿದೆ. ಈ ಸಮಿತಿಯು ರಾಜ್ಯಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ ಹಾಗೂ ಪಶ್ಚಿಮ ಘಟ್ಟದ ಪ್ರದೇಶದ ಜನರ ಅಹವಾಲುಗಳನ್ನು ಆಲಿಸಲಿದೆ. ಕರಡು ಅಧಿಸೂಚನೆ ಕುರಿತ ರಾಜ್ಯಗಳ ಸಲಹೆ ಹಾಗೂ ಶಿಫಾರಸುಗಳನ್ನು ಸಮಿತಿ ಪರಾಮರ್ಶೆ ನಡೆಸಲಿದೆ. ಬಳಿಕ ಕೇಂದ್ರ ಪರಿಸರ ಸಚಿವಾಲಯಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ.

ಗಾಡ್ಗೀಳ್, ಕಸ್ತೂರಿ ರಂಗನ್ ಸಮಿತಿ

ಪಶ್ಚಿಮ ಘಟ್ಟದ ಅಪೂರ್ವ ಜೀವ ವೈವಿಧ್ಯದ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಸಮಿತಿ ರಚಿಸಿತ್ತು. ಈ ಸಮಿತಿಯು 2011ರಲ್ಲಿ ಘಟ್ಟದ 1,29,037 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬಹುದೆಂದು ಶಿಫಾರಸು ಮಾಡಿತ್ತು. ಘಟ್ಟದ ಶೇ 64ರಷ್ಟು ಪ್ರದೇಶದಲ್ಲಿ ಅಭಿವೃದ್ಧಿಗೆ ಕೆಲ ನಿರ್ಬಂಧ ಹಾಕಬೇಕು ಎಂದು ಶಿಫಾರಸು ಮಾಡಿತ್ತು.

ಇದಕ್ಕೆ ರಾಜಕೀಯ ವಲಯದಲ್ಲಿ ಭಾರಿ ವಿರೋಧ ಎದುರಾದಾಗ ಕೇಂದ್ರ ಸರ್ಕಾರ ಗಾಡ್ಗೀಳ್ ವರದಿ ಪರಿಶೀಲನೆಗೆ 2013ರ ಏಪ್ರಿಲ್ 15ರಂದು ಡಾ.ಕೆ.ಕಸ್ತೂರಿ ರಂಗನ್ ಸಮಿತಿ ರಚಿಸಿತ್ತು. ಈ ಸಮಿತಿ ಅದೇ ವರ್ಷದ ನವೆಂಬರ್ 13ರಂದು ವರದಿ ನೀಡಿ, ಘಟ್ಟದ ಶೇ 37ರಷ್ಟು ಅರಣ್ಯ ಪ್ರದೇಶವನ್ನು ಅಂದರೆ 59,940 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು.

ಪ್ರಮುಖ ನಿರ್ಣಯಗಳು

ರಸ್ತೆಗಳ ಅಭಿವೃದ್ಧಿ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಅಡ್ಡಿ ಮಾಡಬಾರದು. ಪ್ರತಿ ಹಾಡಿಯಲ್ಲೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು

ಪಡಿತರ ಚೀಟಿ ಹೊಂದಿಲ್ಲದ ಬುಡಕಟ್ಟು ಕುಟುಂಬಗಳಿಗೆ 15 ದಿನಗಳ ಒಳಗಾಗಿ ಬಿಪಿಎಲ್ ಪಡಿತರ ಚೀಟಿ ಒದಗಿಸಿ ವರದಿ ಸಲ್ಲಿಸಬೇಕು

ಅರಣ್ಯ ಹಕ್ಕು ಸಮಿತಿಗಳ ಮುಂದೆ ಬಾಕಿ ಇರುವ ಅರ್ಜಿಗಳನ್ನು ನಿಗದಿತ ಅವಧಿಯ ಒಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು

ಆರೋಗ್ಯ ಇಲಾಖೆಯಲ್ಲಿ ಬುಡಕಟ್ಟು ಜನರನ್ನು ಸ್ಥಳೀಯವಾಗಿ ನೇಮಕ ಮಾಡುವ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಡಿಗಳಲ್ಲಿ ಸ್ಮಶಾನ ಭೂಮಿ ಒದಗಿಸಬೇಕು

ಬುಡಕಟ್ಟು ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಕಂದಾಯ, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು

ವೇಶನ ರಹಿತರು ಒಪ್ಪಿಗೆ ಸೂಚಿಸಿದರೆ ಅವರಿಗೆ ಬೇರೆ ಕಡೆ ನಿವೇಶನ ಒದಗಿಸಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅರಣ್ಯದ ಅಂಚಿನಲ್ಲಿ ಜಮೀನುಗಳನ್ನು ಗುರುತಿಸಬೇಕು. ನಿವೇಶನ ಇದ್ದರೂ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು

ಬುಡಕಟ್ಟು ಜನರಿಗೆ ಹಕ್ಕುಪತ್ರ ವಿತರಣೆಗೆ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಹಕ್ಕು ಪತ್ರ ಹೊಂದಿರುವವರು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅರ್ಹತೆ ಪಡೆಯುವ ಕುರಿತು ಕ್ರಮ ಕೈಗೊಳ್ಳಬೇಕು

‘ಬುಡಕಟ್ಟು ಜನರಿಗೆ ಅಗತ್ಯ ಮೂಲಸೌಕರ್ಯ’

ಬೆಂಗಳೂರು: ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಜನರಿಗೆ ಮನೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಸೇರಿ ಎಲ್ಲ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬುಡಕಟ್ಟು ಸಮುದಾಯವರಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. 2 ತಿಂಗಳ ಬಳಿಕ ಮತ್ತೆ ಸಭೆ ಕರೆಯುತ್ತೇನೆ. ನಿರ್ಣಯಗಳು ಜಾರಿ ಆಗದಿದ್ದರೆ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.