ಪೂಜ್ಯ ಪೇಜಾವರಶ್ರೀಗಳ ನಿರ್ಯಾಣದೊಂದಿಗೆ ಒಂದು ಉಜ್ವಲವಾದ ಅಧ್ಯಾಯವು ಮುಗಿಯಿತು.

ಆ ಅಧ್ಯಾಯವೆಂದರೆ – ಮತೀಯ, ಮಠೀಯ ಸನ್ನಿವೇಶದೊಂದಿಗೆ ಲೋಕಸೇವೆಯನ್ನು ಕುಂದಿಲ್ಲದೆ ಬೆರೆಸಿದ ಅಧ್ಯಾಯವದು. ಮತೀಯ ವಾಗ್ವಾದಗಳನ್ನು ಸಾಮಾಜಿಕ, ಸಾಂಸ್ಕೃತಿಕ ವಾಗ್ವಾದಗಳತ್ತಲೂ ವಿಸ್ತರಿಸಿದ ಅಧ್ಯಾಯ. ದ್ವೀಪಗಳಂತಿದ್ದ, ತಮ್ಮದೇ ಜಡಮೌನದಲ್ಲಿ ಹುದುಗಿದ್ದ ಮಠಗಳ ಸುತ್ತ ಲೋಕಸಂತೆಯನ್ನೇ ನೆರವಿಸಿ, ‘ಶಬ್ದಕ್ಕಂಜಿದೊಡೆಂತಯ್ಯ’ ಎಂದು ದೊಡ್ಡ ಸದ್ದು ಮಾಡಿದ ಅಧ್ಯಾಯ.

ತಮ್ಮವರಲ್ಲದೇ ಉಳಿದವರಿಗೆ ನಿರ್ಜಲ ಪರಿಸರದಂತಿದ್ದ ಮಠಗಳ ಆಲಯವನ್ನು ಸಾಧ್ಯವಾದಷ್ಟು ಎಲ್ಲರಿಗೆ ಬಯಲಾಗಿಸಿದ ಅಧ್ಯಾಯ. ವೈದಿಕ ಜಡತೆಯನ್ನು ಒಮ್ಮೆಲೇ ಒಡೆದು ನಿರಂತರ ಚಟುವಟಿಕೆಯ ಜೇನುಗೂಡಾಗಿಸಿದ ಅಧ್ಯಾಯ. ಕರ್ಮವೇ ತನ್ನ ಮಾಧ್ಯಮವೆಂದು ಮನಗಂಡ ಹಾಗೆ ತನ್ನ ಮಾಧ್ಯಮವನ್ನು ಮನಗಂಡ ಕ್ಷಣದಿಂದ ಒಡಮೂಡುವ ಆತ್ಮವಿಶ್ವಾಸ, ಉಮೇದು, ಎದೆಗುಂದದ ಲವಲವಿಕೆಗಳನ್ನು ಕೊನೆ ತನಕ ಅನುಭವಿಸಿದ ಅಧ್ಯಾಯ. ಮಠಗಳು ತಮ್ಮ ಆಸ್ತಿಪಾಸ್ತಿಯ ಸಮೇತ ಒಂದು ಮನೆತನದಲ್ಲಿ ಹರಿದು ಬರುವ ಅಘೋಷಿತ ಸಂಪ್ರದಾಯವನ್ನು ಪೂರ್ತಿ ಬದಲಿಸಿದ ಅಧ್ಯಾಯ. ಹಾಗೆ ಬದಲಿಸಿ ತಮ್ಮಪೂರ್ವಾಶ್ರಮ ಸಂಬಂಧಿಗಳನ್ನು, ಆ ಮಾತಿನ ಭಾರವನ್ನೇ ಕಳೆದು ಹಗುರಾಗಿಸಿ, ಅವರನ್ನು ನಿಜಕ್ಕೂ ಪಾರು ಮಾಡಿದ, ಅವರಿಂದ ಸಮಾಜವನ್ನು ಪಾರು ಮಾಡಿದ ಅಧ್ಯಾಯ.

ಹೌದು, ಪೇಜಾವರಶ್ರೀಗಳ ಬದುಕೆಂದರೆ – ಎಲ್ಲ ರೀತಿಯಿಂದಲೂ ಅವೈಜ್ಞಾನಿಕವೂ, ವ್ಯಕ್ತಿತ್ವದ ಬೆಳವಣಿಗೆಗೆ ಅಪಾಯಕಾರಿಯೂ ಆದ ‘ಬಾಲಸನ್ಯಾಸ’ವನ್ನು ಯಶಸ್ವಿಯಾಗಿ ಸಾಧಿಸಿದ ಅಧ್ಯಾಯವೂ ಹೌದು! ಈ ಬಾಲಸನ್ಯಾಸದ ಬಗ್ಗೆ ಒಂದು ಮಾತು. ನಾವೆಲ್ಲ ಬಲ್ಲಂತೆ ಬಾಲಪ್ರತಿಭೆಗಳು ಇರುತ್ತಾರೆ; ಹುಟ್ಟು ಪ್ರತಿಭೆಗಳು. ಚೈಲ್ಡ್ ಪ್ರಾಡಿಜಜಿಗಳು. ಹೆಚ್ಚಾಗಿ ಸಂಗೀತಕ್ಷೇತ್ರದಲ್ಲಿ. ಆದರೆ ಈ ಬಾಲ ಪ್ರತಿಭೆಗಳು, ಬೆಳದಂತೆ ಕಳೆಗುಂದುವುದನ್ನು ಕಂಡಿದ್ದೇವೆ. ಕೊಳಲು ಮಾಲಿಯಂಥ ಅಸಾಧಾರಣ ಪ್ರತಿಭೆಗಳು ಕಳೆಗುಂದದಿದ್ದರೂ, ಬಾಲ್ಯದಲ್ಲೇ ಬೆಳಕಿಗೆ ಬಂದು, ಸಹಜವಾದ ಬಾಲ್ಯವೇ ಕಳೆದುಹೋದುದರ ಪರಿಣಾಮವಾಗಿ ಅದೊಂದು ಬಗೆಯ ವಿಕ್ಷಿಪ್ತತೆ ಅವರ ವ್ಯಕ್ತಿತ್ವದಲ್ಲಿ ತೋರಿ ಬರುತ್ತಿತ್ತು. ಇವೆಲ್ಲ ದುಃಖದಾಯಕ ದೃಶ್ಯಗಳೇ ಹೌದು. ಬಾಲಪ್ರತಿಭೆಗಳೆಂದರೆ ಒಂದು ರೀತಿಯಲ್ಲಿ ಬಾಲಸನ್ಯಾಸಿಗಳಂತೆಯೇ. ತಮಗೆ ಗೊತ್ತಿಲ್ಲದೇ ಬಾಲ್ಯವೇ ಬಲಿಯಾದವರು! ಮುಗ್ಧತೆಯೇ ಬಲಿಯಾದವರು! ಮಗು, ಎದೆಹಾಲು ಕುಡಿದು ಬೆಳೆಯುವಲ್ಲಿ ಮುಗ್ದತೆಯೂ ಬೆಳೆಯುತ್ತಿರುತ್ತದೆ. ಆದರೆ ಅದುವರೆಗೆ ಹಿಟ್ಟಿ ಕದಡಿಸಿದ ತಿಳಿ–ಬಿಳಿನೀರನ್ನೇ ಹಾಲೆಂದು ನಂಬಿ ಕುಡಿದವನು. ನಿಜವಾದ ಹಾಲನ್ನು ಒಮ್ಮೆ ಕುಡಿಯುವಾಗ, ಇದುವರೆಗೆ ಕುಡಿದದ್ದು ನಿಜವಾದ ಹಾಲಲ್ಲ – ಎಂಬ ತಿಳಿವಳಿಕೆಯೇ ಮುಖ್ಯವಾಗಿ, ಮುಗ್ಧತೆಯು ನಾಶವಾಗಿಬಿಡುತ್ತದೆ. ಇದು ಮಹಾಭಾರತದ ಕಥೆ. ಒಮ್ಮೆ ಮುಗ್ಧತೆಯು ನಾಶವಾದರೆ ಮರಳಿ ಮುಗ್ಧತೆಯನ್ನು ಗಳಿಸುವುದು ‘ಕಡುಕಷ್ಟ’– ಈ ಬದುಕಿನಲ್ಲಿ!

ಏಕೆ ಹೇಳುತ್ತಿದ್ದೇನೆಂದರೆ ಬಾಲಸನ್ಯಾಸಿಯಾಗಿಯೂ, ಎಲ್ಲ ಬಗೆಯ ವಿಪರ್ಯಾಸಗಳನ್ನು ನೋಡಿಯೂ, ಪೇಜಾವರಶ್ರೀಗಳು ವಿಕ್ಷಿಪ್ತರಾಗಲಿಲ್ಲ. ಆಳದ ಮುಗ್ಧತೆಯನ್ನು ಕಳೆದುಕೊಳ್ಳಲಿಲ್ಲ. ಕಡೆಗೋಲು ಕೃಷ್ಣನನ್ನು, ಅಂದರೆ ಬಾಲಕೃಷ್ಣನನ್ನು ನಿರಂತರ ಪೂಜಿಸಿ ಒಂದರ್ಥದಲ್ಲಿ ಕಳೆದುಹೋದ ತಮ್ಮ ಬಾಲ್ಯವನ್ನು ಅವರು ಮರಳಿ ಪಡೆದಂತಿದ್ದರು! ಕಡೆಗೋಲು ಎಂದರೆ ಮೊಸರು ಕಡೆಯುವ ಕೋಲು. ಎಲ್ಲ ವಿಚಾರಗಳನ್ನೂ ಮತ್ತೆ ಮತ್ತೆ ಮಥನ ಮಾಡುವ ಉತ್ಸಾಹವೂ ಅವರಲ್ಲಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ!

ಲೋಕದ ಮುಂದೆ ನಮ್ಮ ಚಟುವಟಿಕೆ–ನಡೆವಳಿಕೆಗಳೆಲ್ಲವೂ Articulate ಆಗುತ್ತಹೋಗುತ್ತವೆ. ಕೆಲವೊಮ್ಮೆ ಈ Articulation ಎನ್ನುವುದು ಕೃತಕವೂ ಆಗಿಬಿಡುತ್ತದೆ. ಹಾಗಾಗುವುದೇ ಹೆಚ್ಚು. ಆದರೆArticulation ಒಂದು ಸಾಧ್ಯತೆಯೂ ಹೌದು. ಸಹಜತೆಯ ಹೆಸರಿನಲ್ಲಿ ಈ ಸಾಧ್ಯತೆಗಳನ್ನು ತಿರಸ್ಕರಿಸುವುದು ಕೂಡ ಸರಿಯಲ್ಲ. ಹಾಗೆಂದು ನಡೆವಳಿಕೆಗಳು ಕೃತಕವಾಗಬಾರದೆನ್ನುವುದೂ ನಿಜವಲ್ಲವೆ? ಈ ದ್ವಂದ್ವವನ್ನು ನಮ್ಮ ಇಷ್ಟದೈವದ ನೆರವಿನಲ್ಲಿ ಮಾತ್ರ ನಾವು ಮೀರಬಲ್ಲೆವು. ತಮ್ಮ ಇಷ್ಟದೈವದ ಜೊತೆ ಮಾತನಾಡುವುದೆಂದರೆ ಅದು ನಮ್ಮಲ್ಲೇ ನಾವು ಮಾತನಾಡಿಕೊಂಡಂತೆ. ಹಾಗೆ ಮಾತನಾಡುವಾಗ, ಅಂದರೆ ನಮ್ಮೊಳಗನ್ನೇ ನಾವು ತೋಡಿಕೊಳ್ಳುವಾಗ ಸಂಭವಿಸುವArticulation ತೀರ ಸಹಜವಾದುದ್ದು; ಅಚ್ಚರಿಯಾಗುವಷ್ಟು ಸ್ವೋಪಜ್ಞವಾದದ್ದು. ಸ್ವೋಪಜ್ಞವಾದುದರಿಂದಲೇ ಮಾತಿನ ಸಾಧ್ಯತೆಯ ಪರಮಸಿದ್ಧಿಯನ್ನು ಕಾಣಿಸುವಂಥಾದ್ದು. ಶರಣರು ತಮ್ಮ ವಚನಗಳಲ್ಲಿ, ದಾಸರು ತಮ್ಮ ಹಾಡುಗಳಲ್ಲಿ ತಮ್ಮ ಇಷ್ಟ ದೈವದ ಜೊತೆ ಮಾತನಾಡುವಲ್ಲಿ ಮಾತಿನ ಎಂಥ ಅರ್ಥಸಾಧ್ಯತೆಗಳನ್ನು ಕಾಣಿಸಿವರೆಂದರೆ ಕನ್ನಡದಲ್ಲಿ ಅದೊಂದು ಮಾದರಿಯಾಗಿ ಕಂಡುಬರುತ್ತದೆ. ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎನ್ನುವ ಒಂದು ಸಾಲಿನಲ್ಲಿ ಬಸವಣ್ಣ ಈArticulationನ ರಹಸ್ಯವನ್ನು ಹೇಳಿಬಿಟ್ಟಿದ್ದಾರೆ.

ಪೇಜಾವರಶ್ರೀಗಳು ಕವಿಗಳಲ್ಲ. ಅವರು ಕರ್ಮತತ್ಪರರು. ಲೋಕವೇ ಅವರಿಗೆ ಇಷ್ಟದೈವ. ಲೋಕಶುಶ್ರೂಷೆಯೇ ಅವರಿಗೆ ಮುಖ್ಯವಾದ ಆರಾಧನೆ. ಆದುದರಿಂದ ಲೋಕದ ಜೊತೆಗಿನ ಒಡನಾಟದಲ್ಲಿ ಅವರುArticulationನ ಎಂಥ ಎತ್ತರದ ಮಟ್ಟವನ್ನು ಮುಟ್ಟಿದರೆಂದರೆ ಎರಡು ಉದಾಹರಣೆಗಳನ್ನು ನಾನು ನೀಡಬಯಸುವೆ.

ಮೊದಲನೆಯದು ಮಹಾತ್ಮಾ ಗಾಂಧೀಜಿಯವರ ಮೃತ್ಯು ಸಂದರ್ಭ. ಘಟನೆಯ ಮರುದಿನದ ಮಧ್ಯಾಹ್ನ ತಮ್ಮ ಗುರುಗಳೊಂದಿಗೆ ಪೇಜಾವರಶ್ರೀಗಳು ಊಟಕ್ಕೆ ಕುಳಿತಿರುತ್ತಾರೆ. ಯತಿಗಳ ಊಟವನ್ನು ‘ಭಿಕ್ಷೆ’ ಎಂದು ಕರೆಯುವುದು! ನಿತ್ಯದಂತೆ ಅಂದು ಕೂಡ ಪಂಡಿತರು, ವಿದ್ಯಾರ್ಥಿಗಳು ಇತರ ಗಣ್ಯರೂ – ಜೊತೆಗೆ ಊಟ ಮಾಡುತ್ತಿದ್ದರು. ಆಗ ತಲುಪಿತು – ಹಿಂದಿನ ದಿನ ಸಂಜೆ, ಪ್ರಾರ್ಥನೆಯ ವೇಳೆಯಲ್ಲಿ ಗಾಂಧೀಜಿಯವರ ಹತ್ಯೆಯಾದ ಸುದ್ದಿ. ಪೇಜಾವರಶ್ರೀಗಳು ಎಂಥವರ ನಡುವೆ ಇದ್ದರೆಂದರೆ ಗಾಂಧೀಜಿಯವರ ಸಾವಿನಿಂದ ಸಂತುಷ್ಟಗೊಂಡವರೂ ಅಲ್ಲಿದ್ದರು. ಪ್ರಾಯಃ ಅಂಥವರೇ ಹೆಚ್ಚು ಮಂದಿ. ಗಾಂಧೀಜಿಯವರ ಮಹತ್ತ್ವವನ್ನು ಅರ್ಥಮಾಡಿಕೊಂಡ ಹಲವರೂ ಅಲ್ಲಿದ್ದರು. ಈ ಸುದ್ದಿಯನ್ನು ಕೇಳಿ ಪೇಜಾವರಶ್ರೀಗಳು ಮಾತ್ರ ತೀವ್ರಕಳವಳಕ್ಕೀಡಾದರು. ಅವರಿಗೆ ಮುಂದೆ ಉಣ್ಣುವುದಾಗಲಿಲ್ಲ. ಏನೋ ಹೇಳಲಾಗದ ಖಿನ್ನತೆ ಮನಸ್ಸಿಗೆ ಕವಿಯಿತು. ಹಾಗೆಂದು ಊಟ ಬಿಟ್ಟು ಎದ್ದುಹೋಗಲಿಲ್ಲ. ಸುಮ್ಮನೆ ಉಣ್ಣುತ್ತಿರುವಂತೆ ನಟಿಸಿದರು. ಎದ್ದುಹೋಗುತ್ತಿದ್ದರೆ ಎಲ್ಲರ ಊಟ ನಿಲ್ಲುತ್ತಿತ್ತು. ಆ ಕುರಿತು ಆಮೇಲೆ ವಾದ ವಿವಾದಗಳೂ ನಡೆಯಬಹುದಾಗಿತ್ತು. ಅದಾವುದೂ ಶ್ರೀಗಳಿಗೆ ಬೇಕಿರಲಿಲ್ಲ. ನಿಜಕ್ಕೂ ಉಪವಾಸವಿದ್ದು, ಎಲೆಯ ಮುಂದೆ ಸಾಕ್ಷಿಯಂತೆ ಕೂತಿದ್ದ ಈ ನಾಟಕ, ಪಕ್ಕದಲ್ಲಿದ್ದ ಗುರುಗಳಿಗೆ ತಿಳಿದು ಬಂದಾಗ ಎಲ್ಲರ ಊಟ ಮುಗಿದಿತ್ತು. ಯಾವುದಕ್ಕೆ ಸಂಭ್ರಮಿಸಬೇಕು, ಯಾವುದಕ್ಕೆ ದುಃಖಿಸಬೇಕು – ಎಂದೇ ತಿಳಿಯದ ಮಂದಿಯ ನಡುವೆ ಸಂವೇದನಾಶೀಲ ಮನಸ್ಸೊಂದು ಅನುಭವಿಸುವ ಸಂಕಟವಿದು. ಆಳದ ಸತ್ಯವನ್ನು ನೇರ ಹೇಳಲಾಗದೆ ಅದನ್ನು ರೂಪಕ–ಪ್ರತಿಮೆಗಳ ಮೂಲಕ ಪ್ರಕಟಿಸುವಲ್ಲಿ ಮಾತು ಪಡೆಯುವArticulationನಂತೆ– ಈ ನಡೆ! ಲೋಕದಲ್ಲಿ ಸಾಮಾನ್ಯವಾಗಿ, ಉಣ್ಣುವುದು ನಿಜ. ಉಪವಾಸವು ತೋರಿಕೆ. ಆದರೆ ಇಲ್ಲಿ, ಉಪವಾಸವೇ ನಿಜ, ಉಂಡಂತೆ ಇದ್ದುದು ತೋರಿಕೆ. ಆಶ್ಚರ್ಯವೆಂದರೆ, ಪೇಜಾವರಶ್ರೀಗಳಿಗೆ ಆಗ ಹದಿನೇಳರ ಹರೆಯ!

ಇನ್ನೊಂದು ಸಂದರ್ಭ. ಅದು ಮಂದಿರ–ಮಸೀದಿ ವಿವಾದದ ಕಾವಿನ ನಡುವೆ ನಡೆದದ್ದು. ಈ ಚಳವಳಿಯ ಒಂದು ಹಂತದಲ್ಲಿ, ವಿವಾದವನ್ನು ಎರಡೂ ಕಡೆಯ ಸಂತರೇ ಸೇರಿ ಪರಿಹರಿಸಿಕೊಳ್ಳಬೇಕು ಎನ್ನುವುದು ಪೇಜಾವರಶ್ರೀಗಳ ನಿಲುವಾಗಿತ್ತು. ಅದರಂತೆ ಸಂತರ ಸಭೆ ಸೇರಿದಾಗ ಶ್ರೀಗಳು ಮುಸ್ಲಿಂ ಸಂತರೊಡನೆ ಈ ವಾದಗ್ರಸ್ತ ಕಟ್ಟಡವನ್ನು, ತಮಗೆ ಅಂದರೆ ಸನ್ಯಾಸಿಗೆ ಕೊಡುತ್ತಿರುವ ‘ಭಿಕ್ಷೆ’ ಎಂದು ಪರಿಗಣಿಸಿ ಭಿಕ್ಷೆ ನೀಡಬೇಕು ಎಂದು ಕೇಳಿಕೊಂಡರು. ಸನ್ಯಾಸಿಗೆ ಮಾನಾಪಮಾನಗಳಿಲ್ಲ. ಅವನು ‘ಭಿಕ್ಷು’. ಈಗ ಭಿಕ್ಷೆಯಾಗಿ ಅವನು ರಾಮಮಂದಿರವನ್ನು ಬೇಡುತ್ತಿದ್ದಾನೆ ಎಂದರು!

ಸ್ವಾಭಿಮಾನದ ಮಾತು ಎತ್ತರದ ಗಂಟಲಲ್ಲಿ ನಡೆದಿದ್ದಾಗ ಇದು ಪೇಜಾವರಶ್ರೀಗಳ ಮನಸ್ಸು!

ಸ್ವಾಭಿಮಾನ ಮತ್ತು ನಿಜವಾದ ಜ್ಞಾನೋದಯ–Enlightenment–ಗಳ ನಡುವಣ ಅಂತರವನ್ನೂ, ಇವುಗಳ ನಡುವಣ ಸಮಸ್ಯೆಯನ್ನೂ, ಸರ್ವಸಂಗ ಪರಿತ್ಯಾಗಿಯಾದ ಸತ್ಯಕ್ಕೆ ಮಾತ್ರ ಮುಡಿಪಾದ ಸನ್ಯಾಸಿ ಬಲ್ಲ. ಬಲ್ಲವನಾಗಿ ಅವನು ಲೋಕದ ಬದುಕಿನಲ್ಲಿ ಪಾಲ್ಗೊಳ್ಳುವುದಾದರೆ, ಅವನು ಸ್ವಾಭಿಮಾನಕ್ಕೆ ಪಥ್ಯವಲ್ಲದ ಒಂದು ನಿಲುವನ್ನು ತಾಳಲೇಬೇಕಾಗುತ್ತದೆ. ಹಾಗೆ ತಾಳುವಲ್ಲಿ ಅವನು ಸೂಕ್ಷ್ಮವಾದArticulation ಮಾಡಬೇಕಾಗಿ ಬರುತ್ತದೆ. ರಾಮಮಂದಿರವನ್ನು ಭಿಕ್ಷೆಯಾಗಿ ಬೇಡುತ್ತಿದ್ದೇನೆ ಎನ್ನುವ ನಿಲುವು ಅಂಥದೊಂದು ನಿಲುವು. ನಮ್ಮೆದುರಿನ ಸದ್ಯದ ಸಂತಗಣದಲ್ಲಿ, ಪೇಜಾವರಶ್ರೀಗಳು ಮಾತ್ರ ಇಂಥ ನಿಲುವುಗಳನ್ನು ತಾಳಬಲ್ಲರುವರೆನಿಸುತ್ತದೆ. ಈ ಮಾತುಕತೆಯ ವೇಳೆ ಶ್ರೀಗಳಿಗೆ ಅರವತ್ತರ ವಯಸ್ಸು.

ಹದಿನೆಂಟರ ಬಾಲಸನ್ಯಾಸಿಯ ಮನಸ್ಸು ಅರವತ್ತರಲ್ಲೂ ಕಳೆಗುಂದಿರಲಿಲ್ಲ!

ನನ್ನ ಎಳೆವೆಯಲ್ಲಿ ನಮ್ಮ ಮನೆಯಲ್ಲಿ ಪೇಜಾವರ ಶ್ರೀಗಳ ಕುರಿತು ಬಹಳ ಮಾತುಗಳು ನಡೆಯುತ್ತಿದ್ದವು. ಶ್ರೀಗಳ ಬಗ್ಗೆ ಎಲ್ಲರಿಗೂ ಅಭಿಮಾನ. ನಾವು ಪೂರ್ವಾಶ್ರಮ ಸಂಬಂಧಿಗಳಾದುದರಿಂದ ಇದು ಸಹಜವೂ ಆಗಿತ್ತು. ಶ್ರೀಗಳವರ ಶಾಸ್ತ್ರಪಾಂಡಿತ್ಯ, ಅನೇಕ ದಿಗ್ಗಜ ಪಂಡಿತರನ್ನೂ ಇವರು ಕಂಗೆಡಿಸಿದ್ದು, ಸಂಘಟನಾ ಚಾತುರ್ಯ, ಕೇವಲ 21ರ ಹರಯದಲ್ಲಿ ಮೊದಲ ಪರ್ಯಾಯ ಕಾಲದಲ್ಲಿ ನಡೆಯಿಸಿದ ಮಾಧ್ವ ಸಮಾವೇಶದ ಸವಾಲುಗಳು – ಈ ಬಗೆಗೆಲ್ಲ ಮಾತು ನಡೆಯುತ್ತಿತ್ತು. ಆದರೆ ನಾನು ಗಮನಿಸಿದಂತೆ ಒಂದು ವಿಶಿಷ್ಟ ಸಂಗತಿಯ ಬಗ್ಗೆ ಅಭಿಮಾನದ ಮಹಾಪೂರವೇ ಹರಿಯುತ್ತಿತ್ತು. ಅದೆಂದರೆ ಕೇವಲ ಎಂಟರ ಹರಯದಲ್ಲಿ ಸನ್ಯಾಸವು ಹೇರಲ್ಪಟ್ಟ ಈ ಪುಟ್ಟ ಹುಡುಗ, ಕಠಿಣವಾದ ಸನ್ಯಾಸಧರ್ಮವನ್ನು ಚ್ಯುತಿಯಿಲ್ಲದೆ ಪಾಲಿಸುತ್ತಿರುವುದು. ಇದೇಕೆಂದರೆ ಮಠಗಳಲ್ಲಿ ನಡೆಯುತ್ತಿರುವ ವ್ಯವಹಾರಗಳ ಕುರಿತು ಹಿರಿಯರೆಲ್ಲ ಬಲ್ಲವರಾಗಿದ್ದರು. ನನ್ನ ಪ್ರೀತಿಯ ಅಜ್ಜಿ, ಪೇಜಾವರಶ್ರೀಗಳ ತಂದೆಯವರ ಅಕ್ಕ. ಅಜ್ಜಿಯೊಡನೆ, ಅವರ ಒಬ್ಬ ಮಗನನ್ನು ಪೇಜಾವರಮಠಕ್ಕೆ ಉತ್ತರಾಧಿಕಾರಿಯಾಗಿ ಮಾಡೋಣವೇ – ಎಂದು ಮಾತ್ತೆತ್ತಿದಾಗ ಆಕೆ ಹೇಳಿದ ಮಾತು ಇದು: ‘ಭಿಕ್ಷೆ ಬೇಡಿಯಾದರೂ ಹೊಟ್ಟೆ ಹೊರೆದುಕೊಳ್ಳಬಹುದು, ಆದರೆ ಮಠಗಳ ಸಹವಾಸ ಬೇಡ’. ಮಾತು ಕಟುವೆನಿಸಿದರೂ ಸತ್ಯ ಈ ಮಾತಿನ ಪರವಾಗಿಯೇ ಇತ್ತು! ಇಂಥ ವಿಕಟಸನ್ನಿವೇಶದಲ್ಲಿ, ಪೇಜಾವರಶ್ರೀಗಳು ಯತಿಧರ್ಮವನ್ನು ಪಾಲಿಸಿ ಸಂಬಂಧಿಸಿದ ಎಲ್ಲರನ್ನೂ ಒಳಗಿನ ಇಬ್ಬಂದಿತನದಿಂದ ಪಾರು ಮಾಡಿ ಬಿಟ್ಟಿದ್ದರು. ಈ ಕಾರಣಕ್ಕಾಗಿಯೇ ಎಲ್ಲರಿಗೂ ಅತ್ಯಂತ ಅಭಿಮಾನ. ಇವೆಲ್ಲಕ್ಕಿಂತಲೂ ಆಳವಾಗಿ ಈ ಇಡೀ ವ್ಯವಸ್ಥೆಯ ಬಗ್ಗೆ ನೋಯ ಬಲ್ಲವರು ಪ್ರಾಯಃ ಯಾರೂ ಇರಲಿಲ್ಲ – ನನ್ನ ಅಜ್ಜಿಯ ಹೊರತಾಗಿ!

ಎಪ್ಪತ್ತರ ದಶಕದ ಮೊದಲ ಭಾಗದಲ್ಲಿ ಪೇಜಾವರ ಶ್ರೀಗಳು ದಲಿತರ ಮನೆಗಳಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಎದ್ದ ಕೋಲಾಹಲ ನನಗಿನ್ನೂ ನೆನಪಿದೆ. ಬೆಂಗಳೂರಿನ ವಿದ್ಯಾಪೀಠಕ್ಕೆ ಪಂಡಿತರೊಬ್ಬರು ಈ ವಿಷಯದ ಕುರಿತು ವಾದ ಮಾಡುವುದಕ್ಕಾಗಿ, ಕೆಲವು ಗ್ರಂಥಗಳನ್ನು ಹೊತ್ತುಕೊಂಡೇ ಬಂದಿದ್ದರು. ಅದೇಕೆಂದರೆ ಶ್ರೀಗಳು ಮಾಡುತ್ತಿರುವ ಈ ಕೆಲಸ ಶಾಸ್ತ್ರವಿರುದ್ಧ ಎಂದು ಮನಗಾಣಿಸಲು ಬಂದವರಾಗಿದ್ದರು! ಕೋಣೆಯ ಹೊರಗೆ ಬಾಗಿಲ ಬಳಿ ಕುಳಿತು ಈ ವಿವಾದವನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಶ್ರೀಗಳ ಸಮರ್ಥನೆಯ ಮುಂದೆ ಪಂಡಿತರು ನಿರುತ್ತರರಾದುದಕ್ಕಿಂತ ಹೆಚ್ಚಾಗಿ ಅವರ ಕೋಪಾವೇಶವು ತಣಿದುದು ಕುತೂಹಲಕಾರಿಯಾಗಿತ್ತು. ಎಂಥ ಸನ್ನಿವೇಶದಲ್ಲಿ ಶ್ರೀಗಳು ಕೆಲಸ ಮಾಡಬೇಕಿತ್ತು, ಎಂದು ಸೂಚಿಸುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ಅಷ್ಟೇಕೆ? ಅನುಭಾವಿಗಳೆಂದೇ ಪ್ರಖ್ಯಾತರಾದ ಕಾಂಚಿಯ ಪರಮಾಚಾರ್ಯರಿಗೇ ಪೇಜಾವರಶ್ರೀಗಳ ಬಗ್ಗೆ ಆದರಾಭಿಮಾನಗಳಿದ್ದರೂ, ದಲಿತರ ಕೇರಿಗೆ ಹೋಗಿ ಬಂದುದರ ಬಗ್ಗೆ ಸಮಾಧಾನವಿರಲಿಲ್ಲ ಎಂದ ಮೇಲೆ ಇನ್ನೇನು ಹೇಳೋಣ?

ಗುರು ವಿದ್ಯಾಮಾನ್ಯರ ಗಾಢ ಪ್ರಭಾವಕ್ಕೆ ಒಳಗಾಗಿದ್ದರು ಪೇಜಾವರಶ್ರೀಗಳು. ವಿದ್ಯಾಮಾನ್ಯರ ಸಿದ್ಧಾಂತನಿಷ್ಠೆ, ಪ್ರೌಢಪಾಂಡಿತ್ಯ, ನಿಷ್ಕಲ್ಮಶ ಜೀವನ, ಮುಗ್ದತೆ, ಶಿಷ್ಯವಾತ್ಯಲ್ಯ – ಇವೆಲ್ಲ ಪೇಜಾವರಶ್ರೀಗಳ ಮನದಲ್ಲಿ ಅಚ್ಚೊತ್ತಿದ್ದವು. ಹಾಗೆಯೇ ಪ್ರತಿಫಲಿತವಾಗುತ್ತಿದ್ದವು. ಆದರೆ ಶ್ರೀಗಳು ಗುರುಗಳಿಂದ ಭಿನ್ನವೂ ಆಗಿದ್ದರು. ಭಿನ್ನವಾಗಿ ವಿಚಾರ ಮಾಡುತ್ತಿದ್ದರು. ಏಕೆಂದರೆ ವಿದ್ಯಾಮಾನ್ಯರು ಹಳೆಗಾಲದವರಾಗಿದ್ದರು. ವಿಶ್ವೇಶರು ಸಂಪ್ರದಾಯಕ್ಕೆ ಹೊಸನೀರು ತರಲು ಹವಣಿಸುತ್ತಿದ್ದರು; ಹೊಸಗಾಲದವರಾಗಿ
ದ್ದರು. ವಿದ್ಯಾಮಾನ್ಯರಲ್ಲಿ ಅಧ್ಯಯನ ನಡೆಸುತ್ತಿದ್ದ ಹದಿವಯಸ್ಸಿನಲ್ಲಿಯೇ ವಿಶ್ವೇಶರಲ್ಲಿ ದಲಿತರ ಬಗೆಗೆ ವಿಶೇಷವಾದ ಕಾಳಜಿ ವ್ಯಕ್ತವಾಗುತ್ತಿತ್ತು. ಎಷ್ಟರಮಟ್ಟಿಗೆಂದರೆ ಭಂಡಾರಕೇರಿಯಲ್ಲಿರುವ ದಲಿತರ ವಸತಿಗಳನ್ನು ತೋರಿಸುತ್ತ, ವಿದ್ಯಾಮಾನ್ಯರು ‘ನೋಡಿ, ನಿಮ್ಮವರ ಮನೆಗಳು’ ಎನ್ನುತ್ತಿದ್ದುದುಂಟು! ವಿಶ್ವೇಶರ ಪಾಲಿಗೆ ಗುರುವಚನವು ಎಂದೂ ಲಘುವಾಗಿರಲಿಲ್ಲ. ದಲಿತರು ಅವರ ಪಾಲಿಗೆ ಎಂದೆಂದೂ ನಮ್ಮವರೇ ಆಗಿದ್ದರು!

ದುಡಿಯುವ ಬಡಜನತೆ ತಮ್ಮ ಪಾಡಿಗೆ ತಾವು ದುಡಿಯುತ್ತಲೇ ಇರುತ್ತ, ಇವರಿಗಾಗಿ ನಾವೇನು ಮಾಡುವುದು ಸಾಧ್ಯ ಎಂಬ ಪ್ರಶ್ನೆಯನ್ನು ಸಂವೇದನಾಶೀಲ ಮನಸ್ಸುಗಳಲ್ಲಿ ಉಂಟುಮಾಡುತ್ತ ಲೋಕವನ್ನು ಗುರುವಿನಂತೆ ತಿದ್ದುತ್ತಲೇ ಇರುತ್ತಾರೆ. 'Blessed are the meek' ಎಂದು ಜೀಸಸ್ ಹೇಳಿದ್ದು ಗಹನವಾದ ಮಾತು!

ವಿಶ್ವೇಶರ ಗಾಂಧೀಜಿ ಬಗೆಗಿನ ಒಲವು ಗುಟ್ಟಾಗಿರಲಿಲ್ಲ. ಅಷ್ಟಮಠದ ಸ್ವಾಮಿಗಳಲ್ಲೆಲ್ಲ ಖಾದಿ ಉಡುತ್ತಿದ್ದುದು ಇವರೊಬ್ಬರೇ! ಕಾವಿಬಣ್ಣದ ಖಾದಿ! ಆದರೆ ಗಾಂಧೀಜಿ ಸಿದ್ಧಾಂತಗಳನ್ನು ಮಾಧ್ವಪೀಠದ ಸ್ವಾಮಿಯಾಗಿ ಪರಂಪರೆಯೊಂದಿಗೆ ಬೆಸೆಯುವುದುವಿಶ್ವೇಶರಿಗೆ ಅನಿವಾರ್ಯವಾಗಿತ್ತು. ಆಶ್ಚರ್ಯವೆಂದರೆ ಅದಕ್ಕವರು ಹೆಚ್ಚು ತಿಣುಕಾಡಬೇಕಾಗಲಿಲ್ಲ. ಆಚಾರ್ಯಮಧ್ವರು ‘ಕರ್ಮ’ಕ್ಕೆ ವ್ಯಾಖ್ಯಾನ ಮಾಡುತ್ತ ‘ನಾನಾ ಜನಸ್ಯ ಶುಶ್ರೂಷಾ ಕರ್ತವ್ಯ ಕರ್ಮಾಖ್ಯಾಕರವಸ್ಮಿತೇಃ’ ಎಂದರು. ಜನಸೇವೆಗೆ ‘ಕರ್ಮ’ ಎಂದು ಹೆಸರು. ಇದು ರಾಜನಿಗೆ ತೆರಿಗೆ ಪಾವತಿಸುವಂತೆ ಪ್ರತಿಯೊಬ್ಬನ ಕರ್ತವ್ಯ – ಇದು ಈ ಮಾತಿನ ಅರ್ಥ. ಪಾರಂಪರಿಕ ವರ್ಣಾಶ್ರಮದ ಚೌಕಟ್ಟಿನಲ್ಲಿ ‘ಸೇವೆ’ ಅಥವಾ ’ಶುಶ್ರೂಷೆ’ ಎನ್ನುವುದು ಶೂದ್ರನ ಕರ್ತವ್ಯ ಎಂದು ನೆನೆದೆವಾದರೆ ಆಚಾರ್ಯರ ಈ ಮಾತಿನ ಗಹನತೆ ಮತ್ತೂ ಜಡಗೊಳ್ಳುತ್ತ ಹೋಗುವ ಸಂಸ್ಕೃತಿಯನ್ನು ಉಜ್ಜೀವಿಸುವ ಶಕ್ತಿ ಅರ್ಥವಾದೀತು. ತಾತ್ಪರ್ಯವೇನೆಂದರೆ ನಾಲ್ಕು ವರ್ಣಗಳನ್ನೂ ತನ್ನಲ್ಲಿಯೇ ಅನುಭವಿಸಬಲ್ಲವರು ಮಾತ್ರ ಗಡಿದಾಟಬಲ್ಲರು! ಹೀಗೆ ಅನುಭವಿಸಬೇಕಾದರೆ ಸಹಜವಾಗಿ ಒಂದು ಆಧ್ಯಾತ್ಮಿಕ ಸೃಷ್ಟಿಯೂ
ಇರಬೇಕು; ಕೇವಲ ಲೌಕಿಕ ದೃಷ್ಟಿಗೆ ಇದು ಅರ್ಥವಾಗುವುದು ಕಷ್ಟ.

ಜಾಗತಿಕ ‘ವೈಶ್ಯ’ರಾದ ಇಂಗ್ಲಿಷ್‌ಮಂದಿ ತಮ್ಮ ವಾಣಿಜ್ಯ ವ್ಯವಹಾರಗಳ ಮೂಲಕವೇ ಸಾಮ್ರಾಜ್ಯ ಕಟ್ಟಿ ‘ಕ್ಷತ್ರಿಯ’ರಾದಾಗ ಒಂದು ಆಧುನಿಕ Combination - ಸಮೀಕರಣ – ರೂಪುಗೊಂಡಿತು; ವೈಶ್ಯ+ಕ್ಷತ್ರಿಯ (ವ್ಯಾಪಾರ + ಮಿಲಿಟರಿ) ಸಮೀಕರಣವಿದು. ಇಲ್ಲಿ ಮಾರುಕಟ್ಟೆಯೇ ರಣರಂಗ, ಕುರುಕ್ಷೇತ್ರ. ನಾನಾ ರೂಪಗಳಲ್ಲಿ ಇದೇ ಸಮೀಕರಣವೇ ಈಗಲೂ ವಿಜೃಂಭಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಆಧ್ಯಾತ್ಮಿಕ ಪರಂಪರೆಯ ಸೂತ್ರಗಳನ್ನು ಹಿಡಿದೇ ಗಾಂಧೀಜಿ ರೂಪಿಸಿದ ಸಮೀಕರಣವೆಂದರೆ ಜನಸೇವೆ + ಸಂಯಮ; ತ್ಯಾಗಗಳ ಸಮೀಕರಣ. ಇದನ್ನು ಶೂದ್ರ + ಬ್ರಾಹ್ಮಣಸಮೀಕರಣವೆನ್ನಬಹುದು. ಈ ಸಮೀಕರಣವು ನಾಗರಿಕತೆಯನ್ನು ಇನ್ನೊಂದು ದೃಷ್ಟಿಯಿಂದ ನೋಡಲು ತೀವ್ರವಾಗಿ ಒತ್ತಾಯಿಸುತ್ತದೆ. ಡಾ. ಅಂಬೇಡ್ಕರ್ ಅವರು ದಲಿತರು ಬೌದ್ಧಧರ್ಮವನ್ನು ಆದರಿಸಬೇಕೆನ್ನುವಾಗ ಬೌದ್ಧಧರ್ಮದ ವಿಚಾರ ಪ್ರಾಧಾನ್ಯವನ್ನು ಮೆಚ್ಚಿ ಕೊಂಡಿದ್ದರಾದರೂ ಬೌದ್ಧಧರ್ಮವು ಆತ್ಮಸಂಯಮವನ್ನು ಒತ್ತಿ ಹೇಳುವ ವಿರಕ್ತಗುಣದ ಧರ್ಮವೆನ್ನುವುದನ್ನು ಅಲ್ಲಗಳೆಯಲಾಗದಷ್ಟೇ. ಆದುದರಿಂದಲೇ ಅಂಬೇಡ್ಕರ್ ಅವರೂ ಈ ಪ್ರತಿಸಮೀಕರಣದ ಪರವಾಗಿಯೇ ಇದ್ದಾರೆ. ‘ಭಕ್ತಿ’ಯೇ ಬಿಡುಗಡೆಯ ದಾರಿ ಎಂದು ಸಾರಿ ಹೇಳುವ ಆನಂದತೀರ್ಥ ಪರಂಪರೆಯ ಪೇಜಾವರಶ್ರೀಗಳಿಗೆ ಈ ಪ್ರತಿಸಮೀಕರಣವೇ ಹೃದಯಂಗಮ. ಇದು ನನಗೆ ಖಚಿತವಾಗಿದೆ.

‘ಇರಬೇಕು – ಇಲ್ಲದಂತಿರಬೇಕು’ ಎಂಬ ನೆಲೆಯನ್ನು ಈ ಲೋಕಜೀವನದಲ್ಲಿ ಇಷ್ಟರ ಮಟ್ಟಿಗೆ ಪಾಲ್ಗೊಳ್ಳುತ್ತಲೇ ಶ್ರೀಗಳು ಕಂಡುಕೊಂಡುಬಿಟ್ಟರೇನೋ ಎಂದು ನನಗೆ ತೀವ್ರವಾಗಿ ಅನ್ನಿಸುತ್ತಿರುತ್ತದೆ. ನಮ್ಮ ಮನಸ್ಸು ಸದಾ ದ್ವಂದ್ವದಲ್ಲಿ, ಇಬ್ಬಂದಿತನದಲ್ಲಿ ಒದ್ದಾಡುತ್ತಿರುತ್ತದೆ. ದ್ವಂದ್ವವು ಮನಸ್ಸಿನ ಸ್ವಭಾವವೇ ಎಂಬಂತಾಗಿದೆ. ಈ ದ್ವಂದ್ವವು Sublimate ಆದಾಗ, ಅದು ಇರಬೇಕು –ಇಲ್ಲದಂತಿರಬೇಕು ಎಂಬ ರೀತಿಯ, ಮೇಲ್ನೋಟಕ್ಕೆ ದ್ವಂದ್ವದಂತೆಯೇ ಕಾಣಿಸುವ ಆದರೆ ಸೃಷ್ಟಿಶೀಲವಾದ ಒಂದು ನೆಲೆಯಾಗಿ ಬದಲಾಗುತ್ತದೆ! ದ್ವಂದ್ವದ ಚಹರೆಗಳು ಉಳಿದಿರುತ್ತವೆ, ಆದರೆ ಅವು ದ್ವಂದ್ಚವಾಗಿರದೆ – ಮೇಳವಾಗಿರುತ್ತವೆ. ’ದ್ವಿ–ವಚನ’ವಾಗಿರುತ್ತದೆ. ನಮ್ಮ ’ಎಡ–ಬಲ’ ಪರಿಕಲ್ಪನೆಗಳೂ ಹೀಗೆ ಸೃಷ್ಟಿಶೀಲವಾಗುವ ಸಾಧ್ಯತೆ ಇರಬಹುದೇ ಎಂದು ಯೋಚನೆಯಾಗುತ್ತದೆ. ಬುದ್ಧನ ಮಧ್ಯಮ
ಮಾರ್ಗದ ಸೂತ್ರವೂ ನೆನಪಾಗುತ್ತದೆ. ಇಂಥ ಭಾವನೆಗಳನ್ನೆಲ್ಲ ಉದ್ದೀಪಿಸುವಷ್ಟು ಪೇಜಾವರಶ್ರೀಗಳವರು ನಡೆಯಿಸಿದ ಬದುಕು ಆಳವಾಗಿದೆ. ಅವರು ಮಹಾನುಭಾವರು.

ಲೋಕಾಂತವೇ ನಿದ್ದೆ

ಪೇಜಾವರ ತೀರ್ಥರು ಮುಕ್ತವಾಗಿ ಬದುಕಿದರು. ಕೋಣೆಗೆ ಬಾಗಿಲೇ ಇಲ್ಲವೆಂಬಂತೆ ಬದುಕಿದರು. ಈ ಮಾತು ಎಲ್ಲ ಅರ್ಥಗಳಲ್ಲಿಯೂ ನಿಜ ಎಂದರೆ, ಅವರಿರುವ ಕೋಣೆಗೆ ಎಂದೂ ಬಾಗಿಲು ಹಾಕಿ ಕೊಳ್ಳುತ್ತಿರಲಿಲ್ಲ! ಅವರು ಮಲಗುತ್ತಿದ್ದುದು ರಾತ್ರಿ 12 ಗಂಟೆಗೆ. ಏಳುತ್ತಿದ್ದುದು ಬೆಳಿಗ್ಗೆ 4ಕ್ಕೆ. ಈ ನಾಲ್ಕು ಗಂಟೆಯ ನಿದ್ದೆಗೂ ಅವರಿಗೆ ಏಕಾಂತದ ಸನ್ನಿವೇಶದ ಅಗತ್ಯವಿರಲಿಲ್ಲ. ಏಕೆಂದರೆ ಬಿಡುವಿಲ್ಲದ ದುಡಿತದಿಂದಾಗಿ ಒರಗಿದೊಡನೆ ಗಾಢ ನಿದ್ದೆ ಕಣ್ತುಂಬ ಅವರನ್ನು ಕವಿಯುತ್ತಿತ್ತು.

ಮಲಗುವ ಮುನ್ನ ಕಣ್ಣಿನ ಮೇಲೆ ತೆಳು ಬಟ್ಟೆಯೊಂದನ್ನು ಹರಡಿಕೊಳ್ಳುತ್ತಿದ್ದರು. ಅದೇ ಅವರಿಗೆ ಏಕಾಂತ. ಈ ಅರ್ಥದಲ್ಲಿ ಅವರು ಅವಿಭಕ್ತ ಕುಟುಂಬವೊಂದರಲ್ಲಿ ದುಡಿಯುವ ಹಿರಿಯ ಹೆಂಗಸಿನಂತೆ ಇದ್ದರು! ಅವಿಭಕ್ತ ಕುಟುಂಬದಲ್ಲಿ ಏಕಾಂತವಿಲ್ಲ. ಅಲ್ಲಿ ಏಕಾಂತದ ಅಗತ್ಯವಿದೆ. ವಿಭಕ್ತ ಕುಟುಂಬದಲ್ಲಿ ಇನ್ನಷ್ಟು–ಮತ್ತಷ್ಟು ಏಕಾಂತದ ಬಯಕೆ! ಇದೊಂದು ವಿಲಕ್ಷಣ ಸಂಗತಿಯೇ ಸರಿ.

ಆಧ್ಯಾತ್ಮಿಕತೆ ಏಕಾಂತ ಬೇಕೆನ್ನುವುದು ನಿಜವಾದರೂ, ಏಕಾಂತದ ಅಪಾಯಗಳೂ ಅಷ್ಟೇ ತೀವ್ರವಾಗಿದೆ. ಶರಣರು ಬಳಸುವ ‘ಬಯಲು’ ಎನ್ನುವ ಪದ, ಏಕಾಂತದ ಪರಿಕಲ್ಪನೆಯನ್ನೇ ಲೇವಡಿ ಮಾಡುವುದಿಲ್ಲವೆ? ಮಗು, ನಿದ್ದೆಯಲ್ಲೇ ಬೆಳೆಯುತ್ತದೆ ಎನ್ನುವುದುಂಟು. ಪೇಜಾವರ ಶ್ರೀಗಳಿಗೆ ಲೋಕಾಂತವೇ ನಿದ್ದೆ, ಅಲ್ಲೇ ಅವರು ಬೆಳೆಯುವುದು!

ಇನ್ನಷ್ಟು...

ಪರಂಪರೆಯ ಶ್ರೀಗಂಧ | ವಿದ್ಯಾಭೂಷಣ ಬರಹ

ಸಮಾನತೆಗೆ ಸಂದ ಸಂತಸೌರಭ | ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಬರಹ

ಮಾತೃಹೃದಯದ ವಿಶ್ವಕುಟುಂಬಿ | ಲಕ್ಷ್ಮೀಶ ತೋಳ್ಪಾಡಿ ಬರಹ

ಅವಸರದ ಸಂತನ ಸಾಮಾಜಿಕ ಯಾತ್ರೆ | ವಾದಿರಾಜ್ ಬರಹ

ಹಿಂದುತ್ವವಾದಿಗೆ ಮುಸ್ಲಿಂ ಕಾರುಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.