ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಞಾನ ಹೊಂದಿಲ್ಲದಿದ್ದರೆ ಅಧ್ಯಕ್ಷರಾಗಿರಲು ಅಸಾಧ್ಯ:ಬೈಡನ್ ವಿರುದ್ಧ ವ್ಯಾನ್ಸ್ ಗರಂ

Published : 20 ಜುಲೈ 2024, 3:09 IST
Last Updated : 20 ಜುಲೈ 2024, 3:09 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರ ಮೇಲೆ ಡೆಮಾಕ್ರಟಿಕ್‌ ಪಕ್ಷದ ನಾಯಕರೇ ಒತ್ತಡ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಬೈಡನ್ ವಿರುದ್ಧ ರಿಪಬ್ಲಿಕನ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ ಜೆ.ಡಿ.ವ್ಯಾನ್ಸ್‌ ವಾಗ್ದಾಳಿ ನಡೆಸಿದ್ದಾರೆ.

ಬೈಡನ್‌ ಸ್ಪರ್ಧೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಬೇಕಾದಷ್ಟು ಅರಿವು ಅಥವಾ ಜ್ಞಾನ ಹೊಂದಿಲ್ಲದಿದ್ದರೆ... ಬೈಡನ್ ಅವರು ಅಧ್ಯಕ್ಷರಾಗಿ ಹೇಗೆ ಮುಂದುವರಿಯುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ನವೆಂಬರ್ 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬೈಡನ್ ಕಣದಲ್ಲಿದ್ದಾರೆ. ಇತ್ತ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿಯಾಗಿ ಡೊನಾಲ್ಡ್ ಟ್ರಂಪ್ ಕಣಕ್ಕಿಳಿದಿದ್ದಾರೆ.

ಈಚೆಗೆ ಡೊನಾಲ್ಡ್ ಟ್ರಂಪ್ ನಡುವಣ ಮುಖಾಮುಖಿ ಚರ್ಚೆಯಲ್ಲಿ ಬೈಡನ್ ಹಿನ್ನಡೆ ಅನುಭವಿಸಿದ್ದರು. ಇದರಿಂದ ಡೆಮಾಕ್ರಟಿಕ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಬೈಡನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಕಿರಿಯ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು.

ಸದ್ಯ ಬೈಡನ್ ಅವರಿಗೆ ಕೋವಿಡ್‌–19 ದೃಢಪಟ್ಟಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಮರುಪರಿಶೀಲಿಸುವುದು ಉತ್ತಮ ಎಂಬ ಸಲಹೆಯನ್ನು ನಾಯಕರು ನೀಡುತ್ತಿದ್ದಾರೆ.

ಎಪಿ–ಎನ್‌ಒಆರ್‌ಸಿ ಸೆಂಟರ್‌ ಫಾರ್ ಪಬ್ಲಿಕ್‌ ಅಫೇರ್ಸ್ ರಿಸರ್ಚ್‌ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ, ‘ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿ ಎಂದು ಪಕ್ಷದ ಬಹುತೇಕ ನಾಯಕರೇ ಹೇಳುತ್ತಿದ್ದಾರೆ’ ಎಂದು ತಿಳಿದು ಬಂದಿದೆ.

‘ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷರಾದರೆ ಆ ಸ್ಥಾನಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಹತ್ತು ಡೆಮಾಕ್ರಟಿಕ್‌ ನಾಯಕರಲ್ಲಿ ಆರು ಜನ ಹೇಳಿದ್ದರೆ, ಹತ್ತು ನಾಯಕರಲ್ಲಿ ಇಬ್ಬರು ಮಾತ್ರ ಈ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ. ಇನ್ನೊಂದೆಡೆ, ಹತ್ತರಲ್ಲಿ ಇಬ್ಬರು ಮಾತ್ರ ಈ ವಿಷಯವಾಗಿ ಹೇಳುವುದಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ’ ಎಂದು ಸಮೀಕ್ಷೆ ಹೇಳಿದೆ.

‘ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧಿಸಲು ಕಮಲಾ ಹ್ಯಾರಿಸ್‌ ಸಮರ್ಥ ನಾಯಕಿಯಾಗುವರು’ ಎಂದೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT