ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಸಂಸತ್ ಚುನಾವಣೆ | ಕೀರ್‌ ಸ್ಟಾರ್ಮರ್‌ಗೆ ಪಟ್ಟ; ಸೋಲೊಪ್ಪಿಕೊಂಡ ಸುನಕ್

ಕನ್ಸರ್ವೇಟಿವ್‌ ಪಕ್ಷಕ್ಕೆ ಮುಖಭಂಗ
Published 5 ಜುಲೈ 2024, 16:07 IST
Last Updated 5 ಜುಲೈ 2024, 16:07 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಶುಕ್ರವಾರ ಆಯ್ಕೆಯಾದರು. ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಗೆ ತನ್ನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಎದುರಾಗಿದೆ.

ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತ ದಾನ ನಡೆದು, ಶುಕ್ರವಾರ ಫಲಿತಾಂಶ ಹೊರಬಿದ್ದಿದೆ. ತಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆಯೇ 61 ವರ್ಷದ ಸ್ಟಾರ್ಮರ್‌ ಅವರು ಲಂಡನ್‌ನಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದರು.

ಶುಕ್ರವಾರ ಮಧ್ಯಾಹ್ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌–3 ಅವರನ್ನು ಭೇಟಿಯಾದರು. ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಾರ್ಲ್ಸ್‌, ಅಧಿಕೃತವಾಗಿ ಘೋಷಿಸಿದರು. 

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ತಮ್ಮ ಮೊದಲ ಭಾಷಣ ಮಾಡಿದ ಸ್ಟಾರ್ಮರ್‌, ದೇಶವನ್ನು ‘ಮರುನಿರ್ಮಾಣ’ ಮಾಡುವ ಪ್ರತಿಜ್ಞೆ ಕೈಗೊಂಡರು. ‌‘ನೀವು ನಮಗೆ ಸ್ಪಷ್ಟ ಬಹುಮತ ನೀಡಿದ್ದೀರಿ. ನಮ್ಮ ದೇಶವನ್ನು ಒಗ್ಗೂಡಿಸಲು ಮತ್ತು ಬದಲಾವಣೆಯನ್ನು ತರಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದರು. ಸ್ಟಾರ್ಮರ್‌ ಅವರು ಲಂಡನ್‌ನ ಹೋಬನ್‌ ಆ್ಯಂಡ್ ಸೇಂಟ್ ಪ್ಯಾಂಕ್ರಸ್‌ ಕ್ಷೇತ್ರದಿಂದ 18,884 ಮತಗಳಿಂದ ಗೆದ್ದರು. 

ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿ ಎನಿಸಿಕೊಂಡಿರುವ ಸುನಕ್‌ ಅವರು ಉತ್ತರ ಇಂಗ್ಲೆಂಡ್‌ನ  ರಿಚ್ಮಂಡ್‌ ಆ್ಯಂಡ್ ನಾರ್ಥ್‌ಅಲರ್ಟನ್‌ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು 23,059 ಮತಗಳಿಂದ ಎದುರಾಳಿಯನ್ನು ಮಣಿಸಿದರು. ಆದರೆ ತಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಎಡವಿದರು. ಕನ್ಸರ್ವೇಟಿವ್‌ ಪಕ್ಷದ 14 ವರ್ಷಗಳ ಆಡಳಿತಕ್ಕೆ ಬ್ರಿಟನ್ ಮತದಾರರು ಅಂತ್ಯ ಹಾಡಿದರು. 

ಸೋಲಿನ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ 44 ವರ್ಷದ ಸುನಕ್‌, ಕನ್ಸರ್ವೇಟಿವ್‌ ಪಕ್ಷದ ನಾಯಕನ ಸ್ಥಾನವನ್ನು ತ್ಯಜಿಸುವುದಾಗಿಯೂ ಹೇಳಿದರು. 

‘ಲೇಬರ್‌ ಪಕ್ಷ ಈ ಚುನಾವಣೆಯಲ್ಲಿ ಗೆದ್ದಿದೆ. ಕೀರ್ ಸ್ಟಾರ್ಮರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಅಧಿಕಾರವು ಲೇಬರ್ ಪಕ್ಷಕ್ಕೆ ಹಸ್ತಾಂತರವಾಗುತ್ತಿದ್ದು, ಈ ಪ್ರಕ್ರಿಯೆ ‌ಸುಗಮವಾಗಿ ನಡೆಯಲಿದೆ’ ಎಂದು ಅವರು ವಿದಾಯ ಭಾಷಣದಲ್ಲಿ ಹೇಳಿದರು. ಪತ್ನಿ ಅಕ್ಷತಾ ಮೂರ್ತಿ ಈ ವೇಳೆ ಜತೆಗಿದ್ದರು. 

‘ನಿರಂತರ ಬೆಂಬಲ ನೀಡಿದ್ದಕ್ಕಾಗಿ ರಿಚ್ಮಂಡ್‌ ಆ್ಯಂಡ್ ನಾರ್ಥ್‌ ಅಲರ್ಟನ್‌ ಕ್ಷೇತ್ರದ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ದಶಕದ ಹಿಂದೆ ಇಲ್ಲಿಗೆ ಸ್ಥಳಾಂತರಗೊಂಡ ದಿನದಿಂದಲೂ ನೀವು ನನ್ನನ್ನು ಕುಟುಂಬದ ಸದಸ್ಯನಂತೆಯೇ ನೋಡಿಕೊಂಡಿದ್ದೀರಿ. ಮುಂಬರುವ ದಿನಗಳಲ್ಲಿ ನಿಮಗಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ತಮ್ಮ ಕ್ಷೇತ್ರದ ಜನರಿಗೆ ಭರವಸೆ ನೀಡಿದರು.

ಪ್ರಮುಖರಿಗೆ ಸೋಲು: ಕನ್ಸರ್ವೇಟಿಕ್‌ ಪಕ್ಷದ ಹಿರಿಯ ಮುಖಂಡರಾಗಿರುವ 12 ಸಚಿವರು ಸೋತಿದ್ದಾರೆ.

ನೀವು ಮಾಡಿದ ಪ್ರಚಾರ, ಹೋರಾಟದಿಂದ ನಾವು ಗೆದ್ದಿದ್ದೇವೆ. ಬದಲಾವಣೆ ಇಲ್ಲಿಂದಲೇ ಆರಂಭವಾಗಲಿದೆ. ಇಂತಹ ಗೆಲುವು ನಮ್ಮ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.
–ಕೀರ್‌ ಸ್ಟಾರ್ಮರ್‌, ಬ್ರಿಟನ್‌ನ ನೂತನ ಪ್ರಧಾನಿ
ಪ್ರಮುಖ ಅಂಶಗಳು
  • ಕನ್ಸರ್ವೇಟಿವ್‌ ಪಕ್ಷದ 14 ವರ್ಷಗಳ ಆಡಳಿತಕ್ಕೆ ತೆರೆ 

  • ಲೇಬರ್‌ ಪಕ್ಷಕ್ಕೆ ಅಭೂತಪೂರ್ವ ಗೆಲುವು

  • 1834ರಲ್ಲಿ ಸ್ಥಾಪನೆಯಾಗಿರುವ ಕನ್ಸರ್ವೇಟಿವ್‌ ಪಕ್ಷ ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲು

  • ಸಂಸತ್ತಿಗೆ ಮೊದಲ ಬಾರಿ ಅಯ್ಕೆಯಾದವರ ಸಂಖ್ಯೆ 300ಕ್ಕೂ ಅಧಿಕ

  • ಗಾಜಾ ಪರ ಒಲವು ಹೊಂದಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು

ಅಧಿಕಾರದಲ್ಲಿದ್ದಾಗ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಆದರೆ ಮತದಾರರು ಬದಲಾವಣೆ ಬಯಸಿದ್ದು, ನಿಮ್ಮ ತೀರ್ಪು ಮುಖ್ಯವಾಗಿದೆ. ಸೋಲಿನ ಹೊಣೆ ನಾನೇ ಹೊರುತ್ತೇನೆ. ನನ್ನನ್ನು ಕ್ಷಮಿಸಿ.
–ರಿಷಿ ಸುನಕ್, ಬ್ರಿಟನ್‌ನ ನಿರ್ಗಮಿತ ಪ್ರಧಾನಿ
ಭಾರತ ಮೂಲದ 26 ಮಂದಿ ಆಯ್ಕೆ
ಬ್ರಿಟನ್‌ ಸಂಸತ್ತಿಗೆ ಈ ಬಾರಿ ಭಾರತ ಮೂಲದ 26 ಮಂದಿ ಆಯ್ಕೆಯಾಗಿದ್ದು, ಹೊಸ ಚರಿತ್ರೆ ನಿರ್ಮಾಣವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮೂಲದ 19 ಮಂದಿ ಗೆದ್ದಿದ್ದರು. ರಿಷಿ ಸುನಕ್ ಅವರು ಯಾರ್ಕ್‌ಷೈರ್‌ನ ರಿಚ್ಮಂಡ್‌ ಆ್ಯಂಡ್ ನಾರ್ಥ್‌ಅಲರ್ಟನ್‌ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಸುನಕ್‌ ಅಲ್ಲದೆ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದ ಭಾರತ ಮೂಲದ ಸುಯೆಲ್ಲಾ ಬ್ರೆವರ್‌ಮನ್, ಪ್ರೀತಿ ಪಟೇಲ್‌, ಕ್ಲೈರ್ ಕುಟಿನೊ, ಗಗನ್‌ ಮೊಹೀಂದ್ರಾ ಮತ್ತು ಶಿವಾನಿ ರಾಜಾ ಅವರೂ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ಶೈಲೇಶ್ ವರ ಮತ್ತು ಅಮಿತ್‌ ಜೋಗಿಯಾ ಅವರಿಗೆ ಸೋಲು ಎದುರಾಗಿದೆ.
ಮೋದಿ ಅಭಿನಂದನೆ
ಬ್ರಿಟನ್‌ ಚುನಾವಣೆಯಲ್ಲಿ ಗೆದ್ದ ಕೀತ್‌ ಸ್ಟಾರ್ಮರ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ‘ಕೀತ್‌ ಸ್ಟಾರ್ಮರ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲ ಕ್ಷೇತ್ರಗಳಲ್ಲೂ ಭಾರತ ಮತ್ತು ಬ್ರಿಟನ್‌ ನಡುವಣ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಸಕಾರಾತ್ಮಕ ಹಾಗೂ ರಚನಾತ್ಮಕ ಸಹಯೋಗವನ್ನು ಎದುರು ನೋಡುತ್ತಿದ್ದೇನೆ’ ಎಂದು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ನಾಯಕತ್ವವನ್ನು ಶ್ಲಾಘಿಸಿರುವ ಮೋದಿ, ‘ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯ ಉಜ್ವಲವಾಗಲಿ’ ಎಂದಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ಭಾರತ ಮತ್ತು ಬ್ರಿಟನ್‌ ನಡುವಣ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಸಕಾರಾತ್ಮಕ ಹಾಗೂ ರಚನಾತ್ಮಕ ಸಹಯೋಗವನ್ನು ಎದುರು ನೋಡುತ್ತಿದ್ದೇನೆ.
–ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT