ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಮರು ನಿರ್ಮಾಣ ಮಾಡುತ್ತೇವೆ: ಪ್ರಧಾನಿ ಕೀರ್‌ ಸ್ಟಾರ್ಮರ್‌ ಭರವಸೆ

Published : 6 ಜುಲೈ 2024, 4:39 IST
Last Updated : 6 ಜುಲೈ 2024, 4:39 IST
ಫಾಲೋ ಮಾಡಿ
Comments

ಲಂಡನ್‌: ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

10 ಡೌನಿಂಗ್ ಸ್ಟ್ರೀಟ್‌ನ ಹೊರಗೆ ತಮ್ಮ ಮೊದಲ ಭಾಷಣ ಮಾಡಿದ ಅವರು, ‘ಮತದಾನದ ಆದ್ಯತೆ ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಜತೆಗೆ, ಕೂಡಲೇ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸುವ ಮೂಲಕ ಬ್ರಿಟನ್ ಅನ್ನು ಪುನರ್ ನಿರ್ಮಾಣ ಮಾಡಲು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

‘ನಾವು ನಮ್ಮ ದೇಶವನ್ನು (ಬ್ರಿಟನ್‌) ಮರು ನಿರ್ಮಾಣ ಮಾಡುವಾಗ ಮತದಾರರು ನಮ್ಮ ಪಕ್ಷದ (ಲೇಬರ್‌ ಪಕ್ಷ) ಮೇಲೆ ಇಟ್ಟಿರುವ ನಂಬಿಕೆಗೆ ಅನುಗುಣವಾಗಿ ಜವಾಬ್ದಾರಿ ನಾವು ನಿರ್ವಹಿಸುತ್ತೇವೆ. ಮತದಾರರು ಲೇಬರ್‌ ಪಕ್ಷಕ್ಕೆ ಮತ ಹಾಕಿರಲಿ ಅಥವಾ ಹಾಕದಿದ್ದರೂ ಕೂಡ ನಮ್ಮ ಸರ್ಕಾರವು ನಿಮಗೆ ಸೇವೆ ಸಲ್ಲಿಸುತ್ತದೆ. ರಾಜಕೀಯವು ಶಕ್ತಿಯಾಗಿರಬಹುದು. ಆದರೆ, ನಾವು ಅದನ್ನು ದೇಶದ ಒಳಿತಿಗಾಗಿಯೇ ಬಳಸುತ್ತೇವೆ’ ಎಂದಿದ್ದಾರೆ.

‘ದೇಶದ ಜನರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ಭಾವನೆಯನ್ನು ಬದಲಾಯಿಸುವುದರ ಜತೆಗೆ ದೇಶವನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ದಣಿವರಿಯಿಲ್ಲದೆ ಕೆಲಸ ಮಾಡುತ್ತದೆ’ ಎಂದು ತಿಳಿಸಿದ್ದಾರೆ.

‘ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಶದ ಮೊದಲ ಬ್ರಿಟಿಷ್-ಏಷ್ಯನ್ ಪ್ರಧಾನಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಶ್ರಮವನ್ನು ಯಾರೂ ಕಡಿಮೆ ಅಂದಾಜು ಮಾಡಬಾರದು. ಹಾಗಾಗಿ ನಾವು ಅವರನ್ನು ಗೌರವಿಸುವ ಮೂಲಕ ಸೇವೆಯನ್ನು ಸ್ಮರಿಸುತ್ತೇವೆ’ ಎಂದಿದ್ದಾರೆ.

ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಗೆ ತನ್ನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಎದುರಾಗಿದೆ. ಕನ್ಸರ್ವೇಟಿಕ್‌ ಪಕ್ಷದ ಹಿರಿಯ ಮುಖಂಡರಾಗಿರುವ 12 ಸಚಿವರು ಸೋತಿದ್ದಾರೆ.

ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತದಾನ ನಡೆದು, ಶುಕ್ರವಾರ ಫಲಿತಾಂಶ ಹೊರಬಿದ್ದಿದೆ. ತಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆಯೇ 61 ವರ್ಷದ ಸ್ಟಾರ್ಮರ್‌ ಅವರು ಲಂಡನ್‌ನಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌–3 ಅವರನ್ನು ಭೇಟಿಯಾದರು. ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಾರ್ಲ್ಸ್‌, ಅಧಿಕೃತವಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT