ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

Published 22 ಜುಲೈ 2024, 14:23 IST
Last Updated 22 ಜುಲೈ 2024, 14:23 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕ್ಲಿಷ್ಟಕರ ಸಂದರ್ಭದಲ್ಲಿ ಜಾಗತಿಕ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಜಗತ್ತಿನ ವಿವಿಧ ದೇಶಗಳ ನಾಯಕರು ಬಣ್ಣಿಸಿದ್ದಾರೆ.

2024ರ ಅಧ್ಯಕ್ಷೀಯ ಚುನಾವಣೆಯ ಕಣದಿಂದ ಹಿಂದೆ ಸರಿದಿರುವುದಾಗಿ ಬೈಡನ್ ಭಾನುವಾರ ಘೋಷಿಸಿದ್ದರು. ಇದರೊಂದಿಗೆ ಉಪಾಧ್ಯಕ್ಷೆಯೂ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದರು. ಚುನಾವಣೆಯು ನ. 5ರಂದು ನಡೆಯಲಿದೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಬೈಡನ್ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ಅವರ ಉಳಿದ ಅವಧಿಯವರೆಗೆ ಅವರೊಂದಿಗೆ ಕೆಲಸ ಮಾಡುವ ಸಂತಸವಿದೆ. ಅಮೆರಿಕದ ಜನತೆಗೆ ಉತ್ತಮವಾದದ್ದು ಏನೋ ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಾವು ನಂಬಿದ ಸಿದ್ಧಾಂತವನ್ನು ಬೈಡನ್ ಜಾರಿಗೊಳಿಸಿದ್ದಾರೆ. ಆ ಮೂಲಕ ತಮ್ಮ ವೃತ್ತಿ ಜೀವನವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ’ ಎಂದಿದ್ದಾರೆ.

ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಪ್ರತಿಕ್ರಿಯಿಸಿ, ‘ಬೈಡನ್‌ ಅವರಿಗೆ ಅಮೆರಿಕ ಮೇಲಿನ ಪ್ರೀತಿ ಹಾಗೂ ಕೆಲಸ ಮೇಲಿನ ಬದ್ಧತೆಯನ್ನು ನಾನು ಕಂಡಿದ್ದೇನೆ. ಅಮೆರಿಕ ಹಾಗೂ ಬ್ರಿಟನ್‌ನ ಸಾಧನೆಯಲ್ಲಿ ಅವರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ’ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೆಸ್ ಅವರು ಬೈಡನ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ‘ನಮ್ಮ ನಡುವೆ ಇದ್ದ ಪ್ರಜಾಪ್ರಭುತ್ವ ಮೌಲ್ಯಗಳಿಂದಾಗಿ ಆಸ್ಟ್ರೇಲಿಯಾ ಹಾಗೂ ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಇದರಿಂದ ಅಂತರರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕ ಬೆಳವಣಿಗೆ ಮತ್ತು ಮುಂದಿನ ತಲೆಮಾರಿಗೆ ಆರೋಗ್ಯಕರ ಪ್ರಕೃತಿ ನೀಡುವ ಬದ್ಧತೆಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಯಿತು’ ಎಂದಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರತಿಕ್ರಿಯಿಸಿ, ‘ಸ್ವಾತಂತ್ರ್ಯದ ಹೋರಾಟದಲ್ಲಿ ಬೈಡನ್ ಅವರ ಅಚಲ ಬೆಂಬಲಕ್ಕೆ ನಾನು ಆಭಾರಿ. ದೇಶದ ಕಠಿಣ ಸಂದರ್ಭದಲ್ಲಿ ಬೈಡನ್ ಅವರ ದಿಟ್ಟ ನಿರ್ಧಾರಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ದೇಶವನ್ನು ಆಕ್ರಮಿಸಲು ಹೊರಟ ಪುಟಿನ್ ನಿರ್ಧಾರದಿಂದ ಉಕ್ರೇನ್ ಅನ್ನು ರಕ್ಷಿಸುವ ಸಂದರ್ಭದಲ್ಲಿ ಬೈಡನ್ ದೇಶದ ಜತೆಗೆ ನಿಂತಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇಸ್ರೇಲ್ ಅಧ್ಯಕ್ಷ ಐಸಾಕ್ ಹಾರ್ಝೊ ಅವರು ಬೈಡನ್ ಕುರಿತು ಬಣ್ಣಿಸಿ, ‘ಯಹೂದಿ ನಾಗರಿಕರ ನೈಜ ಮಿತ್ರ ಬೈಡನ್‌. ಅವರ ಸ್ನೇಹಕ್ಕೆ ನಾನು ಆಭಾರಿ. ತಮ್ಮ ಅವಧಿಯಲ್ಲಿ ಇಸ್ರೇಲಿ ಜನರ ಪರವಾಗಿ ಅವರು ನಿಂತಿದಕ್ಕೆ ಧನ್ಯವಾದಗಳು’ ಎಂದಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್, ಜಪಾನ್‌ನ ಪ್ರಧಾನಿ ಫುಮಿಯೊ ಕಿಷಿದಾ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನ್ಯೂಜಿಲೆಂಡ್‌ ಪ್ರಧಾನಿ ಕ್ರಿಸ್ಟೋಫರ್ ಲಕ್ಸಾನ್, ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಾಲ್‌ ಸೇರಿದಂತೆ ಹಲವು ನಾಯಕರು ಬೈಡನ್‌ಗೆ ಧನ್ಯವಾದ ಅರ್ಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT