ಕಲಿಕಾ ಮಾಧ್ಯಮದ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಶಾಲಾ ದಿನಗಳ ಅನುಭವ ಹಂಚಿಕೊಂಡರೆ, ಅದು ನನ್ನ ತಲೆಮಾರಿನವರ ಸಾಮಾನ್ಯ ಅನುಭವವಾಗಬಹುದೆಂದು ಭಾವಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನನ್ನ ತಂದೆ ಮನೆಯಲ್ಲೇ ಇಂಗ್ಲಿಷ್ ಅಕ್ಷರಗಳನ್ನು ಕಲಿಸಿ ಇಂಗ್ಲಿಷ್ ಕಲಿಕೆಗೆ ಪರಿಚಯಿಸಿದರು.

7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತು 8ನೇ ತರಗತಿಗೆ ಬೇಲೂರಿನ ಮುನ್ಸಿಪಲ್ ಹೈಸ್ಕೂಲ್‌ಗೆ ಸೇರಿದೆ. ಶಾಲೆಯ ಪ್ರಾರಂಭದ ದಿನ ವಿದ್ಯಾರ್ಥಿಗಳ ಹೆಸರು ಕರೆದು ನಮ್ಮನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿದರು. ‘ಎ’ ಮತ್ತು ‘ಬಿ’ ಸೆಕ್ಷನ್ ವಿದ್ಯಾರ್ಥಿಗಳೆಂದು ನಮ್ಮನ್ನು ಎರಡು ಕೊಠಡಿಗಳಿಗೆ ಕಳುಹಿಸಿದರು. ‘ಬಿ’ ಸೆಕ್ಷನ್‌ನಲ್ಲಿ ಕುಳಿತ ನನಗೆ ಪಟ್ಟಣದ ಶಾಲೆ, ಹೊಸ ಸಹಪಾಠಿಗಳು ಒಂದು ಅಪರಿಚಿತ ವಾತಾವರಣ.

ಪಿಎನ್‌ವಿ ನಮ್ಮ ಗಣಿತದ ಮೇಷ್ಟ್ರು. ಲೆಕ್ಕ ಬರೆದುಕೊಳ್ಳಲು ಹೇಳಿದರು. ‘ಹನುಮಂತರಾವ್’ ಎಂದು ಶುರು ಮಾಡಿದರು. ನಾನು ಸಹಜವಾಗಿ ಅದನ್ನು ಕನ್ನಡದಲ್ಲಿ ಬರೆದುಕೊಂಡೆ. purchased a bicycle ಎಂದರು. ಗಲಿಬಿಲಿಗೊಂಡು ಅದನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡೆ. ನನಗೆ ಆಗಲೇ ಗೊತ್ತಾಗಿದ್ದು ನಾನು ಇಂಗ್ಲಿಷ್ ಮೀಡಿಯಂ ಸೆಕ್ಷನ್‌ನಲ್ಲಿ ಇದ್ದೇನೆಂದು.

ಹೀಗೆ 8ನೇ ತರಗತಿಯಲ್ಲಿ ಬರೆದ ನೋಟ್ ಪುಸ್ತಕ ಇತ್ತೀಚಿನವರೆಗೆ ನಮ್ಮ ಊರಿನ ಮನೆಯ ಅಟ್ಟದ ಮೇಲಿತ್ತು. 7ನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದವರನ್ನು ಇಂಗ್ಲಿಷ್ ಮಾಧ್ಯಮ ವಿಭಾಗಕ್ಕೆ ಆಯ್ದು ಸೇರಿಸಿದ್ದರೆಂದು ನಂತರ ತಿಳಿಯಿತು. ಅಲ್ಲಿ ಕಲಿಕೆಯ ಮಾಧ್ಯಮದ ಆಯ್ಕೆ ವಿದ್ಯಾರ್ಥಿಯದ್ದು ಆಗಿರಲಿಲ್ಲ, ಪೋಷಕರದ್ದೂ ಆಗಿರಲಿಲ್ಲ.

ಒಂದು ಆಕಸ್ಮಿಕದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲು ಆಯ್ಕೆಯಾಗಿದ್ದೆ. ನನ್ನಂತೆ ರಾಜ್ಯದುದ್ದಗಲಕ್ಕೂ ಹೀಗೆ ಹಲವಾರು ಆಕಸ್ಮಿಕಗಳಿಂದ ವಿದ್ಯೆ ಕಲಿತು ದಡ ಸೇರಿದ ಉದಾಹರಣೆಗಳು ಸಾಕಷ್ಟು ಇರಬಹುದು. ಕಾಲೇಜು ಕಲಿಯಲು ಬೆಂಗಳೂರಿಗೆ ಬಂದ ನಂತರ ಮಾಧ್ಯಮ ಇಂಗ್ಲಿಷ್ ಆದರೂ ಕನ್ನಡದ ಉತ್ತಮ ವಾತಾವರಣವಿತ್ತು.

ರಾಷ್ಟ್ರಮಟ್ಟದಲ್ಲಿ ಖ್ಯಾತನಾಮರಾದ ಸಾಹಿತಿಗಳು, ನಾಟಕಕಾರರು ಹಾಗೂ ನೈಜ ಕನ್ನಡ ಪ್ರೀತಿಯ ಚಳವಳಿಗಳು ಇತ್ಯಾದಿ. ಅನಕೃ ಅವರ ಭಾಷಾ ಪ್ರೇಮ, ಪ್ರೇರೇಪಿಸುವಂತಹ ಭಾಷಣಗಳು, ವಾಟಾಳ್ ನಾಗರಾಜ್ ಅಂತಹವರು ನಡೆಸುತ್ತಿದ್ದ ಬೀದಿ ಚಳವಳಿಗಳು... ಹೀಗೆ ಬೆಂಗಳೂರು ನಿಜವಾಗಿಯೂ ಕನ್ನಡಮಯವಾಗಿತ್ತು.

ಅಂದಿನ ಕನ್ನಡ ಸಿನಿಮಾಗಳು, ನಾಟಕಗಳು ರಾಷ್ಟ್ರ ಮನ್ನಣೆ ಪಡೆದಿದ್ದವು. ಸಾಂಸ್ಕೃತಿಕವಾಗಿ ಕನ್ನಡಿಗನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದ ಕಾಲ. ರಾಜ್ಯದೆಲ್ಲೆಡೆ ಕನ್ನಡಕ್ಕೆ ಪ್ರಾಶಸ್ತ್ಯವಿದ್ದ ಕಾಲ ಅದು. ಕ್ರಮೇಣ ಅದು ಕ್ಷೀಣಿಸಿ ಹೊಸ ಸವಾಲುಗಳನ್ನು ಎದುರಿಸುವ ಕಾಲ ಸನ್ನಿಹಿತವಾಯಿತು.

ಉದ್ದಿಮೆಗಳ ಬೆಳವಣಿಗೆ, ಪರಭಾಷಾ ವಲಸಿಗರ ಪ್ರವಾಹ, ಜಾಗತೀಕರಣ, ಬೆಂಗಳೂರು ಮಾಹಿತಿ ತಂತ್ರಜ್ಞಾನದ ಬೃಹತ್ ಕೇಂದ್ರವಾಗಿ ಬೆಳೆದು ವಿಶ್ವದೆಲ್ಲೆಡೆಗಳಿಂದ ಬಂದ ಹೊಸ ತಲೆಮಾರಿನ ಜನಸಮುದಾಯ ಬೆಂಗಳೂರಿನ ಸಾಂಸ್ಕೃತಿಕ ಚಿತ್ರಣವನ್ನೇ ಬದಲಿಸಿವೆ. ಕನ್ನಡದ ಪ್ರಾಮುಖ್ಯತೆಯ ಪ್ರಸ್ತುತತೆಯನ್ನು ಪ್ರಶ್ನಿಸುತ್ತಿವೆ. ಈ ಬೆಳವಣಿಗೆಗಳಾಗುತ್ತಿದ್ದ ಕಾಲಘಟ್ಟದಲ್ಲೇ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದ ನನಗೆ ಆಡಳಿತದಲ್ಲಿ ಕನ್ನಡದ ಅನುಷ್ಠಾನದ ಜವಾಬ್ದಾರಿ ಹೆಗಲೇರಿತು.

ಭಾಷಾ ತಜ್ಞರ ನೆರವಿನಿಂದ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಬೇಕಾಯಿತು. ಸರ್ಕಾರದಿಂದ ಹೊಸ ಹೊಸ ಆದೇಶಗಳನ್ನು ಹೊರಡಿಸಿ, ವಿವಿಧ ಇಲಾಖೆಯ ಅಧಿಕಾರಿಗಳ ಬೆನ್ನು ಹತ್ತಿದ್ದರೂ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಿದ್ದರಾಮಯ್ಯ ಅವರನ್ನು ‘ಕನ್ನಡ ಕಾವಲು ಸಮಿತಿ’ ಅಧ್ಯಕ್ಷರಾಗಿ ನೇಮಿಸಿದರು. ಕನ್ನಡವನ್ನು ಕಾಯುವುದೋ ಅಥವಾ ಅಧಿಕಾರಿಗಳನ್ನು ಕಾಯುವುದೋ ಎಂಬುದು ಅವರಿಗೆ ತಿಳಿಯದಾಯಿತು.

ನಂತರ ಅದು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವಾಗಿ ರೂಪಾಂತರಗೊಂಡಿತು. ಕನ್ನಡದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದವರು ಅದರ ಅಧ್ಯಕ್ಷರಾದರು. ಕೆಲವರಂತೂ ಉತ್ತಮ ಪ್ರಯತ್ನ ಮಾಡಿ ಸ್ವಲ್ಪ ಯಶಸ್ಸು ಗಳಿಸಿದರು. ಆದರೆ, ನಾನು ಸೇವೆಗೆ ಸೇರಿದ ದಿನದಿಂದ ಇಂದಿನವರೆಗೆ, ‘ಆಡುವ ಭಾಷೆ’ಗೂ ‘ಆಡಳಿತದ ಭಾಷೆ’ಗೂ ಏನೇನೂ ಸಂಬಂಧವಿಲ್ಲವೆಂದು ಖಂಡಿತವಾಗಿ ಹೇಳಬಹುದು.

ಒಮ್ಮೆ ಶ್ರೀಕೃಷ್ಣ ಆಲನಹಳ್ಳಿ ಅವರನ್ನು ಆಡಳಿತ ಕನ್ನಡ ಶಿಬಿರಕ್ಕೆ ಆಹ್ವಾನಿಸಿದ್ದೆ. ಅವರು ಹೇಳಿದರು, ‘ನೀವು ಆಡಳಿತಗಾರರು ಬಳಸುವ ಕನ್ನಡ ಭಾಷೆ ಹಳ್ಳಿಯಲ್ಲಿರುವ ಕನ್ನಡ ಗೊತ್ತಿರುವ ನಮ್ಮಪ್ಪನಿಗೂ ಅರ್ಥವಾಗಬೇಕು. ಆದರೆ, ನಿಮ್ಮ ಆಡಳಿತ ಭಾಷೆ ಹೇಗಿದೆಯೆಂದರೆ, ನನ್ನಂತಹವನಿಗೂ ಅರ್ಥವಾಗುವುದಿಲ್ಲ. ಅಷ್ಟೊಂದು ಗೋಜಲು ಮಾಡಿಟ್ಟಿದ್ದೀರಿ’ ಎಂದು ಛೇಡಿಸಿ-ದರು.

‘ಆಡುವ ಭಾಷೆಯೇ ಆಡಳಿತ ಭಾಷೆಯಾಗಬೇಕಾದರೆ, ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯಿರಿ. ಸಂಸ್ಕೃತ ಮತ್ತು ಇಂಗ್ಲಿಷ್ ಪದಗಳ ಹಂಗಿನಲ್ಲಿರಬೇಡಿ’ ಎಂದರು. ‘ಸರ್ಕಾರದಿಂದ ಇಂಗ್ಲಿಷ್‌ನಲ್ಲಿ ಪತ್ರ ಹೋದರೆ ಅದನ್ನು ಇಂಗ್ಲಿಷ್ ಬಲ್ಲವರಿಂದ ಓದಿಸಿ ತಿಳಿದುಕೊಳ್ಳಬಹುದು. ಸಂಸ್ಕೃತಮಯ ಕನ್ನಡದಲ್ಲಿ ಬಂದರೆ ಯಾರಿಂದ ತಿಳಿದುಕೊಳ್ಳಬೇಕು’ ಎಂದು ಪ್ರಶ್ನಿಸಿದರು.

‘ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ಮಕ್ಕಳ ಪೋಷಕರಿಗೆ ಬಿಟ್ಟಿದ್ದು’ – ಇದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಇತ್ತೀಚಿನ ತೀರ್ಪು. ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ಹೊರಬಂದಿರುವ ಸರ್ಕಾರದ ಆದೇಶಗಳು, ನ್ಯಾಯಾಲಯದ ತೀರ್ಪುಗಳು ಮಕ್ಕಳನ್ನು, ಪೋಷಕರನ್ನು, ಶಿಕ್ಷಣ ತಜ್ಞರನ್ನು ವಿಚಿತ್ರ ಗೊಂದಲಕ್ಕೆ ಸಿಕ್ಕಿಸಿವೆ.

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಖಾಸಗಿ ಶಾಲೆಗಳು, ಅಂತರರಾಷ್ಟ್ರೀಯ ಶಾಲೆಗಳು... ಹೀಗೆ ತರಹೇವಾರಿ ಶಾಲೆಗಳಿವೆ. ವಿವಿಧ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಬಂದ ಮಕ್ಕಳ ಶಿಕ್ಷಣ, ವಿವಿಧ ವರ್ಗಭೇದದ ಶಾಲೆಗಳು, ಶಿಕ್ಷಣ ಮಾಧ್ಯಮದ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ.

ಕನ್ನಡಕ್ಕೆ ಸಂಬಂಧಿಸಿದ ಪ್ರತಿಯೊಂದು ತುರ್ತು ಸಂದರ್ಭದಲ್ಲೂ ಸರ್ಕಾರ ಸಾಹಿತಿ, ಕಲಾವಿದರ, ಬುದ್ಧಿಜೀವಿಗಳ ಸಭೆ ಕರೆಯವುದು ಸಾಮಾನ್ಯ ವಾಡಿಕೆ. ಇಂಥದ್ದಕ್ಕೆ ಸರ್ಕಾರದಲ್ಲಿ ಸದಾ ಸಿದ್ಧವಿರುವ ಒಂದು ಆಹ್ವಾನಿಸಬೇಕಾದವರ ಪಟ್ಟಿ ಇದೆ. ಕಳೆದ 30–35 ವರ್ಷಗಳಿಂದ ಅದು ಪರಿಷ್ಕೃತಗೊಂಡಿಲ್ಲ. ಪ್ರಪಂಚದೆಲ್ಲೆಡೆ ಎಷ್ಟೇ ಬದಲಾವಣೆಗಳಾ-ಗಿದ್ದರೂ ಇವರ ವಿಚಾರಗಳು ಕಿಂಚಿತ್ತೂ ಬದಲಾಗಿಲ್ಲ.

ಅಲ್ಲಿ ಬರುವ ಬಹುತೇಕರ ಮೊಮ್ಮಕ್ಕಳು ಅಂತರರಾಷ್ಟ್ರೀಯ ಶಾಲೆಗಳಲ್ಲಿ ಕಲಿಯುತ್ತಿದ್ದರೂ ನಾಡಿನ ಉಳಿದೆಲ್ಲಾ ಜನರ ಮಕ್ಕಳು ಕನ್ನಡ ಬಾವುಟವನ್ನು ಎತ್ತಿ ಹಿಡಿದು ಕನ್ನಡದ ದೀಪ ಆರದಂತೆ ಕಾಪಾಡಬೇಕು! ಆಹ್ವಾನಿತರಾದ ಗಣ್ಯರು ಸರ್ಕಾರಕ್ಕೆ ಸಲಹೆ ನೀಡಲೇಬೇಕೆಂದು ಹಠ ಹಿಡಿದವರಂತೆ ಮಾತನಾಡುತ್ತಾರೆ.

ಇಡೀ ದೇಶದ ಮುಖ್ಯಮಂತ್ರಿಗಳನ್ನೆಲ್ಲಾ ನಮ್ಮ ಮುಖ್ಯಮಂತ್ರಿಗಳು ಒಗ್ಗೂಡಿಸಿ ನಾಯಕತ್ವ ವಹಿಸಿ ಮಾತೃಭಾಷೆ ರಕ್ಷಿಸಿ ಇತಿಹಾಸ ಪುರುಷರಾಗಬೇಕೆಂದು ಬಯಸುತ್ತಾರೆ. ನಮ್ಮ ಪಕ್ಕದ ರಾಜ್ಯದ ಮುಖ್ಯಮಂತ್ರಿಗಳೇ (ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ) ಗಡಿ ಹಾಗೂ ನೀರಿನ ವಿಷಯಗಳಲ್ಲಿ ನಮ್ಮೊಡನೆ ಸದಾ ಜಗಳ ಕಾಯುತ್ತಿರುವಾಗ, ಇಡೀ ದೇಶದ ಮುಖ್ಯಮಂತ್ರಿಗಳನ್ನು ಒಗ್ಗೂಡಿಸಿ ಹೋರಾಡುವುದು ಸಾಧ್ಯವೇ?

ಜಾಗತೀಕರಣದ ಹೊಸ ಸವಾಲುಗಳನ್ನು ಎದುರಿಸಲು ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ನಾವು ನೀಡಬೇಕಾದಷ್ಟು ಆದ್ಯತೆ ನೀಡಲಿಲ್ಲ. ಪ್ರಾರಂಭದಲ್ಲಿ ಶಾಲಾ ಕೊಠಡಿಗಳ ಕೊರತೆಯಾದರೆ, ನಂತರದಲ್ಲಿ ಶಿಕ್ಷಕರ ಕೊರತೆ, ಗುಣಮಟ್ಟದ ಕೊರತೆ. ಸರಿಯಾಗಿ ಕಲಿಸುವ ಸಾಮರ್ಥ್ಯ ಮತ್ತು ಆಸಕ್ತಿ ಇಲ್ಲದ ಶಿಕ್ಷಕರು. ಇದರಿಂದ ಪೋಷಕರಿಗೆ ನೆಮ್ಮದಿ ಇಲ್ಲವಾಯಿತು.

ಸರ್ಕಾರಿ ಶಾಲೆಗಳಲ್ಲಿನ ಕೊರತೆಯ ಲಾಭ ಪಡೆದು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಹುಟ್ಟಿದವು. ಪ್ರಭಾವಿ ವ್ಯಕ್ತಿಗಳು, ಅವರ ಹಿಂಬಾಲಕರು, ಮಠಗಳು, ಸರ್ಕಾರಿ ಅಧಿಕಾರಿಗಳು... ಹೀಗೆ ಹತ್ತು ಹಲವು ವರ್ಗದ ಜನರು ಖಾಸಗಿ ಶಾಲೆಗಳನ್ನು ಆರಂಭಿಸಿ ಸರ್ಕಾರಿ ಶಾಲೆಗಳಿಗೆ ಪ್ರತಿಸ್ಪರ್ಧೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಾ ಹೋಯಿತು. ಪುಕ್ಕಟೆ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳು ಪಟ್ಟಣದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿದರು. ನವ ಇಂಗ್ಲಿಷ್ ಶಾಲೆಗಳಿಗೆ ಬೇಡಿಕೆ ಹೆಚ್ಚಾಯಿತು. ಅಪಾರ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳು ಹುಟ್ಟಿ ಶೋಷಣೆಯ ಕೇಂದ್ರಗಳಾದವು.

ಈ ಶಾಲೆಗಳಲ್ಲಿ ಏನೇನೂ ಮೂಲಸೌಕರ್ಯ ಇಲ್ಲದಿದ್ದರೂ ‘ಇಂಗ್ಲಿಷ್ ಮಾಧ್ಯಮದ ಗಾಳ’ದಿಂದ ಮಕ್ಕಳನ್ನು ಸೆಳೆಯಲಾಯಿತು. ಸರ್ಕಾರಿ ಶಾಲೆಗಳಿಗೆ ಪೋಷಕರಾಗಬೇಕಿದ್ದ ರಾಜಕಾರಣಿಗಳು, ಅಧಿಕಾರಿಗಳು ಆಂಗ್ಲ ಶಾಲೆ-ಗಳ ಮಾಲೀಕರಾದರು. ಇದು ಎಷ್ಟು ಕ್ಷಿಪ್ರವಾಗಿ ನಡೆಯಿತೆಂದರೆ ಇದನ್ನು ನಿಯಂತ್ರಿಸಲು ಸರ್ಕಾರಕ್ಕೇ ಸಾಧ್ಯವಾಗದೆ ಕೈಚೆಲ್ಲಿತ್ತು.

ಈ ಮುಕ್ತ ಆರ್ಥಿಕ ಜಗತ್ತಿನಲ್ಲಿ ಸ್ಪರ್ಧಿಸಿ ಗೆಲ್ಲಲು ಇಂಗ್ಲಿಷ್ ಮಾಧ್ಯಮ ಅನಿವಾರ್ಯವೆಂದು ನಂಬಿ ಹಠಕ್ಕೆ ಬಿದ್ದವರಂತೆ ಎಲ್ಲ ವರ್ಗದ ಜನರು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇಂಗ್ಲಿಷ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೂಕುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಕಲಿಕಾ ವಿಧಾನಗಳ ಬಗ್ಗೆ ಸಂಶೋಧನೆ ಮಾಡುತ್ತಾ ಭಾಷಾ ಮಾಧ್ಯಮದ ಬಗ್ಗೆ ಶಿಕ್ಷಣ ತಜ್ಞರೊಂದಿಗೆ, ಪಂಡಿತರೊಂದಿಗೆ, ಬುದ್ಧಿಜೀವಿಗಳೊಂದಿಗೆ ವರ್ಷಗಟ್ಟಲೆ ವಿಧಾನಸೌಧ, ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂಗಳ ಹೀಗೆ ವಿವಿಧ ವೇದಿಕೆಗಳಲ್ಲಿ ಎಡೆಬಿಡದೆ ವಿಚಾರ ಮಂಥನ, ಕಾನೂನು ಹೋರಾಟ ನಡೆಸುತ್ತಿದ್ದಾಗ ಪೋಷಕರಿಗೆ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಸರ್ಕಾರದ ತೀರ್ಮಾನಗಳಿಗೆ ಕಾಯಲು ಸಮಯವಿರಲಿಲ್ಲ.

ಮಕ್ಕಳನ್ನು ಕನಿಷ್ಠ ಸೌಲಭ್ಯವೂ ಇಲ್ಲದ, ದಕ್ಷತೆ ಇಲ್ಲದ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯ ಮಂಕಾಗುವಂತೆ ಮಾಡಲು ಅವರು ಸಿದ್ಧರಿರಲಿಲ್ಲ. ಈ ಅತಂತ್ರ ಮತ್ತು ಅಸಹಾಯಕ ಸ್ಥಿತಿಯೇ ಖಾಸಗಿ ಶಾಲೆಗಳಿಗೆ ಬಂಡವಾಳವಾಯಿತು. ಬಣ್ಣ ಬಣ್ಣದ ಸಮವಸ್ತ್ರ, ಹೊರೆಯ ಬೆನ್ನು ಚೀಲಗಳು, ವಾರಕ್ಕೆರಡು ತರಹದ ಶೂಗಳು... ಹೀಗೆ ಪೋಷಕರನ್ನು ಸುಲಿಗೆ ಮಾಡಲು ಈ ಶಾಲೆಯವರು ಎಲ್ಲ ಹುನ್ನಾರಗಳನ್ನು ಕಂಡು ಹಿಡಿದರು. ಸಮವಸ್ತ್ರದಲ್ಲಿ ಮುದ್ದುಮುದ್ದಾಗಿ ಕಾಣುವ ಮಕ್ಕಳನ್ನು ಕಂಡ ಪೋಷಕರು ಕನಸಿಗೆ ಜಾರಿದ್ದಾರೆ.

ಸರ್ಕಾರಿ ಶಾಲೆಗಳು ಪ್ರಾರಂಭವಾದ ಆರು ತಿಂಗಳ ನಂತರವೂ ಸಮವಸ್ತ್ರ, ಪಠ್ಯಪುಸ್ತಕ ಬಂದಿಲ್ಲವೆಂಬ ದೂರು, ನಂತರ ಅವು ಬಂದರೂ ಕಳಪೆ ದರ್ಜೆಯವು ಎಂಬ ತಕರಾರು, ಇದೋ ಈಗ ಬಂದೇಬಿಟ್ಟವು ಎಂಬ ಮಂತ್ರಿಗಳ ಹಾಗೂ ಅಧಿಕಾರಿಗಳ ಹೇಳಿಕೆ ವಾರ್ಷಿಕ ವಿಧಿಗಳಂತೆ ಮುಂದುವರೆದವು. ನಾನು ಕೆಲಸ ಮಾಡಿದ ಜಿಲ್ಲೆಗಳಲ್ಲಿ ಪ್ರತಿಯೊಂದು ಹಳ್ಳಿಗೆ ಹೋದಾಗಲೂ ಸರ್ಕಾರಿ ಶಾಲೆ ಮತ್ತು ಸರ್ಕಾರಿ ವಸತಿ ನಿಲಯಗಳು ನನ್ನ ಆದ್ಯತೆಯ ಸ್ಥಳಗಳಾಗಿರುತ್ತಿದ್ದವು.

ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ‘ರಸ್ತೆಯ ಉದ್ಧಾರ’ಕ್ಕೆ ಖರ್ಚು ಮಾಡಲು ಉತ್ಸುಕರಾದಷ್ಟು ಶಾಲೆಗಳ ಅಭ್ಯುದಯಕ್ಕೆ ಯತ್ನಿಸುವುದಿಲ್ಲ. ಶಿಕ್ಷಕರು ಹಳ್ಳಿಗಳಲ್ಲಿ ಉಳಿದು ಕೆಲಸ ಮಾಡಲು ತಯಾರಿಲ್ಲ. ಅವರಿಗೆ ಪೂರಕವಾದ ಸೌಲಭ್ಯಗಳಿಲ್ಲ. ಭೇಟಿ ನೀಡಿ ಮಾಯವಾಗುವ (visit & vanish) ಶಿಕ್ಷಕರ ಸಂಖ್ಯೆಯೇ ಜಾಸ್ತಿ. ಕಲಿಸುವ ಗುಣಮಟ್ಟ, ಶಿಕ್ಷಕರ ಕೌಶಲ ಹೆಚ್ಚಿಸಲು ಶಿಕ್ಷಣ ಇಲಾಖೆ ಸತತ ಪ್ರಯತ್ನ ಪಡುತ್ತಲೇ ಇದೆ.

ಕೆಲವು ಅಧಿಕಾರಿಗಳ ಶ್ರಮ, ಶ್ರದ್ಧೆ ಮತ್ತು ಬದ್ಧತೆ ಪ್ರಶ್ನಿಸುವಂತಿಲ್ಲ. ಆದರೆ, ಸರ್ಕಾರದಲ್ಲಿರುವವರೇ ಖಾಸಗಿ ಶಾಲೆಗಳ ಮಹಾಪೋಷಕರಾದರೆ ಏನು ಮಾಡಲು ಸಾಧ್ಯ? ಶಿಕ್ಷಣ ವ್ಯಾಪಾರದಲ್ಲಿ ತೊಡಗಿರುವ ವರ್ಗ ಸರ್ಕಾರದ ಮೇಲೆ ಹಿಡಿತ ಸಾಧಿಸಿರುವಾಗ ‘ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಿ’ ಎಂದು ಹೇಳುವ ನೈತಿಕತೆ ಸರ್ಕಾರದಲ್ಲಿ ಈಗ ಯಾರಿಗೂ ಉಳಿದಿಲ್ಲ.
ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಸರ್ಕಾರಿ ಶಾಲೆಗಳ ಪ್ರಸ್ತುತತೆ ಇಂದಿಗೂ ಇದೆ, ಎಂದೆಂದಿಗೂ ಇರುತ್ತದೆ. ಲಕ್ಷಾಂತರ ಮಕ್ಕಳು ಅವುಗಳನ್ನೇ ಅವಲಂಬಿಸುವ ಅನಿವಾರ್ಯ ಇದೆ.

ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲು ಅನುಕೂಲ ಮಾಡಿಕೊಟ್ಟರೆ ಆ ಮಕ್ಕಳು ತಮ್ಮ ಅಸಾಮಾನ್ಯ ಪ್ರತಿಭೆಯಿಂದ ಯಶಸ್ಸು ಗಳಿಸಲು ಸಾಧ್ಯವಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ದೊಡ್ಡ ವಿಜ್ಞಾನಿಗಳಾಗಿದ್ದಾರೆ, ಆಡಳಿತಗಾರರಾಗಿದ್ದಾರೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವಿಶ್ವದೆಲ್ಲೆಡೆ ಸಾಧಕರಾಗಿದ್ದಾರೆ.

ಈಗ ಸರ್ಕಾರಿ ಶಾಲೆಗಳಲ್ಲಿರುವವರನ್ನು ಉಳಿಸಿಕೊಂಡು ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲು. ನಮ್ಮೂರ ಶಾಲೆಗಳನ್ನು ಉಳಿಸಿಕೊಳ್ಳಲು ಇದೊಂದು ಕೊನೆಯ ಅವಕಾಶ! ಕುವೆಂಪು ಅವರ ‘ಕನ್ನಡ ಡಿಂಡಿಮ’ ಮುನ್ನುಡಿಯ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ಆಯಾ ಪ್ರಾಂತ್ಯಗಳಲ್ಲಿ ಆಯಾ ದೇಶಭಾಷೆಗಳೇ ಆಡಳಿತ ಭಾಷೆ
ಯಾಗಿರಬೇಕು.

ಅಲ್ಲಿಯ ಶಿಕ್ಷಣವೆಲ್ಲ ಎಲ್ಲ ಮಟ್ಟದಲ್ಲಿಯೂ ದೇಶಭಾಷಾ ಮಾಧ್ಯಮದಲ್ಲಿಯೇ ಸಾಗಬೇಕು..... ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾ-ದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲೇ, ಕರ್ನಾಟಕದಲ್ಲೇ, ಇನ್ನೆಲ್ಲಿಯೂ ಅಲ್ಲ..... ನೀವು ಇಲ್ಲಿ ಕನ್ನಡಕ್ಕೆ, ಕನ್ನಡದವರಿಗೆ ಎಡೆ ಕೊಡದಿದ್ದರೆ, ಸ್ಥಾನಮಾನ ಕೊಡದಿದ್ದರೆ, ಜಗತ್ತಿನ ಮತ್ತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವುದಿಲ್ಲ.

ನೀವು ಕೈ ಬಿಟ್ಟರೆ ಅದಕ್ಕೆ ಸಮುದ್ರವೇ ಗತಿ.... ಅಂದ ಮಾತ್ರಕ್ಕೆ ನಾನು ಕನ್ನಡವನ್ನು ಬಲಾತ್ಕಾರ ಭಾಷೆಯನ್ನಾಗಿ ಮಾಡಲು ಹೇಳುತ್ತಿಲ್ಲ. ಅದು ಪ್ರಥಮ ಭಾಷೆಯಾಗಿರಲಿ. ಮಾತೃಭಾಷೆಗೆ ಸಿಕ್ಕಬೇಕಾದ ಎಲ್ಲ ಗೌರವವೂ ಅದಕ್ಕೆ ದೊರೆಯಲಿ ಎಂಬುದಷ್ಟೇ ನನ್ನ ಅಭಿಪ್ರಾಯ. ಅಂತಹ ಅವಕಾಶ ಬಂದಾಗ ಕನ್ನಡ ಜನ ಕನ್ನಡಕ್ಕೆ ಪುರಸ್ಕಾರ ಕೊಡದಿದ್ದರೆ, ಅದು ಅವರ ಪಾಡು. ನಾನು ಅದಕ್ಕಾಗಿ ಚಿಂತಿಸುವುದಿಲ್ಲ’.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.