ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತರಿಸುವ ತೀರ್ಪುಗಳನ್ನು ಕಳೆದ ವಾರ ಸುಪ್ರೀಂ ಕೋರ್ಟ್ ನೀಡಿದೆ. ಮಹಿಳೆಯನ್ನು ಪುರುಷನ ಸೊತ್ತಾಗಿಸುವ ಐಪಿಸಿಯ ಸೆಕ್ಷನ್ 497 ರದ್ದು ಹಾಗೂ ಶಬರಿಮಲೆಗೆ ಮಹಿಳೆಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವ ತೀರ್ಪುಗಳ ಮೂಲಕ ಸಾಂವಿಧಾನಿಕ ನೈತಿಕತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದೇ ಸಂದರ್ಭದಲ್ಲಿ ಅತ್ಯಾಚಾರ, ಅಪಹರಣ ಹಾಗೂ ಕೊಲೆಯಂತಹ ಹೀನ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕಾರಣಿಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇರಬಾರದು ಎಂಬಂತಹ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನೀಡಿರುವ ತೀರ್ಪು ಸಹ ಮುಖ್ಯವಾದದ್ದು. ಆದರೆ ಆರೋಪ ಹೊತ್ತವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ನೀಡಲಿಲ್ಲ. ಚುನಾವಣಾ ರಾಜಕಾರಣದ ಶುದ್ಧೀಕರಣಕ್ಕೆ ಕಾನೂನು ರಚನೆಯ ಹೊಣೆಯನ್ನು ಸಂಸತ್‌ಗೇ ಸುಪ್ರೀಂಕೋರ್ಟ್ ಬಿಟ್ಟುಕೊಟ್ಟಿದೆ.

ಕಳೆದ 15 ವರ್ಷಗಳಲ್ಲಿ ರಾಜಕೀಯ ಅಪರಾಧೀಕರಣ ತಡೆಗೆ ಅನೇಕ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ನೀಡುತ್ತಲೇ ಬಂದಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಂಸದರು ಮತ್ತು ಶಾಸನ ಸಭೆಗಳ ಸದಸ್ಯರು ತೀರ್ಪು ಪ್ರಕಟವಾದ ತಕ್ಷಣದಿಂದಲೇ ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆಂದು 2013ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಮೇಲ್ಮನವಿಗಳ ಮೂಲಕ ಸರ್ವೋಚ್ಚ ನ್ಯಾಯಾಲಯದವರೆಗೆ ಕಾನೂನು ಸಮರ ಮುಂದುವರಿಸುವವರೆಗೂ ತಮ್ಮ ಸ್ಥಾನಗಳಿಗೆ ಅಂಟಿಕೊಳ್ಳಲು ಇದ್ದ ಅವಕಾಶವನ್ನು ಈ ತೀರ್ಪು ಕಿತ್ತುಹಾಕಿತ್ತು. ಹೀಗಾಗಿ, ಲಾಲು ಪ್ರಸಾದ್ ಹಾಗೂ ಜಯಲಲಿತಾ ಅವರಂತಹ ಶಿಕ್ಷೆಗೊಳಗಾದ ಅಪರಾಧಿಗಳನ್ನು ಶಾಸನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ಕಾರಣವಾಗಿದ್ದು ಈ ಪ್ರಮುಖ ತೀರ್ಪು. ರಾಜಕೀಯದಲ್ಲಿ ಅಪರಾಧೀಕರಣಕ್ಕೆ ರಾಜಕೀಯ ಪಕ್ಷಗಳೇ ಕಾರಣ ಎಂದು
ಸುಪ್ರೀಂ ಕೋರ್ಟ್ ಮತ್ತೊಮ್ಮೆ ಈಗ ಎತ್ತಿ ಹೇಳಿದೆ. ಶಿಕ್ಷೆಯಾದ ರಾಜಕಾರಣಿಗಳು ಶಾಸಕ ಅಥವಾ ಸಂಸದರ ಸ್ಥಾನದಲ್ಲಿ ಮುಂದುವರಿಯುವುದು ಸಾಧ್ಯವಾಗದೇ ಹೋಗಬಹುದು. ಆದರೆ ಪಕ್ಷದ ನಾಯಕತ್ವದ ಹುದ್ದೆಗಳಲ್ಲಿ ಮುಂದುವರಿಯುತ್ತಾ ಪ್ರಭಾವ ಬೀರುತ್ತಾ ಸಾಗುವುದನ್ನು ಕೋರ್ಟ್ ಟೀಕಿಸಿದೆ.

ಹಣ ಹಾಗೂ ತೋಳ್ಬಲದ ರಾಜಕಾರಣ, ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಹೀಗಾಗಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಆರೋಪ ಪ್ರಕರಣಗಳನ್ನು ಘೋಷಿಸಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳ ಬಗ್ಗೆ ರಾಜಕೀಯ ಪಕ್ಷಗಳು ಸಾಕಷ್ಟು ಪ್ರಚಾರ ನೀಡಬೇಕು ಎಂದೂ ಈ ತೀರ್ಪು ಹೇಳಿದೆ. ಹೀನ ಅಪರಾಧ ಆರೋಪ ಹೊತ್ತವರ ಸ್ಪರ್ಧೆಯನ್ನು ತಪ್ಪಿಸಲು ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡುವುದಂತೂ ಅಸಾಧ್ಯ. ಆತ ಗೆಲ್ಲುವ ಸಾಧ್ಯತೆಯಷ್ಟೇ ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿಬಿಡುತ್ತದೆ. ನೈತಿಕ ಪರಿಗಣನೆಗಳು ಇಲ್ಲಿ ಗೌಣ. ಜೊತೆಗೆ, ಅಭ್ಯರ್ಥಿಯ ಕ್ರಿಮಿನಲ್ ದಾಖಲೆಗಳನ್ನು ಬಹಿರಂಗ ಪಡಿಸುವುದರಿಂದ ಮತದಾರರ ಭಾವನೆ ಬದಲಿಸಲೂ ಸಾಧ್ಯವಾಗುತ್ತಿಲ್ಲ ಎಂಬುದಂತೂ ದುರದೃಷ್ಟದ ಸಂಗತಿ. ಕಳೆದ ಮೂರು ಲೋಕಸಭೆಯಲ್ಲಿದ್ದ ಚಿತ್ರಣ ನೋಡಿ: 2004ರಲ್ಲಿ 124 ಮಂದಿ ಕ್ರಿಮಿನಲ್ ಹಿನ್ನೆಲೆ ಇರುವ ಸಂಸದರು ಇದ್ದರು. 2009ರಲ್ಲಿ ಇದು 162 ಆಯಿತು. 2014ರಲ್ಲಿ ಇದು 182ಕ್ಕೇರಿತು.

ಸ್ವಾತಂತ್ರ್ಯ ಲಭಿಸುವ 25 ವರ್ಷಗಳಿಗೂ ಮುಂಚೆ, 1922ರಷ್ಟು ಹಿಂದೆಯೇ ಈಗಿನ ಸ್ಥಿತಿಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ನಿರೀಕ್ಷಿಸಿದ್ದರು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿನ್ನೆ (ಅ. 2) ನಿವೃತ್ತರಾದ ದೀಪಕ್ ಮಿಶ್ರಾ ಅವರು ಈ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ‘ನಮಗೆ ಸ್ವಾತಂತ್ರ್ಯ ಬಂದ ತಕ್ಷಣ, ಚುನಾವಣೆಗಳು ಹಾಗೂ ಅವುಗಳ ಭ್ರಷ್ಟಾಚಾರ, ಅನ್ಯಾಯ ಹಾಗೂ ಸಂಪತ್ತಿನ ದಮನಕಾರಿ ಸ್ವರೂಪ ಹಾಗೂ ಆಡಳಿತದ ಅದಕ್ಷತೆ ಬದುಕನ್ನು ನರಕ ಮಾಡಲಿದೆ’ ಎಂದಿದ್ದರು ರಾಜಗೋಪಾಲಾಚಾರಿ.

ಹಾಗೆಯೇ ಈ ತೀರ್ಪು ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಮಾತನ್ನೂ ಉಲ್ಲೇಖಿಸಿದೆ: ‘ಸಂವಿಧಾನ ಎಂಬುದು ಯಂತ್ರದಂತೆ ಜೀವರಹಿತವಾದದ್ದು. ಇದನ್ನು ನಿಯಂತ್ರಿಸುವ ಹಾಗೂ ನಿರ್ವಹಣೆ ಮಾಡುವ ವ್ಯಕ್ತಿಗಳಿಂದ ಇದು ಜೀವ ಪಡೆದುಕೊಳ್ಳುತ್ತದೆ. ರಾಷ್ಟ್ರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡಿರುವ ಪ್ರಾಮಾಣಿಕ ವ್ಯಕ್ತಿಗಳ ಗುಂಪು ಭಾರತಕ್ಕೆ ಈಗ ಎಲ್ಲದಕ್ಕಿಂತ ಹೆಚ್ಚು ಅಗತ್ಯ’.

ರಾಜಕೀಯ ಪಕ್ಷಗಳಲ್ಲಿ ಪಾರದರ್ಶಕತೆ ತರಲು ನಡೆಸಿದ ಪ್ರಯತ್ನಗಳ ಉಲ್ಲೇಖವೂ ಇಲ್ಲಿದೆ. ಮಾಹಿತಿ ಹಕ್ಕಿನಡಿ ರಾಜಕೀಯ ಪಕ್ಷಗಳನ್ನು ತರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಮಿಷನರ್ (ಸಿಐಸಿ) ಅವರು ಕೋರ್ಟ್‌ಗೆ ಸಲ್ಲಿಸಿದ್ದ ಹೇಳಿಕೆಯನ್ನು ಈ ತೀರ್ಪು ಉಲ್ಲೇಖಿಸಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ಪಾತ್ರವನ್ನು ಇದು ಕಟ್ಟಿಕೊಡುತ್ತದೆ. ‘ರಾಜಕೀಯ ಪಕ್ಷಗಳು ಸರ್ಕಾರವನ್ನು ರಚಿಸುತ್ತವೆ. ಸಂಸತ್ ಅಥವಾ ಶಾಸನಸಭೆ ನಾಯಕತ್ವ ವಹಿಸುವುದು ಇವೇ ರಾಜಕೀಯ ಪಕ್ಷಗಳು. ಜೊತೆಗೆ ಆಡಳಿತ ನಡೆಸುವುದೂ ಈ ಪಕ್ಷಗಳೇ. ಹೀಗಾಗಿ ಆಂತರಿಕ ಪ್ರಜಾಪ್ರಭುತ್ವ, ಹಣಕಾಸು ಪಾರದರ್ಶಕತೆ ಹಾಗೂ ಕಾರ್ಯಶೈಲಿಯಲ್ಲಿ ಉತ್ತರದಾಯಿತ್ವ ಇರಬೇಕಾದುದು ಅಗತ್ಯ. ತನ್ನ ಆಂತರಂಗಿಕ ಕಾರ್ಯನಿರ್ವಹಣೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸದ ರಾಜಕೀಯ ಪಕ್ಷ ರಾಷ್ಟ್ರದ ಆಡಳಿತದಲ್ಲಿ ಅದೇ ತತ್ವಗಳನ್ನು ಗೌರವಿಸುತ್ತದೆ’ ಎಂದೇನೂ ಹೇಳಲಾಗದು. ಆಂತರಂಗಿಕ
ವಾಗಿ ಸರ್ವಾಧಿಕಾರ ಹೊಂದಿ ಹೊರಗೆ ಪ್ರಜಾಸತ್ತಾತ್ಮಕವಾಗಿರುವಂತಿರುವುದು ಸಾಧ್ಯವಿಲ್ಲ’ ಎಂದು ಸಿಐಸಿ ಹೇಳಿದ್ದರು.

‘ರಾಜಕೀಯದ ಅಪರಾಧೀಕರಣ ಹಾಗೂ ಭ್ರಷ್ಟಾಚಾರ, ವಿಶೇಷವಾಗಿ ಚುನಾವಣೆಯ ಆರಂಭದ ಹಂತದಲ್ಲೇ ಇರುವುದು ರಾಷ್ಟ್ರೀಯ ಹಾಗೂ ಆರ್ಥಿಕ ಭಯೋತ್ಪಾದನೆಯಾಗಿದೆ. ಇದು ಸ್ವನಾಶದ ಕಾಯಿಲೆ. ಆಂಟಿಬಯಾಟಿಕ್‍ಗಳಿಗೂ ಯಾವುದೇ ರೀತಿ ಸ್ಪಂದನೆ ತೋರುತ್ತಿಲ್ಲ’ ಎಂದು ಸಿಜೆಐ ಮಿಶ್ರಾ ಅವರು ಬರೆದಿರುವುದು ಮಾರ್ಮಿಕ. ‘ರಾಜಕೀಯ ಅಪರಾಧೀಕರಣ ಕಹಿ ಸತ್ಯ. ಪ್ರಜಾಪ್ರಭುತ್ವದ ಪೀಠಕ್ಕೆ ಹತ್ತಿದ ಗೆದ್ದಲು’ ಎಂದೂ ಈ ತೀರ್ಪು ಎಚ್ಚರಿಸಿದೆ. ಶಾಸಕರಿಗೆ, ಸಂಸದರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ರಚಿಸಿ ಒಂದೇ ವರ್ಷದೊಳಗೆ ಇತ್ಯರ್ಥ ಮಾಡಬೇಕು ಎಂದು ಎಲ್ಲಾ ಅಧೀನ ನ್ಯಾಯಾಲಯಗಳಿಗೆ 2014ರಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಗಂಭೀರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಿ ಇತ್ಯರ್ಥಗೊಳಿಸುವುದು ರಾಜಕೀಯ ಶುದ್ಧೀಕರಣದಲ್ಲಿ ಮೊದಲ ಹೆಜ್ಜೆ. ಏಕೆಂದರೆ, ಸುಳ್ಳು ಆರೋಪಗಳ ಸುಳಿಗಳೂ ಇರುತ್ತವೆ ಎಂಬುದು ವಾಸ್ತವ. ಇತ್ತೀಚೆಗೆ ಹಲವು ಎಎಪಿ ಶಾಸಕರು ಆರೋಪ ಮುಕ್ತರಾದದ್ದು ಇದಕ್ಕೆ ಉದಾಹರಣೆ.

1943ರಷ್ಟು ಹಿಂದೆ ಅಂಬೇಡ್ಕರ್ ಅವರು ಸಭೆಯೊಂದರಲ್ಲಿ ಮಾಡಿದ್ದ ಭಾಷಣದ ತುಣುಕುಗಳಿವು. ಇಂದಿನ ರಾಜಕೀಯಕ್ಕೂ ಇವು ಅನ್ವಯಿಸುತ್ತವೆ: ‘ಸಂಘಟಿತ ಶಕ್ತಿಯಾಗಿ ಹಣ ಇದೇ ಮೊದಲಬಾರಿಗೆ ರಾಷ್ಟ್ರದಲ್ಲಿ ಬೇರೂರುತ್ತಿದೆ. ಇದನ್ನು ಪರಿಗಣಿಸಬೇಕೆಂದು ಅಮೆರಿಕದ ಪ್ರಜೆಗಳ ಮುಂದೆ ಅಧ್ಯಕ್ಷ ರೂಸ್‍ವೆಲ್ಟ್ ಇಟ್ಟಿದ್ದ ಪ್ರಶ್ನೆಗಳು ಇಲ್ಲೂ ಏಳುತ್ತವೆ: ಯಾರು ಆಡಳಿತ ನಡೆಸುತ್ತಾರೆ, ಸಂಪತ್ತು ಅಥವಾ ಮನುಷ್ಯ? ಯಾವುದು ದಾರಿ ತೋರುತ್ತದೆ, ಹಣ ಅಥವಾ ಬುದ್ಧಿ? ಸಾರ್ವಜನಿಕ ಸ್ಥಳಗಳಲ್ಲಿ ಯಾರಿರುತ್ತಾರೆ? ಸುಶಿಕ್ಷಿತರು, ದೇಶಭಕ್ತರು, ಸ್ವತಂತ್ರ ಮನುಷ್ಯರು ಅಥವಾ ಕಾರ್ಪೊರೇಟ್ ಬಂಡವಾಳದ ಊಳಿಗಮಾನ್ಯ ಜೀತಗಾರರೇ? ಸದ್ಯಕ್ಕೆ, ಭಾರತೀಯ ರಾಜಕಾರಣ ಎಂಬುದು ಅದರ ಹಿಂದೂ ಅಂಶವೇನೇ ಇರಲಿ, ಅಧ್ಯಾತ್ಮಿಕತೆಯನ್ನು ಒಳಗೊಳ್ಳುವುದರ ಬದಲಿಗೆ ಭ್ರಷ್ಟಾಚಾರಕ್ಕೆ
ಪರ್ಯಾಯ ಪದವಾಗಿದೆ. ಸಂಸ್ಕೃತಿವಂತರಾಗಿರುವ ಅನೇಕ ಮನುಷ್ಯರು ಈ ಕೊಳಚೆ ಜೊತೆ ಸೇರಲು ತಿರಸ್ಕರಿಸುತ್ತಿದ್ದಾರೆ. ರಾಜಕೀಯ ಎಂಬುದು ಅಶುಚಿಯಾಗಿರುವ ಹಾಗೂ ಸಹಿಸಲಾಗದಷ್ಟು ಅಹಿತಕರವಾದ ಹೊಲಸು ವ್ಯವಸ್ಥೆಯಾಗಿದೆ. ರಾಜಕಾರಣಿಯಾಗುವುದು ಎಂದರೆ ಚರಂಡಿಯಲ್ಲಿ ಕೆಲಸ ಮಾಡಲು ಹೋದಂತೆ’ 75 ವರ್ಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತೇ? ಎಂದು ಅಚ್ಚರಿಯಾಗುತ್ತದೆ.

ರಾಜಕೀಯದಲ್ಲಿ ಅಪರಾಧೀಕರಣ ಸಮಸ್ಯೆ ಬಗ್ಗೆ 1993ರಲ್ಲಿ ಕೇಂದ್ರ ಸರ್ಕಾರಕ್ಕೆ ಎನ್. ಎನ್. ವೋಹ್ರಾ ಸಮಿತಿ ಸಲ್ಲಿಸಿದ್ದ ವರದಿಯನ್ನೂ ಸುಪ್ರೀಂ ಕೋರ್ಟ್ ಪೀಠ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ‘ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ಅಪರಾಧೀಕರಣ ಹೊಸ ಸಂಗತಿ ಅಲ್ಲ. ಆದರೆ 1993ರ ಮುಂಬೈ ಬಾಂಬ್ ಸ್ಫೋಟದ ವೇಳೆ, ಅದರ ತೀವ್ರ ಸ್ವರೂಪ ಹೆಚ್ಚು ಸ್ಫುಟವಾಗಿ ಗೋಚರಿಸಿತು. ಕ್ರಿಮಿನಲ್ ಗುಂಪುಗಳು, ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳು ಹಾಗೂ ಅವರ ರಾಜಕೀಯ ಪೋಷಕರ ಜಾಲದ ಸಹಭಾಗಿತ್ವದ ಫಲವಾಗಿತ್ತು ಇದು’ ಎಂದು ಪೀಠ ವ್ಯಾಖ್ಯಾನಿಸಿದೆ. ರಾಜಕೀಯ ಅಪರಾಧೀಕರಣದ ಅಪಾಯಗಳನ್ನು ಎತ್ತಿಹೇಳಿ ಅದರ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನೂ ವೋಹ್ರಾ ಸಮಿತಿ ಸೂಚಿಸಿತ್ತು. ಆದರೆ 25 ವರ್ಷಗಳ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಏಕೆಂದರೆ, 1970ರ ದಶಕದಲ್ಲಿ ಅಪರಾಧ ಚಟುವಟಿಕೆಗಳ ಜಾಲದ ಜೊತೆಗೆ ರಾಜಕಾರಣಿಗಳು ಸಂಪರ್ಕ ಹೊಂದಿದ್ದಾರೆಂಬ ಶಂಕೆ ಇರುತ್ತಿತ್ತು. ನಂತರದ ದಿನಗಳಲ್ಲಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ನೇರವಾಗಿಯೇ ರಾಜಕಾರಣಕ್ಕೆ ಪ್ರವೇಶಿಸತೊಡಗಿದರು.

ಬಿ.ಆರ್. ಅಂಬೇಡ್ಕರ್ ಅವರ ಮಾತುಗಳ ಮೂಲಕ ಸಂವಿಧಾನದ ಮಿತಿಗಳನ್ನೂ ಹೇಳಲಾಗಿದೆ ಈ ತೀರ್ಪಿನಲ್ಲಿ. ‘ಸಂವಿಧಾನ, ಪ್ರಭುತ್ವಕ್ಕೆ ಅಂಗಾಂಗಗಳನ್ನು ಮಾತ್ರ ಒದಗಿಸುತ್ತದೆ. ಈ ಅಂಗಾಂಗಗಳ ಕಾರ್ಯನಿರ್ವಹಣೆಗೆ ಮುಖ್ಯವಾಗುವ ಅಂಶಗಳೆಂದರೆ, ತಮ್ಮ ಆಶಯಗಳು ಹಾಗೂ ತಮ್ಮ ರಾಜಕಾರಣವನ್ನು ಅನುಷ್ಠಾನಗೊಳಿಸಲು ಸಾಧನಗಳಾಗಿ ರಚಿಸಲಾಗುವ ರಾಜಕೀಯ ಪಕ್ಷಗಳು ಹಾಗೂ ಜನರು. ಆದರೆ, ಭಾರತದ ಜನರು ಹಾಗೂ ಅವರ ಪಕ್ಷಗಳು ಹೇಗೆ ವರ್ತಿಸುತ್ತವೆ? ಎಂಬುದನ್ನು ಹೇಗೆ ಹೇಳುವುದು?’.

‘ನಾವೇನು ತಿನ್ನುತ್ತೇವೆ, ಧರಿಸುತ್ತೇವೆ, ಹೇಳುತ್ತೇವೆ, ಓದುತ್ತೇವೆ ಹಾಗೂ ಯೋಚಿಸುತ್ತೇವೆ ಎಂಬುದು ನಮ್ಮ ವೈಯಕ್ತಿಕ ಬದುಕುಗಳ ಚಿಕ್ಕ ಹಾಗೂ ಅಮುಖ್ಯ ವಿಚಾರವಾಗಿ ಇಂದು ಉಳಿದಿಲ್ಲ. ಅವು ನಮ್ಮನ್ನು ಬೇರ್ಪಡಿಸುವ ಹಾಗೂ ವಿಭಜಿಸುವ ವಿಚಾರಗಳಾಗುತ್ತಿವೆ. ಭಿನ್ನರಾಗಿರುವವರನ್ನು ದ್ವೇಷಿಸುವುದನ್ನು ಕಲಿಸಲಾಗುತ್ತಿದೆ’ ಎಂದು ಇಂದು ಸುಪ್ರೀಂ ಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ರಂಜನ್ ಗೊಗೊಯ್ ಅವರು ಹೇಳಿರುವ ಮಾತುಗಳು ಇಲ್ಲಿ ಪ್ರಸ್ತುತ. ಆದರೆ, ‘ಸಂವಿಧಾನದಲ್ಲಿ ಹೇಳಲಾಗಿರುವ ಸಮಾನತೆ, ಉದಾರತೆ ಹಾಗೂ ಘನತೆಯ ಮೌಲ್ಯಗಳಡಿ ಒಂದಾದ ಸಮುದಾಯದ ಸೃಷ್ಟಿ ಇಂದಿನ ಅಗತ್ಯ. ಈ ಸಮುದಾಯಕ್ಕೆ ಸೇರ್ಪಡೆಯಾಗುವುದೆಂದರೆ, ನಾವು ಯಾರೆಂಬುದನ್ನಾಗಲೀ, ನಮ್ಮ ವೈಯಕ್ತಿಕ ನಂಬಿಕೆಗಳು ಅಭಿರುಚಿಗಳನ್ನಾಗಲೀ ಬಿಟ್ಟುಕೊಡಬೇಕಿಲ್ಲ. ಬದಲಿಗೆ, ಸಾಂವಿಧಾನಿಕ ನೈತಿಕತೆಯ ಮಾನದಂಡದಲ್ಲಿ ಈ ನಂಬಿಕೆಗಳನ್ನು ನಿರಂತರವಾಗಿ ಮೌಲ್ಯಮಾಪನಕ್ಕೆ ಒಳಪಡಿಸುವುದು ಅಗತ್ಯ’ ಎಂದಿದ್ದಾರೆ ನ್ಯಾ. ಗೊಗೊಯ್.

ಆದರೆ, ‘ಸಾಂವಿಧಾನಿಕ ನೈತಿಕತೆಯು ಸಹಜ ಭಾವನೆಯಲ್ಲ. ಇದನ್ನು ನಾವು ಬೆಳೆಸಿಕೊಳ್ಳುತ್ತಾ ಹೋಗಬೇಕು., ಅದನ್ನಿನ್ನೂ ನಮ್ಮ ಜನ ಕಲಿತುಕೊಳ್ಳಬೇಕಾಗಿದೆ ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಅಪ್ರಜಾಪ್ರಭುತ್ವವಾಗಿರುವ ಭಾರತೀಯ ಮಣ್ಣಿಗೆ ಪ್ರಜಾಪ್ರಭುತ್ವ ಎಂಬುದು ಕೇವಲ ಗೊಬ್ಬರವಷ್ಟೇ’ ಎಂದು ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ 1948ರ ನವೆಂಬರ್ 4ರಂದು ಮಾಡಿದ ಭಾಷಣದಲ್ಲಿ ಹೇಳಿದ್ದರು.

ಪ್ರಜಾಪ್ರಭುತ್ವ ಸಮಾಜವಾಗಿ ಭಾರತೀಯ ಸಮಾಜವನ್ನು ಪರಿವರ್ತಿಸುವುದು ಎಂದರೆ ಇದರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವಸ್ಥಾಪನೆಯೂ ಸೇರುತ್ತದೆ. ಬರೀ ಚುನಾವಣಾ ರಾಜಕಾರಣದ ರಾಜಕೀಯ ಪ್ರಜಾಪ್ರಭುತ್ವದಿಂದ ಹೆಚ್ಚಿನ ಪ್ರಯೋಜನವಿಲ್ಲ. ಸಾಂವಿಧಾನಿಕ ನೈತಿಕತೆಯು ಸಮಾಜದ ಆಳಕ್ಕಿಳಿಯಲು ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆ ಸಾಕಾರಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.