ಮಹಿಳೆಯರನ್ನು ಈಗ ಯಾರೂ ನಿರ್ಲಕ್ಷಿಸುತ್ತಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ! ಈ ವಾಕ್ಯದಲ್ಲಿ ‘ಮೇಲ್ನೋಟಕ್ಕೆ’ ಎಂಬ ಪದವನ್ನು ಒತ್ತುಕೊಟ್ಟು ಓದಿಕೊಳ್ಳಬೇಕು. ಯಾಕೆಂದರೆ, 1909ರ ಫೆಬ್ರುವರಿ 28ರಂದು ನ್ಯೂಯಾರ್ಕ್ನ ಐವತ್ತು ಸಾವಿರಕ್ಕೂ ಮಿಕ್ಕಿ ಮಹಿಳಾ ಕಾರ್ಮಿಕರು ಸೇರಿ, ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಆರಂಭಿಸಿದರು. ಅವರ ಮೇಲೆ ಪೊಲೀಸರು, ಸೇನೆ, ಖಾಸಗಿ ಗೂಂಡಾ ಪಡೆಗಳು ದಾಳಿ ನಡೆಸಿದರೂ ಬಗ್ಗದೆ ಈ ಚಳವಳಿ ನಡೆಯಿತು. ಅದರ ನೆನಪಿಗಾಗಿ ರಷ್ಯಾದ ಹೋರಾಟಗಾರ್ತಿ ಕ್ಲಾರಾ ಜಟ್ಕಿನ್ ಆ ದಿನವನ್ನು ‘ದುಡಿಯುವ ಮಹಿಳಾ ದಿನ’ವನ್ನಾಗಿ ಆಚರಿಸಲು ಕರೆ ನೀಡಿದರು.

ಮೊದಮೊದಲು ಬೇರೆ ಬೇರೆ ದಿನಗಳಂದು ನಡೆದು, ಅಂತಿಮವಾಗಿ 1914ರಿಂದ ಅದು ಮಾರ್ಚ್ 8ರಂದು ನಡೆಯುತ್ತಿದೆ. 1975ರಲ್ಲಿ ವಿಶ್ವಸಂಸ್ಥೆಯ ಮಾನ್ಯತೆಯೂ ದೊರೆತಿದೆ. ಈಗ ಅದು ಸರ್ಕಾರಿ ಆಚರಣೆಯ ಹಂತಕ್ಕೂ, ಕಾರ್ಪೊರೇಟ್ ಕಂಪನಿಗಳಲ್ಲಿ ಹೆಂಗಸರಿಗಾಗಿ ಗಂಡಸರು ಆಚರಿಸುವ ಇವೆಂಟ್ ಆಗಿಯೂ ಮುನ್ನೆಲೆಗೆ ಬಂದಿದೆ. ಸಂಬಳ ಪಡೆವ ಉದ್ಯೋಗಿಗಳಿಗೆ ಹೊಸ ಬಟ್ಟೆಯ ಸರಬರವೆನಿಸಿದರೆ, ಗೃಹಿಣಿಯರ ರಂಗೋಲಿಗಳಲ್ಲಿ ಹೊಸ ಬಗೆಯ ಚಿತ್ರಗಳು ರೂಪುತಳೆದಿವೆ. ಆಹಾ! ಹೆಂಗಸರ ಪರಿಸ್ಥಿತಿ ಎಷ್ಟು ಸುಧಾರಿಸಿದೆಯಲ್ಲವೇ?

ಎಲ್ಲಿ ಹೆಣ್ಣಿಲ್ಲ ಎಂಬ ಸಾರ್ಥಕತೆಯ ಉದ್ಗಾರ ಹೊಮ್ಮಿಸುವಷ್ಟು ನಿರುಮ್ಮಳತೆಯಲ್ಲಿ ನಡೆವ ದಾರಿಯಲಿ, ಬೆಳಗಾಗುವ ಮೊದಲೇ ಗುಡಿಸಿ, ಹೊಲಸು ಬಳಿದುಹೋದ ಪೌರ ಕಾರ್ಮಿಕರ ಧ್ವನಿ ಉಡುಗಿಹೋಗಿದೆ. ಗಾರ್ಮೆಂಟ್ಸ್ನಲ್ಲಿ ದುಡಿಯುವ ಹೆಣ್ಣು ಮಗಳು ಒಂದೇ ರೀತಿಯ ಹೊಲಿಗೆಯ ಏಕತಾನತೆಯಲ್ಲಿ ಕತ್ತು ಬಗ್ಗಿಸಿಕೊಂಡು, ಸಮಯ ಪೋಲಾಗದಿರಲೆಂದು ಮೂತ್ರ ತಡೆಹಿಡಿಯಲು ನೀರೂ ಕುಡಿಯದೆ ದೇಹ ದಂಡಿಸುತ್ತಿರುವುದು ಯಾರಿಗೂ ಕಾಣುವುದಿಲ್ಲ. ಹೀಗೆ ಬದಲಾದ ಹಲವು ವೃತ್ತಿಗಳಲ್ಲಿ, ಮರೆಮಾಚಿದ ತನ್ನ ಚಹರೆಯಲ್ಲಿ ಅಡಗಿರುವ ಹೆಣ್ಣಿನ ಸತ್ಯವಿದು. ನಿಜ, ಹಳ್ಳಿಗಳಲ್ಲಿ ಕಳೆದುಕೊಂಡಿದ್ದ ಡಿಗ್ನಿಟಿ ಆಫ್ ಲೇಬರ್, ಪೇಟೆಯಲ್ಲಿ ಉದ್ಯೋಗವಾಗಿ ಬದಲಾಗಿದೆ. ಕೆಲವು ಕಷ್ಟಗಳು ಕಳೆದಿವೆ. ಹಲವು ಬಂದು ಸುತ್ತಿಕೊಂಡಿವೆ.

ಮಹಿಳೆಯ ಹಕ್ಕುಗಳಿಗಾಗಿ, ಸ್ಥಿತಿ ಸುಧಾರಣೆಗಾಗಿ ಜಗತ್ತಿನ ಹತ್ತು ಹಲವು ದೇಶಗಳಲ್ಲಿ ನಿರಂತರವಾಗಿ ಚಳವಳಿಗಳು ನಡೆದುಕೊಂಡು ಬಂದಿವೆ. ಕೆಲವು ಸವಲತ್ತುಗಳನ್ನು ಕೊಡಿಸಿವೆ. ಇನ್ನು ಹಲವು ಪ್ರಾತಿನಿಧ್ಯ ಗಳನ್ನು ಒತ್ತಾಯಿಸಿ ಪಡೆದಿವೆ. ಬಹುಶಃ ಈಗ ಒಮ್ಮೆ ಹಿಂತಿರುಗಿ ನೋಡಿಕೊಳ್ಳುವ ಸಮಯ ಬಂದಿದೆ. ಯಾಕೆಂದರೆ, ಮಹಿಳೆ ಈಗ ಮತಬ್ಯಾಂಕ್ ಆಗಿ ಪರಿವರ್ತಿತಳಾಗಿದ್ದಾಳೆ. ಮಹಿಳೆಯೂ ಮಾರುಹೋಗಲು ತುದಿಗಾಲಲ್ಲಿ ನಿಂತಿರುವಂತೆ ಕಾಣುತ್ತಿದೆ. ಹೀಗಾಗಿ, ನಮಗೆ ಬೇಕಿರುವುದು ಪ್ರಾತಿನಿಧ್ಯವಲ್ಲ ಎಂಬ ಗಟ್ಟಿಧ್ವನಿ ಹೊರಡಬೇಕಾಗಿದೆ.

ಯಾವುದೇ ಕ್ಷೇತ್ರದಲ್ಲಿ ಹೆಣ್ಣು ಪಡೆದುಕೊಳ್ಳುವ ಅವಕಾಶವು ಕೇವಲ ಅದೃಷ್ಟವೋ ಯಾರದೋ ಅಭಯವೋ ಅಥವಾ ಇನ್ನಾವುದೋ ಒತ್ತಾಯವೋ ಆಗಬೇಕಿಲ್ಲ. ಅದು ಅತ್ಯಂತ ಸಹಜವಾದುದೂ, ಸಾಧ್ಯವಾದುದೂ, ಇಚ್ಛೆಯಿಂದ ಹೊಂದಿರುವುದೂ ಆಗಬೇಕಿದೆ. ಮತ್ತದನ್ನು ಸಮಾಜವೂ ಹಾಗೆಯೇ ಗ್ರಹಿಸಬೇಕಾಗಿದೆ. ಆದರೆ ಯಾವ ನಡೆಯೂ ಸಹಜವಾಗಿ ಆಗುತ್ತಿಲ್ಲ. ನಮ್ಮದು ಏನಿದ್ದರೂ ಕೆಲವರು ಮಾತ್ರ ದೇವರುಗಳಾಗಿ, ಉಳಿದವರನ್ನು ಪೌಳಿ ಸುತ್ತುವ ಭಕ್ತರನ್ನಾಗಿಸುವ ವ್ಯವಸ್ಥೆ.

ಪೌಳಿ ಸುತ್ತುವವರು ಎಂದೂ ತಾವೇಕೆ ಸುತ್ತುತ್ತಿದ್ದೇವೆ ಎಂದು ಯೋಚಿಸದ ವ್ಯವಸ್ಥೆ. ಕೊಡುವ ತೀರ್ಥ– ಪ್ರಸಾದಕ್ಕೆ ಹಸಾದ ಎನ್ನುವ, ಸುತ್ತುವ ಬಿಸಿಲಿಗೆ ಚಪ್ಪರ ಹಾಕಿದ್ದಕ್ಕೇ ಪುನೀತರಾಗುವವರ ನಡುವೆ ಚಳವಳಿಗೂ ಸವಾಲುಗಳಿವೆ. ಯೋಚಿಸುವ ಮಿದುಳು ಬಲಿಯದೆ ಬರೀ ಸೌಲಭ್ಯ ಪಡೆಯುವುದಕ್ಕಾಗಿ ಚಳವಳಿಗೆ ಬಂದರೆ, ಹುಟ್ಟುವ ಹೊಸ ದೇವರುಗಳ ಹಿಂದೆ ಅವರು ಹೊರಟುಹೋಗುತ್ತಾರೆ. ಹಾಗಿದ್ದಲ್ಲಿ ಏನು ಮಾಡಬೇಕು? ದೇವರ ಸ್ವರೂಪವೇ ಬದಲಾಗಬೇಕು.

ಬೀದಿಯ ಮರದ ಕೆಳಗೆ ಬಟಾಬಯಲಲ್ಲಿ ಕುಳಿತ ಕರಿಕಲ್ಲ ದೇವತೆಗೆ ಪೂಜಾರಿ ಬೇಕಿಲ್ಲ. ಅವರವರ ಮನಬಂದಂತೆ ಪೂಜಿಸುತ್ತಾರೆ. ಪ್ರತಿಯೊಂದೂ ಅನನ್ಯ. ಯಾವುದೂ ಅನ್ಯವಲ್ಲ. ಪ್ರತಿ ಪೂಜೆಯೂ ಮಾನ್ಯ. ಪ್ರತಿಯೊಬ್ಬರೂ ತಮಗೆ ತಾವೇ ಜವಾಬ್ದಾರರು. ಇಲ್ಲೊಂದು ಕ್ರಿಯಾಶೀಲತೆ ಇದೆ. ಏಕತಾನತೆಯ ಭಂಗ ಇದೆ. ಸ್ವಂತಿಕೆ ಇದೆ. ನಮ್ಮ ಸಾಮಾಜಿಕ ಮಾದರಿಯೂ ಹೀಗೆ ತಮ್ಮೊಳಗನ್ನು ತಾವು ಅನ್ವೇಷಿಸುವಂತೆ, ಕಟ್ಟಿಕೊಳ್ಳುವಂತೆ, ‘ಸೃಷ್ಟಿಸಿಕೊಟ್ಟ ದೇವರು’ಗಳ ನಿಜ ತಿಳಿಯುವಂತೆ ಇರಬೇಕಾಗಿದೆ.

ವಂದನಾ ಶಿವ ಹೇಳುತ್ತಾರೆ- ಹೆಣ್ಣಿನ ಕೈಯಲ್ಲಿ ಬೀಜ ಸಂರಕ್ಷಣೆಯ ಜ್ಞಾನ ಮತ್ತು ಹೊಣೆಗಾರಿಕೆ ಇರುವಷ್ಟು ಕಾಲವೂ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಹೆಣ್ಣಿನ ಕೈಯೊಳಗೆ ಅಡುಗೆಯ ಜ್ಞಾನ ಇರುವತನಕವೂ ಜಂಕ್ (= ಕಸದಬುಟ್ಟಿಗೆ ಎಸೆಯಲು ಯೋಗ್ಯವಾದದ್ದು) ಫುಡ್ ಇರಲೇ ಇಲ್ಲ. ಹೆಣ್ಣಿನ ರೀತಿಯೆಂದರೆ ಅದು ಬೀಜ ಮತ್ತು ಆಹಾರದ ಜೊತೆಗೇ ಜೊತೆಗಾರನನ್ನೂ ಕಾಪಾಡುವಂತಹದ್ದು. ಆದರೆ, ಬಂಡವಾಳಶಾಹಿ ಗಂಡುನೋಟ ತನ್ನನ್ನು ನಾಶ ಮಾಡಿಕೊಂಡು ತನ್ನವರನ್ನು ಅನಾಥರನ್ನಾಗಿ ಸುವಂತಹದ್ದು. ಇಂದು ಜಂಕ್ಫುಡ್ ಮಾರುವ ಮಾಲ್ನಲ್ಲಿ ಗೊಂಬೆಯಂತೆ ಅಲಂಕರಿಸಿಕೊಂಡ ಹುಡುಗಿ ನಿರ್ಭಾವುಕವಾಗಿ ಬಿಲ್ಲಿಂಗ್ ಮಾಡುತ್ತಿದ್ದಾಳೆ. ಈ ಜಾಗದಿಂದ ಅವಳೂ ಜಂಕ್ಫುಡ್ ಕಂಪನಿಯ ಮಾಲೀಕಳಾದ ತಕ್ಷಣ ಅದು ಸಾಧನೆಯೆನಿಸುವುದಿಲ್ಲ. ಬದಲಿಗೆ ಬರಡು ಗಂಡುನೋಟದ ಜಾಗದಲ್ಲಿ ಅವಳ ಪ್ರಾತಿನಿಧ್ಯ ಸ್ಥಾಪನೆಯಾಗುತ್ತದೆ. ಅಲ್ಲಿಗೆ ಜಗದ ನಾಶದ ಕೊನೆಯ ಮೆಟ್ಟಿಲು ಏರಿದಂತಾಗುತ್ತದೆ ಅಷ್ಟೆ.

ಕೃಷಿಯ ಲಾಭ– ನಷ್ಟಗಳನ್ನು ಅಳೆಯುವ ಮಾನದಂಡ ಬೇರೆಯಾಗಬೇಕು ಎನ್ನುವ ವಂದನಾ, ಬೆಳೆಯೊಂದು ಬಂದಾಗ ಅದು ಯಾರನ್ನೆಲ್ಲಾ- ಮಣ್ಣು, ಮಣ್ಣಿನೊಳಗಣ ಸೂಕ್ಷ್ಮಜೀವಿ, ಕೂಲಿಕಾರರು, ಬೆಳೆದವರು, ತಿಂದವರು, ಇವರೆಲ್ಲರ ಹೆಲ್ತ್ ಜೊತೆಗಿಟ್ಟು ವೆಲ್ತ್ ಅನ್ನು ಅಳೆಯಬೇಕು ಎನ್ನುತ್ತಾರೆ. ಸಾಮಾಜಿಕ ಬದುಕೆಂದರೆ ಎಷ್ಟು ಸಂಪಾದಿ ಸಿದೆ, ಕಳೆದೆ ಎಂಬುದಲ್ಲ. ಎಷ್ಟು ಜನರ ಕ್ರಿಯಾಶೀಲತೆಯನ್ನು ಪೊರೆದೆ, ಎಷ್ಟು ಜೀವಿಗಳಿಗೆ ಜೀವನ ನೀಡಿದೆ, ಆ ಮೂಲಕ ಸಾಮಾಜಿಕ ಆರೋಗ್ಯವನ್ನು ಎಷ್ಟು ಕಾಪಿಟ್ಟೆ, ಎಷ್ಟು ಮುಂದಿನವರಿಗೆ ಈ ಅರಿವಿನ ಗಂಟನ್ನು ದಾಟಿಸಿದೆ ಎಂಬ ಕಣ್ನೋಟವಿದು. ವಿಷವಿಲ್ಲದ ಭೂಮಿ, ವಿಷವಿಲ್ಲದ ರಾಜಕೀಯ, ವಿಷವಿಲ್ಲದ ಸಮಾಜ, ವಿಷವಿಲ್ಲದ ಮನಃಸ್ಥಿತಿಗಳಿಗೆ ನೀರೆರೆಯುವ ಕಣ್ನೋಟ. ಈ ಕಣ್ನೋಟವು ಲೋಕಮೀಮಾಂಸೆಯಾಗಿ ಜಾರಿಗೆ ಬರಬೇಕೆಂಬುದು ಸ್ತ್ರೀವಾದದ ಮುಂದಿನ ನಡೆಯಾಗಲೇಬೇಕಿದೆ. ಯಾಕೆಂದರೆ, ಈಗಾಗಲೇ ಬರಡು ಆರ್ಥಿಕತೆಯ ಮಾಯಾಜಾಲಕ್ಕೆ ಹೆಣ್ಣು ಮರುಳಾಗಿ, ಆ ಮೋಸದ ಸಿದ್ಧಾಂತದ ಪರ ಗಂಟಲು ಹರಿದುಕೊಳ್ಳುತ್ತಿರುವ ಪಡೆ ಜಗತ್ತಿನಾದ್ಯಂತ ಹುಟ್ಟಿಕೊಳ್ಳುತ್ತಿದೆ.

ಈ ಎಲ್ಲ ಸವಾಲುಗಳ ನಡುವೆ ಮತ್ತೆ ಮಾರ್ಚ್ 8 ಬಂದುಹೋಯಿತು. ಕರ್ನಾಟಕದಲ್ಲಿ ಮಹಿಳೆಯರ ಪರ ಹೋರಾಡಿದ, ಹೋರಾಡುವ ಹತ್ತಾರು ಸಂಘಟನೆಗಳು, ವ್ಯಕ್ತಿಗಳು ಇದ್ದಾರೆ. ಇವರೊಂದಿಗೆ ಸಾವಿರಾರು ಕೈಗಳು ಸೇರಿ, ಒಂಬತ್ತು ವರ್ಷಗಳ ಹಿಂದೆ ನಿರ್ಭಯಾ ಪ್ರಕರಣದ ಕುದಿಯಲ್ಲಿ ಹುಟ್ಟಿದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಬೇರೆ ಬೇರೆ ಊರುಗಳಲ್ಲಿ ಅಲ್ಲಲ್ಲಿನ ಮಹಿಳೆ ಯರ ಒಗ್ಗೂಡುವಿಕೆಯಲ್ಲಿ ಮಹಿಳಾ ದಿನಾಚರಣೆ ನಡೆಸುತ್ತಿದೆ.

ಈ ಸಲದ ಊರು ಮಂಡ್ಯಕ್ಕೆ ಅತಿಥಿಗಳಾಗಿ ಆಂಧ್ರ ಪ್ರದೇಶದ ಓಲ್ಗಾ ಹಾಗೂ ಗುಜರಾತಿನ ಶಬ್ನಂ ಹಶ್ಮಿ ಬಂದಿದ್ದರು. ಹೆಣ್ಣಿನ ಅಂತರಂಗದ ಮತ್ತು ಬಹಿರಂಗದ ಕಣ್ಣುಗಳು ತೆರೆಯುವಂತೆ ಬರೆಯುವವರು ಓಲ್ಗಾ. ಪರಿ ಸ್ಥಿತಿಯ ವ್ಯಂಗ್ಯವೆಂದರೆ, ಎಂಬತ್ತರ ದಶಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬೀದಿ ನಾಟಕ ಆಡಿಸುತ್ತಿರುವಾಗಲೇ ಕೊಲೆಯಾದ ಸಫ್ದರ್ ಹಶ್ಮಿಯ ಆ ಸಾವಿನ ಜೊತೆಗೇ ತಾನೂ ಹೋರಾಟಗಾರ್ತಿಯಾದ ಅವರ ತಂಗಿ ಶಬ್ನಂ ಕೂಡ ಆಳುವವರಿಂದ ಕಿರುಕುಳಕ್ಕೆ ಒಳಗಾಗುತ್ತಿರುವವರೇ. ಅದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಇಂದೂ ಇದೆ. ನಿರ್ಭಯಾಳಂಥ ನೂರಾರು ಹೆಣ್ಣುಮಕ್ಕಳ ಪ್ರಶ್ನೆ ಹಾಗೇ ಇದೆ. ಹೌದು, ಭೂಮಿತಾಯಿಯ ಮಡಿಲಲ್ಲಿರುವ ಮನುಜರೆಲ್ಲರಲ್ಲೂ ಭೂಮಿತತ್ವದ ತಾಯಿನೋಟ ಬರುವ ತನಕವೂ ಇದಕ್ಕೆ ಕೊನೆಯಿಲ್ಲ.

ಡಾ. ಸಬಿತಾ ಬನ್ನಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.