ಎರಡು ತಿಂಗಳ ಹಿಂದೆ, ಮಂಗನಕಾಯಿಲೆಯು ಉಲ್ಬಣಿಸ ತೊಡಗಿದ ಕಾಲಕ್ಕೆ ಮಲೆನಾಡಿನಲ್ಲಿ ಕ್ಷೇತ್ರಾಧ್ಯಯನದಲ್ಲಿದ್ದಾಗ, ಬಾಲಕನೊಬ್ಬ ಮುಗ್ಧವಾಗಿ ಕೇಳಿದ್ದ, ‘ಊರಿನ ನಾಯಿ, ಬೆಕ್ಕು, ಆಕಳಂಥವು ರೋಗ ತರದಿರುವಾಗ, ಕಾಡಿನ ಮಂಗದಿಂದೇಕೆ ಕಾಯಿಲೆ ಬರುವುದು?’
ಸೂಕ್ಷ್ಮಾಣುಜೀವಿಶಾಸ್ತ್ರದ ಸಾರವೆಂಬಂತೆ, ‘ಪ್ರಕೃತಿಯ ಜೀವಿಗಳೆಲ್ಲದರಲ್ಲೂ ಲಕ್ಷಾಂತರ ಸೂಕ್ಷ್ಮಾಣುಜೀವಿಗಳು ಸದ್ದಿಲ್ಲದೆ ಬದುಕುತ್ತಿವೆ. ಯಾವಾಗಲಾದರೊಮ್ಮೆ ಅವುಗಳ ವಂಶವಾಹಿಗಳಲ್ಲಿ ರೂಪಾಂತರವಾಗಿ, ಈ ಬಗೆಯ ರೋಗ ಹುಟ್ಟುವ ಸಾಧ್ಯತೆಯಿರುತ್ತದೆ. ಈ ಪ್ರಾಣಿಜನ್ಯ ವೈರಾಣು ರೋಗದಿಂದ ತಪ್ಪಿಸಿಕೊಳ್ಳಲು, ಮಂಗ ಹಾಗೂ ಅವುಗಳ ಉಣ್ಣಿಗಳಿಂದ ದೂರವಿರುವುದೊಂದೇ ಮಾರ್ಗ’ ಎಂದು ಉತ್ತರಿಸಬೇಕಾಯಿತು.

ಇದೀಗ ಜಗವನ್ನೇ ಆಕ್ರಮಿಸುತ್ತಿರುವ ಕೋವಿಡ್-19 ರೋಗದ ವೈರಾಣುವಿನಿಂದ ಬಚಾವಾಗಲೂ ಮಾಡಬೇಕಾದ್ದು ಇದನ್ನೇ. ಸ್ವಚ್ಛತೆ ಕಾಪಾಡಿಕೊಂಡು, ಲೋಕವ್ಯವಹಾರದಿಂದ ಬಚ್ಚಿಟ್ಟುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿಯೇ ಇರುವುದು. ವೈರಸ್ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು, ನಾವು ಹಾಕಿಕೊಳ್ಳಲೇಬೇಕಾದ ‘ಲಕ್ಷ್ಮಣರೇಖೆ’ ಅದು.

ಈ ವೈರಾಣುವಿಗೆ ಲಸಿಕೆ ಹಾಗೂ ಮದ್ದು ಹುಡುಕಲು, ಬಹುಆಯಾಮಗಳ ಪ್ರಯತ್ನಗಳು ಈಗ ಯುದ್ಧದೋಪಾದಿಯಲ್ಲಿ ಸಾಗಿವೆ. ವೈರಸ್ಸಿನ ಹೊರಕವಚದ ಪ್ರೋಟೀನುಗಳ ಅಣುರಚನೆಯನ್ನು ಅರ್ಥೈಸಿಕೊಂಡು, ಅವುಗಳನ್ನು ದುರ್ಬಲಗೊಳಿಸಬಲ್ಲ ಮಾರ್ಗಗಳ ಶೋಧವಾಗುತ್ತಿದೆ. ಮಾನವನ ಜೀವಕೋಶದ ಹೊರಮೈಯಲ್ಲಿರುವ ‘ಎ.ಸಿ.ಈ-2’ ಎಂಬ ಕಿಣ್ವದೊಂದಿಗೆ ಬೆಸೆದು ಈ ವೈರಸ್ ದೇಹದೊಳಗೆ ಪ್ರವೇಶಿಸುವುದರಿಂದ, ಆ ಕಿಣ್ವದ ಸ್ವರೂಪವನ್ನೇ ಬದಲಾಯಿಸಿ, ಪ್ರವೇಶ ತಡೆಗಟ್ಟುವ ಉಪಾಯ ಹುಡುಕಲಾಗುತ್ತಿದೆ.

ಈ ವೈರಸ್ಸಿನ ಶುದ್ಧಕೋಶಗಳನ್ನು ಪ್ರತ್ಯೇಕಿಸಲು ಯಶಸ್ವಿಯಾಗಿರುವ ಪುಣೆಯ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯ ತಜ್ಞರು, ಇದೀಗ ಅವುಗಳ ವಂಶವಾಹಿಗಳನ್ನೆಲ್ಲ ಗುರುತಿಸಿ ತಳಿನಕ್ಷೆಯನ್ನೂ ರೂಪಿಸಿದ್ದಾರೆ. ಇದರ ಆಧಾರದಲ್ಲಿ, ಈಗಾಗಲೇ ಔಷಧಿಯಾಗಿ ಬಳಕೆಯಾಗುತ್ತಿರುವ ಕೆಲವು ದ್ರವ್ಯಗಳನ್ನು ಮದ್ದಾಗಿ ಬಳಸುವ ಪ್ರಯತ್ನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐ.ಸಿ.ಎಂ.ಆರ್) ಮಾಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಆರಂಭಿಸಿರುವ ದ್ರವ್ಯಮಿಶ್ರಣವೊಂದರ ಪ್ರಾಯೋಗಿಕ ಔಷಧ ಪರೀಕ್ಷೆಗೆ ಭಾರತವೂ ಕೈಜೋಡಿಸುತ್ತಿದೆ. ಇವೆಲ್ಲವುಗಳ ಫಲಿತಾಂಶ ಮಾತ್ರ ಭವಿಷ್ಯಕ್ಕೆ ಬಿಟ್ಟದ್ದು. ಸ್ವಚ್ಛತೆ, ಸಾಮಾಜಿಕ ಅಂತರ, ಪೌಷ್ಟಿಕ ಆಹಾರ, ರೋಗನಿರೋಧಶಕ್ತಿ ಹೆಚ್ಚಿಸುವ ಆಯುರ್ವೇದದ ಮನೆಮದ್ದು ಇತ್ಯಾದಿ ದಾರಿಗಳು ಮಾತ್ರ ಸದ್ಯಕ್ಕಿರುವುದು.

ವಿಚಿತ್ರವೊಂದನ್ನು ನೋಡಿ. ಮಲೇರಿಯಾ, ಪ್ಲೇಗ್, ಕುಷ್ಠ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳೆಲ್ಲ ತಹಬಂದಿಗೆ ಬಂದವು ಎಂದುಕೊಳ್ಳುವಷ್ಟರಲ್ಲಿ ಹೊಸ ಕಾಯಿಲೆಗಳು ಹುಟ್ಟುತ್ತಿವೆ. ಇತ್ತೀಚಿನ ದಶಕಗಳಲ್ಲಿ ಹೊಸ ವೈರಸ್‌ನಿಂದ ಉದಯಿಸಿದ ರೋಗಗಳಾದರೂ ಎಷ್ಟೊಂದು? ಡೆಂಗಿ, ಮಿದುಳುಜ್ವರ, ಇಲಿಮೂಲದ ಚಿಕೂನ್‌ಗುನ್ಯಾ, ಎಚ್1ಎನ್1, ಹಕ್ಕಿಜ್ವರ, ಕಾಡುಬೆಕ್ಕು ಅಥವಾ ಬಾವಲಿ ಮೂಲದ್ದೆನ್ನಲಾಗುವ ಸಾರ್ಸ್, ಒಂಟೆಯಿಂದ ಹಬ್ಬಿದ ಮೆರ್ಸ್, ಎಬೊಲಾ, ಇದೀಗ ದಾಳಿಯಿಟ್ಟಿರುವ ಕೋವಿಡ್- 19. ಅಬ್ಬಾ! ಈ ಬಗೆಯ ಸುಮಾರು 70 ಪ್ರತಿಶತ ಹೊಸ ಕಾಯಿಲೆಗಳಿಗೆಲ್ಲ ವೈರಾಣುಗಳೇ ಕಾರಣವೆಂದೂ ಮತ್ತು ಅವುಗಳಲ್ಲಿ ಮೂರನೇ ಎರಡರಷ್ಟು ಪಾಲಿಗೆ ವನ್ಯಪ್ರಾಣಿಗಳೇ ಮೂಲವೆಂದೂ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಈಗ ಹುಟ್ಟುವ ಪ್ರಶ್ನೆ, ಹೊಸ ವೈರಾಣುರೋಗಗಳು ಹುಟ್ಟುತ್ತಿರುವುದಾದರೂ ಏಕೆ? ಅವೇಕೆ ವನ್ಯಪ್ರಾಣಿಗಳಿಂದಲೇ ಬರುತ್ತಿವೆ? ಇದಕ್ಕೆ ಉತ್ತರ ಹುಡುಕುವ ಹಾದಿ ಸಂಕೀರ್ಣವಾದದ್ದು.

ಹಾಗೆ ನೋಡಿದರೆ, ವೈರಸ್, ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ಗುಂಪಿನ ಅಸಂಖ್ಯ ಸೂಕ್ಷ್ಮಾಣುಜೀವಿಗಳು ಪ್ರತಿಜೀವಿಯಲ್ಲೂ ಸದ್ದಿಲ್ಲದೆ ಜೀವಿಸುತ್ತಿವೆ. ಈ ಸಹಜೀವನವು ಕೋಟ್ಯಂತರ ವರ್ಷಗಳ ‘ಸಮಾನಾಂತರ ವಿಕಾಸ’ದ ಫಲ. ಹಲವು ಕಾರಣಗಳಿಗಾಗಿ ಆಗೀಗ ಕೆಲವು ಸೂಕ್ಷ್ಮಾಣುಜೀವಿಗಳು ಒಮ್ಮೆಲೇ ರೂಪಾಂತರವಾಗಿ, ರೋಗಾಣುಗಳಾಗಿ ಆಕ್ರಮಿಸುವ ಸಾಧ್ಯತೆ ಇರುತ್ತದೆ. ಜೀವಗೋಳದ ಇತಿಹಾಸದಲ್ಲಿ ಸೂಕ್ಷ್ಮಾಣುಗಳು ಸಿಡಿದೇಳುವ ಮತ್ತು ಆ ನಂತರ ತಣ್ಣಗಾಗುವ ಹಾವು- ಏಣಿಯಾಟ ಅದೆಷ್ಟು ಸಲ ಜರುಗಿದೆಯೋ! ದೀರ್ಘ ಜೀವವಿಕಾಸಯಾತ್ರೆಯ ಸ್ಮರಣೆಯೇ ಇರದ ಆಧುನಿಕ ಮಾನವ ಮಾತ್ರ, ಸೂಕ್ಷ್ಮಾಣುಲೋಕವನ್ನು ಸೀಮಿತ ದೃಷ್ಟಿಕೋನದಿಂದಲೇ ನೋಡುತ್ತಿದ್ದಾನೆ. ಈಗ ದಾಳಿಯಿಟ್ಟಿರುವ ವೈರಸ್, ಈ ‘ಆಧುನಿಕ ಅಜ್ಞಾನ’ವನ್ನು ಸ್ಫೋಟಿಸುತ್ತಿರುವಂತಿದೆ!

ಪ್ರಾಣಿಜನ್ಯ ವೈರಾಣುಗಳು ಸಾಗಿಬಂದ ಹಾದಿಯನ್ನು ಶೋಧಿಸುತ್ತಿರುವ ವಿಜ್ಞಾನಿಗಳೆಲ್ಲರೂ ಅಂತಿಮವಾಗಿ ತಲುಪುತ್ತಿರುವುದು, ನಿಸರ್ಗ ನಿರ್ವಹಣೆಯಲ್ಲಿನ ಮಾನವನ ವೈಫಲ್ಯಗಳೆಡೆಗೆ! ಹಳಿತಪ್ಪಿದ ನೈಸರ್ಗಿಕ ಜೀವನಚಕ್ರದಿಂದಾಗಿಯೇ ವಿವಿಧ ಪಕ್ಷಿಗಳು, ಕೋಳಿ, ಇಲಿ, ಹಂದಿ, ಬಾವಲಿ, ಮಂಗ ಇತ್ಯಾದಿ ಮೂಲಗಳಿಂದ ಈಗ ವೈರಸ್ ರೋಗಗಳು ಹುಟ್ಟುತ್ತಿರುವುದು! ಬಾವಲಿ ತಿಂದ ಹಾವನ್ನು ಸೇವಿಸಿದ್ದರಿಂದಲೇ ಕೋವಿಡ್-19 ಬಂದಿರಬಹುದೆಂಬ ಶಂಕೆ ಮೂಡಿದೆಯಲ್ಲವೇ?

ಕಾಡುಪ್ರಾಣಿಗಳಲ್ಲಿ ಅಂತರ್ಗತವಾಗಿರುವ ನಿಸರ್ಗನಿರ್ಮಿತ ಜೈವಿಕಬೇಲಿ ಜಿಗಿದು ಮನುಷ್ಯನ ಜೀವಕೋಶ ಸೇರಲು ಈ ವೈರಾಣುಗಳಿಗೆ ಹೇಗೆ ಸಾಧ್ಯವಾಗುತ್ತಿದೆ? ವಂಶವಾಹಿಗಳ ಹಠಾತ್ ರೂಪಾಂತರವೇ (ಮ್ಯುಟೇಶನ್) ಇದಕ್ಕೆ ಕಾರಣ. ಉಷ್ಣವಲಯದ ನದಿಕಣಿವೆ ಕಾಡುಗಳು ನಾಶವಾಗಿ, ವನ್ಯಜೀವಿಗಳು ಒಮ್ಮೆಲೇ ಮಾನವನ ಸಾಮೀಪ್ಯಕ್ಕೆ ಬಂದದ್ದರಿಂದ ಆಗುವ ವೈರಾಣು ಸಂಸರ್ಗವಿದು ಎಂದು ವಿಜ್ಞಾನಿಗಳು ಕಂಡುಕೊಳ್ಳುತ್ತಿದ್ದಾರೆ.

ಸಹಸ್ರಮಾನಗಳಿಂದ ವನ್ಯಪ್ರಾಣಿಗಳಲ್ಲಿ ಸುಪ್ತವಾಗಿ ಜೀವನದ ಲಯ ಕಂಡುಕೊಂಡಿದ್ದ ವೈರಸ್ಸುಗಳ ಜೀವನಚಕ್ರವು ಒಮ್ಮೆಲೇ ತುಂಡಾಗಿ, ಮಾನವನ ಸಂಪರ್ಕಕ್ಕೆ ಬರುತ್ತಿವೆ. ಅಂಥ ಸಹಸ್ರಾರು ವೈರಸ್ಸುಗಳಲ್ಲಿ ಕೆಲವು ಮ್ಯುಟೇಶನ್ನಿಗೆ ಒಳಗಾದಾಗ ಹೊಸ ಕಾಯಿಲೆ ಹುಟ್ಟುವುದು. ಕೋಟ್ಯಂತರ ವರ್ಷಗಳಲ್ಲಿ ವಿಕಾಸವಾಗಿದ್ದ ಭೂಪರಿಸರವನ್ನು ನಾಲ್ಕಾರು ದಶಕಗಳಲ್ಲಿ ನಾಶ ಮಾಡಿದ ಪರಿಣಾಮವಿದು. ಜೊತೆಗೆ, ವನ್ಯಪ್ರಾಣಿಗಳನ್ನೆಲ್ಲ ಸಂಸ್ಕರಿಸಿ ಭಕ್ಷಿಸುವ ಆಹಾರಸಂಸ್ಕೃತಿಯೂ ಬೆಳೆಯುತ್ತಿದೆ. ಇಳೆಯಲ್ಲಿ ಅಂತರ್ಗತವಾಗಿರುವ ಸಮತೋಲನ ಕಾಯ್ದುಕೊಂಡರೆ ಮಾತ್ರ, ಸೂಕ್ಷ್ಮಾಣುಜೀವಿಗಳೆಲ್ಲ ಪೃಕೃತಿಲೀನವಾಗಿ ತಟಸ್ಥವಾಗಿರಬಲ್ಲವು. ಆಗಮಾತ್ರ ಧರಣಿಯು ವೈರಾಣು ರೋಗಗಳನ್ನು ಮಣಿಸೀತು.

ವಿಷಾದದ ಸಂಗತಿಯೆಂದರೆ, ದೇಶದ ಸಾರ್ವಜನಿಕ ಆರೋಗ್ಯನೀತಿಯು ರೋಗಕ್ಕೆ ಕಾರಣವಾಗುವ ಪರಿಸರದ ಅಂಶಗಳನ್ನೇ ನಿರ್ವಹಿಸದಿರುವುದು. ವೈದ್ಯಕೀಯ ಸಂಶೋಧನಾ ಕ್ಷೇತ್ರವಾದರೂ ಆಸ್ಪತ್ರೆ ಹಾಗೂ ಔಷಧಿಗಳಾಚೆ ಕಣ್ಣುಹಾಯಿಸಿ, ಆರೋಗ್ಯಕ್ಕೆ ಬೆಸೆದಿರುವ ಪರಿಸರದ ಕೊಂಡಿಗಳನ್ನು ಆಡಳಿತನೀತಿಗೆ ಮನಗಾಣಿಸಬೇಕಿತ್ತಲ್ಲವೇ? ಮಂಗನಕಾಯಿಲೆ ಕಾಣಿಸಿಕೊಂಡು ಅರ್ಧ ಶತಮಾನ ಕಳೆದರೂ ಲಸಿಕೆಯೊಂದನ್ನು ಹೊರತುಪಡಿಸಿ ಅದರ ಸ್ವರೂಪದ ಕುರಿತಾಗಿ ಸಂಶೋಧನೆಯೇ ಆಗಿಲ್ಲ!

ಮಲೆನಾಡಿನ ಮಳೆಕಾಡು ಒಮ್ಮೆಲೇ ನಾಶವಾಗಿ, ಕಾಡುಹಂದಿ ಅಥವಾ ಮಂಗನಿಂದ ಹೊರಹೊಮ್ಮಿರಬಹುದಾದ ಇದರ ಜಾಡನ್ನು ರೋಗನಿದಾನಶಾಸ್ತ್ರ ಹಾಗೂ ಪರಿಸರಶಾಸ್ತ್ರೀಯ ಅಧ್ಯಯನಗಳಿಂದ ಕಂಡುಕೊಳ್ಳಬೇಕಿತ್ತು. ಅಂಥ ಅಂತರ್ಶಿಸ್ತೀಯ ಸಂಶೋಧನೆ ಇತರ ಪ್ರಾಣಿಜನ್ಯ ರೋಗಗಳ ಗುಟ್ಟು ಬಿಡಿಸಲೂ ಸಹಕಾರಿಯಾಗುತ್ತಿತ್ತು. ಕೊರೊನಾ ಸಂಕಷ್ಟದಿಂದಾದರೂ ಇದರ ಅರಿವಾದರೆ, ಭವಿಷ್ಯದಲ್ಲಿ ‘ಅಭಿವೃದ್ಧಿ ವಿಧಾನ’ಗಳಿಗೆ ಮಿತಿಹೇಳುವ ‘ಲಕ್ಷ್ಮಣರೇಖೆ’ ಗುರುತಿಸಲು ಸಾಧ್ಯವೇನೊ.

ನಿಸರ್ಗನಾಶದಲ್ಲಿ ಅಭಿವೃದ್ಧಿಯ ಭ್ರಮೆ ಕಾಣುವ ಸಾಮೂಹಿಕ ಮನೋರೋಗವೊಂದು ನಮ್ಮನ್ನು ಬಂಧಿಸಿದಂತಿದೆ! ಇದರಿಂದ ಮುಕ್ತರಾಗಿ, ಧರಣಿಯ ಧಾರಣಾಶಕ್ತಿ ಉಳಿಸುವ ವಿವೇಕವು ಈ ಸಂಕ್ರಮಣ ಕಾಲದಲ್ಲಾದರೂ ಮೂಡಬೇಕಿದೆ. ಕೊರೊನಾ ಕುರಿತು ಜಯಂತ ಕಾಯ್ಕಿಣಿಯವರು ಮನತಟ್ಟುವಂತೆ ಕವಿತೆಯೊಂದರಲ್ಲಿ ಭಿನ್ನವಿಸಿರುವಂತೆ ‘ನಾವೇ ನಮಗೊಂದು ಅವಕಾಶ ನೀಡಬೇಕಿದೆ!’

ಕೇಶವ ಎಚ್. ಕೊರ್ಸೆ, ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.