ಎಲ್ಲಾ ‘ತಪ್ಪು’ಗಳಿಗೂ ಮಹಿಳೆಯನ್ನು ದೂಷಿಸುವುದು ನಮ್ಮ ಸಂಸ್ಕೃತಿಯಲ್ಲಿ ರಕ್ತಗತ. ‘ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎಂಬ ಗಾದೆಯನ್ನೇ ಮಾಡಿದ್ದಾ ರಲ್ಲ?! ಬೇರೆ ಬೇರೆ ಸಂದರ್ಭಗಳಲ್ಲಿ ನಿಂದನೆ, ದೂಷಣೆ, ನಿರ್ಲಕ್ಷ್ಯಗಳಂತಹ ಭಾವನಾತ್ಮಕ ದೌರ್ಜನ್ಯಗಳ ಮೂಲಕ ಹೆಣ್ಣನ್ನು ಪಕ್ಕಕ್ಕೆ ತಳ್ಳಿ ಆಕೆಯ ನೈತಿಕ ಸ್ಥೈರ್ಯ ಕಸಿಯುವ ‘ರಾಜಕೀಯ’ವನ್ನು ನಮ್ಮ ಸಮಾಜ ಮತ್ತು ಸಂಸ್ಕೃತಿ ಎಷ್ಟು ಕಾಲದಿಂದ ನಡೆಸಿಕೊಂಡು ಬಂದಿಲ್ಲ?

ಹೆಣ್ಣನ್ನು ಮೂಲೆಗೆ ತಳ್ಳುವಂತಹ ನಿಂದನಾತ್ಮಕ ಭಾಷೆ, ಮಾತುಗಳಿಂದ ಕೂಡಿದ ಭಾವನಾತ್ಮಕ ದೌರ್ಜನ್ಯಗಳು ಮನೆಮನೆಗಳ ಕಥೆಗಳಲ್ಲಿವೆ. ಈ ‘ಭಾಷಾ ದೌರ್ಜನ್ಯ’ ಸಮಾಜದಲ್ಲೂ ಪ್ರತಿಫಲಿಸುತ್ತಲೇ ಇರುತ್ತದೆ. ಆದರೆ ಪುರುಷ ಮತ್ತು ಮಹಿಳೆಗೆ ಸಮಾನತೆ ನೀಡುವಂತಹ ಸಂವಿಧಾನದ ಆದರ್ಶವನ್ನು ಜಾರಿ
ಗೊಳಿಸಬೇಕಾದ ಹೊಣೆಗಾರಿಕೆ ಇರುವ ನಮ್ಮ ರಾಜಕೀಯ ನಾಯಕರೂ ಇಂತಹ ಭಾಷಾ ದೌರ್ಜನ್ಯದ ರಾಜಕೀಯ ಮಾಡುತ್ತಿರುವುದು ಅಸಹನೀಯ.

ರಾಜಕೀಯ ಕುತಂತ್ರಗಾರಿಕೆಯೋ ಅಥವಾ ಹೆಣ್ಣನ್ನು ಅಧಿಕಾರ ಸ್ಥಾನಗಳಲ್ಲಿ ನೋಡಲು ಬಯಸದ ಗಂಡಾಳಿಕೆಯ ದರ್ಪವೋ ಕೀಳಾದ ಭಾಷಾ ಬಳಕೆಯ ಮೂಲಕ ಆಕೆಯನ್ನು ನಿಯಂತ್ರಿಸುವ ಯತ್ನಗಳು ನಡೆಯುತ್ತಲೇ ಇರುತ್ತವೆ. ತೀರಾ ಇತ್ತೀಚಿನ ಉದಾಹರಣೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ ಅವರ ವಿರುದ್ಧ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರು ಆಡಿದ ಮಾತುಗಳು. ಲಕ್ಷ್ಮಿ ಅವರಿಗೆ ‘ರಾತ್ರಿ ರಾಜಕೀಯ’ ಚೆನ್ನಾಗಿ ಗೊತ್ತು ಎಂಬ ಈ ರಾಜಕಾರಣಿಯ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ರಾಷ್ಟ್ರಮಟ್ಟದ ನಾಯಕಿಯರೂ ಇಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾದಂತಹ ಕೆಟ್ಟ ಸಂಸ್ಕೃತಿ ಇಲ್ಲಿದೆ. ‘ಪ್ರಜಾಸತ್ತೆಯ ಮಂದಿರ’ ಎಂದು ಬಣ್ಣಿಸಲಾಗುವ ಸಂಸತ್ತಿನ ಒಳಗೂ ಹೆಣ್ಣಿನ ಕುರಿತಾದ ಕೀಳು ಭಾಷಾ ಬಳಕೆ ನಿಲ್ಲಿಸಲಾಗಿಲ್ಲ ಎಂದರೆ ನಮ್ಮ ‘ಸಂಸ್ಕೃತಿ’ ಎಷ್ಟು ಆಳವಾಗಿದೆಯಲ್ಲವೇ?

2015ರ ಆಗಸ್ಟ್ನಲ್ಲಿ ಬಿಜೆಪಿ ಸಂಸತ್ ಸದಸ್ಯ ರಮೇಶ್ ಬಿಧುರಿ ಅವರ ವಿರುದ್ಧ ನಾಲ್ವರು ಮಹಿಳಾ ಎಂ.ಪಿಗಳು ಲೋಕಸಭೆಯ ಆಗಿನ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದು. ಏಕಾಂಗಿ ಮಹಿಳೆಯರಿಗೆ ಸೌಲಭ್ಯ
ಗಳನ್ನು ಕಲ್ಪಿಸಬೇಕಾದ ಅಗತ್ಯದ ಬಗ್ಗೆ ಬಜೆಟ್ ಭಾಷಣದ ಚರ್ಚೆಯ ವೇಳೆ ಬಿಹಾರದ ಕಾಂಗ್ರೆಸ್ ಎಂ.ಪಿಯಾಗಿದ್ದ ರಂಜೀತ್ ರಂಜನ್ ಮಾತನಾಡಿದ್ದರು. ಆಗ, ‘ಮೊದಲು ನಿಮ್ಮ ಪತಿಗೆ ವಿಚ್ಛೇದನ ನೀಡಿ. ಆಗ ನಿಮಗೆ ಇಂತಹ ಸೌಲಭ್ಯಗಳನ್ನು ನೀಡಬಹುದು’ ಎಂದು ನನ್ನೆಡೆ ತಿರುಗಿ ರಮೇಶ್ ಹೇಳಿದ್ದ ಮಾತನ್ನು ನಿರ್ಲಕ್ಷಿಸಿದ್ದೆ. ಆದರೆ ಕೆಟ್ಟ ಮಾತುಗಳಿಗೆ ತಡೆಯೇ ಬೀಳುತ್ತಿರಲಿಲ್ಲವಾದ್ದರಿಂದ ಸ್ಪೀಕರ್ಗೆ ಅಧಿಕೃತವಾಗಿ ದೂರು ನೀಡಬೇಕಾಯಿತು’ ಎಂದು ರಂಜೀತ್ ಹೇಳಿಕೊಂಡಿದ್ದರು. ಆದರೆ ಈ ಆರೋಪವನ್ನು ನಿರಾಕರಿಸಿದ್ದ ರಮೇಶ್, ಸ್ಪೀಕರ್ ಅವರು ತಮ್ಮ ಜೊತೆ ಈ ದೂರಿನ ವಿಚಾರವನ್ನೇನೂ ಪ್ರಸ್ತಾಪಿಸಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದೂ ಆಗಿತ್ತು.

ಇಂತಹ ಅನೇಕ ಪ್ರಸಂಗಗಳ ನಂತರವೂ ಮಹಿಳಾ ರಾಜಕಾರಣಿಗಳ ಕುರಿತಾಗಿ ವೈಯಕ್ತಿಕ ನಿಂದನೆಗಳು, ಟೀಕಾ ಪ್ರಹಾರಗಳು ಮಾತ್ರ ನಿಲ್ಲುತ್ತಿಲ್ಲ ಎಂಬುದಷ್ಟೇ ಕಡೆಗುಳಿದಿರುವ ವಾಸ್ತವಿಕ ಸತ್ಯವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ಸಮರ, ವಾಗ್ಯುದ್ಧ, ಭಿನ್ನಾ
ಭಿಪ್ರಾಯಗಳು ಪ್ರಜಾಪ್ರಭುತ್ವದ ಚೈತನ್ಯಕ್ಕೆ ಪ್ರತೀಕ
ವಾಗಿರಬೇಕು. ಆದರೆ, ವೈಯಕ್ತಿಕ ನಿಂದನೆಗಳು, ಕೀಳು ಭಾಷಾ ಪ್ರಯೋಗಗಳ ಹಿಂದೆ ಪ್ರಜಾಪ್ರಭುತ್ವದ ಭಿನ್ನ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಹುನ್ನಾರಗಳಿರುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ದರ್ಪದ ರಾಜಕಾರಣವು ಪ್ರಜಾಪ್ರಭುತ್ವದ ಆಶಯವನ್ನೇ ಮೂಲೆಗುಂಪಾಗಿಸುತ್ತದೆ. ಹೀಗಾಗಿಯೇ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪ್ರಾತಿನಿಧ್ಯ ಲೋಕಸಭೆಯಲ್ಲಿ ಇನ್ನೂ ಶೇ 14ರ ಆಸುಪಾಸಿನಲ್ಲೇ ಇದೆ. ರಾಜ್ಯ ವಿಧಾನಸಭೆಯಲ್ಲಿ ಇದು ಕೇವಲ ಶೇ 3. ಹಿಂಸೆ, ಕಿರುಕುಳ, ಚಾರಿತ್ರ್ಯಹರಣದ ಮಾತುಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶಗಳೇ ಭಾರತದಲ್ಲಿ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾಗುತ್ತಿವೆ ಎಂಬುದನ್ನು 2014ರಲ್ಲಿ ನಡೆಸಲಾದ ‘ಯುಎನ್ ವಿಮೆನ್’ ಅಧ್ಯಯನ ವರದಿ ಹೇಳಿತ್ತು.

ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರ ಕುರಿತಾಗಿ ಚಾರಿತ್ರ್ಯಹರಣ ಮಾಡುವಂತಹ ಅಸಭ್ಯ ಹಾಗೂ ನಿಂದನಾತ್ಮಕ ಮಾತುಗಳನ್ನು ಅಪರಾಧವಾಗಿ ಗುರುತಿಸಿ ಅದರ ವಿರುದ್ಧ ಕಾನೂನು ಮಾಡಬಹುದಾದ ಅಧಿಕಾರ ಹೊಂದಿರುವ ನಮ್ಮ ಜನಪ್ರತಿನಿಧಿಗಳಿಂದ ನಾವು ಏನನ್ನಾದರೂ ನಿರೀಕ್ಷಿಸಬಹುದೇ? ಯಥಾಪ್ರಕಾರ, ರಾಜ್ಯದ ಆರೋಗ್ಯ ಸಚಿವರೂ ನಮ್ಮ ಗಂಡಾಳಿಕೆಯ ಸಂಸ್ಕೃತಿಗೆ ಅನುಗುಣವಾಗಿ ಮಹಿಳೆಯರನ್ನೇ ಮೊನ್ನೆ ದೂರಿದ್ದಾರೆ. ವಿವಾಹ ಬಯಸದ, ವಿವಾಹ ಮಾಡಿ ಕೊಂಡರೂ ಮಕ್ಕಳನ್ನು ಹೆರಲು ಬಯಸದ ಆಧುನಿಕ ಭಾರತೀಯ ಮಹಿಳೆಯ ಬಗ್ಗೆ ನಮ್ಮ ಸಚಿವರು ವ್ಯಕ್ತಪಡಿಸಿರುವ ಬೇಸರದ ಹಿಂದಿರುವ ಮೌಲ್ಯ, ಸಿದ್ಧಾಂತಗಳು ಏನೆಂಬುದಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲ. ಮಹಿಳೆಯರಲ್ಲಿ ಈ ಪಲ್ಲಟಗಳಿಗೆ ‘ಪಾಶ್ಚಿಮಾತ್ಯ ಸಂಸ್ಕೃತಿ’ಯ ಪ್ರಭಾವವೇ ಕಾರಣ ಎಂದು ತಾವು ಪ್ರತಿನಿಧಿಸುವ ಪಕ್ಷದ ತಥಾಕಥಿತ ಚಿಂತನೆಯನ್ನೇ ನಿರೂಪಿಸಿದ್ದಾರೆ. ಮಕ್ಕಳನ್ನು ಹೆರುವುದು, ಬಿಡುವುದು ಮಹಿಳೆಯ ವೈಯಕ್ತಿಕ ಆಯ್ಕೆ. ಅದನ್ನು ರಾಜಕೀಯ ಸಿದ್ಧಾಂತದ ರೀತಿ ಹೇರಲು ಬಯಸುವುದು ಎಷ್ಟು ಸರಿ?

ಸಚಿವರ ಮಾತುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ್ದರಿಂದ, ತಮ್ಮ ಹೇಳಿಕೆಯು ಸಮೀಕ್ಷೆಯೊಂದನ್ನು ಆಧರಿಸಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಆ ಸಮೀಕ್ಷೆಯು ಹುಡುಗ, ಹುಡುಗಿಯರಿಬ್ಬರಿಗೂ ಅನ್ವಯಿಸುವಂತಹದ್ದಾಗಿತ್ತು ಎಂಬುದನ್ನು ಸ್ಪಷ್ಟನೆಯಲ್ಲಿ ಹೇಳಿರುವ ಸಚಿವರು, ತಮ್ಮ ಭಾಷಣದಲ್ಲಿ ‘ಆಧುನಿಕ ಮಹಿಳೆ’ ಎಂದೇಕೆ ಪ್ರತ್ಯೇಕಗೊಳಿಸಿದರು? ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನಮ್ಮ ಸಾಂಪ್ರದಾಯಿಕ ಕುಟುಂಬ ಹಾಗೂ ಅದರ ಮೌಲ್ಯ ವ್ಯವಸ್ಥೆಯಲ್ಲಿ ನಮ್ಮ ಯುವಜನರು ಪರಿಹಾರ ಕಂಡುಕೊಳ್ಳಬಹುದು ಎಂದಷ್ಟೇ ನಾನು ಹೇಳಲು ಬಯಸಿದ್ದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕುಟುಂಬ ವ್ಯವಸ್ಥೆಯೊಳಗೆ ಅನುಭವಿಸುವ ಹಿಂಸೆ, ಎರಡನೇ ದರ್ಜೆ ಸ್ಥಾನಮಾನಗಳೂ ಮಹಿಳೆಯರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ ಗಳಾಗಿವೆ ಎಂಬುದೂ ಸಚಿವರ ಗಮನದಲ್ಲಿರಬೇಕಿತ್ತು, ಎಲ್ಲವನ್ನೂ ಸಾಮಾನ್ಯೀಕರಿಸಿ, ಕುಟುಂಬ ಎಂದಾಕ್ಷಣ ಮಹಿಳೆಯನ್ನೇ ಮುಖ್ಯವಾಗಿಸಿ ಮಾತನಾಡುವುದು ಎಷ್ಟು ಸರಿ? ಕುಟುಂಬ ವ್ಯವಸ್ಥೆಯಲ್ಲಿ ಗಂಡು- ಹೆಣ್ಣು ಸಮಾನ ಸಹಜೀವಿಗಳು ಎಂಬ ಆದರ್ಶವನ್ನು ನಮ್ಮ ಸರ್ಕಾರದ ನೀತಿಗಳು ಬಿತ್ತುವಂತಾಗಬೇಕು.

ಬದಲಾಗುತ್ತಿರುವ ಸಮಾಜದಲ್ಲಿ ಗಂಡಾಳಿಕೆಯ ಮೌಲ್ಯಗಳಿಗೆ ಜೋತುಬೀಳದಂತೆ ನಮ್ಮ ಗಂಡುಮಕ್ಕಳಲ್ಲಿ ಸಂವೇದನಾಶೀಲತೆ ಮೂಡಿಸಲು ನಮ್ಮ ಆಡಳಿತ ನೀತಿಗಳು ಎಷ್ಟರಮಟ್ಟಿಗೆ ಶ್ರಮಿಸುತ್ತಿವೆ? ಮದುವೆಯಾದ ನಂತರ ಹೆಣ್ಣುಮಕ್ಕಳೇ ಏಕೆ ಕೆಲಸ ಬಿಡ ಬೇಕು? ಭಾರತದಲ್ಲಿರುವ ಇಂತಹ ಮನಃಸ್ಥಿತಿಯಿಂದಾಗಿಯೇ ಔದ್ಯೋಗಿಕ ರಂಗದಲ್ಲಿ ಭಾರತೀಯ ಮಹಿಳೆಯರ ಪ್ರಮಾಣ ತೀವ್ರ ಇಳಿಮುಖವಾಗುತ್ತಿದೆ ಎಂಬ ಬಗ್ಗೆ ವಿಶ್ವ ಬ್ಯಾಂಕ್ ವರದಿಗಳು ಪದೇಪದೇ ಎಚ್ಚರಿಸುತ್ತಲೇ ಇವೆ. ಔದ್ಯೋಗಿಕ ರಂಗದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಇಲ್ಲದೆ, ಆರ್ಥಿಕ ದೈತ್ಯಶಕ್ತಿಯಾಗುವ ಮಹತ್ವಾಕಾಂಕ್ಷೆ ಈಡೇರುವುದು ಅಸಾಧ್ಯ ಎಂಬುದನ್ನು ನಮ್ಮ ಸರ್ಕಾರ ಅರಿಯಬೇಕು. ದುಡಿಯುವ ಸ್ಥಳಗಳಲ್ಲಿ ಶಿಶುಪಾಲನಾ ಕೇಂದ್ರಗಳಿರಲಿ, ಸ್ವಚ್ಛ ಶೌಚಾಲಯಗಳೂ ಇಲ್ಲದ ಸ್ಥಿತಿಯ ಬಗ್ಗೆ ನಮ್ಮ ಸರ್ಕಾರಗಳು ಎಷ್ಟರಮಟ್ಟಿಗೆ ಸ್ಪಂದಿಸುತ್ತಿವೆ?

ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕೋವಿಡ್- 19 ಕಾಲದಲ್ಲಿ ಹೆಚ್ಚಾದುದನ್ನು ನಮ್ಮ ಆರೋಗ್ಯ ಸಚಿವರು ನೆನಪಿಸಿಕೊಳ್ಳಲಿ. ಕಾನೂನು ನಿಷೇಧ ಇದ್ದರೂ ವರದಕ್ಷಿಣೆಯ ಹಾವಳಿ ತಪ್ಪಿಲ್ಲ ಏಕೆ? ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಹೆಣ್ಣುಮಕ್ಕಳು ನಂತರ ಉನ್ನತ ಹುದ್ದೆಗಳಿರಲಿ, ಸಾಮಾನ್ಯ ಹುದ್ದೆಗಳಲ್ಲೂ ಇಲ್ಲದೆ ಕಾಣೆಯಾಗಿ ಹೋಗಲು ಕೌಟುಂಬಿಕ ವ್ಯವಸ್ಥೆ ಎಷ್ಟು ಕಾರಣ ಎಂಬುದು ನಮ್ಮ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕಾಗಿರುವ ತುರ್ತಿನ ವಿಚಾರ.

ಎಲ್ಲ ವಿಚಾರಗಳಿಗೂ ಹೆಣ್ಣನ್ನೇ ದೂಷಿಸಿ, ನಿಂದಿಸಿ, ಆಕೆಯನ್ನು ನಿಯಂತ್ರಿಸುವ ನೀತಿಯನ್ನು ನಮ್ಮ ಪ್ರಭುತ್ವ ಅನುಸರಿಸದಿರಲಿ. ನಮ್ಮದು ಪ್ರಜಾಪ್ರಭುತ್ವ ಎಂಬುದು ನಮ್ಮನ್ನಾಳುವವರಿಗೆ ನೆನಪಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.