ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಳುವ ಪಕ್ಷಗಳ ಮುಖವಾಣಿ ಆಗದಿರಲಿ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಸಾಂಸ್ಕೃತಿಕ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಭಾಗವಹಿಸಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುವ ನಡೆಯಾಗಿದೆ. ಸ್ವಾಯತ್ತ ಸಂಸ್ಥೆಗಳನ್ನು ಪ್ರತಿನಿಧಿಸುವವರು ಪಕ್ಷವೊಂದರ ಮುಖವಾಣಿಗಳಂತೆ ಗುರುತಿಸಿ
ಕೊಳ್ಳುವುದು ಸರಿಯಲ್ಲ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ, ‘ಈ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿದ್ದು, ಕೈ ಮತ್ತು ಬಾಯಿ ಶುದ್ಧವಾಗಿರಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಿವಿಮಾತು ಹೇಳಿರುವುದಾಗಿ ವರದಿಯಾಗಿದೆ. ನಿಗಮ–ಮಂಡಳಿ, ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರವಾಗಿ ಸಕ್ರಿಯ ಪಾತ್ರ ವಹಿಸಬೇಕಾದ ಅಗತ್ಯದ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಮಾತುಗಳಿಗೆ ಸ್ಪಂದಿಸುವವರಂತೆ, ‘ಕಾಂಗ್ರೆಸ್‌ ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂತಹವರ ಮೇಲಿದ್ದು, ನಾವು ಕೊಳೆಗೇರಿಗೂ ಕಾಂಗ್ರೆಸ್ ಕಚೇರಿಗೂ ಹೋಗಲು ತಯಾರಿದ್ದೇವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್‌. ಮುಕುಂದರಾಜ್‌ ಅವರು ಸಭೆಯಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಕೊಳೆಗೇರಿಗೆ ಹೋಗುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ, ಅಕಾಡೆಮಿ ಅಧ್ಯಕ್ಷರಾಗಿ ರಾಜಕೀಯ ಪಕ್ಷವೊಂದರ ಕಚೇರಿಗೆ ಹೋಗುವುದು ಅವರು ಪ್ರತಿನಿಧಿಸುವ ಸ್ಥಾನದ ವಿಶ್ವಾಸಾರ್ಹತೆಗೆ, ಘನತೆಗೆ ತಕ್ಕುದಾದ ನಡವಳಿಕೆಯಲ್ಲ.  ಅಕಾಡೆಮಿಗಳ ಅಧ್ಯಕ್ಷರು ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಾಕು. ಆಡಳಿತ ಪಕ್ಷವನ್ನು ಸರಿದಾರಿಗೆ ತರುವ ಕೆಲಸ ಆ ಪಕ್ಷಕ್ಕೆ ಸಂಬಂಧಿಸಿದವರದೇ ವಿನಾ ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳದ್ದಲ್ಲ.


ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವ ಉತ್ಸಾಹವಿರುವ ಅಕಾಡೆಮಿ, ಪ್ರಾಧಿಕಾರಗಳ ಪದಾಧಿಕಾರಿಗಳು ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟು ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗುವುದಕ್ಕೆ ಯಾರ ಅಡ್ಡಿಯೂ ಇಲ್ಲ. ರಾಜಕೀಯ ಪಕ್ಷದ ಕಚೇರಿಯಲ್ಲಿ ಹಿಂದೆಂದೂ ಇಂಥ ಸಭೆ ನಡೆದಿರಲಿಲ್ಲ. ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರು ಆಡಳಿತ ಪಕ್ಷದ ಕಚೇರಿಯಲ್ಲಿ ಮಕ್ಕಳಂತೆ ರಾಜಕಾರಣಿಗಳಿಂದ ಪಾಠ ಹೇಳಿಸಿಕೊಳ್ಳುವಂಥ ಸ್ಥಿತಿಯೂ ಕರ್ನಾಟಕಕ್ಕೆ ಹೊಸತು. ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆಸುವ ಅಗತ್ಯ ಸರ್ಕಾರಕ್ಕಿದ್ದರೆ, ಆ ಸಭೆಯನ್ನು ವಿಧಾನಸೌಧದಲ್ಲಿ ನಡೆಸಬಹುದಿತ್ತು. ಅಕಾಡೆಮಿಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರ ಅನುಪಸ್ಥಿತಿಯಲ್ಲಿ ನಡೆದಿರುವ ಸಭೆಯು ರಾಜಕೀಯ ಬಣ್ಣಗಳನ್ನು ಪಡೆದುಕೊಂಡಿರುವುದು ಸಹಜವಾಗಿದೆ.

ಅಕಾಡೆಮಿ ಹಾಗೂ ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳೆನ್ನುವ ಅರಿವನ್ನು ಮರೆತು, ಸರ್ಕಾರವನ್ನು ಓಲೈಸುವ ನಡವಳಿಕೆಯನ್ನು ಒಪ್ಪುವುದು ಸಾಧ್ಯವಿಲ್ಲ. ಸಾಹಿತಿಯೊಬ್ಬ ರಾಜಕೀಯ ಒಲವು ನಿಲುವು ಹೊಂದಿರುವುದು ತಪ್ಪೇನೂ ಅಲ್ಲ. ಆದರೆ, ಸಾರ್ವಜನಿಕ ಸಂಸ್ಥೆಗಳನ್ನು ಪ್ರತಿನಿಧಿಸುವ ಅವಕಾಶ ದೊರೆತ ಸಂದರ್ಭದಲ್ಲಿ ಲೇಖಕ ತನ್ನ ವೈಯಕ್ತಿಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಅಕಾಡೆಮಿಗಳನ್ನು ಪ್ರತಿನಿಧಿಸುವವರು ಬದ್ಧರಾಗಿ ಇರಬೇಕಾದುದು ಜನರಿಗೇ ಹೊರತು ಜನಪ್ರತಿನಿಧಿಗಳಿಗಲ್ಲ. ಸ್ವಾಯತ್ತ ಸ್ಥಾನಮಾನ ಹೊಂದಿರುವ ಸಂಸ್ಥೆಗಳ ಘನತೆಯನ್ನು ಕುಗ್ಗಿಸುವ ಕೆಲಸವನ್ನು ಸರ್ಕಾರವೂ ಮಾಡಬಾರದು, ಆ ಸಂಸ್ಥೆಗಳನ್ನು ಪ್ರತಿನಿಧಿಸುವವರೂ ಮಾಡಬಾರದು. ಸಂಘಪರಿವಾರದ ಚಿಂತನೆ ಇರುವವರನ್ನು ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎನ್ನುವ ದೂರುಗಳನ್ನು ಆಧರಿಸಿ, ಸರ್ಕಾರ ಕೆಲವು ನೇಮಕಗಳನ್ನು ರದ್ದುಪಡಿಸಿ ಆ ಸ್ಥಾನಗಳಿಗೆ ಬೇರೆಯವರನ್ನು ನೇಮಿಸಿದ್ದೂ ಸರಿಯಾದ ನಡೆಯಲ್ಲ.

ಸಂಘ ಪರಿವಾರದ ಚಿಂತನೆಗಳನ್ನು ಹೊಂದಿರುವವರನ್ನು ಸಾಂಸ್ಕೃತಿಕ ಸಂಸ್ಥೆಗಳಿಂದ ದೂರ ಇಡಬೇಕೆನ್ನುವುದಾದರೆ, ಈಗಿನ ಅಕಾಡೆಮಿ–ಪ್ರಾಧಿಕಾರಗಳ ಪದಾಧಿಕಾರಿಗಳನ್ನು ಆಡಳಿತ ಪಕ್ಷಕ್ಕೆ ಸೇರಿದವರು ಎನ್ನಬೇಕಾಗುತ್ತದೆ. ಈ ಬಗೆಯ ರಾಜಕೀಯ ನಿಲುವುಗಳನ್ನು ಸಾಂಸ್ಕೃತಿಕ ವಲಯದಲ್ಲಿ ಹೇರುವ ಪ್ರಯತ್ನಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಲ್ಲದು. ಇನ್ನು ಮುಂದಾದರೂ ಸಾಂಸ್ಕೃತಿಕ ವಲಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸರ್ಕಾರ ನಿಲ್ಲಿಸಲಿ. ಹಾಗೆಯೇ, ಅಕಾಡೆಮಿ–ಪ್ರಾಧಿಕಾರಗಳ ಪದಾಧಿಕಾರಿಗಳು ಆಡಳಿತ ಪಕ್ಷದ ಓಲೈಕೆಯಿಂದ ದೂರವಿರಲಿ. ಪದಾಧಿಕಾರಿಗಳ ನೇಮಕ ನನೆಗುದಿಗೆ ಬಿದ್ದು, ಸುಮಾರು ಎರಡು ವರ್ಷಗಳಿಂದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆ ಚಟುವಟಿಕೆಗಳಿಗೆ ಮರುಜೀವ ನೀಡುವ ಮೂಲಕ ಸಾಂಸ್ಕೃತಿಕ ನಿರ್ವಾತವನ್ನು ಬಗೆಹರಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾದವರು ಆಡಳಿತ ಪಕ್ಷದ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT