ಹಠಾತ್ ಮೇಘಸ್ಫೋಟ ಮತ್ತು ಮಹಾಧಾರೆಯಿಂದ ಉತ್ತರ ಭಾರತದ ಏಳು ರಾಜ್ಯಗಳು ತತ್ತರಿಸುತ್ತಿವೆ. ಮನುಷ್ಯನಿರ್ಮಿತ ಕಟ್ಟಡ, ಕಾಲುವೆ, ರಸ್ತೆ, ಸೇತುವೆ, ವಿದ್ಯುತ್ ಗೋಪುರ ಎಲ್ಲವನ್ನೂ ಬುಡಮೇಲಾಗಿಸಿ ಸಾಗುವ ನಿಸರ್ಗದ ಈ ಫೂತ್ಕಾರದಿಂದ, ಕಾರು, ಬಸ್ಸು, ಲಾರಿಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಬೀಭತ್ಸ ಎನ್ನಿಸುವಂತಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ಎಲ್ಲೆಲ್ಲೂ ಪ್ರಳಯದ ತಾಂಡವ ಕಾಣುತ್ತಿದೆ

40 ಮಂದಿ ಜೀವ ಕಳೆದುಕೊಂಡಿದ್ದಾರೆ. ಕುಲ್ಲು-ಮನಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಹುದೊಡ್ಡ ಭಾಗ ಕುಸಿದು 500ಕ್ಕೂ ಹೆಚ್ಚು ಪ್ರವಾಸಿಗರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಲೇಹ್-ಲಡಾಕ್, ಶಿಮ್ಲಾ-ಕಾಲ್ಕಾ ಹೆದ್ದಾರಿ ಭಗ್ನಗೊಂಡಿದೆ. ಪಂಜಾಬಿನಲ್ಲಿ ಸಟ್ಲೇಜ್, ಘಾಘರಾ ನದಿಗಳು ಉಕ್ಕಿ ಹರಿಯುತ್ತಿವೆ. ರಾಜಸ್ಥಾನದ 11 ಜಿಲ್ಲೆಗಳಲ್ಲಿ ಅತಿವೃಷ್ಟಿ ಆಗುತ್ತಿದೆ. ಉತ್ತರಾಖಂಡದಲ್ಲಿ ಬದರಿನಾಥ್ ಹೆದ್ದಾರಿ ಜಖಂಗೊಂಡಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹರಿಯಾಣದ ಪಂಚಕುಲಾ, ಅಂಬಾಲಾ, ಕುರುಕ್ಷೇತ್ರಗಳಲ್ಲೆಲ್ಲ ‘ಕುರುಕ್ಷೇತ್ರ’ದ ವಿಧ್ವಂಸಕತೆಯ ಚಿತ್ರಣಗಳೇ ಕಾಣುತ್ತಿವೆ. ಹಿಮಾಚಲ ಪ್ರದೇಶವೊಂದರಲ್ಲೇ ಒಂದೇ ದಿನದ ಮೇಘಸ್ಫೋಟದಿಂದ ₹ 4,000 ಕೋಟಿಗಳಷ್ಟು ನಷ್ಟವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

ಮುಂಗಾರಿನ ಈ ದಿನಗಳಲ್ಲಿ ಮಳೆಮಾರುತದ ಕೆಲಮಟ್ಟಿನ ತಾಡನ ನಿರೀಕ್ಷಿತವೇ ಆಗಿದ್ದರೂ ಈ ಬಾರಿ ವಾಯವ್ಯ ದಿಕ್ಕಿನಿಂದ ಇನ್ನೊಂದು ಮೇಘಸಮೂಹ ಅನಿರೀಕ್ಷಿತವಾಗಿ ಇದಕ್ಕೆ ಡಿಕ್ಕಿ ಹೊಡೆದಿದ್ದೇ ಇಷ್ಟೊಂದು ವಿರಾಟ್ ಸ್ವರೂಪ ಪಡೆಯಲು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಮೆಡಿಟರೇನಿಯನ್ ಸಮುದ್ರದ ಮೇಲಿಂದ ಬೀಸಿಬರಬೇಕಿದ್ದ ಜಲಮಾರುತ ಈ ಬಾರಿ ಈಗಲೇ ಧಾವಿಸಿ ಬಂದು, ಮಾನ್ಸೂನ್ ಮಳೆಮಾರುತದೊಂದಿಗೆ ಕೈಜೋಡಿಸಿ ಇಮ್ಮಡಿ ಹೊಡೆತ ಕೊಟ್ಟಿದೆ. ದಕ್ಷಿಣ ಭಾರತದ ಕೆಲವೆಡೆ ಮಳೆ ಇನ್ನೂ ಬೇಕಾಗಿದೆಯಾದರೂ ಈಗಿನ ಈ ಜೋಡಿ ತಾಡನದಿಂದಾಗಿ ದೇಶದ ಒಟ್ಟೂ ಮಳೆಯ ವಾರ್ಷಿಕ ಸರಾಸರಿಯನ್ನು ಮೀರಿ ವಾಯವ್ಯದಲ್ಲಿ ವರ್ಷಾಘಾತ ಉಂಟಾಗಿದೆ.

ಹೀಗಾದೀತೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತಾದರೂ ಅದನ್ನು ಪ್ರತಿಬಂಧಿಸುವ ಯಾವ ವಿದ್ಯೆಯೂ ನಮಗೆ ಗೊತ್ತಿಲ್ಲ. ಸಂಕಟದಲ್ಲಿ ಇರುವವರನ್ನು ಪಾರು ಮಾಡಲು ಹೆಲಿಕಾಪ್ಟರ್‌ಗಳನ್ನು ಕಳಿಸಬೇಕೆಂದರೂ ವಾತಾವರಣ ತಿಳಿಯಾಗಬೇಕಿದೆ. ಇಂದಿನ ಯುಗದ ವಿಪರ್ಯಾಸ ಏನೆಂದರೆ, ನಮ್ಮ ಅನುಕೂಲಕ್ಕೆಂದು ನಾವು ಗಿಡಮರಗಳನ್ನು ಬೀಳಿಸುತ್ತ, ಗುಡ್ಡ ಬೆಟ್ಟಗಳನ್ನು ಎಲ್ಲೆಂದರಲ್ಲಿ ನೆಲಸಮ ಮಾಡುತ್ತ ಸಾಗುವುದಕ್ಕೆ ನಾವು ‘ಅಭಿವೃದ್ಧಿ’ ಎನ್ನುತ್ತೇವೆ. ಪ್ರಕೃತಿ ತಾನಾಗಿ ಅದೇ ಕೆಲಸಗಳನ್ನು ಮಾಡುತ್ತಿದ್ದರೆ ನಾವು ಅದಕ್ಕೆ ‘ನೈಸರ್ಗಿಕ ಪ್ರಕೋಪ’ ಎನ್ನುತ್ತೇವೆ.

ಈಗೀಗಂತೂ ಚಂಡಮಾರುತ, ಕಾಳ್ಗಿಚ್ಚು, ಹಿಮಕುಸಿತ, ಅತಿವೃಷ್ಟಿ, ದೂಳುಮಾರುತ, ಅತಿಬರಗಾಲ ಎಲ್ಲವೂ ಪದೇಪದೇ ಸಂಭವಿಸತೊಡಗಿವೆ, ಮೊದಲಿಗಿಂತ ತೀವ್ರವಾಗುತ್ತಿವೆ. ಇದಕ್ಕೆಲ್ಲ ಇಡೀ ಭೂಮಿಯನ್ನು ಆವರಿಸುತ್ತಿರುವ ಬಿಸಿಪ್ರಳಯವೇ ಕಾರಣವೆಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದು, ಈಗೀಗಂತೂ ಅದು ನಿಸ್ಸಂಶಯವಾಗಿ ಸಾಬೀತಾಗುತ್ತಿದೆ. ತಾಪಮಾನ ಏರಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ಜಾಗತಿಕ ಯತ್ನ ಬೇಕಾಗಿದೆಯಾದರೂ ಬಿಸಿಪ್ರಳಯದ ಪರಿಣಾಮಗಳನ್ನು ಎದುರಿಸಲು ಬೇಕಾದ ಕ್ಷಮತೆ, ಆರ್ಥಿಕ ಬಂಡವಾಳ ಮತ್ತು ನೆಲಮಟ್ಟದ ಪೂರ್ವಸಿದ್ಧತೆಗಳನ್ನು ಆಯಾ ರಾಷ್ಟ್ರಗಳೇ ರೂಪಿಸಿಕೊಳ್ಳಬೇಕಿದೆ. ಇಲ್ಲವಾದರೆ ಅಭಿವೃದ್ಧಿಯ ಹೆಸರಿನಲ್ಲಿ ನಾವು ತೊಡಗಿಸುವ ಬಂಡವಾಳವನ್ನೆಲ್ಲ ಉದ್ರಿಕ್ತ ಹವಾಮಾನವೇ ಕೊಚ್ಚಿಕೊಂಡೊಯ್ಯಲಿದೆ. ಪರಿಹಾರದ ವೆಚ್ಚ, ಮರುನಿರ್ಮಾಣದ ವೆಚ್ಚ ಎಲ್ಲವುಗಳ ಕರಾಳ ಭಾರ ನಾಳಿನ ತಲೆಮಾರನ್ನೂ ತಟ್ಟಲಿದೆ.

ನಮ್ಮ ಈಗಿನ ಅಭಿವೃದ್ಧಿಯ ಸಿದ್ಧಸೂತ್ರಗಳನ್ನು ಇಂದಿನ ಹವಾಗುಣ ಬದಲಾವಣೆಯ ಪ್ರಖರಸತ್ಯದ ಬೆಳಕಿನಲ್ಲಿ ಮತ್ತೆ ಪರಿಶೀಲಿಸಬೇಕಾಗಿದೆ. ಗುಡ್ಡದ ಇಳಿಜಾರು ಹಾಗೂ ನದಿತೀರಗಳಲ್ಲಿ ಅಭಿವೃದ್ಧಿಯ ನೀಲನಕ್ಷೆಯನ್ನು ಬದಲಿಸಬೇಕಿದೆ. ಎತ್ತರದ ಪ್ರದೇಶಗಳಲ್ಲಿ ಅಣೆಕಟ್ಟು-ಕಾಲುವೆ, ಸುರಂಗ-ಸೇತುವೆ, ಹೆದ್ದಾರಿಗಳ ವಿಸ್ತರಣೆ, ವಿದ್ಯುತ್ ಗೋಪುರಗಳ ನಿರ್ಮಾಣದ ಸಿವಿಲ್ ಎಂಜಿನಿಯರಿಂಗ್ ಸೂತ್ರಗಳು ಬದಲಾಗಬೇಕಿದೆ. ಪ್ರವಾಸೋದ್ಯಮದ ಒತ್ತಡದಿಂದಾಗಿ ಶೀಘ್ರ ಬದಲಾಗುತ್ತಿರುವ ಪಟ್ಟಣಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ರೂಪಿಸಲಾದ ನಿಯಮಗಳನ್ನು ಮರುಪರಿಶೀಲಿಸಬೇಕಿದೆ. ವರ್ಷವರ್ಷಕ್ಕೂ ಹೆಚ್ಚುತ್ತಿರುವ ನಿಸರ್ಗ ಪ್ರಕೋಪಗಳನ್ನು ಎದುರಿಸುವುದು ಹೇಗೆ ಎಂಬುದರ ಮೂಲಪಾಠಗಳನ್ನು ದೇಶದ ಪ್ರತಿ ಪಂಚಾಯಿತಿ ಮಟ್ಟದಲ್ಲೂ ನಾಗರಿಕರಿಗೆ ಮನನ ಮಾಡಿಸಬೇಕಿದೆ.

ಎಲ್ಲಕ್ಕಿಂತ ಮುಖ್ಯವೆಂದರೆ, ನಿಸರ್ಗವನ್ನು ಎಲ್ಲಿ ಮಣಿಸಬೇಕು, ಎಲ್ಲಿ ಅದಕ್ಕೆ ನಾವೇ ಮಣಿಯಬೇಕು ಎಂಬುದನ್ನು ತುರ್ತಾಗಿ ನಿರ್ಣಯಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ವಿಶೇಷವಾಗಿ, ಪಶ್ಚಿಮಘಟ್ಟ ಸಾಲು ಮತ್ತು ಹಿಮಾಲಯದ ಬೆಟ್ಟಸಾಲುಗಳಂಥ ಪರಿಸರಸೂಕ್ಷ್ಮ ಪ್ರದೇಶಗಳಲ್ಲಿ ಪ್ರಗತಿಪಥವನ್ನು ನಿರ್ಮಿಸುವ ಧಾವಂತದಲ್ಲಿ ಒಂದು ಹೆಜ್ಜೆಯನ್ನು ಹಿಂದಿಡುವುದೇ ನಮ್ಮ ಸಾಧನೆಯ ಅಳತೆಗೋಲಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.