ಪೌರತ್ವ ಕಾಯ್ದೆಯ ‘ಸೆಕ್ಷನ್ 6ಎ’ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಮೂಲಕ ಸುಪ್ರೀಂ ಕೋರ್ಟ್, ಅಸ್ಸಾಂನಲ್ಲಿ ಬಹುಕಾಲದಿಂದ ಚರ್ಚೆಗೆ ಒಳಗಾಗಿದ್ದ ಹಾಗೂ ವಿವಾದಕ್ಕೆ ತುತ್ತಾಗಿದ್ದ ವಿಷಯವೊಂದನ್ನು ಇತ್ಯರ್ಥಪಡಿಸಿದೆ. 1966ರ ಜನವರಿ 1ರ ನಂತರ ಹಾಗೂ 1971ರ ಮಾರ್ಚ್ 25ಕ್ಕೆ ಮೊದಲು ಅಸ್ಸಾಂ ಪ್ರವೇಶಿಸಿ, ಆ ರಾಜ್ಯದಲ್ಲಿ ನೆಲಸಿರುವವರಿಗೆ ಭಾರತದ ಪೌರರಾಗಿ ಹೆಸರು ನೋಂದಾಯಿಸಿಕೊಳ್ಳಲು ಈ ಕಾಯ್ದೆಯ ಸೆಕ್ಷನ್ 6ಎ ಅವಕಾಶ ಕಲ್ಪಿಸುತ್ತದೆ. 1985ರಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ ನಂತರದಲ್ಲಿ ಈ ಸೆಕ್ಷನ್ ಸೇರಿಸಲಾಯಿತು. 1970 ಹಾಗೂ 1980ರ ದಶಕಗಳಲ್ಲಿ ಅಸ್ಸಾಂನಲ್ಲಿ ನಡೆದಿದ್ದ ವಿದೇಶಿಯರ ವಿರುದ್ಧದ ಪ್ರತಿಭಟನೆಗಳನ್ನು ಕೊನೆಗೊಳಿಸುವ ಭಾಗವಾಗಿ ಈ ಸೆಕ್ಷನ್ ರೂಪಿಸಲಾಯಿತು.

ಕಾಯ್ದೆಯ ಸೆಕ್ಷನ್ 6ಎ ದೇಶದ ಸಂವಿಧಾನದ 14 ಹಾಗೂ 29ನೇ ವಿಧಿಗಳನ್ನು ಉಲ್ಲಂಘಿಸುತ್ತದೆ, ಏಕೆಂದರೆ ಸಮಾನತೆಯ ಹಕ್ಕಿಗೆ ಮತ್ತು ಅಸ್ಸಾಂನ ಜನರಿಗೆ ತಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಇರುವ ಹಕ್ಕಿಗೆ ಇದು ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ವಾದಿಸಲಾಗಿತ್ತು. ಆದರೆ ಈ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಶಾಸನವೊಂದರ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಪ್ರಶ್ನೆ ಎದ್ದಾಗ ನ್ಯಾಯಾಲಯವು ಹೊಂದಾಣಿಕೆಯ ನಿಲುವು ತಾಳಬೇಕಾಗುತ್ತದೆ, ಅಸ್ಸಾಂನಲ್ಲಿನ ಸಂದರ್ಭವು ಈ ಸೆಕ್ಷನ್ ಅನ್ನು ಸಮರ್ಥಿಸುತ್ತದೆ ಎಂದು ಕೋರ್ಟ್ ಹೇಳಿದೆ. ಅಸ್ಸಾಂ ಒಪ್ಪಂದದ ಪರಿಣಾಮವಾಗಿ, ಈ ಸೆಕ್ಷನ್ ಸೇರಿಸಲಾಗಿದೆ. ಭಾರತ ಮೂಲದ ವಲಸಿಗರ ಅಗತ್ಯಗಳನ್ನು ಹಾಗೂ ಅದರಿಂದ ರಾಜ್ಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಅಗತ್ಯಗಳ ಮೇಲೆ ಆಗುವ ಪರಿಣಾಮಗಳ ನಡುವೆ ಸಮತೋಲನ ತರುವ ಗುರಿಯು ಶಾಸನ ರೂಪಿಸಿದವರ ಮುಂದಿತ್ತು ಎಂದು ಕೋರ್ಟ್ ವಿವರಿಸಿದೆ.

ಕೋರ್ಟ್ ನೀಡಿರುವ ತೀರ್ಪು ಹಾಗೂ ಅದು ಆಡಿರುವ ಮಾತುಗಳು ಮುಖ್ಯವಾಗುತ್ತವೆ. ನ್ಯಾಯಾಲಯವು ಪೌರತ್ವದ ವಿಚಾರದಲ್ಲಿ ಉದಾರವಾದಿ ನಿಲುವೊಂದನ್ನು ತಾಳಿದೆ. ಪೌರತ್ವವನ್ನು ನಕಾರಾತ್ಮಕವಾಗಿ ಅರ್ಥೈಸಿ, ನಿರ್ದಿಷ್ಟ ವರ್ಗಕ್ಕೆ ಮಾತ್ರ ಪೌರತ್ವ ನೀಡಿ, ಇನ್ನೊಂದು ವರ್ಗವನ್ನು ಅಕ್ರಮ ವಲಸಿಗರು ಎಂದು ಕರೆಯುವ ಕೆಲಸವನ್ನು ಮಾಡಲಾಗದು ಎಂದು ಕೋರ್ಟ್ ಹೇಳಿದೆ. 4–1ರ ಬಹುಮತದ ತೀರ್ಪನ್ನು ಬರೆದಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಸಂಸ್ಕೃತಿಯನ್ನು ರಕ್ಷಿಸಲು ಸಂವಿಧಾನ ನೀಡಿರುವ ಹಕ್ಕನ್ನು ಭಾರತದ ಬಹುಸಂಸ್ಕೃತಿಗಳ ಹಾಗೂ ಬಹುತ್ವದ ನೆಲೆಯಲ್ಲಿ ಕಾಣಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಭ್ರಾತೃತ್ವ ಎಂಬ ಪರಿಕಲ್ಪನೆಯು ಎಲ್ಲರನ್ನೂ ಒಳಗೊಳ್ಳುವ ಪಾತ್ರವನ್ನು ನಿಭಾಯಿಸುತ್ತದೆ, ಆದರೆ ಅರ್ಜಿದಾರರು ಬಹಳ ಸೀಮಿತವಾದ ದೃಷ್ಟಿಕೋನ ಹೊಂದಿದ್ದಾರೆ ಎಂದು ಹೇಳಿದ್ದಾರೆ.

1971ರ ಮಾರ್ಚ್ 25 ಅನ್ನು ಅಂತಿಮ ದಿನಾಂಕ ಎಂದು ಗುರುತಿಸಿದ್ದನ್ನು ಕೋರ್ಟ್ ಒಪ್ಪಿರುವುದು ಹಾಗೂ ಅದು ಆಡಿರುವ ಕೆಲವು ಮಾತುಗಳು, ಈಗ ಕೋರ್ಟ್ ಅಂಗಳದಲ್ಲಿ ಇರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ದೃಷ್ಟಿಯಿಂದಲೂ ಮಹತ್ವ ಹೊಂದಿವೆ. ತಿದ್ದುಪಡಿ ಕಾಯ್ದೆಯಲ್ಲಿ ಸೇರಿಸಲಾಗಿರುವ ಸೆಕ್ಷನ್ 6ಬಿ, ನೆರೆಯ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ 2014ರ ಡಿಸೆಂಬರ್ 31ಕ್ಕೆ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತೀಯ ಪೌರತ್ವವನ್ನು ನೀಡಲು ಅವಕಾಶ ಕಲ್ಪಿಸುತ್ತದೆ. ಸೆಕ್ಷನ್ 6ಎ ಧರ್ಮನಿರಪೇಕ್ಷವಾದುದು ಎಂದು ಕೋರ್ಟ್ ಹೇಳಿರುವುದರ ಆಧಾರದಲ್ಲಿ ಗಮನಿಸಿದಾಗ, 6ಬಿ ಅಡಿಯಲ್ಲಿ ಇರುವ ಷರತ್ತುಗಳು ಕೆಲವು ಮಿತಿಗಳನ್ನು ಹೇರುವಂತೆ ಕಾಣುತ್ತವೆ.

ಅಸ್ಸಾಂಗೆ ಸೆಕ್ಷನ್ 6ಎ ಅಡಿಯಲ್ಲಿ ಅನ್ವಯವಾಗುವ ಗಡುವು ಹಾಗೂ ತಿದ್ದುಪಡಿ ಕಾಯ್ದೆಯ ಸೆಕ್ಷನ್ 6ಬಿ ಅಡಿಯಲ್ಲಿ ಇಡೀ ದೇಶಕ್ಕೆ ಅನ್ವಯವಾಗುವ ಗಡುವು ಬೇರೆ ಬೇರೆ. ಸಿಎಎ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯು ಸಂಬಂಧಪಟ್ಟ ನ್ಯಾಯಪೀಠದ ಎದುರು ಬಂದಾಗ, ಈ ವಿಚಾರಗಳ ಕಡೆ ಗಮನ ಹರಿಸಬೇಕಾಗುತ್ತದೆ. ಸೆಕ್ಷನ್ 6ಎ ಸಿಂಧುತ್ವವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಕೋರ್ಟ್, ಅದರ ದುರ್ಬಳಕೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ ಎಂಬುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.