ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರರಿಗೆ ಈ ಬಾರಿಯ ಭಾರತ ಪ್ರವಾಸವು ಅವಿಸ್ಮರಣೀಯವಾಗಿದೆ. ಸ್ಪಿನ್ ತವರು ಭಾರತದ ನೆಲದಲ್ಲಿ ಸರಣಿ ಜಯಿಸಬೇಕೆಂದು ಕಿವೀಸ್ ಕ್ರಿಕೆಟ್ಪ್ರೇಮಿಗಳು ಸುಮಾರು ಏಳು ದಶಕಗಳಿಂದ ಕಂಡಿದ್ದ ಕನಸು ನನಸಾಗಿದೆ. 1955–56ರಿಂದ ಇಲ್ಲಿಯವರೆಗೆ ನ್ಯೂಜಿಲೆಂಡ್ ತಂಡವು 12 ಬಾರಿ ಭಾರತದಲ್ಲಿ ಟೆಸ್ಟ್ ಸರಣಿಗಳನ್ನು ಆಡಿದೆ. ಪ್ರತಿ ಬಾರಿಯೂ ಸೋಲಿನ ಕಹಿಯೊಂದಿಗೇ ಮರಳಿತ್ತು. ಆದರೆ ಈ ಸಲ ಟಾಮ್ ಲೇಥಮ್ ಬಳಗವು ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ಮುಂಬೈನಲ್ಲಿ ನಡೆಯಬೇಕಿದೆ. ಕಿವೀಸ್ ತಂಡವು ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ, ರೋಹಿತ್ ಶರ್ಮಾ ಬಳಗವು ಸಮಾಧಾನಕರ ಜಯ ಗಳಿಸುವ ಒತ್ತಡದಲ್ಲಿದೆ. ಆದರೆ ಈ ಸರಣಿಯ ಸೋಲು ಮಾತ್ರ ಬಹಳ ಕಾಲದವರೆಗೆ ಭಾರತ ತಂಡದ ಅಭಿಮಾನಿಗಳನ್ನು ಕಾಡಲಿದೆ. 12 ವರ್ಷಗಳಿಂದ ತವರಿನ ನೆಲದಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದ ತಂಡದ ಅಜೇಯ ಓಟಕ್ಕೆ ಈಗ ತಡೆ ಬಿದ್ದಿದೆ. ದಾಖಲೆಗಳು ಇರುವುದೇ ಮುರಿಯಲು ಎಂಬ ಮಾತಿದೆ. ಈ ಸತತ ಜಯದ ದಾಖಲೆಗೆ ನ್ಯೂಜಿಲೆಂಡ್ ತಡೆಯೊಡ್ಡಿದೆ. ಈ ಹಿಂದೆ ಕ್ರಿಕೆಟ್ ಜಗತ್ತಿನ ಬಲಾಢ್ಯ ತಂಡಗಳು ಎನಿಸಿದ್ದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಕೂಡ ಇಂತಹ ಸೋಲು ಅನುಭವಿಸಿವೆ. ಭಾರತ ತಂಡವೇ ಎರಡು ಬಾರಿ ಆಸ್ಟ್ರೇಲಿಯಾದಲ್ಲಿಸರಣಿ ಗೆದ್ದು ಇತಿಹಾಸ ಬರೆದಿತ್ತು. ಕ್ರೀಡೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಆದರೆ ಅಗ್ರಮಾನ್ಯ ತಂಡವೊಂದು ಹೋರಾಟ ತೋರದೆ ಶರಣಾದಾಗ ಟೀಕೆಗಳ ಮಹಾಪೂರ ಉಕ್ಕುತ್ತದೆ. ಭಾರತ–ನ್ಯೂಜಿಲೆಂಡ್ ಸರಣಿಯು ಇದಕ್ಕೆ ಉತ್ತಮ ನಿದರ್ಶನ. ಅತಿಯಾದ ಆತ್ಮವಿಶ್ವಾಸ, ಅನಗತ್ಯ ಪ್ರಯೋಗಗಳು ತಿರುಗುಬಾಣವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಸರಣಿಯ ಮೊದಲ ಪಂದ್ಯವು ಬೆಂಗಳೂರಿನಲ್ಲಿ ನಡೆಯಿತು. ಮೊದಲ ದಿನದಾಟವು ಮಳೆಗೆ ಮುಳುಗಿತ್ತು. ಆದರೆ ಎರಡನೇ ದಿನ ನಾಯಕ ರೋಹಿತ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನಿಂಗ್ಸ್ನಲ್ಲಿ 46 ರನ್ಗಳಿಗೆ ಆಲೌಟ್ ಆದ ತಂಡವು ತವರಿನಂಗಳದಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ದಾಖಲಿಸಿತು. ತಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಣಯ ತಪ್ಪು ಎಂದು ರೋಹಿತ್ ಅವರೇ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು. ಆದರೆ ಎರಡನೇ ಇನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ ಶತಕ, ರಿಷಭ್ ಪಂತ್, ವಿರಾಟ್ ಕೊಹ್ಲಿ ಬ್ಯಾಟಿಂಗ್ನಿಂದಾಗಿ ತಂಡವು ಇನಿಂಗ್ಸ್ ಸೋಲು ತಪ್ಪಿಸಿಕೊಂಡಿತು. ಆದರೆ ಕಡಿಮೆ ಮೊತ್ತದ ಗುರಿಯೊಡ್ಡಿದ ಭಾರತ 8 ವಿಕೆಟ್ಗಳಿಂದ ಸೋತಿತು. ಭಾರತದಲ್ಲಿ 36 ವರ್ಷಗಳ ನಂತರ ಕಿವೀಸ್ ಟೆಸ್ಟ್ ಪಂದ್ಯ ಜಯಿಸಿತು.

ಮೊದಲ ಟೆಸ್ಟ್ ಸೋಲಿನಿಂದ ರೋಹಿತ್ ಬಳಗವು ಪಾಠ ಕಲಿಯಲಿಲ್ಲ ಎಂಬುದು ಪುಣೆಯಲ್ಲಿ ಸಾಬೀತಾಯಿತು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಬಿಟ್ಟರೆ ಉಳಿದ ಬೌಲರ್ಗಳಲ್ಲಿ ಸ್ಥಿರತೆಯ ಕೊರತೆ ಇತ್ತು. ಬ್ಯಾಟಿಂಗ್ ಕಳಪೆಯಾಗಿತ್ತು. ಅದರಲ್ಲೂ ಅನುಭವಿಗಳಾದ ರೋಹಿತ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಅವರು ನಿರೀಕ್ಷೆ ಹುಸಿಗೊಳಿಸಿದರು. ಎರಡನೇ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಅರ್ಧಶತಕ ಬಾರಿಸಿ ಉತ್ತಮ ಆರಂಭ ನೀಡಿದ್ದರು. ಅವರಂತೆಯೇಉಳಿದವರೂ ಆಡಿದ್ದಿದ್ದರೆ ಗೆಲುವು ಸಾಧ್ಯವಾಗಬಹುದಿತ್ತು. ಆದರೆ ಸ್ಪಿನ್ ಬೌಲಿಂಗ್ ಮುಂದೆಯೇ ಬ್ಯಾಟರ್ಗಳು ನೆಲಕಚ್ಚಿದ್ದು ವಿಪರ್ಯಾಸ. ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಐದು ವಿಕೆಟ್ಗಳ ಗೊಂಚಲು ಗಳಿಸಿದರು. ಈ ಪಂದ್ಯದ ಎರಡೂ ಇನಿಂಗ್ಸ್ನಲ್ಲಿ ಅವರು ಈ ಸಾಧನೆ ಮಾಡಿದರು. ಒಟ್ಟು 13 ವಿಕೆಟ್ಗಳು ಅವರ ಬುಟ್ಟಿ ಸೇರಿದವು. ಡೆವೊನ್ ಕಾನ್ವೆ, ಯುವ ಆಟಗಾರ ರಚಿನ್ ರವೀಂದ್ರ, ಟಾಮ್ ಲೇಥಮ್ ಅವರು ವಿಶ್ವದರ್ಜೆಯ ಸ್ಪಿನ್ನರ್ಗಳನ್ನು ಯಶಸ್ವಿಯಾಗಿ ಎದುರಿಸಿದರು. ಸರಳವಾಗಿ ಹೇಳುವುದಾದರೆ, ಕಿವೀಸ್ ಬಳಗವು ಟೆಸ್ಟ್ ಕ್ರಿಕೆಟ್ ಮಾದರಿಯ ಮೂಲ ತತ್ವಗಳನ್ನು ಅನುಸರಿಸಿತು. ಆದರೆ ಭಾರತ ತಂಡವು ಪ್ರಯೋಗಕ್ಕೆ ಇಳಿದು ಕೈಸುಟ್ಟು ಕೊಂಡಿದ್ದು ಸುಳ್ಳಲ್ಲ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯ ರಹಾನೆ ಅವರಂತಹ ತಾಳ್ಮೆಯ ಬ್ಯಾಟರ್ಗಳ ಕೊರತೆ ಎದ್ದುಕಂಡಿತು. ವಿರಾಟ್ ಅವರಂತೂ ಫುಲ್ಟಾಸ್ ಎಸೆತಕ್ಕೆ ಔಟಾಗಿದ್ದು ಅಚ್ಚರಿ ಮೂಡಿಸಿತು. ಇವೆಲ್ಲದರಾಚೆ ರೋಹಿತ್ ಪಡೆಯ ಅತಿ ಆತ್ಮವಿಶ್ವಾಸವು ಮುಳುವಾಯಿತು. ಈ ಸರಣಿಗೆ ಮುನ್ನ ಭಾರತ ತಂಡವು ಬಾಂಗ್ಲಾ ಎದುರು ಗೆದ್ದಿತ್ತು. ಆದರೆ ಕಿವೀಸ್ ಬಳಗವು ಶ್ರೀಲಂಕಾದಲ್ಲಿ ಸೋತು ಇಲ್ಲಿಗೆ ಬಂದಿತ್ತು. ಅಲ್ಲದೆ ಪ್ರಮುಖ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದ ಕಣಕ್ಕಿಳಿಯಲಿಲ್ಲ. ಆದರೆ ನ್ಯೂಜಿಲೆಂಡ್ ತಂಡ ಶಾಂತಚಿತ್ತದಿಂದ ಆಡಿ ಗೆದ್ದಿತು. ಭಾರತ ತಂಡದಲ್ಲಿರುವ 35 ವರ್ಷ ವಯಸ್ಸು ದಾಟಿರುವ ಆಟಗಾರರು ನಿವೃತ್ತಿ ಪಡೆಯಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ (ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ) ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿರುವ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸೋತರೆ ಕೆಳಕ್ಕೆ ಜಾರಲಿದೆ. ಇದರಿಂದಾಗಿ ಫೈನಲ್ ಪ್ರವೇಶಿಸುವ ಕನಸು ಕಮರುವ ಆತಂಕವಿದೆ. ಆದ್ದರಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ತಂಡದ ತಾರಾವರ್ಚಸ್ಸಿನ ಆಟಗಾರರು ಆಸ್ಟ್ರೇಲಿಯಾ ವಿಮಾನವೇರುವ ಮುನ್ನ, ಕಿವೀಸ್ ಎದುರಿನ ಸೋಲಿಗೆ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.