ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರಗೊಂಡಿರುವ ‘ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ’ಯು ದೆಹಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲೂ ಪ್ರತಿಕೂಲ ಪರಿಣಾಮವನ್ನು ಬೀರುವಂಥದ್ದು. ಅಷ್ಟೇ ಅಲ್ಲ, ಶಾಸನದ ತಕ್ಷಣದ ಉದ್ದೇಶಗಳಿಗೆ ಸೀಮಿತವಾಗಿ ಮಾತ್ರವಲ್ಲದೆ ಬೇರೆ ರೀತಿಯಿಂದಲೂ ಪರಿಣಾಮವನ್ನು ಉಂಟುಮಾಡುವಂಥದ್ದು. ಪೊಲೀಸ್ ಹಾಗೂ ಸಾರ್ವಜನಿಕ ಭದ್ರತೆಯನ್ನು ಹೊರತುಪಡಿಸಿ ಮಿಕ್ಕ ಎಲ್ಲ ಆಡಳಿತಾತ್ಮಕ ಸೇವೆಗಳ ಮೇಲೆ ದೆಹಲಿಯ ಚುನಾಯಿತ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಕೋರ್ಟ್ ತೀರ್ಪಿನ ಅನುಷ್ಠಾನದ ಹೊಣೆಯಿಂದ ಪಾರಾಗಲು ಕೇಂದ್ರ ಸರ್ಕಾರವು ಮೇ 19ರಂದು ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ದೆಹಲಿ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣವನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು. ಕೋರ್ಟ್, ಈ ಹಿಂದೆ ಯಾವ ಲೋಪವನ್ನು ಸರಿಪಡಿಸಿತ್ತೋ ಆ ಲೋಪವನ್ನು ಮೊದಲು ಸುಗ್ರೀವಾಜ್ಞೆಯ ಮೂಲಕ, ಬಳಿಕ ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರ ಮರುಸ್ಥಾಪಿಸಿದೆ. ಕೇಂದ್ರ ಸರ್ಕಾರದಿಂದ ನೇಮಕವಾದ ಅಧಿಕಾರಿಗಳು, ದೆಹಲಿಯ ಚುನಾಯಿತ ಮುಖ್ಯಮಂತ್ರಿಯ ಆದೇಶವನ್ನೂ ಮೀರುವ ಅವಕಾಶವನ್ನು ಈ ಮಸೂದೆ ನೀಡಿದೆ. ಹೀಗಾಗಿ, ದೆಹಲಿ ಆಡಳಿತಾತ್ಮಕ ಸೇವೆಗಳ ವಿಷಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ನೈಜ ಶಕ್ತಿಕೇಂದ್ರ ಎನ್ನುವ ವಿಷಯದಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಮಸೂದೆಯ ಪ್ರಕಾರ, ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿಗಳನ್ನು ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿಯ ಮೂಲಕವೇ ನಡೆಸಬೇಕು. ಚುನಾಯಿತ ಸರ್ಕಾರವನ್ನು ಅಧಿಕಾರಶಾಹಿಯ ಅಧೀನವಾಗಿಸುವ ಈ ನಡೆಯು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ.

ಚುನಾಯಿತ ಸರ್ಕಾರಕ್ಕೆ ಇರುವ ಅಧಿಕಾರ ಏನೆಂಬುದನ್ನು ತೋರಿಸಿಕೊಟ್ಟಿದ್ದ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಒಕ್ಕೂಟ ತತ್ವದ ಮಹತ್ವ ಏನೆಂಬುದನ್ನೂ ಸಾರಿದ್ದ ಸುಪ್ರೀಂ ಕೋರ್ಟ್ನ ತೀರ್ಪನ್ನೇ ಈ ಮಸೂದೆ ಗೌಣವಾಗಿಸಿದೆ. ಕೇಂದ್ರ ಸರ್ಕಾರವು ಗೃಹ ಸಚಿವ ಅಮಿತ್ ಶಾ ಅವರ ಮುಂದಾಳತ್ವದಲ್ಲಿ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ‘ದೆಹಲಿಯಲ್ಲಿ ಭ್ರಷ್ಟಾಚಾರಮುಕ್ತ ಹಾಗೂ ಜನಪರ ಆಡಳಿತ ನೀಡಲು ಈ ನಡೆ ಅಗತ್ಯವಾಗಿತ್ತು’ ಎಂದು ಪ್ರತಿಪಾದಿಸಿದೆ. ಆದರೆ, ಕೇಂದ್ರವು ರಾಜಕೀಯ ಉದ್ದೇಶದಿಂದಲೇ ಆತುರಾತುರವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು ಮತ್ತು ಈಗ ಅಷ್ಟೇ ಅವಸರದಲ್ಲಿ ಮಸೂದೆಗೆ ಅಂಗೀಕಾರ ಪಡೆದಿದ್ದು ಜಗಜ್ಜಾಹೀರಾಗಿದೆ. ಎಎಪಿ ನೇತೃತ್ವದ ಸರ್ಕಾರದ ಜತೆಗೆ ಅದು ನಡೆಸಿರುವ ಸಂಘರ್ಷವನ್ನು ನಿರಂತರವಾಗಿ ಮುಂದುವರಿಸಲು ಉತ್ಸುಕವಾಗಿರುವುದನ್ನೂ ಈ ನಡೆ ಎತ್ತಿ ತೋರುತ್ತದೆ. ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೆ ಕಾಯ್ದೆಗಳನ್ನು ರೂಪಿಸುವ ಅಧಿಕಾರವು ತನಗಿದ್ದು, ದೆಹಲಿಯೂ ಇದಕ್ಕೆ ಹೊರತೇನಲ್ಲ ಎಂದೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಇದೇ ಬಿಜೆಪಿಯು ಈ ಹಿಂದೆ ಹೊಂದಿದ್ದ ನಿಲುವಿಗೆ ಈ ಪ್ರತಿಪಾದನೆ ಸಂಪೂರ್ಣ ತದ್ವಿರುದ್ಧವಾಗಿದೆ. ದೆಹಲಿಗೆ ಪರಿಪೂರ್ಣ ರಾಜ್ಯದ ಸ್ಥಾನಮಾನ ಕೊಡಬೇಕು ಮತ್ತು ಎಲ್ಲ ಅಧಿಕಾರಗಳೂ ಅದಕ್ಕೆ ಇರಬೇಕು ಎಂದು ಆ ಪಕ್ಷ ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿತ್ತು.

ಸುಪ್ರೀಂ ಕೋರ್ಟ್ನ ತೀರ್ಪನ್ನು ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರವು ಸಂಸತ್ತಿನ ಮೂಲಕ ಹಿಂಬಾಗಿಲ ಹಾದಿ ಹಿಡಿದಿದೆ ಎಂಬ ವಿರೋಧ ಪಕ್ಷಗಳ ವಾದದಲ್ಲಿ ತಥ್ಯವಿದೆ. ಈ ಹಿಂದೆ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಕೂಡ ನ್ಯಾಯಪೀಠದ ಪರಿಶೀಲನೆಯಲ್ಲಿತ್ತು. ಮುಂದೆ ಕಾಯ್ದೆಯಾಗಿ ರೂಪುಗೊಳ್ಳಲಿರುವ ಈ ಮಸೂದೆಯನ್ನೂ ಅದು ಪರಿಶೀಲನೆಗೆ ಒಳಪಡಿಸಬಹುದು. ಈ ಮಸೂದೆಯು ಸಂವಿಧಾನದತ್ತವಾದ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಮತ್ತೊಂದು ಪ್ರಯತ್ನ ಎಂದು ಬಹುತೇಕ ವಿರೋಧ ಪಕ್ಷಗಳು ಪರಿಭಾವಿಸಿದ್ದರಿಂದಲೇ ಅವುಗಳು ಒಟ್ಟಾಗಿ ವಿರೋಧ ವ್ಯಕ್ತಪಡಿಸಿವೆ. ಆದ್ದರಿಂದಲೇ ಇದು ದೆಹಲಿ ಆಚೆಗೂ ಪರಿಣಾಮ ಬೀರಬಹುದಾದ ಮಸೂದೆ ಎಂಬ ವ್ಯಾಖ್ಯಾನಕ್ಕೆ ಒಳಗಾಗಿದೆ. ರಾಜ್ಯಸಭೆಯಲ್ಲೂ ಈ ಮಸೂದೆಗೆ ಸುಲಭವಾಗಿ ಅಂಗೀಕಾರ ದೊರೆತಿದೆ. ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳ ನೆರವಿನಿಂದ ಇದು ಸಾಧ್ಯವಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಮಸೂದೆಯು ದೂರಗಾಮಿಯಾಗಿ ಬೀರಬಹುದಾದ ಪರಿಣಾಮಗಳನ್ನು ಗ್ರಹಿಸುವಲ್ಲಿ ಆ ಎರಡೂ ಪಕ್ಷಗಳು ವಿಫಲವಾಗಿವೆ ಎಂದೇ ಅರ್ಥೈಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.