ಟೀಕೆ–ಟಿಪ್ಪಣಿ, ವಾಗ್ವಾದಗಳ ಬಗ್ಗೆ ಅಸಹನೆಯುಳ್ಳ ಪ್ರಜಾಪ್ರಭುತ್ವ ವಿರೋಧಿ ಮನಃಸ್ಥಿತಿ ಸಮಾಜದಲ್ಲಿ ಬಲಗೊಳ್ಳುತ್ತಿರುವುದಕ್ಕೆ, ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದುದು ಹೊಸ ಉದಾಹರಣೆಯಾಗಿದೆ. ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿ ಮಾಡದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆಯನ್ನು ಹಂಪನಾ ಅವರು ಮಂಡ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಟೀಕಿಸಿದ್ದರು. ರೈತರನ್ನು ಪ್ರಧಾನಿ ನೇರವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರೆ ಸಮಸ್ಯೆ ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಅವರು, ‘ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಗೋಮುಖ ವ್ಯಾಘ್ರ ಆಗಿದೆ. ಧರ್ಮರಾಯನ ಮುಖವಾಡ ಧರಿಸಿಕೊಂಡು ದುರ್ಯೋಧನನ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಹೇಳಿದ್ದರು. ನಾಡಿನ ಹಿರಿಯ ವಿದ್ವಾಂಸರಲ್ಲಿ ಒಬ್ಬರಾದ ಹಂಪನಾ ಸಜ್ಜನಿಕೆಗೆ ಹೆಸರಾದವರು. ಸಾಹಿತ್ಯ ಸಮ್ಮೇಳನ ದಲ್ಲಿನ ಅವರ ಮಾತುಗಳು ಕೂಡ ಸಭ್ಯತೆಯ ಎಲ್ಲೆಯನ್ನು ಮೀರದ ಸಾತ್ವಿಕ ಸಿಟ್ಟಿನ ಅಭಿವ್ಯಕ್ತಿಯೇ ಆಗಿವೆ. ದಿನ ಬೆಳಗಾದರೆ ಹೀನಾಮಾನ ಬೈದುಕೊಳ್ಳುವ ರಾಜಕಾರಣಿಗಳ ಮಾತುಗಳಿಗೆ ಹೋಲಿಸಿದರೆ, ಹಂಪನಾ ಅವರಂಥ ಲೇಖಕರ ಮಾತುಗಳು ತೀರಾ ಸೌಮ್ಯವಾದವು. ಇಂಥ ಆರೋಗ್ಯಕರ ವಿಮರ್ಶೆಯನ್ನೂ ಸಹಿಸಿಕೊಳ್ಳಲಾರದ ಸ್ಥಿತಿಗೆ ಸಮಾಜ ತಲುಪಿದೆಯೆನ್ನುವುದು ಹಾಗೂ ಅಸಹನೆಯನ್ನು ಬಿತ್ತುವ ವ್ಯಕ್ತಿಗಳ ಬೆಂಬಲಕ್ಕೆ ವ್ಯವಸ್ಥೆ ನಿಲ್ಲುತ್ತದೆಯೆನ್ನುವುದು ಅಭಿವ್ಯಕ್ತಿ
ಸ್ವಾತಂತ್ರ್ಯಕ್ಕೆ ನೀಡಿರುವ ಒಳಗುದ್ದಿನಂತಿದೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಹಾಗೂ ಅವುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದನ್ನು ಅಪರಾಧ ಎಂದು ಬಿಂಬಿಸುವ ತಂತ್ರಗಾರಿಕೆಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವವನ್ನು ಪಕ್ಕಕ್ಕೆ ತಳ್ಳಿ ಸರ್ವಾಧಿಕಾರದ ಕಡೆಗೆ ಹೋಗುತ್ತಿದ್ದೇವೆ ಹಾಗೂ ಆಳುವವರಿಗೆ ಸೇಡಿನ ಮನೋಭಾವ ಇರಬಾರದು ಎಂದು ಹಂಪನಾ ಹೇಳಿದ್ದಾರೆ. ಇಂತಹ ಮಾತುಗಳಲ್ಲಿ ಅಡಗಿರುವ ಕಳಕಳಿ ಅರ್ಥವಾಗದಷ್ಟು ನಮ್ಮ ವ್ಯವಸ್ಥೆ ಜಡ್ಡುಗಟ್ಟಿರುವುದು ವಿಷಾದನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಲಕ್ಷಣವೇ ಟೀಕೆ ಮತ್ತು ಸಂವಾದಗಳಿಗೆ ಅವಕಾಶ ಕಲ್ಪಿಸುವುದು. ಪ್ರಜಾಪ್ರಭುತ್ವದ ಜೀವಾಧಾರವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಸಿರುಗಟ್ಟಿಸುವ ಪ್ರಯತ್ನಗಳು ಹಂಪನಾ ಅವರು ಆತಂಕಪಟ್ಟಂತೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುವಂತಹವು. ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಸಿ ಪ್ರಶ್ನಿಸಿದ ಪ್ರಸಂಗದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷಾದ ವ್ಯಕ್ತಪಡಿಸಿರುವುದು ಸರಿಯಾಗಿದೆ. ಆದರೆ, ವ್ಯಾಪಕ ಜನಾಕ್ರೋಶದ ನಂತರವೂ ಈ ವಿದ್ಯಮಾನದ ಬಗ್ಗೆ ಆಡಳಿತ ಪಕ್ಷದ ನಾಯಕರೊಬ್ಬರೂ ಪ್ರತಿಕ್ರಿಯಿಸದಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯ
ಹರಣದ ಪ್ರಯತ್ನಗಳಿಗೆ ಅವರ ಮೌನಸಮ್ಮತಿಯೆಂದು ಜನಸಾಮಾನ್ಯರಿಗೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ. ಮಂಡ್ಯದ ಘಟನೆಯನ್ನು ಲೇಖಕರೊಬ್ಬರನ್ನು ಅಧೀರಗೊಳಿಸುವ ಬಿಡಿ ಪ್ರಯತ್ನವಾಗಿ ನೋಡಬಾರದು. ಇತ್ತೀಚಿನ ವರ್ಷಗಳಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಸಾಹಿತಿಗಳು, ವಿಚಾರವಾದಿಗಳ ಮೇಲೆ ನಡೆದ ಹಲ್ಲೆಗಳ ಭಾಗವಾಗಿ ನೋಡಬೇಕು. ಸಾರ್ವಜನಿಕ ಗ್ರಂಥಾಲಯಗಳ ಖರೀದಿಗೆ ಆಯ್ಕೆಯಾಗಿದ್ದ ಪುಸ್ತಕವೊಂದನ್ನು ಚರ್ಚಾಸ್ಪದ ವಿಷಯವನ್ನು ಒಳಗೊಂಡಿದೆ ಎನ್ನುವ ಕಾರಣಕ್ಕಾಗಿ ಹಿಂಪಡೆದ ಇತ್ತೀಚಿನ ಘಟನೆಯನ್ನೂ ಅಸಹನೆ ರಾಜಕಾರಣದ ಭಾಗವಾಗಿಯೇ ನೋಡಬೇಕು. ಇಂಥ ಒತ್ತಡಗಳು, ಕೂಗುಮಾರಿ ತಂತ್ರಗಳು ಹಾಗೂ ಹಲ್ಲೆಗಳು ಲೇಖಕರನ್ನು ಬಾಯಿ ಮುಚ್ಚಿಕೊಂಡಿರುವಂತೆ ಒತ್ತಾಯಿಸುತ್ತವೆ. ರಮ್ಯ ಸಾಹಿತ್ಯದ ದಂತಗೋಪುರದಲ್ಲಿಯೇ ಉಳಿಯುವಂತೆ ಬಯಸುತ್ತವೆ. ಕನ್ನಡ ಪರಂಪರೆಯುದ್ದಕ್ಕೂ ವಿರೋಧಪಕ್ಷದ ಸ್ಥಾನವನ್ನು ಸಾಂಸ್ಕೃತಿಕ ವಲಯ ನಿರ್ವಹಿಸುತ್ತಾ ಬಂದಿದೆ ಹಾಗೂ ಆ ಪ್ರಜ್ಞಾವಂತಿಕೆಯನ್ನು ಸಮಾಜ ಗೌರವಿಸಿದೆ. ಆ ಹೊಣೆಗಾರಿಕೆಗೆ ಸರ್ಕಾರ ಅಡ್ಡಿಪಡಿಸಿದಾಗ ಸಾಹಿತಿಗಳ ಬೆಂಬಲಕ್ಕೆ ಜನಸಮೂಹ ನಿಂತಿದೆ. ಈಗ ಕೂಡ ಹಂಪನಾ ಅವರನ್ನು ಕನ್ನಡದ ಜನ ಬೆಂಬಲಿಸಿದ್ದಾರೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವ ಬೆಳವಣಿಗೆಗಳು ನಡೆದಾಗ ಸಾಹಿತ್ಯಲೋಕ ಮೊದಲಿನಂತೆ ಒಕ್ಕೊರಲಿನಿಂದ ಖಂಡಿಸದಿರುವುದನ್ನೂ ಗಮನಿಸಬೇಕು. ಖಂಡನೆ, ಪ್ರತಿಭಟನೆಗಳು ಕೂಡ ಪಂಥ–ಪಕ್ಷಾಧಾರಿತವಾಗಿ ನಡೆಯುತ್ತಿರುವುದು ನಾಡಿನ ಸಾಂಸ್ಕೃತಿಕ ಆರೋಗ್ಯಕ್ಕೆ ಒಳ್ಳೆಯದಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಿತಕರವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.