ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ ತೀವ್ರವಾಗಿ ಕುಸಿಯುತ್ತಿರುವುದುಆತಂಕಕಾರಿ ವಿದ್ಯಮಾನ. ಟರ್ಕಿಯಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು, ಅದರ ಕರೆನ್ಸಿ ‘ಲಿರಾ’ದ ದಾಖಲೆ ಕುಸಿತವು ವಿಶ್ವದಾದ್ಯಂತ ಕುಸಿತದ ಸೋಂಕು ಹಬ್ಬಿಸಿ ಕಂಪನ ಮೂಡಿಸಿದೆ. ಅಮೆರಿಕ ಮತ್ತು ಚೀನಾದ ನಡುವೆ ಉಂಟಾಗಿರುವ ವಾಣಿಜ್ಯ ಸಮರದ ಜತೆಗೆ, ಟರ್ಕಿಯ ಹಣಕಾಸು ಬಿಕ್ಕಟ್ಟು ವಿಷಮಿಸಿರುವುದು ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತಿದೆ. ಇದು ಎಲ್ಲೆಡೆ ದಿಗಿಲು ಮೂಡಿಸಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಟರ್ಕಿ, ಈಗ ಅದಕ್ಕೆ ಭಾರಿ ಬೆಲೆ ತೆರುತ್ತಿದೆ. ಕಾರ್ಯಸಾಧುವಲ್ಲದ ರೀತಿಯಲ್ಲಿ ಬಡ್ಡಿ ದರಗಳನ್ನು ಕಡಿಮೆ ಮಟ್ಟದಲ್ಲಿ ಇರಿಸಿದ್ದರಿಂದ ‘ಲಿರಾ’, ಡಾಲರ್ ಎದುರು ಗರಿಷ್ಠ ಶೇ 40ರಷ್ಟು ಅಪಮೌಲ್ಯಗೊಂಡಿದೆ. ಈ ಆರ್ಥಿಕ ಬಿಕ್ಕಟ್ಟಿನ ಸುತ್ತ ಆವರಿಸಿಕೊಂಡಿರುವ ಅನಿಶ್ಚಿತತೆ ಮತ್ತು ಡಾಲರ್ ಸೂಚ್ಯಂಕದ ಬಲವರ್ಧನೆಯ ಕಾರಣಕ್ಕೆ ಆಮದುದಾರರು ಡಾಲರ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಹಲವಾರು ಆರ್ಥಿಕತೆಗಳ ಕರೆನ್ಸಿಗಳ ಬಿಕ್ಕಟ್ಟಿಗೂ ಕಾರಣವಾಗಿದೆ. ರೂಪಾಯಿಯ ಖರೀದಿ ಸಾಮರ್ಥ್ಯವು ಈ ವರ್ಷದಲ್ಲಿ ಶೇಕಡ 8.8ರಷ್ಟು ಕುಸಿತ ಕಂಡಿರುವುದರಲ್ಲಿ ಸ್ಥಳೀಯ ಬೆಳವಣಿಗೆಗಳ ಪಾತ್ರ ಇಲ್ಲ. ಬಾಹ್ಯ ವಿದ್ಯಮಾನಗಳು ಹೆಚ್ಚಿನ ಪ್ರಭಾವ ಬೀರಿವೆ. ರಷ್ಯಾ, ಅರ್ಜೆಂಟೀನಾ ಕರೆನ್ಸಿ ಕುಸಿತಕ್ಕೆ ಹೋಲಿಸಿದರೆ, ರೂಪಾಯಿ ಮೌಲ್ಯ ಕುಸಿತ ಕಡಿಮೆ ಪ್ರಮಾಣದಲ್ಲಿ ಇರುವುದು ಕೊಂಚ ಸಮಾಧಾನಕರ ಸಂಗತಿ. 2016–17ರಲ್ಲಿ ಸ್ಥಿರತೆ ಸಾಧಿಸಿದ್ದ ರೂಪಾಯಿ, ಈ ವರ್ಷಾರಂಭದಿಂದ ನಿರಂತರವಾಗಿ ಕುಸಿಯುತ್ತಲೇ ಇದೆ. ಇತ್ತೀಚೆಗೆ 70ರ ಗಡಿ ದಾಟಿ ಸಾರ್ವಕಾಲಿಕ ಕುಸಿತ ಕಂಡಿತ್ತು. ವಿದೇಶಿ ಹೂಡಿಕೆದಾರರು ನಷ್ಟಸಾಧ್ಯತೆಯ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆ ಹಿಂತೆಗೆದುಕೊಂಡು ಡಾಲರ್ ಸಂಪತ್ತಿನಲ್ಲಿ ತೊಡಗಿಸುತ್ತಿದ್ದಾರೆ. ಡಾಲರ್ ಎದುರು ಮಾತ್ರವಲ್ಲದೆ, ಯೆನ್, ಯುರೊ, ಪೌಂಡ್ ಎದುರೂ ರೂಪಾಯಿಯದು ಇದೇ ವ್ಯಥೆ. ರೂಪಾಯಿಯಲ್ಲಿ ಅಂತರ್ಗತವಾಗಿರುವ ಕೆಲ ದೌರ್ಬಲ್ಯಗಳೂ ಒತ್ತಡ ಹೇರುತ್ತಿವೆ. ಈ ಬೆಳವಣಿಗೆಯು ದೇಶಿ ಆರ್ಥಿಕತೆ ಮೇಲೆ ಹಲವಾರು ಬಗೆಯಲ್ಲಿ ವ್ಯತಿರಿಕ್ತ ಪರಿಣಾಮವನ್ನೂ ಬೀರಲಿದೆ. ಕಚ್ಚಾ ತೈಲ ಆಮದು ವೆಚ್ಚ ಮತ್ತು ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ. ಹಣದುಬ್ಬರ ಏರಿಕೆಗೆ ಪುಷ್ಟಿ ನೀಡಲಿದೆ. ಉದ್ದಿಮೆ ಸಂಸ್ಥೆಗಳ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಷೇರುಪೇಟೆಯಲ್ಲಿನ ವಿದೇಶಿ ಹೂಡಿಕೆ ತಗ್ಗಿಸಲಿದೆ. ಆಮದುದಾರರು ಮತ್ತು ತೈಲ ಮಾರಾಟ ಸಂಸ್ಥೆಗಳ ನಷ್ಟ ಹೆಚ್ಚಿಸಲಿದೆ. ಇದನ್ನು ಸಕಾರಾತ್ಮಕವಾಗಿಯೂ ಬಳಸಿಕೊಳ್ಳಬಹುದು. ಈ ಸಂದರ್ಭದಲ್ಲಿ ರಫ್ತು ಪ್ರಮಾಣವನ್ನು ಹೆಚ್ಚಿಸಬಹುದು. ಇದರಿಂದ ಐ.ಟಿ. ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳೂ ಹೆಚ್ಚಬಹುದು.

ವಿಶ್ವ ವಾಣಿಜ್ಯ ಸಮರ ಸಾಧ್ಯತೆ, ಜಾಗತಿಕ ಅನಿಶ್ಚಿತತೆಯಂತಹ ವಿದ್ಯಮಾನಗಳೇ ರೂಪಾಯಿ ಮೌಲ್ಯ ಕುಸಿತದ ಬಿಕ್ಕಟ್ಟಿಗೆ ಪ್ರಮುಖ ಕಾರಣ. ಕುಸಿತವು ಆತಂಕಕಾರಿ ಮಟ್ಟದಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ಬೀರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳು ಪೆಟ್ರೋಲ್, ಡೀಸೆಲ್ ಮತ್ತಿತರ ಅವಶ್ಯಕ ಸರಕುಗಳ ಬೆಲೆ ಏರಿಕೆಗೆ ಕಾರಣವಾಗಲಿವೆ. ಚೇತರಿಕೆಯ ಹಾದಿಯಲ್ಲಿ ಇರುವ ಆರ್ಥಿಕತೆಯ ಪ್ರಗತಿಗೂ ಇದು ಅಡಚಣೆ ಒಡ್ಡಲಿದೆ. ಇದರಿಂದ ಜನರ ಬದುಕೂ ಸಂಕಷ್ಟಕ್ಕೆ ಒಳಗಾಗಲಿದೆ. ರೂಪಾಯಿ ಮೌಲ್ಯ ಕುಸಿತಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ತಕ್ಷಣ ಮಧ್ಯಪ್ರವೇಶಿಸಬೇಕಾಗಿದೆ. ಅಲ್ಪಾವಧಿಗಾದರೂ ಆಕ್ರಮಣಕಾರಿ ಧೋರಣೆ ತಳೆಯಬೇಕಾಗಿದೆ. ಸೀಮಿತ ಅವಧಿಗಾದರೂ ಮತ್ತೆ ಬಡ್ಡಿ ದರಗಳನ್ನು ಹೆಚ್ಚಿಸಬೇಕಾಗಿದೆ. ಎದುರಾಗಬಹುದಾದ ಪ್ರತಿಕೂಲ ವಿದ್ಯಮಾನಗಳನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಕಂಡು ಬಂದಿರುವ ಈ ಆತಂಕದ ಛಾಯೆ ದೂರ ಮಾಡಲು ಹಣಕಾಸಿನ ಕ್ರಮಗಳನ್ನು ಆರ್‌ಬಿಐ ಮತ್ತು ವಿತ್ತೀಯ ಶಿಸ್ತಿನ ಕ್ರಮಗಳನ್ನು ಕೇಂದ್ರ ಸರ್ಕಾರ ತುರ್ತಾಗಿ ಕೈಗೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.