‘ಒಂದು ಎರಡು ಬಾಳೆಲೆ ಹರಡು, ಮೂರು ನಾಕು ಅನ್ನ ಹಾಕು...’ ಜಿ.ಪಿ.ರಾಜರತ್ನಂ ಅವರ ಊಟದ ಹಾಡನ್ನು ಕೇಳದವರಿಲ್ಲ. ಎಳೆಯರಿಗೆ ಸಂಖ್ಯೆಗಳನ್ನು ಪ್ರಿಯವಾಗಿ ಉಣಬಡಿಸುವ ಬಗೆಯಿದು. ಶಾಲೆ, ಮನೆಯಲ್ಲಿ ಮಕ್ಕಳು ವಿಪರೀತ ಒತ್ತಡದಲ್ಲಿ ಬೆಳೆಯುತ್ತಿರುವುದು ಸ್ಪಷ್ಟ. ಮಕ್ಕಳು ವಿದ್ಯಾರ್ಜನೆಯಲ್ಲಿ ಶ್ರದ್ಧೆ, ಆಸಕ್ತಿಯಿಂದ ತೊಡಗಬೇಕು. ಶಾಲೆಗೆ ಗೈರಾಗಬಾರದು, ಅವರಿಗೆ ತರಗತಿಯೇ ಶಿಕ್ಷೆ ಅನ್ನಿಸಬಾರದು. ಎಲ್ಲ ನಿಗದಿತ ವಿಷಯಗಳಲ್ಲೂ ಕುತೂಹಲವಿರಬೇಕು. ಇವಿಷ್ಟನ್ನೂ ತಕ್ಕಮಟ್ಟಿಗಾದರೂ ಸಾಧ್ಯವಾಗಿಸುವ ಅಭಿಯಾನವೇನಾದರೂ ಇದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಅದುವೇ ತರಗತಿಯಲ್ಲಿ ಸಂಗೀತಕ್ಕೆ ಅನುವು ಮಾಡಿಕೊಡುವುದು.

ಹಿಂದೆ ಯಾರಾದರೂ ಬೋಧಕರು ರಜೆಯಲ್ಲಿಇದ್ದರೆ ಅವರು ತೆಗೆದುಕೊಳ್ಳಬೇಕಾದ ಪೀರಿಯಡ್ಗೆ, ಬಿಡುವಿರುವ ಬೋಧಕರು ಬರುತ್ತಿದ್ದರು. ತಾವೂ ಹಾಡಿ ಮಕ್ಕಳಿಂದಲೂ ಹಾಡಿಸುತ್ತಿದ್ದರು. ಜಗತ್ತನ್ನು ಆವರಿಸಿರುವ ಸದ್ದು, ಗೌಜಿನ ನಡುವೆಯೂ ಸಂಗೀತ ಜೀವಿಸಿದೆ ಎನ್ನುವುದನ್ನು ಯಾರೂ ಅಲ್ಲಗಳೆಯರು.

ಸುಖ, ನೆಮ್ಮದಿಯ ಬದುಕಿಗೆ ಹಂಚಿಕೊಂಡು ಬಾಳುವುದೊಂದೇ ಮಾರ್ಗವೆಂಬ ತತ್ವವನ್ನು ಸಂಗೀತವು ಬಿಂಬಿಸುತ್ತದೆ. ಅನಾದಿ ಕಾಲದಿಂದಲೂ ಸಮುದಾಯಗಳಿಗೆ, ನಾಗರಿಕತೆಗಳಿಗೆ ಸಂಗೀತ ಅವಿಭಾಜ್ಯ ಅಂಗ. ಶಾಲೆಯ ಅಂಗಳದಲ್ಲಿ ಸಂಗೀತ ಅದೇಕೊ ಕಲಿಕೆಯ ವಿಷಯವಾಗಿ ಇನ್ನೂ ಚಿಗುರೊಡೆದಿಲ್ಲ. ಪ್ರವೇಶಾವಕಾಶದ ಪ್ರಕಟಣೆಯಲ್ಲೊ ಇಲ್ಲವೆ ಪರೀಕ್ಷಾ ವೇಳಾಪಟ್ಟಿಯಲ್ಲೊ ‘ಹಿಂದೂಸ್ತಾನಿ ಸಂಗೀತ’, ‘ಕರ್ನಾಟಕ ಸಂಗೀತ’ ಎಂಬ ನಮೂದನ್ನು ಕಣ್ತಪ್ಪಿ ಕಾಣಬೇಕಷ್ಟೆ. ಗಣಿತ, ವಿಜ್ಞಾನ, ವಾಣಿಜ್ಯದಂಥ ವಿಷಯಗಳ ಅಭ್ಯಾಸಕ್ಕಿರುವ ಅವಕಾಶ ವ್ಯಾಪ್ತಿ ಸಂಗೀತಕ್ಕಿಲ್ಲ ಎಂಬ ತಪ್ಪುಗ್ರಹಿಕೆ ಮತ್ತು ಭ್ರಮೆಯ ಫಲವಿದು. ಸಂತೋಷ ಮತ್ತು ಹಿಗ್ಗನ್ನು ಪ್ರಸರಿಸುವ ಸಂಗೀತವು ಪ್ರಕೃತಿಯಲ್ಲೇ ಇದೆ. ಸಾಮರಸ್ಯ ಇರುವುದೆಲ್ಲ ಸಂಗೀತವೆ. ವಿಶ್ವಪ್ರಸಿದ್ಧ ಸಂಗೀತಜ್ಞ 18ನೇ ಶತಮಾನದ ವಿಯೆನ್ನಾದ ವೋಲ್ಫ್ಗಂಗ್ ಅಮೆಡೆಸ್ ‘ಸಂಗೀತವು ಸ್ವರಗಳಲ್ಲಿಲ್ಲ, ಅವುಗಳ ನಡುವಿನ ಮೌನದಲ್ಲಿದೆ’ ಎಂದಿದ್ದಾರೆ.

ಸಂಗೀತ ಬರೀ ರಂಜನೆಗಲ್ಲ, ಅದನ್ನು ಆಲಿಸುವುದರಿಂದ ಅನೇಕ ಪ್ರಯೋಜನಗಳಿವೆ. ಎಲ್ಲ ವಿಧದ ಭಾವನೆಗಳನ್ನೂ ಸಂವಹಿಸುವ ಸಂಗೀತವು ವಿಶ್ವಭಾಷೆ. ಪ್ರತಿ ಜೀವಿಯಲ್ಲೂ ಸಂಗೀತವಿದೆ. ಕೂಸಿಗೆ ಹಾಡುವ ಜೋಗುಳವು ಸ್ವರದ ಮಧುರ ಏರಿಳಿತ. ಅದರಿಂದ ಮಗು ಹೊಸ ಪದಗಳನ್ನು ಪರಿಚಯಿಸಿ
ಕೊಳ್ಳುವುದರ ಜೊತೆಗೆ ಶಬ್ದಗಳ ಲಯಬದ್ಧ ಉಚ್ಚಾರವನ್ನು ಕಲಿಯುತ್ತದೆ. ಎಂದಮೇಲೆ ಶಾಲೆಯು ಸಂಗೀತವನ್ನು ಒಳಗೊಳ್ಳುವುದು ಅತ್ಯಂತ ಸಮಂಜಸ.

ಶಾಲಾ ಸಮಾರಂಭಗಳಲ್ಲಿ ಅಥವಾ ಸ್ಪರ್ಧೆಗಳಲ್ಲಿ ಮಕ್ಕಳು ಶಾಸ್ತ್ರೀಯ ಗಾಯನ ಅನುಕರಿಸುತ್ತಾರೆ. ಅರೆ! ತುಸು ಅಭ್ಯಸಿಸಿದ್ದರೆ ನಗೆಪಾಟಲಿನಿಂದ ಪಾರಾಗಬಹುದಿತ್ತಲ್ಲ ಅನ್ನಿಸುತ್ತದೆ. ಸಂಗೀತವು ಸೃಜನಶೀಲತೆಗೆ ಹೊರದಾರಿ. ಪ್ರತಿ ಮಗುವಿಗೂ ಸಂಗೀತ ಶಿಕ್ಷಣ ಅಗತ್ಯ. ಅದು ಹೊರೆಯೂ ಅಲ್ಲ, ದೊಡ್ಡಸ್ತಿಕೆಯೂ ಅಲ್ಲ. ಮಕ್ಕಳನ್ನು ವಿದ್ಯಾರ್ಜನೆಯ ಪ್ರಕ್ರಿಯೆಯಲ್ಲಿ ರಂಜಿಸುವಲ್ಲಿ ಮತ್ತು ತೊಡಗಿಸುವಲ್ಲಿ ಸಂಗೀತವು ಶಿಕ್ಷಣದ ಒಂದು ಭಾಗವಾಗಿರುವುದು ಉತ್ತೇಜನಕಾರಿ.

ಸಂಗೀತ ಕಲಿಕೆಯಿಂದ ಆಗುವ ಅನುಕೂಲಗಳು ಬಹುಮುಖಿ. ಏಕಾಗ್ರತೆ, ನೈತಿಕತೆ, ನೆನಪಿನಶಕ್ತಿಯ ವರ್ಧನೆ, ಉತ್ಸಾಹ ಮತ್ತು ಶಿಸ್ತು ಸಾಧ್ಯ. ಲಯ, ಇಂಪಿನ ಸೆಳೆತ ಇತರ ವಿಷಯಗಳನ್ನೂ ಸಮರ್ಥವಾಗಿ ಗ್ರಹಿಸಲು ಪ್ರೇರೇಪಿಸುತ್ತವೆ. ಭಾಷಾಕೌಶಲವನ್ನು ವರ್ಧಿಸುತ್ತವೆ. ಕ್ಲಿಷ್ಟವೆಂದು ತೋರುವ ಗಣಿತ ಕೂಡ ಸಂಗೀತಕ್ಕೆ ಮಣಿಯುವುದು. ಏಕೆಂದರೆ ಸಂಗೀತದ ಪರಿಕಲ್ಪನೆಗಳಿಗೆ ಗಣಿತೀಯ ಪ್ರತಿರೂಪಗಳಿವೆ.

ಇನ್ನು ವಾದ್ಯ ಸಂಗೀತವು ಪ್ರಯತ್ನಶೀಲ ಮತ್ತು ಪರಿಶ್ರಮ ಎಂಬ ಎರಡು ಮುಖ್ಯ ಮೌಲ್ಯಗಳನ್ನು ರೂಢಿಸುತ್ತದೆ. ಸಂಗೀತದಿಂದ ಲಭಿಸಿದ ಫಲಗಳನ್ನು ಶೈಕ್ಷಣಿಕ ವಿಷಯಗಳಿಗೆ ವರ್ಗಾಯಿಸಬಹುದು. ವಿವಿಧತೆಯಲ್ಲಿ ಏಕತೆ ಎಂಬ ಧೋರಣೆಯ ಭಾರತದಲ್ಲಿ ಸಂಸ್ಕೃತಿ ಪ್ರಜ್ಞೆ ಹಾಗೂ ಸಹಯೋಗ ಮನೋಭಾವದ ಸಾಕಾರಕ್ಕೆ ಸಂಗೀತಕ್ಕಿಂತ ದಿವ್ಯೌಷಧ ಇನ್ನೊಂದಿಲ್ಲ. ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಸಂಗೀತ ಶಿಕ್ಷಣ ಅಗತ್ಯ. ಭವಿಷ್ಯದಲ್ಲಿ ಮಕ್ಕಳು ಯಾವುದೇ ಮಹತ್ತರ ಜವಾಬ್ದಾರಿ ನಿರ್ವಹಿಸಲಿ ಅವರಿಗೆ ಬೇಕಾಗುವುದು ಸಮಾಧಾನಚಿತ್ತ ಮತ್ತು ಸಂವಹನ ಕೌಶಲ. ಸಂಗೀತ ಇವನ್ನು ಕಟ್ಟಿಕೊಡುವುದು.

ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ದೇಶಗಳು ತಂತಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಷ್ಕರಿಸಿವೆ. ಮಕ್ಕಳ ಅರಿವಿನ ಸಾಮರ್ಥ್ಯ ವರ್ಧನೆಗೆ ಮತ್ತು ಸಮಗ್ರ ಬೆಳವಣಿಗೆಗೆ ಸಂಗೀತದ ಅಗತ್ಯವನ್ನು ಮನಗಂಡಿವೆ. ಸಂಗೀತವು ಉಳಿದ ವಿಷಯಗಳ ಹಾಗೆ ಪರೀಕ್ಷೆಗಿರಬೇಕಿಲ್ಲ. ತರಗತಿಗೆ ವಾರಕ್ಕೆ ಒಂದೊ, ಎರಡೊ ಪೀರಿಯಡ್ ಇದ್ದರೆ ಸಾಕು. ಬೋಧಕರು ಹಾಡಿ, ಮಕ್ಕಳಿಂದ ಹಾಡಿಸುವ ಕಾರಣ ಬಹುತೇಕ ನೂರಕ್ಕೆ ನೂರು ಹಾಜರಾತಿಯಿದ್ದೀತು. ಸಂಗೀತ ಶಿಕ್ಷಣವು ಶಿಷ್ಯ ಮತ್ತು ಗುರು ಇಬ್ಬರಿಗೂ ಚೇತೋಹಾರಿ. ಎಂದೋ ಆಲಿಸಿದ ನಮ್ಮ ಅಚ್ಚುಮೆಚ್ಚಿನ ಹಾಡು ಬಹಳ ವರ್ಷಗಳ ನಂತರ ನಮ್ಮ ಕಿವಿಗೆ ಬಿದ್ದಾಗ ಅದರ ಸಾಲುಗಳು ತ್ರಾಸವಿಲ್ಲದೆ ನೆನಪಾಗುತ್ತವೆ. ಈ ಅನುಭಾವಕ್ಕೆ ಸಂಗೀತಜ್ಞರೇ ಆಗಬೇಕಿಲ್ಲ. ಸಂಗೀತ ಯಾವುದೇ ಪ್ರಕಾರವಿರಲಿ ಭಾಷೆಯ ಹಂಗಿಲ್ಲದೆ ಆನಂದಿಸಬಹುದು.

ಸಂಗೀತದ ಇಂತಹ ಸುಧಾರಕ ಶಕ್ತಿಯನ್ನರಿತ ಫ್ರಾನ್ಸ್ ಸರ್ಕಾರ 1982ರ ಜೂನ್ 21ರಂದು ವೈಭವದಿಂದ ‘ಸಂಗೀತ ಉತ್ಸವ’ ನಡೆಸಿತು. ಅದುವೇ ಇಂದಿನ ‘ವಿಶ್ವ ಸಂಗೀತ ದಿನ’ಕ್ಕೆ ನಾಂದಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.