‘ಮನೆಗೆಲಸದಲ್ಲಿ ಅವನ ಪಾಲು’ ಅವಳಿಗೆ ಮಾಡುವ ಸಹಾಯ, ಸಹಾನುಭೂತಿಯಲ್ಲ. ಅದು ಅವನ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ಗಂಡು–ಹೆಣ್ಣು ಇಬ್ಬರದೂ ಮನಸ್ಥಿತಿ ಬದಲಾಗಬೇಕು. ಬದಲಾಗುತ್ತಿರುವ ‘ಅವನ’ ಸಣ್ಣ ಪ್ರಾಮಾಣಿಕತೆಯನ್ನು ಹಸನ್ಮುಖದಿಂದ ಸ್ವಾಗತಿಸುತ್ತಲೇ ಮನೆಯ ವಾತಾವರಣವನ್ನು ಇನ್ನಷ್ಟು ತಿಳಿಯಾಗಿಸುವ, ಸಂಬಂಧಗಳನ್ನು ಮತ್ತಷ್ಟು ಹಗುರವಾಗಿಸುವ ಪ್ರಯತ್ನ ನಡೆಯುತ್ತಿರಬೇಕು... ಆಗಲೇ ‘ಮನೆ ಬೃಂದಾವನ’ದಂತಾಗಲು ಸಾಧ್ಯ

ಕಾಲ, ದೇಶ, ವರ್ಗ, ಊರು, ಓಣಿ... ಯಾವುದೇ ಇರಲಿ, ಅಡುಗೆ ಮನೆಯ ವಿಷಯ ಬಂದಾಗ ಒಂದೇ ಮಾತು; ಅದು ‘ಅವಳ’ ಲೋಕ. ಮನೆ ಒಪ್ಪಗೊಳಿಸುವುದು, ವಸ್ತುಗಳನ್ನು ಓರಣವಾಗಿಡುವುದು... ಅದು ‘ಅವಳ’ ಕೆಲಸ. ಮಕ್ಕಳ ಊಟ–ಉಪಚಾರ, ಹೋಮ್ವರ್ಕ್... ಅದೂ ‘ಅವಳ’ದೇ. ತರಕಾರಿ ಮುಗಿದು ಹೋಗಿದೆ, ಮನೆಗೆ ದಿನಸಿ ತರಬೇಕು, ಹಾಲಿನವನಿಗೆ ದುಡ್ಡು ಕೊಡಬೇಕು, ಸಿಂಕ್ನ ನಲ್ಲಿಯಲ್ಲಿ ನೀರು ಜಿನುಗುತ್ತಿದೆ, ಫಿಲ್ಟರ್ನ ಕ್ಯಾಂಡಲ್ ಬದಲಾಯಿಸಬೇಕು, ದೀಪಕ್ಕೆ ಬತ್ತಿ ಹೊಸೆಯಬೇಕು... ಪಾಪ, ಇದೆಲ್ಲ ‘ಅವನ’ ಕೆಲಸವಲ್ಲ…

ಮನೆಯ ಆರ್ಥಿಕ ಜವಾಬ್ದಾರಿಯಲ್ಲಿ ಅರ್ಧ ಪಾಲು, ಒಮ್ಮೊಮ್ಮೆ ಮುಕ್ಕಾಲು ಪಾಲು ಅವಳ ಹೆಗಲಿಗೇ ಬಿದ್ದಿದೆ, ಅಂದರೆ, ಮನೆ–ಮಕ್ಕಳ ಜವಾಬ್ದಾರಿಗಳಲ್ಲೂ ಅವನು ಪಾಲು ತಗೊಳ್ಳಬೇಕಿತ್ತಲ್ಲವೇ?

ಹೌದು, ಅವನೂ ಈಗೀಗ ಬದಲಾಗಿದ್ದಾನೆ ಬಿಡಿ. ದುಡಿದು ಬರುವ ಹೆಂಡತಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಾನೆ, ಮಕ್ಕಳ ಪಾಲನೆಯಲ್ಲಿಯೂ ಅವನ ಸಹಕಾರವಿದ್ದೇ ಇದೆ. ಮೊದಲಿನ ಅಪ್ಪಂದಿರಿಗೆ ಹೋಲಿಸಿದರೆ ಇಂದಿನ ಅಪ್ಪಂದಿರು ‘ಅವಳ’ ನೆರವಿಗೆ ಇಷ್ಟಾದರೂ ಮನಸು ಮಾಡುತ್ತಿದ್ದಾರಲ್ಲ…

ಇಲ್ಲ, ಅವನ ಸಹಾಯ, ಸಹನಾಭೂತಿ, ಸಹಕಾರ, ನೆರವಿನ ಪ್ರಶ್ನೆ ಖಂಡಿತ ಇದಲ್ಲ. ಅವಳಿಗೆ ನೆರವು ನೀಡಲು, ಸಹಾಯ ಮಾಡಲು ‘ಅವನು’ ‘ಅವಳ’ ಮನೆಯಲ್ಲಿ ತಂಗಿದ ಅತಿಥಿಯಲ್ಲ. ಅವನೂ ಆ ಮನೆಯ ಸಹಭಾಗಿ, ಆ ಸಂಸಾರದಲ್ಲಿ ಅವನಿಗೂ ಸಮಪಾಲಿದೆ. ಅವನ ಜವಾಬ್ದಾರಿಗೆ ಅವಳು ಹೆಗಲು ಕೊಟ್ಟಿದ್ದಾಳೆಂದರೆ ಅವಳ ಜವಾಬ್ದಾರಿಗಳನ್ನು ಅವನೂ ತನ್ನದೆಂದುಕೊಳ್ಳಬೇಕಲ್ಲವೆ...

ಆದರೆ, ಇಂದಿಗೂ ಕೇವಲ ಶೇ 10ರಷ್ಟು ಪುರುಷರಿಗೆ ಮನೆಗೆಲಸದಲ್ಲಿ ಭಾಗಿಯಾಗುವ ಮನಸಿದೆ. ಅವಳಿಗೆ ಮಾಡುವ ಸಹಾಯ, ಸಹಕಾರ, ನೆರವಿನ ರೂಪದಲ್ಲಿ ಎನ್ನುತ್ತದೆ ಅಧ್ಯಯನವೊಂದು. ಅಂದರೆ ಭಾರತೀಯ ಗಂಡ್ಮಕ್ಕಳಿಗೆ ಯಾವುದು ತನ್ನ ಜವಾಬ್ದಾರಿ, ಯಾವುದು ಸಹಾಯ ಎನ್ನುವ ಅಂತರವನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅದು ಸಾಮಾಜಿಕ ಮನಸ್ಥಿತಿಗಳ ಕಾರಣದಿಂದ ಇರಬಹುದು ಅಂಥ ವ್ಯತ್ಯಾಸವನ್ನು ಕಂಡುಕೊಳ್ಳುವಂತಹ ಸಂಸ್ಕಾರ ಸಿಕ್ಕಿರಲಿಕ್ಕಿಲ್ಲ.

ಕಾಲ ಎಷ್ಟೇ ಬದಲಾದರೂ ಮನೆಯ ಜವಾಬ್ದಾರಿಗಳಿನ್ನೂ ಅವಳ ಲೆಕ್ಕದಲ್ಲಿಯೇ ಉಳಿದಿವೆ. ಆದಾಗ್ಯೂ, ಬದಲಾವಣೆಯಂತೂ ಖಂಡಿತ ಇದ್ದೇ ಇದೆ. ಶೇ 60ರಷ್ಟು ಭಾರತೀಯ ಪುರುಷರು ಸಂಗಾತಿಯ ಹೊರೆಯನ್ನು ಕಡಿಮೆ ಮಾಡಲು ಮನೆಕೆಲಸಗಳಲ್ಲಿ ತೊಡಗುವ ಇಚ್ಛೆಯನ್ನೇನೊ ಹೊಂದಿದ್ದಾರೆ. ಆದರೆ ಅದೂ ತಮ್ಮದಲ್ಲದ ಕೆಲಸ, ಸಾಧ್ಯವಾದಷ್ಟು ಸಹಾಯ ಮಾಡುವ ಧಾರಾಳತನದಿಂದ. ಅದು ತಮ್ಮ ಜವಾಬ್ದಾರಿ ಎನ್ನುವ ಮನಸ್ಥಿತಿಯಿಂದಲ್ಲ ಎನ್ನುತ್ತದೆ ಮಿಂಟೆಲ್ ಸಂಶೋಧನೆ.

ಹೆಚ್ಚಿನಸಂದರ್ಭಗಳಲ್ಲಿ ಅವನು ಮನೆಗೆಲಸಕ್ಕೆ ನಿಂತರೂ ಮನೆಯ ಇತರೆ ಸದಸ್ಯರು, ಸ್ನೇಹಿತರು, ಪರಿಚಿತರು ಜೋಕ್ ಮಾಡುವುದು, ಲಘುವಾಗಿ ಮಾತಾಡುವುದು, ಅದು ಅವನ ಕೆಲಸ ಅಲ್ಲ ಎನ್ನುವಂತಹ ಹೇಳಿಕೆ ನೀಡುವುದು ನಡೆಯುತ್ತವೆ. ಮತ್ತೆ ಕೆಲವುಸಲ ಅವಳೇ ಅವನ ಕೆಲಸಗಳನ್ನು ಕಡೆಗಣಿಸುವ, ಹೆಚ್ಚಿನ ಶಿಸ್ತು ನಿರೀಕ್ಷಿಸುವ ಮೂಲಕ ಅವನ ಪ್ರಯತ್ನವನ್ನು ತಡೆಯುತ್ತಾಳೆ.

ಮನೆಗೆಲಸದಲ್ಲಿ ಅವನನ್ನೂ ಒಳಗೊಳ್ಳಬೇಕಾದರೆ ಏನು ಮಾಡಬೇಕು? ದಿನನಿತ್ಯ ಎದ್ದು ಮಹಾಯುದ್ಧಕ್ಕೆ ನಿಲ್ಲಬೇಕು ಎಂದಲ್ಲ. ಮನೆಗೆಲಸದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಳಕೊಳ್ಳುವ ಮಟ್ಟಕ್ಕೆ ಇಬ್ಬರ ನಡುವೆ ಮನೆಗೆಲಸ ಸಮರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಪ್ರೀತಿ–ವಿಶ್ವಾಸ–ಹಂಚಿಕೆ–ತಮಾಷೆಯಿಂದ ಮನೆಗೆಲಸವನ್ನು ಇಬ್ಬರೂ ಸೇರಿ ಮುಗಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ‘ಮನೆಗೆಲಸ ಒಂದು ಹೊರೆ, ಅದನ್ನು ನಿನ್ನ ಮೇಲೆ ಹಾಕುತ್ತಿದ್ದೇನೆ’ ಎನ್ನುವಂತಹ ಭಾವನೆಯನ್ನು ಮೂಡಿಸಬಾರದು. ಸಮಾಧಾನವಾಗಿ, ಅಕ್ಕರೆಯಿಂದ ಮನೆಗೆಲಸವನ್ನು ಕಾಣುತ್ತ, ಅವನಿಗೂ ಅದೇ ಭಾವ ಮೂಡುವಂತೆ ಮಾಡಿದರೆ ಮನೆ–ಕೆಲಸ–ಸಂಬಂಧ ಎಲ್ಲವೂ ಹಗುರಾಗುವುದು.

ಟಾಕ್ಸಿಕ್ ಪುರುಷತ್ವದಿಂದ ದೂರವಿರೋಣ

ಪ್ಲೇಟೋವಿನಿಂದ ಹಿಡಿದು ತೀರಾ ಇತ್ತೀಚಿನವರೆಗೆ ಆರೋಗ್ಯಕರ ಸಮಾಜವನ್ನು ಕಟ್ಟುವ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಆದರ್ಶ ಸಮಾಜ ರೂಪಿಸುವುದಕ್ಕೆ ಗಾರ್ಡಿಯನ್ಸ್ ಎಂಬ ಗುಂಪೊಂದನ್ನು ಸೃಷ್ಟಿಸಿ ಅತ್ಯುನ್ನತ ಶಿಕ್ಷಣ, ತರಬೇತಿ ನೀಡಿ ಅವರನ್ನೇ ನಗರವನ್ನು ಆಳುವುದಕ್ಕೆ ಬಿಟ್ಟು ಬಿಡಬೇಕು ಎಂಬ ಅನಿಸಿಕೆ ಪ್ಲೇಟೋದ್ದಾಗಿತ್ತು. ಅದು ಆ ಕಾಲಕ್ಕೆ ಸರಿಯಿದ್ದಿರಬಹುದು. ಆದರೆ ಬದಲಾದ ಈ ಕಾಲದಲ್ಲಿ ಉತ್ತಮ ಮತ್ತು ಸ್ವಸ್ಥ ಸಮಾಜ ಸೃಷ್ಟಿಸುವುದು ಹೇಗೆ ಎಂಬ ಸವಾಲಿಗೆ ನನ್ನ ನೇರ ಉತ್ತರ ಮುಂದಿನ ಪೀಳಿಗೆಯನ್ನು ಲಿಂಗ ಸಂವೇದನಾಶೀಲರನ್ನಾಗಿ ಬೆಳೆಸುವುದು.

ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಮನೆಯಲ್ಲೇ ನಾನು ಗಂಡು ಅವಳು ಹೆಣ್ಣು, ಅವಳ ಕೆಲಸಗಳನ್ನು ನಾನು ಮಾಡಬಾರದು, ನಾನು ಒಡೆಯ ಅವಳು ಅಧೀನ ಎಂಬ ಟಾಕ್ಸಿಕ್ ಪುರುಷತ್ವ ಮನೋಭಾವವಿದ್ದಾಗ ಮಕ್ಕಳಿಗೆ ಬೇರೆ ಏನು ಕಲಿಸಲು ಸಾಧ್ಯ! ಕೌಟುಂಬಿಕ ಹಿಂಸೆಗೆ ಹೆಣ್ಣು ತುತ್ತಾದರೆ, ಮನೆಯ ಹೊರಗಿನ ತರತಮಗಳು, ದೌರ್ಜನ್ಯ, ಕ್ರೌರ್ಯ ಸಹಜವೆನ್ನಿಸತೊಡಗುತ್ತವೆ. ಮನೆಯಲ್ಲಿ ಗಂಡ ಹೆಂಡತಿ ಒಬ್ಬರಿಗೊಬ್ಬರು ನೆರವಾಗುತ್ತಾ ಸಾಗಿದಾಗ, ಮನೆಯಲ್ಲಿ ಮಡದಿಯ ಶ್ರಮಕ್ಕೆ ಮನ್ನಣೆ ದೊರೆತಾಗ, ನಿತ್ಯ ಕಾಯಕಕ್ಕೆ ಲಿಂಗದ ಲೇಬಲ್ ಹಚ್ಚದೆ, ಕಾಯಕವನ್ನು ಕಾಯವನ್ನಾಗಿ ನೋಡಿದಾಗ, ಹೊಸ ಸಾಮಾಜಿಕ ಬದಲಾವಣೆಗೆ ನಾಂದಿಯಾಗಬಹುದು. ಬದಲಾವಣೆ ಮನದಿಂದ ಮತ್ತು ಮನೆಯಿಂದ ಆರಂಭವಾಗಬೇಕು... ಆಗುತ್ತಲಿದೆ ಕೂಡ...

-ಹರೀಶ್ ಗಂಗಾಧರ್, ಸಹಪ್ರಾಧ್ಯಾಪಕ

ಸಹಾಯ ಎನ್ನುವುದೇ ಸಮಸ್ಯೆ

ಜೆಂಡರ್ ರೋಲ್ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇವತ್ತಿಗೂ ಸಿದ್ಧಮಾದರಿಗಳ ಆಚೆಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಸ್ಟಿರಿಯೋಟೈಪ್ಗಳ ಆಚೆಗೆ ಯೋಚಿಸುವುದಕ್ಕೆ ಸಾಧ್ಯವೇ ಆಗದ ರೀತಿ ನಮ್ಮ ಶಿಕ್ಷಣ, ಸಮಾಜ, ಕುಟುಂಬ ನಮ್ಮನ್ನು ಬೆಳೆಸುತ್ತಿದೆ. ದುಡಿಯವುದು ಮತ್ತು ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಳ್ಳುವುದು ಮಾತ್ರ ಗಂಡು ನಿರ್ವಹಿಸಬೇಕಾದ ಜವಾಬ್ದಾರಿ ಎನ್ನುವುದನ್ನು ಎಲ್ಲ ಕಡೆ ಕಲಿಸಲಾಗುತ್ತಿದೆ. ಆದರೆ, ದುಡಿಯುವ ಹೆಣ್ಣು ದುಡಿಯುವುದರ ಜೊತೆಗೆ ಮಕ್ಕಳ ಪೋಷಣೆ, ಅಡುಗೆ, ಮನೆಗೆಲಸ ಎಲ್ಲವನ್ನೂ ತನ್ನ ಜವಾಬ್ದಾರಿ ಎಂದು ನಂಬುವಂತೆ ಬೆಳೆಸಲಾಗುತ್ತಿದೆ. ಈಗ ಬದಲಾಗುತ್ತಿರುವ ಸಂದರ್ಭಗಳಿಗೆ ಅನುಗುಣವಾಗಿ ಗಂಡಸರು ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು ಮುಂತಾದವುಗಳನ್ನು ಮಾಡಿದರೂ ಅದನ್ನು ತಾವು ಕೂಡ ನಿರ್ವಹಿಸಬೇಕಾದ 'ಜವಾಬ್ದಾರಿ' ಅಂದುಕೊಳ್ಳದೆ ತಮ್ಮ ಮನೆಯ ಹೆಂಗಸರಿಗೆ ಮಾಡುವ 'ಸಹಾಯ' ಎಂದು ಭಾವಿಸಿಕೊಳ್ಳುತ್ತಾರೆ. ಇದು ಸಮಸ್ಯಾತ್ಮಕ. ಸಣ್ಣ ಪುಟ್ಟ ಮನೆಗೆಲಸಗಳನ್ನು ಮಾಡುವುದರ ಮೂಲಕ ತಾವು ಲಿಂಗ ಸೂಕ್ಷ್ಮತೆಯನ್ನು ಸಾಧಿಸಿಬಿಟ್ಟಿದ್ದೇವೆ ಎಂದು ಸಮಾಧಾನ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನಗೂ ಹೆಣ್ಣಿನಷ್ಟೆ ಸಮಾನ ಜವಾಬ್ದಾರಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

-ವಿ.ಎಲ್. ನರಸಿಂಹಮೂರ್ತಿ, ಲೇಖಕ

ಕುಟುಂಬಗಳು ಬದಲಾದ ಕಾಲಕ್ಕೆ...

ಹೆಣ್ಣು–ಗಂಡು ಸರಿಸಮನಾಗಿ ದುಡಿಯುವ ಈ ಕಾಲದಲ್ಲಿ ಕುಟುಂಬದ ಮೂಲದಲ್ಲಿಯೇ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಮುಂದೆ ಕುಟುಂಬಗಳು ಕುಟುಂಬವಾಗಿ ಉಳಿಯಬೇಕಾದರೆ ಮಕ್ಕಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಬೆಳೆಸಲೇಬೇಕು. ಗಂಡು ಮಕ್ಕಳು ಬದಲಾಗುತ್ತಿದ್ದಾರೆ. ಅವಳು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆಲಸ ಮಾಡುತ್ತಾರೆ, ಕೆಲಸದಿಂದ ಬಂದಾಕ್ಷಣ ರಿಲ್ಯಾಕ್ಸ್ ಮೂಡ್ಗೆ ಜಾರುತ್ತಾರೆ. ಅವಳು ಮನೆಗೆ ಬಂದ ಕೂಡಲೇ ತನ್ನ ವೃತ್ತಿಪರ ಪೋಷಾಕು ಕಳಚಿಟ್ಟು, ಮನೆಗೆಲಸದ ಗೌನ್ ಒಳಗೆ ತೂರಿಕೊಳ್ಳಲೇಬೇಕು. ಅವಳು ಮನೆಯಲ್ಲಿದ್ದಾಳೆ ಎಂದರೆ ಮುಗಿಯಿತು, ಮನೆಯ ಕಾಲಿಂಗ್ ಬೆಲ್ ಆದರೂ, ಫೋನು ಹೊಡೆದುಕೊಂಡರೂ, ಮಗು ಅತ್ತರೂ ಅವಳೇ ಎದ್ದು ಬರಬೇಕು... ಇನ್ನು ಮನೆಯಲ್ಲಿ ನೆಂಟರು, ಸ್ನೇಹಿತರು ಇದ್ದಾಗ ಎಲ್ಲಿ ‘ಹೆಂಡತಿ ಗುಲಾಮ’ ಅಂದು ಬಿಡುತ್ತಾರೊ ಎಂದು ಮನೆಗೆಲಸ ಮಾಡಲು ಮುಜುಗುರ ಪಟ್ಟುಕೊಳ್ಳುವುದು ಅನೇಕ ಜನರ ಸ್ವಭಾವ. ಇಂತಹ ಮನಸ್ಥಿತಿ ಬದಲಾಗಬೇಕು. ಕೆಲಸಗಳಲ್ಲಿ ಹೆಣ್ಣು–ಗಂಡೆಂಬ ವರ್ಗೀಕರಣವಿಲ್ಲ ಎನ್ನುವುದನ್ನು ಮನದಟ್ಟು ಮಾಡಬೇಕು.

-ಲತಾ ಶ್ರೀನಿವಾಸ್, ಲೇಖಕಿ

ಹೀಗೆ ಮಾಡಿ

• ಅವನಿಂದ ಕೆಲಸ ಮಾಡಿಸುವುದು ಹಟವಾಗದಿರಲಿ, ಜಗಳ ಮನಸ್ಥಾಪಗಳು ಪರಿಹಾರವಲ್ಲ

• ಅವನ ಜವಾಬ್ದಾರಿಗಳನ್ನು ಅರಿಯಲು, ಒಪ್ಪಿಕೊಳ್ಳಲು, ನಿರ್ವಹಿಸಲು ಅವಕಾಶ ಕೊಡಿ

• ತನ್ನದೇ ರೀತಿಯಲ್ಲಿ ಕೆಲಸ ಮಾಡಲು ಬಿಡಿ

• ಎಲ್ಲದರಲ್ಲೂ ತಪ್ಪು ಹುಡುಕಬೇಡಿ

• ನಿಮ್ಮಷ್ಟೇ ಪರಿಪೂರ್ಣತೆಯನ್ನು ಅವನಿಂದ ನಿರೀಕ್ಷಿಸುವುದು ಬೇಡ

• ಅವನು ಮಾಡಿದ ಕೆಲಸವನ್ನು ಮತ್ತೆ ನೀವು ಮಾಡಬೇಡಿ

• ಸಂಬಂಧಿಗಳೆದುರು–ಸ್ನೇಹಿತರೆದುರು ಅವನ ಕೆಲಸಗಳ ಟೀಕೆ ಬೇಡ

• ಬೇರೆಯವರೊಂದಿಗೆ ಹೋಲಿಕೆ ಮಾಡಿ ಅವಮಾನಿಸದಿರಿ

• ನಿಮ್ಮ ಆಜ್ಞೆಯನ್ನು ಆತ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಯಸಬೇಡಿ

• ಅವನು ಮನೆಗೆಲಸ ಮಾಡುವ ಮೂಲಕ ನಿಮಗೆ ದೊಡ್ಡ ಸಹಾಯ ಮಾಡುತ್ತಿದ್ದಾನೆ ಎನ್ನುವ ಭಾವನೆ ಮೂಡಲು ಆಸ್ಪದ ಕೊಡಬೇಡಿ

• ಅವನ ಪ್ರಯತ್ನವನ್ನು ಪ್ರಶಂಸಿಸುವುದೂ ಮುಖ್ಯ

• ಮನೆಗೆಲಸದಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.