ಜೂ ನ್ ತಿಂಗಳಿನಲ್ಲಿ ಪ್ರಪಂಚದಾದ್ಯಂತ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಹಬ್ಬವೊಂದನ್ನು ಆಚರಿಸಲಾಗುತ್ತದೆ. ಲೈಂಗಿಕ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುವ ಎಲ್ಲ ಸಮುದಾಯಗಳು ಇದರಲ್ಲಿ ಭಾಗವಹಿಸುತ್ತವೆ. ತಮ್ಮ ಭಿನ್ನ ಲೈಂಗಿಕ ಅಭಿವ್ಯಕ್ತಿಯನ್ನು ಜಗತ್ತಿಗೆ ತೋರ್ಪಡಿಸಲಾಗದೇ ಚಡಪಡಿಸುತ್ತಿರುವ ಅನೇಕರಿಗೆ ಅವರ ದ್ವಂದ್ವದಿಂದ ಹೊರಬರಲು ಬೆಂಬಲ ನೀಡುವುದೂ ಈ ಹಬ್ಬದ ಉದ್ದೇಶವಾಗಿದೆ. ಜೂನ್ 28ರಂದು ಜಗತ್ತಿನಾದ್ಯಂತ ಪ್ರೈಡ್ ಡೇ ಆಚರಿಸಲಾಗುತ್ತದೆ. ತಿಂಗಳ ಪೂರ್ತಿ ಒಂದಿಲ್ಲೊಂದು ಕಡೆ ಕಾಮನಬಿಲ್ಲಿನ ಬಾವುಟ ಹಿಡಿದು ‘ಪ್ರೈಡ್ ಡೇ ಮಾರ್ಚ್’ಗಳು ನಡೆಯುತ್ತಲೇ ಇರುತ್ತವೆ.

ಪ್ರೈಡ್ ಹಬ್ಬದ ಆಚರಣೆಯ ಹಿಂದೆ ಒಂದು ಇತಿಹಾಸವೇ ಇದೆ. ಮಾನವ ಬೇರೆ ಪ್ರಾಣಿವರ್ಗಗಳಿಂದ ಪ್ರತ್ಯೇಕಗೊಂಡು ಸಮಾಜಜೀವಿಯಾಗಿ ಬದುಕು ಕಟ್ಟಿಕೊಂಡ ನಂತರ ತನ್ನ ಅಭಿವ್ಯಕ್ತಿಗೆ ಸಾಮಾಜಿಕ ಕಟ್ಟಳೆಗಳನ್ನು ರೂಪಿಸಿಕೊಳ್ಳುತ್ತಲೇ ಬಂದಿದ್ದಾನೆ. ಲೈಂಗಿಕತೆಯ ಬಗೆಗಂತೂ ತೀರಾ ಮಡಿವಂತಿಕೆಯನ್ನು ರೂಢಿಸಿಕೊಂಡಿರುವುದಲ್ಲದೇ ಅದನ್ನು ಸಂತಾನಾಭಿವೃದ್ಧಿಗಾಗಿ ಗಂಡುಹೆಣ್ಣುಗಳು ಮಾತ್ರವೇ ನಡೆಸಬೇಕಾದ ಕ್ರಿಯೆಯೆಂದು ನಿಯಮ ವಿಧಿಸಲಾಗಿದೆ. ಇದರಾಚೆಗಿನ ಅಭಿವ್ಯಕ್ತಿಗಳೆಲ್ಲವನ್ನೂ ಅಸಹಜವೆಂದು ಗುರುತಿಸಲಾಗುತ್ತದೆ. ಹಾಗಾಗಿ ಗಂಡಿನೊಳಗೆ ಹೆಣ್ಣಿನ ಭಾವಗಳು ಸೆರೆಯಾಗಿರುವುದು, ಹೆಣ್ಣಿನೊಳಗೆ ಗಂಡೊಬ್ಬ ಅಡಗಿರುವುದು, ಸಲಿಂಗ ಕಾಮ, ದ್ವಿಲಿಂಗ ಕಾಮ ಇವೆಲ್ಲವನ್ನೂ ಲಾಗಾಯ್ತಿನಿಂದ ಮನೋವ್ಯಾಧಿಗಳೆಂದೇ ಪ್ರತಿಪಾದಿಸುತ್ತಾ ಬರಲಾಗಿದೆ.

ಸಸ್ಯ ಮತ್ತು ಪ್ರಾಣಿವರ್ಗದಲ್ಲಿರುವಂತೆ ಮನುಷ್ಯನಲ್ಲಿಯೂ ಸಹಜವಾಗಿ ಹುಟ್ಟಿನಿಂದಲೇ ಬೆಳೆದುಬಂದಿರುವ ಸ್ವಭಾವಗಳಾಗಿದ್ದರೂ ಲೈಂಗಿಕ ಅಲ್ಪಸಂಖ್ಯಾತ ಜನ ತಮ್ಮ ಅಭಿವ್ಯಕ್ತಿಯನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಅಥವಾ ಅವುಗಳ ಈಡೇರಿಕೆಗಾಗಿ ಗೋಪ್ಯ ಮಾರ್ಗಗಳನ್ನು ಹುಡುಕಿಕೊಂಡು ಇಲ್ಲವೇ ಸಮಾಜದ ದೂಷಣೆಗೆ ಹೆದರಿ ಖಿನ್ನತೆಗೊಳಗಾಗಿ ಜೀವನವನ್ನೇ ಬಲಿಕೊಟ್ಟಿದ್ದಾರೆ. ಸಲಿಂಗಿಗಳೂ ಕುಟುಂಬದ ಒತ್ತಾಯಕ್ಕಾಗಿ ಮದುವೆಯಾಗಿ ತಮ್ಮ ಸಂಗಾತಿಯನ್ನು ಜೀವನಪೂರ್ತಿ ನರಳಿಸಿದ ಉದಾಹರಣೆಗಳು ಸಾಕಷ್ಟಿವೆ. ಸಮಾಜದ ಹರಿವಿನೊಂದಿಗೆ ಗುಪ್ತಗಾಮಿನಿಯಾಗಿ ಹರಿದುಬಂದ ಈ ಕಿರುತೊರೆ ತನ್ನತನದ ಸಾಬೀತಿಗೆ ಸಮಯಕ್ಕಾಗಿ ಕಾಯುತ್ತಿತ್ತು ಅನಿಸುತ್ತದೆ. ಅದರ ಒಳಗುದಿ ಹೋರಾಟದ ಜ್ವಾಲಾಮುಖಿಯಾಗಿ ಸಿಡಿಯುವ ಘಟನೆಯೊಂದು 1969ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆಯಿತು.

1969ರ ಜೂನ್ 28ರಂದು, ನ್ಯೂಯಾರ್ಕ್ ನಗರದ ಹೊರವಲಯದಲ್ಲಿರುವ ಸ್ಟೋನ್ವಾಲ್ ಇನ್ ಬಾರ್ನ ಮೇಲೆ ಪೊಲೀಸರು ದಾಳಿ ನಡೆಸಿದರು. ಸಲಿಂಗಕಾಮಿಗಳಿಗೆ ಅಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ನಡೆಯುತ್ತಿದೆ ಮತ್ತು ಅವರಿಗೆ ನರ್ತಿಸಲು ಅವಕಾಶ ನೀಡಲಾಗಿದೆ ಎಂಬುದೇ ಈ ದಾಳಿಯ ಹಿಂದಿನ ಕಾರಣ. ಸಲಿಂಗಕಾಮವು ಅಪರಾಧವೆಂದು ಪರಿಗಣಿಸಲ್ಪಟ್ಟ ಆ ಕಾಲದಲ್ಲಿ ಇಂತಹ ದಾಳಿಗಳು ಪದೇ ಪದೇ ನಡೆಯುತ್ತಿದ್ದವು ಮತ್ತು ಸ್ಟೋನ್ವಾಲ್ ಇನ್ ಬಾರ್ಗಳಂಥ ಕೆಲವು ಸ್ಥಳಗಳಲ್ಲಿ ಮಾತ್ರವೇ ಅವರಿಗೆ ಪ್ರವೇಶವಿತ್ತು. ಆದರೆ ಈ ಸಲ ದಾಳಿ ನಡೆದಾಗ ಅಲ್ಲಿ ಸೇರಿದ್ದ ಗೇ ಜನರು ಪೊಲೀಸರ ವಿರುದ್ಧ ದಂಗೆ ಎದ್ದರು. ವಿಶೇಷವೆಂದರೆ ಅವರಿಗೆ ಕೆಲವು ಸಾಮಾಜಿಕ ಹೋರಾಟಗಾರರ ಬೆಂಬಲವೂ ದೊರೆಯಿತು. ಹಾಗಾಗಿ ಈ ಹೋರಾಟ ಒಂದು ವಾರ ಕಾಲ ಮುಂದುವರೆಯಿತು ಮತ್ತು ಅವರು ಸರ್ಕಾರದ ಗಮನವನ್ನು ಸೆಳೆಯಲು ಯಶಸ್ವಿಯಾದರು. ಇದು ಜಗತ್ತಿನ ಮೊತ್ತಮೊದಲ ಗೇ ಸಮುದಾಯದ ಹೋರಾಟವಾಗಿದೆ.

ಮೊದಲ ಯಶಸ್ವಿ ಹೋರಾಟದ ನೆನಪಿಗಾಗಿ 1970ರ ಜೂನ್ 28ರಂದು ನ್ಯೂಯಾರ್ಕ್ನಲ್ಲಿ ಸುಮಾರು 5000 ಜನರ ಮೆರವಣಿಗೆಯೊಂದನ್ನು ಆಯೋಜಿಸಿದ್ದರು. ಈ ಆಚರಣೆ ಸ್ಯಾನ್ಫ್ರಾನ್ಸಿಸ್ಕೊ ಮತ್ತು ಷಿಕಾಗೊ ನಗರಗಳಿಗೂ ಹಬ್ಬಿತು. ವರ್ಷ ಕಳೆದಂತೆ ನಿಧಾನವಾಗಿ ಜಗತ್ತಿನ ಎಲ್ಲ ಪ್ರಮುಖ ನಗರಗಳನ್ನೂ ಇದು ಒಳಗೊಳ್ಳುತ್ತ ಲೈಂಗಿಕ ಅಲ್ಪಸಂಖ್ಯಾತರು ಮತ್ತು ತೃತೀಯ ಲಿಂಗಿಗಳನ್ನು ಒಳಗೊಂಡು ದೊಡ್ಡ ಆಂದೋಲನವಾಗಿ ಬೆಳೆಯಿತು. ಇಂಥದೊಂದು ಚಾರಿತ್ರಿಕ ಹೋರಾಟಕ್ಕೆ ಕಾರಣವಾದ ಸ್ಟೋನ್ವಾಲ್ ಇನ್ ಬಾರ್ಅನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು 2016ರಲ್ಲಿ ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಮಾಡಿದರು. ಪ್ರೈಡ್ ಹಬ್ಬ ಅಮೆರಿಕನ್ನರ ಪಾಲಿಗೆ ಈಗ ರಾಷ್ಟ್ರೀಯ ಕಾರ್ಯಕ್ರಮ.

ಭಾರತದಲ್ಲಿ ಮೊದಲ ಬಾರಿಗೆ ಪ್ರೈಡ್ ಹಬ್ಬ ನಡೆದದ್ದು ಕೋಲ್ಕತ್ತದಲ್ಲಿ, 1999ರ ಜುಲೈ ತಿಂಗಳಿನಲ್ಲಿ. ‘ಕೋಲ್ಕತ್ತ ರೇನ್ಬೋ ವಾಕ್’ ಎಂಬ ಈ ಮೆರವಣಿಗೆಯಲ್ಲಿ ದೇಶದ ಬೇರೆ ಬೇರೆ ನಗರಗಳಿಂದ ಬಂದಿದ್ದ 15 ಜನ ಭಾಗವಹಿಸಿದ್ದರು. ಅವರಲ್ಲಿ ಒಬ್ಬ ಮಹಿಳೆಯೂ ಇರಲಿಲ್ಲ. ನಿಧಾನವಾಗಿ ಈ ಹಬ್ಬವು ದೇಶದ ಪ್ರಮುಖ ನಗರಗಳಲ್ಲಿ ನಡೆಯತೊಡಗಿತು. 2008ರಲ್ಲಿ ಬೆಂಗಳೂರಿನಲ್ಲಿ ಮೊದಲ ಪ್ರೈಡ್ ಹಬ್ಬ ಆಯೋಜನೆಗೊಂಡಿತು. ಸುಮಾರು 700 ಜನರು ತಮ್ಮ ರೇನ್ ಬೋ ಬಾವುಟದೊಂದಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಟೌನ್ ಹಾಲ್ನವರೆಗೆ ಮೆರವಣಿಗೆ ನಡೆಸಿ ಸಂವಿಧಾನದ 377 ಕಲಂ ಅನ್ನು ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ‘ಪ್ರೀತಿಗೆ ಕಾನೂನಿನ ಬೇಲಿ ಸಲ್ಲದು’ ಎಂಬುದು ಅವರ ಘೋಷವಾಕ್ಯವಾಗಿತ್ತು.

2014ರಿಂದ ಅಕ್ಕಯ್ ಪದ್ಮಶಾಲಿ ಅವರ ‘ಒಂದೆಡೆ’ ಎಂಬ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತೆಯರು ಎಲ್ಲರನ್ನೂ ಒಗ್ಗೂಡಿಸುವುದರ ಮೂಲಕ ಹೋರಾಟಕ್ಕೆ ಸಾಂಘಿಕ ಬೆಂಬಲವನ್ನು ನೀಡಲು ಮುಂದಾಯಿತು. 2015ರಿಂದ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಮಿಕರ ಹಕ್ಕುಗಳ ಒಕ್ಕೂಟ (ಸಿಎಸ್ಎಂಆರ್) ಮತ್ತು ವಿವಿಧ ಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ‘ಬೆಂಗಳೂರು ಪ್ರೈಡ್ ಮತ್ತು ಕ್ವೀರ್ ಹಬ್ಬ’ ಪ್ರತಿವರ್ಷ ನಡೆಯುತ್ತಿದೆ. 2018ರಲ್ಲಿ ನ್ಯಾಯಾಲಯವು ಸಲಿಂಗಕಾಮವನ್ನು ಅಪರಾಧವಲ್ಲವೆಂದು ಘೋಷಿಸಿದ ಸಂತೋಷಕ್ಕಾಗಿ ‘ಹೆಮ್ಮೆಯ ಸಂಜೆ’ ಎಂಬ ವಿನೂತನ ಕಾರ್ಯಕ್ರಮ ನಡೆಸಿ ಸಂಭ್ರಮಿಸಲಾಯಿತು.

ಅನೇಕ ದೇಶಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಬೇಕಾದ ಹಕ್ಕುಗಳು ಮತ್ತು ಸಮಾನ ಅವಕಾಶಗಳಿಗಾಗಿ ಕಾನೂನು ತಿದ್ದುಪಡಿ ಮಾಡಲು ಈಗ ಮುಂದಾಗಿವೆಯಾದರೂ ಸಲಿಂಗಿಗಳ ದಾಂಪತ್ಯವನ್ನು ಸಹಜವಾಗಿ ಸ್ವೀಕರಿಸುವ ಮನೋಭೂಮಿಕೆ ಇನ್ನೂ ರೂಪುಗೊಂಡಿಲ್ಲ. ಎಲ್ಲರಂತೆಯೇ ತಮ್ಮ ಲೈಂಗಿಕತೆ, ದಾಂಪತ್ಯ ಮತ್ತು ಮಗುವನ್ನು ಹೊಂದುವ ಹಕ್ಕನ್ನು ಗೌರವಿಸಬೇಕೆಂಬುದು ಅವರ ಬಹುಮುಖ್ಯ ಬೇಡಿಕೆಯಾಗಿದೆ. ಅದಕ್ಕೆಂದೇ ಭೂಮಿ, ಭಾನು ಮತ್ತು ನೀರಿನ ಸಹಜ ಸಮಾಗಮದಿಂದ ಆಗಸದಲ್ಲಿ ಮೂಡುವ ಕಾಮನಬಿಲ್ಲಿನ ಬಣ್ಣಗಳನ್ನು ಅವರು ತಮ್ಮ ಬಾವುಟದಲ್ಲಿ ಪ್ರದರ್ಶಿಸುವುದರ ಮೂಲಕ ಕನಸುಗಳಿಗೆ ಬಣ್ಣ ತುಂಬಿಕೊಂಡಿದ್ದಾರೆ. ಈ ಬಾವುಟವನ್ನು ಮೊದಲಿಗೆ 1978ರಲ್ಲಿ ಗಿಲ್ಬರ್ಟ್ ಬೇಕರ್ ಅವರು ವಿನ್ಯಾಸಗೊಳಿಸಿದ್ದರು. ಆಗ ಅದು ಎಂಟು ಬಣ್ಣಗಳಿಂದ ಕೂಡಿತ್ತು. ಮುಂದೆ ತನ್ನ ಸ್ವರೂಪವನ್ನು ಬದಲಾಯಿಸುತ್ತಾ ಈಗಿರುವ ಆರು ಬಣ್ಣಗಳ ಮಾದರಿಯನ್ನು ಪಡೆದುಕೊಂಡಿದೆ.

ಬಾವುಟದಲ್ಲಿ ಇರುವ ಗಾಢ ನೇರಳೆ ಲಿಂಗತ್ವವನ್ನು, ಕೆಂಪು ಜೀವನವನ್ನು, ಕೇಸರಿ ಸೂರ್ಯನ ಬೆಳಕನ್ನು, ಹಸಿರು ಪ್ರಕೃತಿಯನ್ನು ಮತ್ತು ಗಾಢ ನೀಲಿ ಕಲೆ, ಸಾಮರಸ್ಯ, ಚೈತನ್ಯವನ್ನು ಪ್ರತಿನಿಧಿಸುತ್ತವೆ. ವಿಶ್ವದಾದ್ಯಂತ ಅನೇಕ ಅಂತರರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ನಡೆಸಿದ ಅಧ್ಯಯನದ ಪ್ರಕಾರ ಸಲಿಂಗೀಯ ಲೈಂಗಿಕ ಆಸಕ್ತಿಗಳು ಸಹಜ ಅಭಿವ್ಯಕ್ತಿಗಳೆಂದು ದಾಖಲಾಗಿವೆ. ಇತ್ತೀಚೆಗೆ ಅಂತರರಾಷ್ಟ್ರೀಯ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಶೇ 9ರಷ್ಟು ದ್ವಿಲಿಂಗಿಗಳು, ಶೇ 3ರಷ್ಟು ಸಲಿಂಗಿಗಳು, ಶೇ 2ರಷ್ಟು ಲಿಂಗರಹಿತರು ಮತ್ತು ಶೇ 1ರಷ್ಟು ಅಸಂಗತ ಲಿಂಗಿಗಳು (ಲೈಂಗಿಕ ಭಾವನೆಗಳಿಲ್ಲದವರು) ಜನರಿದ್ದಾರೆ. ಇವರೆಲ್ಲರನ್ನೂ ಒಳಗೊಳ್ಳುವ ಮತ್ತು ಅವರ ಸಹಜತೆಯನ್ನು ಗೌರವಿಸುವ ಜವಾಬ್ದಾರಿ ಸಮಾಜದ ಮೇಲಿದೆ.

ಮಗನ ಸಲಿಂಗಕಾಮವನ್ನು ಕಾಯಿಲೆಯೆಂದು ತಿಳಿದು ವಾಸಿಮಾಡಲು ಹೊರಟ ಪ್ರಸಿದ್ಧ ವೈದ್ಯರೊಬ್ಬರು ಅಧ್ಯಯನದ ಮೂಲಕ ಸತ್ಯವನ್ನು ಅರಿತುಕೊಂಡು ಅವನ ಮದುವೆಯನ್ನು ಇನ್ನೊಬ್ಬ ಹುಡುಗನೊಂದಿಗೆ ನೆರವೇರಿಸಿ, ಮದುವೆಯ ದಿನ ಮಾಡಿದ ಭಾಷಣದ ಪುಟ್ಟ ತುಣುಕೊಂದು ನಮ್ಮೆಲ್ಲರ ಅನೇಕ ಪ್ರಶ್ನೆಗಳಿಗೆ ಉತ್ತರವಾಗಬಲ್ಲುದು.

ಇದೊಂದು ಕಾಯಿಲೆಯಲ್ಲ, ಹಾಗಾಗಿ ಇದನ್ನು ಗುಣಪಡಿಸಲಾಗದು

ಇದು ನಾನು ನೋಡುತ್ತಿರುವ ಮೊದಲ ಸಲಿಂಗಕಾಮಿಗಳ (ಗೇ) ವಿವಾಹವಾಗಿದೆ ಮತ್ತು ಇಲ್ಲಿರುವ ಅನೇಕರು ನೋಡುವ ಮೊದಲ ಸಲಿಂಗಕಾಮಿಗಳ ವಿವಾಹವೂ ಇರಬಹುದು. ನಿಮ್ಮೆಲ್ಲರಿಗಾಗಿ ನಾನು ಕೆಲವು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. 1997ರಲ್ಲಿ ನಾನೊಬ್ಬ ಅದೃಷ್ಟಶಾಲಿ ತಂದೆಯಾಗಿದ್ದೆ. ನನ್ನ ಒಬ್ಬನೇ ಮಗ ಒಳ್ಳೆಯ ಮಕ್ಕಳಲ್ಲಿರಬೇಕಾದ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡಿದ್ದ. ಅವನು ಉತ್ತಮ ಭಾಷಣಕಾರ, ‘ಸ್ಪೆಲ್ ಬಿ’ಯ ಚಾಂಪಿಯನ್, ಶಾಲೆಯ ನಾಟಕದಲ್ಲಿ ರೋಮಿಯೊ ಪಾತ್ರ ಮಾಡಿಯೂ ಒಂದೇ ಒಂದು ಹುಡುಗಿಯ ಸ್ನೇಹವೂ ಇಲ್ಲದ ‘ಶುದ್ಧ’ ಹುಡುಗನಾಗಿದ್ದ. ಸಮಾಜದ ಬಗ್ಗೆ ಕಾಳಜಿಯುಳ್ಳವನಾಗಿದ್ದ ಮತ್ತು ನಾನು ಇಷ್ಟು ಒಳ್ಳೆಯ ಮಗನನ್ನು ಕೊಟ್ಟಿದ್ದಕ್ಕಾಗಿ ದೇವರಿಗೆ ಕೃತಜ್ಞನಾಗಿದ್ದೆ. ಅವನು ಭರತನಾಟ್ಯವನ್ನು ಕಲಿತಿದ್ದ, ಕಾರ್ಯಕ್ರಮಗಳ ನಿರ್ವಾಹಕನಾಗಿ ಹೆಸರು ಗಳಿಸಿದ್ದ. ಭಾಗವಹಿಸುವ ಎಲ್ಲ ಸ್ಪರ್ಧೆಗಳಲ್ಲೂ ಗೆಲ್ಲುತ್ತಿದ್ದ. ಅದು ನಮ್ಮ ಜೀವನದ ಅತ್ಯುತ್ತಮವಾದ ಸಮಯವಾಗಿತ್ತು; ಮತ್ತದು ಒಂದೇ ಸಲ ಅತಿಕೆಟ್ಟ ಸಮಯವಾಗಿ ಬದಲಾಗಿಹೋಯ್ತು.

ಒಂದು ದಿನ ಸಂಜೆ ನನ್ನ ಮಗ ನಮ್ಮಿಬ್ಬರನ್ನೂ ಕೂರಿಸಿ ಮೂರು ನಿಮಿಷಗಳ ಒಂದು ಸಣ್ಣ ಮಾತುಕತೆಯನ್ನು ನಡೆಸಿದ. ‘ಅಪ್ಪಾ ಹಾಗೂ ಅಮ್ಮಾ, ನಾನೊಬ್ಬ ಸಲಿಂಗಕಾಮಿ. ನನಗಿದು ನನ್ನ ಹತ್ತನೇ ವರ್ಷದಿಂದಲೂ ಗೊತ್ತು. ಮೊದಲಿಗೆ ಅದರ ಬಗ್ಗೆ ನನಗೇ ಸಂಶಯವಿತ್ತು. ಆದರೆ ಬರುಬರುತ್ತ ಅದು ದೃಢವಾಯಿತು. ನಾನಿದನ್ನು ನೀವಿಬ್ಬರೂ ಜೀವಂತ ಇರುವವರೆಗೂ ಹೇಳಬಾರದು ಅಂದುಕೊಂಡಿದ್ದೆ. ಏಕೆಂದರೆ ಅದರಿಂದ ನಿಮಗಾಗುವ ದುಃಖವನ್ನು ನಾನು ಊಹಿಸಬಲ್ಲವನಾಗಿದ್ದೆ. ನಾನು ಹೈಸ್ಕೂಲಿನಲ್ಲಿರುವಾಗ ಒಮ್ಮೆ ಜೀವನವನ್ನೇ ಮುಗಿಸಿಬಿಡುವ ಅಂತಲೂ ಯೋಚಿಸಿದೆ. ನನ್ನಿಂದ ಸಾಧ್ಯವಾಗಲಿಲ್ಲ.’

ಹಾಗಾಗದಿರುವುದಕ್ಕೆ ದೇವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಮಗ ಬಹಳ ಪುಕ್ಕಲು. ಹಾಗೆಲ್ಲ ಮಾಡುವ ಧೈರ್ಯ ಖಂಡಿತ ಅವನಿಗಿರಲಿಲ್ಲ. ಇರಲಿ. ಅವನು ಮುಂದೆ ಹೇಳಿದ: ‘ಕಳೆದ ವಾರವಷ್ಟೇ ಭಾರತದಿಂದ ಬಂದ ಹುಡುಗಿಯೊಬ್ಬಳೊಂದಿಗೆ ನಾನು ಮಾತನಾಡುವಾಗ ಈ ವಿಷಯವನ್ನು ಹೇಳಿಬಿಟ್ಟೆ. ಮತ್ತೆ ತಿಳಿಯಿತು, ವಿಷಯ ಇಂದಲ್ಲ ನಾಳೆಯಾದರೂ ನಿಮ್ಮವರೆಗೂ ತಲುಪುತ್ತದೆಯೆಂದು. ಹಾಗಾಗಿ ಬೇರೆಯವರು ನಿಮಗಿದನ್ನು ತಿಳಿಸುವುದಕ್ಕೆ ಮುಂಚಿತವಾಗಿ ನಾನೇ ಇದನ್ನು ನಿಮಗೆ ತಿಳಿಸುತ್ತಿರುವೆ. ಹೌದು, ನಾನೊಬ್ಬ ಸಲಿಂಗಕಾಮಿ.’ ಸಂತೋಷದ ತುತ್ತತುದಿಯಿಂದ ಮೂರೇ ನಿಮಿಷಗಳಲ್ಲಿ ನಾವು ದುಃಖದ ಪ್ರಪಾತಕ್ಕೆ ಬಿದ್ದೆವು. ಆಗಲೇ
ನಾನು ಅವನ ಈ ಕಾಯಿಲೆಯನ್ನು ಗುಣಪಡಿಸುವ ಜಿದ್ದಿನಲ್ಲಿ ಬಿದ್ದೆ. ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಚಿಕಿತ್ಸಾ ಕೇಂದ್ರದಲ್ಲಿ ಅವನಿಗೆ ಚಿಕಿತ್ಸೆಯನ್ನು ಕೊಡಿಸಲು ಬಯಸಿದ್ದೆ ಮತ್ತು ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು ಎಂದುಕೊಂಡೆ. ಏಕೆಂದರೆ ನಾನೊಬ್ಬ ಆಶಾವಾದಿಯಾಗಿದ್ದೆ.

ಮರುದಿನವೇ ನಾನು ವೈದ್ಯಶಾಸ್ತ್ರದ ಕುರಿತಾದ ಪುಸ್ತಕಗಳಿರುವ ಗ್ರಂಥಾಲಯದ ಒಳಗಿದ್ದೆ ಮತ್ತು ಅತ್ಯುತ್ತಮವಾದ ಪುಸ್ತಕಗಳನ್ನು ನನ್ನೆದುರು ಹರಡಿಕೊಂಡು ಕುಳಿತೆ. ಅರ್ಧಗಂಟೆಯೊಳಗೆ ನನಗೆ ಸತ್ಯದ ಅರಿವಾಯಿತು. ಅಮೆರಿಕದ ಮನಃಶಾಸ್ತ್ರ ಅಧ್ಯಯನ ಸಂಸ್ಥೆಯ 1973ರ ವರದಿಯು ಸಲಿಂಗಕಾಮಿ ವ್ಯಕ್ತಿಗಳ ಬಗ್ಗೆ ಬರೆಯುತ್ತಾ ಹೀಗೆ ಹೇಳಿತ್ತು, ‘ಸಲಿಂಗಕಾಮ ಎನ್ನುವುದು ಒಂದು ಕಾಯಿಲೆಯಲ್ಲ, ಇದೊಂದು ವೈಕಲ್ಯವೂ ಅಲ್ಲ. ಹಾಗಾಗಿ ಇದನ್ನು ಗುಣಪಡಿಸಲಾಗದು, ಇದು ಸಾಂಕ್ರಾಮಿಕ ಕೂಡ ಅಲ್ಲ. ಅವರನ್ನು ಸಲಿಂಗಕಾಮಿ ಎಂದು ಒಪ್ಪಿಕೊಳ್ಳುವುದೇ ಅವರಿಗೆ ಕೊಡಬೇಕಾದ ಗೌರವವಾಗಿದೆ.’ ನಾನು ಆ ಕ್ಷಣದಲ್ಲಿ ಯೋಚಿಸಿದೆ, ಅವನು ಈ ವಿಷಯವನ್ನು ನಮಗೆ ತಿಳಿಸುವ ಮೊದಲು ಮತ್ತು ನಂತರದ ಕ್ಷಣಗಳಲ್ಲಿ ನನಗೆ ಅವನ ಮೇಲಿದ್ದ ಪ್ರೀತಿಯಲ್ಲಿ ವ್ಯತ್ಯಾಸವಾಗಲು ಸಾಧ್ಯವೆ? ಅವನು ಸಲಿಂಗಕಾಮಿ ಎಂದು ಹೇಳಿದ ನಂತರ ಅವನನ್ನು ಮೊದಲಿಗಿಂತ ಕಡಿಮೆ ಪ್ರೀತಿಸಬಹುದೆ? ಕ್ಷಣಹೊತ್ತು ಯೋಚಿಸಿದ ನಂತರ ನನಗನಿಸಿತು ಇಲ್ಲ, ಹಾಗಾಗಲು ಸಾಧ್ಯವಿಲ್ಲ. ಈಗಲೂ ನಾನವನನ್ನು ಮೊದಲಿನಷ್ಟೇ ಪ್ರೀತಿಸುತ್ತೇನೆ.

ಆನಂತರ ನಾನು ಮಾಡಿದ ಮೊದಲ ಕೆಲಸವೆಂದರೆ ನನ್ನ ಮಗ ಸಲಿಂಗಕಾಮಿ ಎಂದು ನಮ್ಮ ಕುಟುಂಬದ ಅತಿ ಹತ್ತಿರದ 50 ಆತ್ಮೀಯರಿಗೆ ಪತ್ರವನ್ನು ಬರೆದದ್ದು. ಆಗಲೂ ನನಗನಿಸಿದ್ದು ಹೀಗೆ, ಇದರಲ್ಲಿ ಸಾಂಪ್ರದಾಯಿಕವಾಗಿ ಯೋಚಿಸುವ ಅರ್ಧದಷ್ಟು ಜನರು ನಮ್ಮಿಂದ ದೂರವಾಗುತ್ತಾರೆ. ಇದರಿಂದ ಅನೇಕ ಸ್ನೇಹಿತರನ್ನು ನಾವು ಕಳೆದುಕೊಂಡಂತಾಗುವುದಿಲ್ಲವೆ? ಆಗಲೂ ನನ್ನ ಗೊಂದಲಕ್ಕೆ ಉತ್ತರ ಸಿಕ್ಕಿತು. ‘ದೂರವಾಗುವ ಶೇ 50ರಷ್ಟು ಜನರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು? ಅವರು ನಿಜವಾಗಲೂ ನಮ್ಮವರಲ್ಲವೆಂದು ಸಾಬೀತಾದಂತಾಯಿತು. ಆದರೆ, ಉಳಿದ ಶೇ 50ರಷ್ಟು ಜನರೊಂದಿಗೆ ನಾವ್ಯಾಕೆ ಖುಷಿಯಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬಾರದು?’ ಹಾಗಾಗಿ ನನ್ನ ಮಗ ಇಂದು ಅವನ ಸಂಗಾತಿಯೊಂದಿಗೆ ನಿಮ್ಮೆಲ್ಲರೆದುರಿಗೆ ಮದುವೆಯಾಗುತ್ತಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.