ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್‌’

Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
ಅಕ್ಷರ ಗಾತ್ರ

ಇತ್ತೀಚಿಗೆ ‘ವರ್ಚುವಲ್ ರಿಯಾಲಿಟಿ’ (Virtual Reality) ಎಂಬ ಪದ ಎಲ್ಲರಲ್ಲೂ ಆಸಕ್ತಿಯನ್ನು ಕೆರಳಿಸುತ್ತಿದೆ. ರಕ್ಷಣೆ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ಮನೋರಂಜನೆ – ಹೀಗೆ ‘ವರ್ಚುವಲ್ ರಿಯಾಲಿಟಿ’ಯನ್ನು (ವಿಆರ್‌) ಅಳವಡಿಕೆ ಮಾಡಿಕೊಳ್ಳದ ಕ್ಷೇತ್ರಗಳೇ ಇಲ್ಲ.

ವರ್ಚುವಲ್ ರಿಯಾಲಿಟಿ ಎಂದರೇನು?

ಸರಳವಾಗಿ ಇದರ ಅರ್ಥ ‘ವಾಸ್ತವಕ್ಕೆ ಸನಿಹ’ವಾದದ್ದು. 3ಡಿ ಕ್ಯಾಮೆರಾ ಅಥವಾ ಅನಿಮೇಶನ್‍ಗಳ ಮೂಲಕ ಅನೇಕ ಸಾಫ್ಟ್‌ವೇರ್‌ಗಳ ಸಹಾಯದಿಂದ ನಿಜಜೀವನದ ಪರಿಸರ, ಸನ್ನಿವೇಶಗಳನ್ನು ವಾಸ್ತವಕ್ಕೆ ಸನಿಹವಾಗುವಷ್ಟು ನೈಜ ಎನ್ನಿಸುವಂತೆ ಸೃಷ್ಟಿಸಲಾಗುತ್ತದೆ. ಈ ಸನ್ನಿವೇಶಗಳನ್ನು ‘ವಿಆರ್‌’ ಹೆಡ್ ಸೆಟ್ ಇಲ್ಲವೇ ವಿಶೇಷವಾದ ಕನ್ನಡಕದಿಂದ ವೀಕ್ಷಿಸಬಹುದು. ಜೊತೆಗೆ ಆ ಸನ್ನಿವೇಶದೊಂದಿಗೆ ವ್ಯವಹರಿಸಬಹುದು (interact). ಇಂಥ ವೀಕ್ಷಣೆಯಲ್ಲಿ ನಾವು ನಿಜಜೀವನದ ಆ ಪರಿಸರದಲ್ಲಿಯೇ ಮುಳುಗಿದಂತಾಗುತ್ತದೆ.

1987ರಲ್ಲಿ ಮೊದಲಿಗೆ ‘ವರ್ಚುವಲ್ ರಿಯಾಲಿಟಿ’ ಎಂಬ ಪದದ ಬಳಕೆ ಮಾಡಿದ್ದು ಜರೋನ್ ಲ್ಯಾನಿಯರ್. ಆದರೆ 1957ರಲ್ಲಿಯೇ ಮಾರ್ಟಿನ್ ಹೇಲಿಗ್ ಎಂಬ ಛಾಯಾಚಿತ್ರಗ್ರಾಹಕ, ಮನುಷ್ಯನ ಎಲ್ಲ ಇಂದ್ರಿಯಗಳನ್ನು ಉತ್ತೇಜಿಸಿದರೆ ಮಾತ್ರ ಚಿತ್ರಕಥೆಗಳನ್ನು ಪರಿಣಾಮಕಾರಿಯಾಗಿ ಬಿತ್ತರಿಸಬಹುದೆಂದು ಪ್ರತಿಪಾದಿಸಿದ್ದರು. ಈ ಸಿದ್ಧಾಂತದ ಆಧಾರದ ಮೇಲೆಯೇ ಇಂದಿನ ‘ವಿಆರ್’ನ ಆವಿಷ್ಕಾರವಾದ್ದು. ಕಳೆದ 5-6 ದಶಕಗಳಿಂದ ಆವಿಷ್ಕಾರಗಳು ನಡೆಯುತ್ತಿದ್ದು, ‘ವಿಆರ್‌’ ಎಂಬುದು ಅತ್ಯಾಧುನಿಕ ಹಾಗೂ ಪ್ರಬಲ ಸಾಧನವಾಗಿ ಹೊರಹೊಮ್ಮುತ್ತಿದೆ.

ವೈದ್ಯಕೀಯ ಕ್ಷೇತ್ರದಲ್ಲಿ

ವೈದ್ಯಕೀಯ ಕ್ಷೇತ್ರದಲ್ಲಿ ವಿಆರ್ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅನೇಕ ಕ್ಲಿಷ್ಟಕರ ವಿಷಯಗಳ ಬಗ್ಗೆ ಸುಲಭವಾಗಿ ತರಬೇತಿ ನೀಡಲು, ಅನೇಕ ಶಸ್ತ್ರಚಿಕಿತ್ಸೆ, ಅನೇಕ ಚಿಕಿತ್ಸಾ ವಿಧಾನಗಳನ್ನು ವಿಆರ್ ಉಪಯೋಗಿಸಿ ಮನದಟ್ಟಾಗುವಂತೆ ಕಲಿಸಬಹುದು. ನವೀನ ಚಿಕಿತ್ಸಾ ಪದ್ಧತಿಗಳ ಬಗ್ಗೆ ನಿಖರವಾಗದ ತರಬೇತಿ ನೀಡಲು ಬಳಸಲಾಗುತ್ತಿದೆ. ಇತ್ತೀಚಿಗೆ, ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ವಿಆರ್ ಕ್ರಾಂತಿಯನ್ನು ಉಂಟುಮಾಡುತ್ತಿದೆ. ಪರಿಣತ ಮಾನವಸಂಪನ್ಮೂಲದ ಕೊರತೆಯಿರುವ ನಮ್ಮ ದೇಶದಲ್ಲಿ, ಮನೋರೋಗಗಳ ಚಿಕಿತ್ಸೆಯನ್ನು ಅವಶ್ಯಕತೆಯಿರುವವರಿಗೆ ತಲಿಪಿಸುವಲ್ಲಿ ವಿಆರ್ ಅತ್ಯಂತ ಸಹಾಯಕಾರಿಯಾಗಿದೆ.

ವಿಆರ್ ಸಹಾಯದ ಚಿಕಿತ್ಸೆಯನ್ನು ಅನೇಕ ಮನೋವ್ಯಾಧಿಗಳನ್ನು ನಿವಾರಿಸಲು ಉಪಯೋಗಿಸಬಹುದು. ಆತಂಕದ ಕಾಯಿಲೆ (Anxiety), ಫೋಬಿಯ (Phobia), ಗೀಳುರೋಗ (OCD), ಪಿಟಿಎಸ್‌ಡಿ (PTSD), ವ್ಯಸನಗಳು, ಒತ್ತಡ, ಸ್ಕಿಜೋಫ್ರೇನಿಯಾ ಮುಂತಾದ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿಆರ್ ಸಹಕಾರಿಯಾಗಿದೆ.

ವಿಆರ್‌ನಿಂದ ಕೃತಕ ಚಿಕಿತ್ಸಾ ಸನ್ನಿವೇಶಗಳನ್ನು ಸೃಷ್ಟಿಸುವುದರಿಂದ, ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು. ಮನೋವೈಜ್ಞಾನಿಕ ಚಿಕಿತ್ಸೆಯನ್ನು ಪರಿಣತ ಮನಃಶಾಸ್ತ್ರಜ್ಞರು ನೀಡುತ್ತಾರೆ. ಆದರೆ ಭಾರತದಂತಹ ವಿಶಾಲ ಹಾಗೂ ಜನಸಂದಣಿಯಿರುವ ದೇಶದಲ್ಲಿ, ಅಂತಹ ಪರಿಣತರು ತುಂಬ ಕಡಿಮೆಯಿರುವುದರಿಂದ, ಅವಶ್ಯಕತೆಯಿರುವ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಮನೋಚಿಕಿತ್ಸೆಯನ್ನು ತಲುಪಿಸುವುದು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ, ವಿಆರ್ ತಂತ್ರಜ್ಞಾನ ಬಳಕೆಯಿಂದ ದೂರದ ಸ್ಥಳದಲ್ಲಿರುವವರಿಗೂ ಚಿಕಿತ್ಸೆಯನ್ನು ತಲುಪಿಸಬಹುದು.

‘ಆಕ್ರೋಫೋಬಿಯ’ (Acrophobia) ಅಥವಾ ಎತ್ತರದ ವಿಪರೀತ ಭಯಕ್ಕೆ ‘ಸಿಸ್ಟೆಮ್ಯಾಟಿಕ್ ಡಿಸೆನ್ಸಿಟೈಸೆಶನ್’ (Systematic Desensitization) ಎಂಬ ಚಿಕಿತ್ಸಾ ಪದ್ಧತಿಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯಲ್ಲಿ ವ್ಯಕ್ತಿಯನ್ನು ಪದೇ ಪದೇ ಎತ್ತರದಲ್ಲಿ ನಿಲ್ಲಿಸಿ ಅಥವಾ ಅಂತಹ ಸನ್ನಿವೇಶವನ್ನು ಕಲ್ಪನೆ ಮಾಡಿಕೊಂಡು, ಎತ್ತರದ ಭಯವನ್ನು ನಿಯಂತ್ರಿಸುವ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ವ್ಯಾಸ್ತವವಾಗಿ ಎತ್ತರದ ಸನ್ನಿವೇಶವನ್ನು ಸೃಜಿಸುವುದು ಅಥವಾ ಪ್ರತಿ ಸಲ ಕಲ್ಪಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ, ಇಂತಹ ಸಂದರ್ಭದಲ್ಲಿ ವಿಆರ್ ತಂತ್ರಜ್ಞಾನವು ಸಹಾಯಕ್ಕೆ ಬರುತ್ತದೆ. ಅದೇ ರೀತಿ ಹಾವು, ಹಲ್ಲಿ ಇನ್ನೂ ಅನೇಕ ಸರಿಸೃಪಗಳ ಫೋಬಿಯದಲ್ಲೂ ವಿಆರ್ ಅನ್ನು ಬಳಸಬಹುದು.

ಇದೇ ರೀತಿಯಾಗಿ ಗೀಳು ರೋಗವಿದ್ದವರಲ್ಲಿ ಅತಿಯಾದ ಸ್ವಚ್ಛತೆಯ ಗೀಳು ಇದ್ದರೆ, ವಿಆರ್ ಸಹಾಯದಿಂದ ಕೊಳೆಯಾಗಿರುವ ಪರಿಸ್ಥಿತಿಯನ್ನು ಸೃಜಿಸಿ, ‘ಎಕ್ಸ್‌ಪೊಷರ್ ಅ್ಯಂಡ್‌ ರೆಸ್ಪಾನ್ಸ್ ಪ್ರಿವೆನ್‌ಶನ್’ (ERP) ಎಂಬ ಚಿಕಿತ್ಸೆಯನ್ನು ನೀಡಲಾಗುತ್ತದೆ. ಯುದ್ಧ, ಅಪಘಾತ ಅಥವಾ ಆಘಾತಕಾರಿಯಾಗುವಂತಹ ಸನ್ನಿವೇಶಗಳನ್ನು ಎದುರಿಸುವುದರಿಂದ, ‘ಪಿಟಿಎಸ್‍ಡಿ’ ಎಂಬ ಬೇನೆ ಉಂಟಾಗುತ್ತದೆ. ಈ ಕಾಯಿಲೆಯಲ್ಲಿ ಆಘಾತಕಾರಿ ಪರಿಸ್ಥಿತಿಯನ್ನು ವಿಆರ್ ಸಹಾಯದಿಂದ ಮರುಸೃಷ್ಟಿಸಿ, ಸಿಬಿಟಿ, ಈಆರ್‌ಪಿ ಇಲ್ಲವೇ ಈಎಮ್‌ಡಿಆರ್ (EMDR) ಅನ್ನು ನೀಡಲಾಗುತ್ತದೆ. ಇದೇ ರೀತಿ ದುಶ್ಚಟಗಳ ನಿವಾರಣೆಗೆ, ಸ್ಕಿಜೋಫ್ರೇನಿಯಾದ ಕೆಲವು ಲಕ್ಷಣಗಳು (Hallucinations), ಖಿನ್ನತೆಗಳ ಚಿಕಿತ್ಸೆಯಲ್ಲಿ ವಿಆರ್ ಸಹಕಾರಿಯಾಗಿದೆ.

ಮಾನಸಿಕ ಆರೋಗ್ಯದ ವೃದ್ಧಿಗಾಗಿಯೂ ಸಹ ವಿಆರ್ ಅನ್ನು ಉಪಯೋಗಿಸಬಹುದು. ದೈನಂದಿನ ಒತ್ತಡ ನಿವಾರಣೆಗೆ, ಅನೇಕ ಉಸಿರಾಟದ ವ್ಯಾಯಾಮಗಳು, ಧ್ಯಾನ, ಯೋಗ, ಪ್ರಾಣಾಯಾಮ ಮುಂತಾದ ವಿಶ್ರಾಂತಿದಾಯಕ ಪ್ರಕ್ರಿಯೆಗಳನ್ನು ವಿಆರ್‌ನ ಸಹಾಯದಿಂದ ಅಳವಡಿಸಿಕೊಂಡು ಒತ್ತಡ ನಿರ್ವಹಣೆಯನ್ನು ಮಾಡಿಕೊಳ್ಳಬಹುದು.

ತಂತ್ರಜ್ಞಾನವನ್ನು ಬಳಸಿ, ಅವಶ್ಯಕತೆಯಿರುವ ಪ್ರತಿಯೊಬ್ಬರಿಗೂ ಆರೋಗ್ಯದ ಚಿಕಿತ್ಸಾವಿಧಾನಗಳನ್ನು ತಲುಪಿಸುವ ಪ್ರಯತ್ನ ನಡೆಯಬೇಕಿದೆ. ಹೊರದೇಶಗಳಲ್ಲಿ ಈಗಾಗಲೇ ಸಂಶೋಧನೆಗಳು ನಡೆದು, ವಿಆರ್ ಆಧಾರಿತ ಚಿಕಿತ್ಸಾ ತಂತ್ರಜ್ಞಾನವು ಮಾರುಕಟ್ಟೆಗೆ ಬಂದಿವೆ. ಆದರೆ ನಮ್ಮ ದೇಶದಲ್ಲಿ, ಸ್ವನಿರ್ಮಿತ ತಂತ್ರಜ್ಞಾನವು ಇನ್ನೂ ಅಂಬೆಗಾಲಿಡುತ್ತಿದೆ. ಅವಶ್ಯಕತೆ ಗಣನೀಯವಾಗಿರುವುದರಿಂದ ಹೆಚ್ಚು ಹೆಚ್ಚು ಸ್ಟಾರ್ಟ್‌ ಆ್ಯಪ್‌ಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಇತ್ತೀಚಿಗೆ ‘ಅವಿಕಾ’ (Avika) ಎಂಬ ಸಂಸ್ಥೆಯು, ವಿಆರ್ ಆಧಾರಿತ ಚಿಕಿತ್ಸಾಪದ್ಧತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT