ಮದುವೆ ಎನ್ನುವುದು ಎರಡು ಮನಸ್ಸುಗಳ ನಡುವಿನ ಬಂಧ. ಮದುವೆಯಾದ ತಕ್ಷಣ ಹೆಣ್ಣುಮಕ್ಕಳು ತಮ್ಮ ಮೂಲ ಹೆಸರನ್ನು ಬದಲಿಸಿಕೊಳ್ಳಲೇಬೇಕು ಎನ್ನುವುದು ಕಡ್ಡಾಯವಲ್ಲ ಎನ್ನುವುದು ನನ್ನ ಭಾವನೆ. ಅಲ್ಲದೆ ಇಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಉದ್ಯೋಗ, ಓದು ಎಂದು ಹಲವೆಡೆ ತೊಡಗಿಸಿಕೊಂಡಿರುತ್ತಾರೆ. ಹೀಗಿದ್ದಾಗ ಹೆಸರು ಬದಲಾವಣೆ ಮಾಡಬೇಕೆಂದರೆ ಕಾನೂನಿನ ಮೂಲಕವೇ ಆಗಬೇಕು. ಅದಕ್ಕೆ ಅಫಿಡವಿಟ್, ಪತ್ರಿಕೆಗಳಲ್ಲಿ ಪ್ರಕಟಣೆ ಹೀಗೆ ಹಲವು ಕಾಯಿದೆಗಳಿವೆ. ಅಲ್ಲದೆ ಪತಿಯ ಹೆಸರನ್ನು ಹೆಂಡತಿಯ ಹೆಸರಿನೊಂದಿಗೆ ಸೇರಿಸದೆ ಹೇಳಿದಾಕ್ಷಣ ಸಂಬಂಧಗಳಲ್ಲಿ ಯಾವ ಬದಲಾವಣೆಯಾಗುವುದಿಲ್ಲ. ಗಂಡನ ಮೇಲಿನ ಗೌರವವೂ ಕಡಿಮೆಯಾಗದು. ಹೆಸರು ಪ್ರತಿಯೊಬ್ಬರ ಸ್ವಾತಂತ್ರ್ಯ. ಅದು ಅವರ ಗುರುತು ಕೂಡ.
-ವಿಜಯಾ ಹೆಗಡೆ (ವಾಸ್ತುಶಿಲ್ಪ ಸಂಶೋಧನಾ ವಿದ್ಯಾರ್ಥಿನಿ, ಗೃಹಿಣಿ)
ಗಂಡನ ಹೆಸರು ತನ್ನ ಹೆಸರಿನೊಂದಿಗೆ ಪತ್ನಿ ಸೇರಿಸಿಕೊಳ್ಳುವುದು ಇಂದು ಅನಿವಾರ್ಯವಲ್ಲ. ಇಬ್ಬರೂ ತಮ್ಮದೇ ಬೇರೆ ಬೇರೆ ಹೆಸರಿನಿಂದ ಸಮಾಜದಲ್ಲಿ ಗುರುತಿಸಿಕೊಂಡರೆ ತಪ್ಪೇನೂ ಇಲ್ಲ. ಒಳಿತಿದ್ದರೆ ಒಳಿತು, ಕೆಡುಕಿದ್ದರೆ ಕೆಡುಕು, ಯಾರು ಏನು ಮಾಡಿದ್ದಾರೋ ಅದನ್ನೇ ಪಡೆಯುತ್ತಾರೆ. ಗಂಡನ ಹೆಸರಿನಿಂದಲೇ ಹೆಂಡತಿ ಬಿಂಬಿತವಾಗಬೇಕಿಲ್ಲ. ಅವಳಿಗೂ ಅವಳದೇ ಸ್ವಂತ ಹೆಸರು ಮಾಡುವುದು ಮತ್ತು ಅದರಿಂದಲೇ ನಾಲ್ಕು ಜನರಲ್ಲಿ ಗುರುತಿಸಿಕೊಳ್ಳುವುದು ಆಕೆಯ ಸ್ವಾತಂತ್ರ್ಯ ಮಾತ್ರವಲ್ಲ, ಹಕ್ಕು ಕೂಡ.