‘ಸಿಟಿ ಮಾರ್ಕೆಟ್’ ಎಂದು ಕರೆಸಿಕೊಳ್ಳುವ ಕೆ.ಆರ್.ಮಾರುಕಟ್ಟೆ ನಿರ್ಮಾಣವಾಗಿದ್ದು 1928ರಲ್ಲಿ. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು. ಈ ಮಾರುಕಟ್ಟೆಗೆ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಲಾಗಿದೆ. ಮೊದಲು ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡ ತಮ್ಮ ಸಂಬಂಧಿ ಸಿದ್ದಿ ಹೆಸರಿನಲ್ಲಿ ಕಟ್ಟಿದ್ದ ‘ಸಿದ್ದಿಕಟ್ಟೆ ಕೆರೆ’ ಇತ್ತು. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮತ್ತು ಟಿಪ್ಪು ಸುಲ್ತಾನ್ ನಡುವೆ ನಡೆದ ಮೂರನೇ ಆಂಗ್ಲೋ–ಮೈಸೂರು ಯುದ್ಧದ ವೇಳೆ ರಣಭೂಮಿಯಾಗಿತ್ತು. 1905 ಆಗಸ್ಟ್ 5ರಂದು ಏಷ್ಯಾದಲ್ಲೇ ಮೊದಲು ವಿದ್ಯುತ್ ದೀಪ ಬೆಳಗಿದ್ದು ಇದೇ ಪ್ರದೇಶದಲ್ಲಿ ಎಂದು ಇತಿಹಾಸ ಕುರಿತು ಒಲವಿರುವ ಧರ್ಮೇಂದ್ರಕುಮಾರ್ ಅರೇನಹಳ್ಳಿ ಮಾಹಿತಿ ನೀಡಿದರು. ಈಗಿರುವ ಮೂರು ಮಹಡಿಯ ಕಟ್ಟಡ ನಿರ್ಮಾಣವಾಗಿದ್ದು 90ರ ದಶಕದಲ್ಲಿ.