ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಆಗಿ ನಾಯ್ಡು ಅಧಿಕಾರಕ್ಕೆ: ಅಮರಾವತಿ ಸುತ್ತಮುತ್ತ ಭೂಮಿ ಬೆಲೆ ದುಪ್ಪಟ್ಟು

Published 17 ಜೂನ್ 2024, 13:59 IST
Last Updated 17 ಜೂನ್ 2024, 13:59 IST
ಅಕ್ಷರ ಗಾತ್ರ

ಅಮರಾವತಿ (ಆಂಧ್ರಪ್ರದೇಶ): ಎನ್‌. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಅಮರಾವತಿ ರಾಜಧಾನಿ ಯೋಜನೆಯು ಮತ್ತೆ ಮುನ್ನೆಲೆಗೆ ಬಂದಿದ್ದು, ಇದರ ಸುತ್ತಮುತ್ತ ರಿಯಲ್‌ ಎಸ್ಟೇಟ್ ಚಟುವಟಿಕೆಗಳು ಗರಿಗೆದರಿವೆ.

ಮುಖ್ಯಮಂತ್ರಿಯಾಗಿದ್ದ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಈ ಯೋಜನೆಯನ್ನು ಕೈಬಿಟ್ಟಿದ್ದರು. ಆದರೆ, ಅಮರಾವತಿಯೇ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿರಲಿದೆ ಎಂದು ಚಂದ್ರಬಾಬು ನಾಯ್ದು ಘೋಷಿಸಿದ್ದಾರೆ. ಹಾಗಾಗಿ, ಈ ಪ್ರದೇಶದಲ್ಲಿ ಭೂಮಿ ಬೆಲೆಯು ಏರಿಕೆಯಾಗಿದೆ. 

ಈಗಾಗಲೇ, ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಎಂಟು ಟೆಂಡರ್‌ಗಳಿಗೆ ಅಧಿಸೂಚನೆ ಹೊರಡಿಸಿದೆ. ಅಮರಾವತಿಗೆ ಸಂಪರ್ಕ ಬೆಳೆಸುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಸೂಚಿಸಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

‘ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಈ ಚುನಾವಣೆಗಳಿಗೂ ಎರಡು ತಿಂಗಳು ಮೊದಲೇ ಅಮರಾವತಿ ಸುತ್ತಮುತ್ತ ಭೂಮಿಯ ಬೆಲೆ ಏರಿಕೆ ಕಂಡಿತ್ತು’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘಗಳ ಒಕ್ಕೂಟದ (ಸಿಆರ್‌ಇಡಿಎಐ) ಆಂಧ್ರಪ್ರದೇಶ ಘಟಕದ ಅಧ್ಯಕ್ಷ ವೈ.ವಿ. ರಮಣ ರಾವ್‌ ಹೇಳುತ್ತಾರೆ.

ಸಿಆರ್‌ಇಡಿಎಐ ಮಾಹಿತಿ ಪ್ರಕಾರ ಅಮರಾವತಿಯ ಸುತ್ತಮುತ್ತ ಸರ್ಕಾರಿ ಮತ್ತು ಖಾಸಗಿಯವರ ಒಡೆತನಕ್ಕೆ ಸೇರಿದ ಸುಮಾರು 50 ಸಾವಿರ ಎಕರೆಯಷ್ಟು ಜಮೀನು ಇದೆ.

‘ಪ್ರತಿ ಚದರ ಗಜ ಜಾಗಕ್ಕೆ ₹15 ಸಾವಿರ ಇದ್ದ ಬೆಲೆಯು ಈಗ ₹25 ಸಾವಿರಕ್ಕೆ ಮುಟ್ಟಿದೆ. ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ವೇಗ ಪಡೆದಿವೆ. ಮುಂದಿನ 18 ತಿಂಗಳ ಅವಧಿಯಲ್ಲಿ ಭೂಮಿ ಬೆಲೆಯು ಈಗಿರುವುದಕ್ಕಿಂತ ದುಪ್ಪಟ್ಟು ಆಗಲಿದೆ’ ಎಂದು ರಮಣ ರಾವ್‌ ಹೇಳುತ್ತಾರೆ.

‘ಅಧಿಕಾರಿಗಳು, ಶಾಸಕರು ಮತ್ತು ನ್ಯಾಯಾಧೀಶರ ವಸತಿಗೃಹಗಳ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿತ್ತು. ಸರ್ಕಾರದಿಂದ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಚಾಲನೆ ಸಿಕ್ಕಿದೆ’ ಎಂಬುದು ಅವರ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT