ಜಾತಿ ಜನಗಣತಿ ಅರ್ಥಾತ್ ದೇಶದ ಜನಸಂಖ್ಯೆಯನ್ನು ಜಾತಿವಾರು ಲೆಕ್ಕ ಹಾಕುವುದಕ್ಕೆ ಕೆಲವರು ವ್ಯಕ್ತಪಡಿ
ಸುತ್ತಿರುವ ಆಕ್ಷೇಪಗಳು ವಿಚಿತ್ರವಾಗಿವೆ. ಜಾತಿ ಜನಗಣತಿ ನಡೆಸಿದರೆ ಜಾತೀಯತೆ ಹೆಚ್ಚಾಗುತ್ತದೆ, ಧರ್ಮದಲ್ಲಿ ಒಡಕು ಮೂಡುತ್ತದೆ, ದೇಶದ ಏಕತೆಗೆ ತೊಡಕಾಗುತ್ತದೆ ಎಂಬಂತಹ ವಿತಂಡವಾದಗಳನ್ನು ಕೇಳಿಸಿಕೊಂಡಾಗಿದೆ. ಈಗ ಉಡುಪಿಯ ಪೇಜಾವರ ಮಠದ ಮುಖ್ಯಸ್ಥರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಇಲ್ಲಿ ಜಾತಿ ಜನಗಣತಿ ಯಾಕೆ?’ ಎಂಬ ಪ್ರಶ್ನೆ ಎತ್ತಿದ್ದಾರೆ.

ಭಾರತದ ಸಂವಿಧಾನದ ಮಹೋನ್ನತ ಮೌಲ್ಯಗಳಲ್ಲಿ ಒಂದಾಗಿರುವ ಜಾತ್ಯತೀತತೆಯನ್ನು (ಸೆಕ್ಯುಲರಿಸಂ ಅಂತ ಕರೆಯಲಾಗಿರುವ ಈ ಮೌಲ್ಯವನ್ನು ಜಾತ್ಯತೀತತೆ ಅಂತ ಭಾಷಾಂತರಿಸುವುದು ಸರಿಯೇ ಎಂಬ ವಿಚಾರಕ್ಕೆ ಮತ್ತೆ ಬರೋಣ) ವಿರೋಧಿಸುವುದು, ಅಣಕಿಸುವುದು, ನಿಷೇಧಿಸಿಯೇ ಬಿಡಬೇಕೆಂಬ ಒತ್ತಡ ಹೇರುವುದೆಲ್ಲಾ ಬಹಳ ಕಾಲದಿಂದ ನಡೆಯುತ್ತಿದೆ. ಈಗ ಜಾತ್ಯತೀತತೆಯನ್ನು ಎಳೆದುತಂದು ಜಾತಿ ಜನಗಣತಿಯನ್ನು ವಿರೋಧಿಸುವ ಪ್ರಯತ್ನದ ಎಳೆಯೊಂದು ಮೊಳಕೆಯೊಡೆಯುತ್ತಿರು ವಂತಿದೆ.

ಕರ್ನಾಟಕದಲ್ಲಿ ಈಗಾಗಲೇ ಆಗಿಹೋಗಿರುವ ಜಾತಿ ಜನಗಣತಿಯ ಅಥವಾ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡುವುದರ ವಿರುದ್ಧ ಲಿಂಗಾಯತರು ಮತ್ತು
ಒಕ್ಕಲಿಗರಂತಹ ಪ್ರಬಲ ಸಮುದಾಯಗಳ ಮುಖಂಡರು ಒಟ್ಟುಸೇರಿ ಪ್ರತಿಭಟಿಸುತ್ತಿದ್ದಾರೆ. ಹಾಗಿರುವಾಗ, ಬ್ರಾಹ್ಮಣ ಜಾತಿಗೆ ಸೇರಿದ ಒಂದು ಪಂಗಡದವರ ಒಂದು ಉಪಪಂಗಡಕ್ಕೆ ಸಂಬಂಧಿಸಿದ ಎಂಟು ಮಠಗಳ ಪೈಕಿ ಒಂದು ಮಠಕ್ಕೆ ನಡೆದುಕೊಳ್ಳುವವರಿಗೆ ಸ್ವಾಮೀಜಿಯಾಗಿರುವವರೊಬ್ಬರು ಜಾತಿ ಜನಗಣತಿಯ ಬಗ್ಗೆ ಆಕ್ಷೇಪವೆತ್ತಿದರೆ ಏನೀಗ ಎಂದು ಯಾರಾದರೂ ಕೇಳಬಹುದು. ಇಲ್ಲೊಂದು ವ್ಯತ್ಯಾಸವಿದೆ.

ಕರ್ನಾಟಕದಲ್ಲಿ ದಶಕದ ಹಿಂದೆ ನಡೆದ ಜಾತಿ ಜನಗಣತಿ ಸಮರ್ಪಕವಾಗಿ ನಡೆದಿಲ್ಲ ಎನ್ನುವ ವಾದ ಮುಂದಿಟ್ಟು, ಅದರ ಫಲಿತಾಂಶ ಬಹಿರಂಗಗೊಳಿಸುವುದು ಬೇಡ ಅಂತ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರು ಹಟ ಹಿಡಿದಿದ್ದಾರೆ. ಅವರ ವಾದ ಸರಿಯೋ ತಪ್ಪೋ ಅನ್ನುವ ಜಿಜ್ಞಾಸೆ ಬೇರೆ. ಆದರೆ, ಅವರು ಜಾತಿ ಜನಗಣತಿಯೇ ಬೇಡ ಅಂತ ಮೇಲ್ನೋಟಕ್ಕೆ ಹೇಳುತ್ತಿಲ್ಲ. ಪೇಜಾವರ ಮಠದ ಮುಖ್ಯಸ್ಥರು ಹೇಳುತ್ತಿರುವುದು ಹಾಗಲ್ಲ. ಅವರ ಹೇಳಿಕೆಯಲ್ಲಿ ಜಾತಿ ಜನಗಣತಿಯೇ ಬೇಡ ಎನ್ನುವ ಅರ್ಥವಿದೆ. ಅದಕ್ಕಿಂತಲೂ ಮುಖ್ಯವಾಗಿ ಜಾತಿ ಜನಗಣತಿಯನ್ನು ವಿರೋಧಿಸಲು ಅವರು ಸಂವಿಧಾನವನ್ನೇ ಗುರಾಣಿಯನ್ನಾಗಿ ಬಳಸಲು ಹೊರಟಿದ್ದಾರೆ. ಆದಕಾರಣ, ಈ ಆಕ್ಷೇಪವನ್ನು ಅವರು ಎತ್ತಿರುವುದರ ಯುಕ್ತಾಯುಕ್ತತೆಯ ಬಗ್ಗೆ ಮತ್ತು ಆಕ್ಷೇಪಕ್ಕೆ ಅವರು ಬಳಸಿರುವ ಸಮರ್ಥನೆಯ ಪ್ರಸ್ತುತತೆಯ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತವೆ.

ಮೊದಲಿಗೆ, ಜಾತ್ಯತೀತ ರಾಷ್ಟ್ರವೊಂದು ಜಾತಿ ಆಧಾರಿತ ಜನಗಣತಿಯ ಉಸಾಬರಿಗೆ ಯಾಕೆ ಮುಂದಾಗಬೇಕು ಎನ್ನುವುದು ಪೇಜಾವರ ಮಠದ ಮುಖ್ಯಸ್ಥರ ಪ್ರಶ್ನೆಯಾಗಿದ್ದರೆ, ಕಾವಿ ತೊಟ್ಟು ‘ಸ್ವಾಮೀಜಿ’ ಅಂತ ಕರೆಸಿಕೊಳ್ಳುವ ಅವರಿಗೆ ಅಪ್ಪಟ ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದ ಜಾತಿ ಜನಗಣತಿ, ಅದರೊಳಗಣ ರಾಜಕಾರಣದ ಒಳಸುಳಿಗಳಂತಹವನ್ನು ಪ್ರಶ್ನಿಸುವ ಉಸಾಬರಿ ಬೇಕೇ ಎನ್ನುವ ಮರುಪ್ರಶ್ನೆಯನ್ನು ಯಾರಾದರೂ ಕೇಳಬೇಕಲ್ಲವೇ? ಜಾತಿವಾರು ಅಂಕಿ-ಅಂಶಗಳ ಆಧಾರದ ಮೇಲೆಯೇ ಹಿಂದುಳಿದ ಜಾತಿಗಳ ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಇತ್ಯರ್ಥ ಆಗಬೇಕು ಎಂದು ನ್ಯಾಯಾಂಗ ಹೇಳಿದೆ. ಈ ಅಂಕಿ-ಅಂಶ ಇನ್ನೂ ಸರಿಯಾಗಿ ಲಭ್ಯವಿಲ್ಲದೆ ಹಲವಾರು ರಾಜ್ಯಗಳಲ್ಲಿ ಸ್ಥಳೀಯ ಚುನಾವಣೆಗಳೇ ನನೆಗುದಿಗೆ ಬಿದ್ದಿವೆ.

ಜಾತಿಯಾಧಾರಿತ ಜನಗಣತಿ ನಡೆಸುವಲ್ಲಿ ನುರಿತ ನ್ಯಾಯಾಧೀಶರಿಗೆ ಕಾಣಿಸದ ಜಾತ್ಯತೀತತೆಯ ಅಡ್ಡಿ, ಸದರಿ ಮಠದ ಮುಖ್ಯಸ್ಥರಿಗೆ ಯಾವ ನ್ಯಾಯಿಕ, ಧಾರ್ಮಿಕ ತತ್ವದ ಆಧಾರದಲ್ಲಿ ಕಾಣಿಸಿದ್ದು? ಅಂಕಿ–ಅಂಶ ಕಲೆಹಾಕುವುದರ ಮೂಲಕ, ಯಾವ ಜಾತಿಯವರು ಎಷ್ಟೆಷ್ಟು ಮಂದಿ ಇದ್ದಾರೆ, ಯಾರ್ಯಾರ ಸ್ಥಿತಿಗತಿಗಳು ಹೇಗಿವೆ ಅಂತ ವಸ್ತುನಿಷ್ಠವಾಗಿ ಅರಿತುಕೊಳ್ಳುವುದು ಎಂದರೆ ವಾಸ್ತವದ ಜತೆ ಮುಖಾಮುಖಿಯಾಗುವುದು ಎಂದು ಅರ್ಥ. ಸನ್ಯಾಸಿಗಳು ಅಂತ ಕರೆಸಿಕೊಳ್ಳುವವರು ವಾಸ್ತವವನ್ನು ಎದುರಿಸುವುದು ಹೇಗೆ ಅಂತ ಸಮಾಜಕ್ಕೆ ತಿಳಿಹೇಳುವ ಜವಾಬ್ದಾರಿ ಹೊತ್ತವರು. ಸತ್ಯದ ಜತೆ ಅನುಸಂಧಾನ ನಡೆಸಲು ಲೌಕಿಕ ಜಗತ್ತಿನ ಜನರಲ್ಲಿ ಸ್ಥೈರ್ಯ ತುಂಬಬೇಕಾದವರು. ವಾಸ್ತವದಿಂದ ವಿಮುಖರಾಗಲು ಸಮರ್ಥನೆಗಳನ್ನು ಅನ್ವೇಷಿಸುವುದಕ್ಕೆ ಸನ್ಯಾಸಿಗಳು ಬೇಕಿಲ್ಲ. ಅದನ್ನು ಮಾಡಲು ರಾಜಕಾರಣಿಗಳಿದ್ದಾರೆ.

ಇನ್ನು, ‘ಸೆಕ್ಯುಲರಿಸಂ’ ಎನ್ನುವ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಸೇರಿಸಿರುವುದು ಜಾತಿಯನ್ನು ಉದ್ದೇಶಿಸಿ ಅಲ್ಲ. ‘ಸೆಕ್ಯುಲರಿಸಂ’ ಎಂದರೆ ಜಾತ್ಯತೀತತೆ ಎನ್ನುವುದಕ್ಕಿಂತ ಧರ್ಮನಿರಪೇಕ್ಷತೆ ಅಂತ ಅರ್ಥೈಸಿಕೊಳ್ಳುವುದೇ ಹೆಚ್ಚು ಸೂಕ್ತ. ‘ಧರ್ಮ’ ಎನ್ನುವ ಪದವನ್ನು ಯುರೋಪಿನ ‘ರಿಲಿಜನ್’ ಎಂಬ ಅರ್ಥದಲ್ಲಿ ಬಳಸಬಾರದು ಎಂದೂ, ಹಾಗಾಗಿ ಧರ್ಮನಿರಪೇಕ್ಷತೆಯ ಬದಲು ಮತನಿರಪೇಕ್ಷತೆ
ಅಂತ ಕರೆಯುವುದು ಸೂಕ್ತ ಅಂತಲೂ ಒಂದು ವಾದವಿದೆ. ಅದೇ ರೀತಿ, ‘ನಿರಪೇಕ್ಷತೆ’ ಎನ್ನುವುದು ಸರಿಯಲ್ಲ, ಅದು ‘ಸರ್ವಧರ್ಮ ಅಥವಾ ಸರ್ವಮತ ಸಮಭಾವ’ ಅಂತ ಇನ್ನೊಂದು ವಾದವಿದೆ. ಏನೇ ಆದರೂ, ಯಾವ ಪದಪ್ರಯೋಗ ನಡೆಸಿದರೂ, ಅರ್ಥ ಇಷ್ಟೇ: ಸರ್ಕಾರಕ್ಕೆ ಅರ್ಥಾತ್ ಇಡೀ ಆಡಳಿತ ವ್ಯವಸ್ಥೆಗೆ ಅದರದ್ದೇ ಆದ ಒಂದು ಧರ್ಮ ಅಥವಾ ಮತ ಅಂತ ಇರಬಾರದು (The state shall not have any religious affiliation).

ಎಲ್ಲಾ ಧರ್ಮ–ಮತಗಳನ್ನು ಅದು ಸಮನಾಗಿ ಕಾಣಬೇಕು. ಇದನ್ನೇ ಪರ್ಯಾಯವಾಗಿ ಜಾತ್ಯತೀತತೆ ಅಂತ ಕರೆಯುವುದಾದರೆ, ರಾಷ್ಟ್ರವು ಜಾತ್ಯತೀತವಾಗಿ ರುವುದಕ್ಕೂ ಜಾತಿ ಜನಗಣತಿ ನಡೆಸಬಾರದೆಂಬ ವಾದಕ್ಕೂ ಯಾವ ಸಂಬಂಧವೂ ಕಾಣಿಸುವುದಿಲ್ಲ. ಜಾತ್ಯತೀತತೆಯ ಉದಾತ್ತ ತತ್ವವನ್ನು ಅಕ್ಷರರೂಪದಲ್ಲಿ ಮಾತ್ರ ಸಂವಿಧಾನದಲ್ಲಿ ಉಳಿಸಿಕೊಂಡು ಆಡಳಿತದಲ್ಲಿ ಅದನ್ನು ಅಕ್ಷರಶಃ ಧಿಕ್ಕರಿಸಿ ಪ್ರಜಾತಂತ್ರದ ನಾಲ್ಕೂ ಸ್ತಂಭಗಳ ಮೇಲೆ ಬಹುಸಂಖ್ಯಾತರ ಧರ್ಮದ ಲೇಪ ಹಚ್ಚುವ ಮಹಾನ್ ಅಪಾಯಕಾರಿ ಬೆಳವಣಿಗೆಯನ್ನು
ತೆರೆಮರೆಯಲ್ಲಿ ನಿಂತು ಪೋಷಿಸಿ-ಪ್ರೋತ್ಸಾಹಿಸುತ್ತಿರುವ ಕೆಲ ಮಂದಿ ಈಗ ಇದ್ದಕ್ಕಿದ್ದಂತೆಯೇ ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಿರುವುದು ದೊಡ್ಡ ಅಸಂಗತ ನಾಟಕದಂತಿದೆ.

ನಿಜಕ್ಕೂ ‘ಸ್ವಾಮೀಜಿಗಳು’ ಅಂತ ಕರೆಯಬಹುದಾದ, ಸರ್ವಜನರ ಲೇಸನ್ನೇ ಬಯಸುವವರು ಯಾರಾದರೂ ಇದ್ದರೆ ಅವರು ಜಾತ್ಯತೀತವೆಂದು ಕರೆದುಕೊಳ್ಳುವ ಈ ದೇಶದ ಜಾತಿಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕೇಳಬೇಕಿರುವ ಸಾವಿರ ಪ್ರಶ್ನೆಗಳಿವೆ, ಎತ್ತಿ ತೋರಿಸಬೇಕಿರುವ ನೋವಿನ ಚಿತ್ರಗಳಿವೆ. ಜಾತ್ಯತೀತ ರಾಷ್ಟ್ರದಲ್ಲಿ ಇನ್ನೂ ಕಸ ಗುಡಿಸುವ, ಕೊಳೆ ತೊಳೆಯುವ ಕೆಲಸಗಳನ್ನು ನಿರ್ದಿಷ್ಟ ಜಾತಿಯವರು ಮಾತ್ರ ಮಾಡುವ ಸ್ಥಿತಿ ಯಾಕಿದೆ? ಯಾವ ಪ್ರದೇಶದಲ್ಲಿ ಧ್ವನಿ ಇಲ್ಲದ ಜಾತಿಗಳು ಎಂದು ಕರೆಸಿಕೊಳ್ಳುವವರ ಸಂಖ್ಯೆ ಹೆಚ್ಚು ಇದೆಯೋ ಅಲ್ಲೆಲ್ಲಾ ಬಡತನ ಯಾಕೆ ತಾಂಡವವಾಡುತ್ತಿದೆ? ಆಧಾರವಿಲ್ಲದ ಆಪಾದನೆಗಳನ್ನು ಹೊರಿಸಿ, ಅಲ್ಪಸಂಖ್ಯಾತ, ಪರಿಶಿಷ್ಟ ಮುಂತಾಗಿ ಗುರುತಿಸಲ್ಪಡುವ ಸಮುದಾಯಗಳನ್ನು ಸಾರ್ವಜನಿಕವಾಗಿ ಬಡಿದು ಸಾಯಿಸುವುದು, ಅವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವುವಂತಹ ಪ್ರಕರಣಗಳೇಕೆ ಹೆಚ್ಚುತ್ತಿವೆ? ಅಂದರೆ ಕೆಲವು ಜಾತಿಗಳಿಗೆ ನ್ಯಾಯಾಲಯಗಳ ಮೂಲಕ ಸಾಂಸ್ಥಿಕ ನ್ಯಾಯ, ಇನ್ನು ಕೆಲವು ಜಾತಿಗಳಿಗೆ ಕ್ರೂರಾತಿಕ್ರೂರ ಬೀದಿ ನ್ಯಾಯ! ಇವೆಲ್ಲಾ ಯಾವ ಸೀಮೆಯ ಜಾತ್ಯತೀತ ನ್ಯಾಯ ಎಂದು ಕೇಳುವ ಲೋಕಾತೀತ ಪ್ರಜ್ಞೆ ಇರುವ ಸಂತರು ಈ ದೇಶಕ್ಕೆ ಈಗ ಬೇಕಿದೆ.

ಮದುವೆಯು ಜಾತಿಯೊಳಗೆ ಆಗಬೇಕು, ಊಟ ಜಾತಿಯವರ ಜತೆಗೆ ಕುಳಿತು ಮಾಡಬೇಕು, ಜಾತಿಗೊಂದು, ಉಪಜಾತಿಗೊಂದು, ಪಂಗಡಕ್ಕೊಂದು, ಒಳಪಂಗಡಕ್ಕೊಂದು ಎಂಬಂತೆ ಮಠಗಳಿರಬೇಕು. ಜೈಲು-ಬೇಲು ಎಲ್ಲವೂ ಜಾತಿ ನೋಡಿಯೇ ನಿರ್ಣಯ ವಾಗಬೇಕು. ಇವು ಯಾವುವೂ ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವುದಿಲ್ಲ. ಆದರೆ, ಯಾವ್ಯಾವ ಜಾತಿಯಲ್ಲಿ ಎಷ್ಟೆಷ್ಟು ಜನರಿದ್ದಾರೆ, ಎಷ್ಟೆಷ್ಟು ಸಂಪತ್ತಿದೆ, ಎಂಥೆಂಥ ಅಧಿಕಾರ ಸ್ಥಾನಗಳನ್ನು ಹೊಂದಿದ್ದಾರೆ ಅಂತ ಅಧಿಕೃತ ಅಂಕಿಅಂಶಗಳನ್ನು ಸಂಗ್ರಹಿಸಿದರೆ ಮಾತ್ರ ಧರ್ಮದಲ್ಲಿ ಒಡಕು ಮೂಡುತ್ತದೆಯಂತೆ! ರಾಷ್ಟ್ರೀಯತೆಗೆ ತೊಡಕಾಗುತ್ತದೆಯಂತೆ! ಬರಬರುತ್ತಾ ಈ ದೇಶದಲ್ಲಿ ರಾಷ್ಟ್ರೀಯತೆ ಮತ್ತು ಧರ್ಮರಕ್ಷಣೆಯ ಹೆಸರಲ್ಲಿ ತಲೆಬುಡ ಇಲ್ಲದ ಏನನ್ನೇ ಆದರೂ ಹೇಳಿ ದಕ್ಕಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.