ಇವೆಲ್ಲಾ ಏನು? ಇನ್ನೇನು ಚುನಾವಣೆ ಬಂದೇಬಿಟ್ಟಿತು ಎನ್ನುವ ಹೊತ್ತಿಗೆ ಬಿಜೆಪಿಯ ಒಬ್ಬರು ‘ಸಂವಿಧಾನ ತಿದ್ದುಪಡಿ ಮಾಡುತ್ತೇವೆ’ ಅಂತ ವೀರಾವೇಶದಿಂದ ಹೇಳುವುದು, ಆ ಪಕ್ಷದ ಕೆಲವರು ತಣ್ಣಗೆ ಪ್ರತಿಕ್ರಿಯಿಸಿ ‘ಇಲ್ಲ ಹಾಗೇನಿಲ್ಲ, ಅದೇನಿದ್ದರೂ ಹೇಳಿದವರ ವೈಯಕ್ತಿಕ ಅಭಿಪ್ರಾಯ, ಪಕ್ಷದ್ದಲ್ಲ’ ಅಂತ ಸಮಜಾಯಿಷಿ ನೀಡುವುದು, ಅದೇ ಪಕ್ಷದ ಇನ್ನಿತರರು ‘ತಿದ್ದುಪಡಿ ಮಾಮೂಲಿ ನಡೆಯುತ್ತದಲ್ಲ, ಅದರಲ್ಲೇನು ಮಹಾ’ ಅಂತ ಮರುಪ್ರಶ್ನೆ ಹಾಕುವುದು. ಇದು ಮತ್ತೆ ಮತ್ತೆ ನಮ್ಮ ಮುಂದೆ, ವಿಶೇಷವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನವೇ ಆದರೂ ಈ ಬಾರಿ ಕಾಂಗ್ರೆಸ್ ಹಾಗೇ ಸ್ವಲ್ಪ ಪ್ರತಿಭಟನೆಗೆ ಇಳಿದಿರುವುದು, ಇವೆಲ್ಲಾ ಏನು?

ಇಲ್ಲಿ ಕೆಲವೊಂದು ವಿಚಾರಗಳನ್ನು ಗಮನಿಸಬೇಕು. ರಾಜಕಾರಣವೂ ಪ್ರಕೃತಿಯ ಹಾಗೆ. ಕಾರ್ಯಕಾರಣ ಇಲ್ಲದೆ ರಾಜಕಾರಣದಲ್ಲೂ ಏನೂ ಸಂಭವಿಸುವುದಿಲ್ಲ. ಈ ಎಲ್ಲಾ ಹೇಳಿಕೆ, ಸಮಜಾಯಿಷಿಗಳ ಉದ್ದೇಶ ಇಷ್ಟೇ: ಸಂವಿಧಾನ ಬದಲಾಯಿಸುತ್ತೇವೆ ಎಂದಾಗ ಯಾರು ಪುಳಕಿತರಾಗುತ್ತಾರೋ ಅಂತಹವರಿಗೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಸಂದೇಶ ಹೋಗಬೇಕು. ಮತ್ತೆ ಮತ್ತೆ ಇಂತಹ ಮಾತನ್ನು ಕೇಳುತ್ತಾ ಕೇಳುತ್ತಾ ಅದರ ಕುರಿತು ಎಲ್ಲರೂ ಸಂವೇದನೆ ಕಳೆದುಕೊಳ್ಳುವಷ್ಟು ಬಾರಿ ಅದನ್ನು
ಪುನರಾವರ್ತಿಸಿ, ಸಂವಿಧಾನದ ವಿಚಾರದಲ್ಲಿ ಏನು ಮಾಡಲು ಹೊರಟಿದ್ದಾರೋ ಅದನ್ನು ಮಾಡಲು ಸರಿಯಾದ ಭೂಮಿಕೆ ಸಿದ್ಧವಾಗಬೇಕು. ಆ ತಯಾರಿ ಪೂರ್ಣ ಆಗುವವರೆಗೆ ಸಂವಿಧಾನ ಬದಲಾಯಿಸುತ್ತೇವೆ
ಎಂಬ ಹೇಳಿಕೆ ಬಂದಾಗ ಮುನಿಸಿಕೊಳ್ಳುವವರನ್ನು (ಅಂತಹವರ ಸಂಖ್ಯೆ ದೊಡ್ಡದೇ ಇದೆ ಎಂದು ಭಾವಿಸಲಾದ ಕಾರಣ) ಸಮಾಧಾನಪಡಿಸಲು ಸಮಜಾಯಿಷಿ, ಸ್ಪಷ್ಟೀಕರಣದಂತಹವೂ ಬರುತ್ತಿರಬೇಕು. ಸಮಜಾಯಿಷಿ, ಸ್ಪಷ್ಟೀಕರಣವನ್ನು ಯಾರ ಬಾಯಿಂದ ಕೊಡಿಸಬೇಕೋ ಅವರಿಂದಲೇ ಕೊಡಿಸಬೇಕು.

ಎಲ್ಲವೂ ಒಂದು ವ್ಯವಸ್ಥಿತ ಬೌದ್ಧಿಕ, ಮನೋವೈಜ್ಞಾನಿಕ ತಂತ್ರ. ಇದನ್ನು ಅರ್ಥ ಮಾಡಿಕೊಳ್ಳದೆ ಲಬೋಲಬೋ ಅಂತ ಮಾಡುವ ಪ್ರತಿಭಟನೆಗಳಿಂದ ಏನೂ ಆಗುವುದಿಲ್ಲ. ಸಂವಿಧಾನ ವಿರೋಧಿಗಳಿಗೆ ತಾವೇನು ಮಾಡುತ್ತಿದ್ದೇವೆ ಎನ್ನುವುದು ಸರಿಯಾಗಿ ಗೊತ್ತಿದೆ. ಸಂವಿಧಾನವನ್ನು ರಕ್ಷಿಸಿ ಕಾಪಿಡುತ್ತೇವೆ ಎನ್ನುವವರಿಗೆ ತಾವೇನು ಮಾಡುತ್ತಿದ್ದೇವೆ ಅಂತ ತಿಳಿದಂತಿಲ್ಲ, ತಾವೇನು ಮಾಡಬೇಕು ಅಂತಲೂ ತಿಳಿದಂತಿಲ್ಲ. ಹಾಗಾಗಿ, ಸಂವಿಧಾನ ವಿರೋಧಿಗಳು ಹೂಡಿದ ತಂತ್ರ ಆರಂಭಿಕ ಯಶಸ್ಸಿನ ಹಾದಿಯಲ್ಲೇ ಇದೆ.

ಸಂವಿಧಾನವನ್ನು ಕೆಡವುವ ದೀರ್ಘಾವಧಿ ಉದ್ದೇಶ ಹೊಂದಿರುವ ಈ ಮನೋಯುದ್ಧದಲ್ಲಿ
ಪ್ರಯೋಗವಾಗುವ ಪ್ರತಿಯೊಂದು ಪದವನ್ನೂ ಗಮನಿಸಬೇಕು. ಪದ ಪದವನ್ನೂ ಒಡೆದು, ವಿಂಗಡಿಸಿ
ಅರ್ಥ ಹುಡುಕಬೇಕು. ‘ಸಂವಿಧಾನ ಬದಲಾಯಿಸಲೆಂದೇ ಬಂದಿದ್ದೇವೆ’ ಅಂತ ಹೇಳುತ್ತಲೇ ಇರುವ ಬಿಜೆಪಿಯ ಸಂಸದರು ಈ ಬಾರಿ ಪ್ರಯೋಗಿಸಿದ ಪದಗಳನ್ನು ಗಮನಿಸಿ: ‘ಲೋಕಸಭೆಯಲ್ಲಿ 400ಕ್ಕಿಂತ ಹೆಚ್ಚು ಸೀಟುಗಳು ಬಂದುಬಿಡಲಿ, ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿಬಿಡಲಿ, ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಳುವ ಪಕ್ಷವಾಗಿಬಿಡಲಿ, ಆಮೇಲೆ ಮಾರಿಜಾತ್ರೆ ನೋಡಿ’ ಅಂತ ಅವರು ಹೇಳಿದ್ದಾರೆ. ಮಾರಿಜಾತ್ರೆ ಎಂಬ ಪದವನ್ನು ಅಡಿಗೆರೆ ಎಳೆದು, ಅಳೆದು, ತೂಗಿ ನೋಡಿ. ಮಾರಿಹಬ್ಬದಲ್ಲಿ ಬಲಿ ಕೊಡುವ ಸಂಪ್ರದಾಯ ಇದೆ. ಮಾರಿಹಬ್ಬ ಎಂದರೆ ತಕ್ಷಣ ಕಣ್ಣ ಮುಂದೆ ಬರುವುದೇ
ಬಲಿ. ಸಂಸದರು ಹೇಳಿದ ಮಾರಿಹಬ್ಬದಲ್ಲಿ ಬಲಿ ಆಗಲಿರುವುದು ಏನು? ಸಂವಿಧಾನ ತಾನೇ?

ಈ ಹಿಂದೆ ಅವರು ‘ಬದಲಾವಣೆ’ ಎನ್ನುವ ಪದವನ್ನು ನೇರವಾಗಿ ಬಳಸಿದ್ದರು. ಈ ಬಾರಿ ‘ಬದಲಾವಣೆ’ ಎಂಬ ಪದ ಬಳಸಿಲ್ಲ. ತಿದ್ದುಪಡಿ ಎನ್ನುವ ಪದ ಬಳಸಿದ್ದಾರೆ. ಯಾಕೆಂದರೆ, ತಿದ್ದುಪಡಿ ಮಾಮೂಲು ನಡೆಯುತ್ತದೆ, ಈಗಾಗಲೇ ನೂರಕ್ಕಿಂತಲೂ ಹೆಚ್ಚು ತಿದ್ದುಪಡಿಗಳಾಗಿವೆ, ಅದಕ್ಕೆ ಸಂವಿಧಾನದಲ್ಲೇ ಅವಕಾಶ ಇದೆ, ಅದರಲ್ಲೇನು ಮಹಾ ಅಂತ ಜನ ಅಂದುಕೊಳ್ಳಬೇಕು. ಅದೇವೇಳೆ, ಸಂವಿಧಾನದ ಬಗ್ಗೆ ಸದಾ ಅಪಸ್ವರ ತೆಗೆಯುವವರನ್ನೇ ಬೆಂಬಲಿಸುವುದು ಎನ್ನುವ ಮತದಾರರಿಗೂ ‘ಮಾರಿಜಾತ್ರೆ’ ಎಂಬ ಪದದ ಮೂಲಕ ಸರಿಯಾದ ಸಂದೇಶ ಹೋಗಬೇಕು. ತಿದ್ದುಪಡಿ, ಬದಲಾವಣೆ, ಮಾರ್ಪಾಟು ಅಂತ ಏನೇನೋ ಪದಪುಂಜಗಳ ಜತೆ ಆಟವಾಡುತ್ತಾ ಬಲಿ ನೀಡಲು ವೇದಿಕೆ ನಿರ್ಮಾಣ ಆಗಬೇಕು.

ಸಂವಿಧಾನದ ಪರವಾಗಿ ಹೋರಾಟಕ್ಕೆ ಇಳಿದಿರುವವರು ಸದರಿ ಸಂಸದರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎನ್ನುತ್ತಿದ್ದಾರೆ. ಆಯಿತು, ಅವರನ್ನು ಪಕ್ಷದಿಂದ ಉಚ್ಚಾಟಿಸಿದರೆ ಅಲ್ಲಿಗೆ ವಿಷಯ ಮುಗಿದು ಹೋಗುತ್ತದೆಯೇ? ಬಿಜೆಪಿಗೆ ಸಂವಿಧಾನದ ಬಗ್ಗೆ ಇರುವ ಸಂಬಂಧ ತುಂಬಾ ಸಂಕೀರ್ಣವಾದದ್ದು. ಸಂವಿಧಾನವನ್ನು ಗುರಿಯಾಗಿಸಿಕೊಂಡು ಯಾರೋ ಎಂದೋ ಒಮ್ಮೆ ನೀಡುವ ಹೇಳಿಕೆಗಳ ಮೂಲಕ ಅದನ್ನು ಅರ್ಥ ಮಾಡಿಕೊಂಡರೆ ಸಾಲದು. ಅಂತಹ ಹೇಳಿಕೆಗಳ ವಿರುದ್ಧ ಪ್ರತಿಭಟಿಸುವ ಮೂಲಕ ಮಾತ್ರ ಸಂವಿಧಾನವನ್ನು ಉಳಿಸಲೂ ಆಗದು. ಅಂತಹ ಹೇಳಿಕೆಗಳು ಬರೀ ಸಮಸ್ಯೆಯ ಲಕ್ಷಣಗಳೇ ವಿನಾ ಸಮಸ್ಯೆಯ ಮೂಲ ಅಲ್ಲ.

ಬಿಜೆಪಿಯವರು ಮತ್ತು ಅವರ ಸೈದ್ಧಾಂತಿಕ ಪರಿವಾರದವರು ‘ನಾವು ಭಾರತವನ್ನು ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ’ ಎಂದು ಹೇಳಿದಾಗ, ಅವರು ಪರ್ಯಾಯವಾಗಿ ಹೇಳುವುದು ‘ನಾವು ಸಂವಿಧಾನವನ್ನು ನಾಶ ಮಾಡುತ್ತೇವೆ’ ಅಂತಲೇ. ಯಾಕೆಂದರೆ, ಸಂವಿಧಾನ ಅರ್ಥಾತ್ ಮೂಲ ಸಂವಿಧಾನ ಹೇಳುವುದು, ಈ ರಾಷ್ಟ್ರ ಇಲ್ಲಿರುವ ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರಿದ್ದು ಅಂತ. ಇದು ಹಿಂದೂ ರಾಷ್ಟ್ರ ಎಂದರೆ ಯಾರ ರಾಷ್ಟ್ರ ಎನ್ನುವ ಪ್ರಶ್ನೆ ಬರುತ್ತದೆ ಮತ್ತು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಬಹುತ್ವವೇ ಮೂಲವಾಗಿರುವ ಭಾರತೀಯ ಸಮಾಜದಲ್ಲಿ ಕಷ್ಟ ಎನ್ನುವ ರಾಜಕೀಯ ಕಾಣ್ಕೆ ಸಂವಿಧಾನದ್ದು.

ಬಹುಧರ್ಮೀಯರಿರುವ ಭಾರತ ಹಿಂದೂರಾಷ್ಟ್ರ ಅಂತ ಆದರೆ ಈ ದೇಶ ಒಂದಾಗಿ ನೆಮ್ಮದಿಯಿಂದ ಉಳಿಯಲಾರದು ಎನ್ನುವ ಅಮೋಘ ಆಧ್ಯಾತ್ಮಿಕ ಕಾಣ್ಕೆ ಸಂವಿಧಾನದ್ದು. ಹಾಗಾಗಿ, ‘ಹಿಂದೂ ರಾಷ್ಟ್ರ ಮಾಡುತ್ತೇವೆ’ ಅಂತ ಹೇಳುವವರು ಪರ್ಯಾಯವಾಗಿ ಹೇಳುತ್ತಿರುವುದು ಏನೆಂದರೆ, ಈ ಸಂವಿಧಾನ ಬೇಡ ಎಂದು. ಎಗ್ಗಿಲ್ಲದೆ ಎಲ್ಲೆಡೆಯಿಂದ ಕಿವಿಗಪ್ಪಳಿಸುತ್ತಿರುವ ಈ ಹೇಳಿಕೆಗಳ ವಿರುದ್ಧ ಯಾರೂ ಪ್ರತಿಭಟಿಸುವುದಿಲ್ಲ. ಹಿಂದೂ ರಾಷ್ಟ್ರ ಆದರೆ ತೊಂದರೆ ಏನು ಎನ್ನುವ ಮುಗ್ಧ ಪ್ರಶ್ನೆ ಕೇಳುವ ಜನರಿಗೆ ಅದರ ಅಪಾಯ ಏನು ಅಂತ ಯಾರೂ ತಿಳಿಹೇಳುವುದಿಲ್ಲ.

ಮೊನ್ನೆ ಸದರಿ ಸಂಸದರು ನೀಡಿದ ಹೇಳಿಕೆಯನ್ನು ಸಮರ್ಥಿಸುತ್ತಾ ಇನ್ನೊಬ್ಬ ಬಿಜೆಪಿ ನಾಯಕರು ಒಂದು ಮಾತು ಹೇಳಿದ್ದು ವರದಿಯಾಗಿದೆ. ‘ಈ ದೇಶವನ್ನು ಒಕ್ಕೂಟ ಅಂತ ಕರೆಯುವವರು ನಿಜವಾದ ಸಂವಿಧಾನ ವಿರೋಧಿಗಳು’ ಅಂತ ಅವರು ಹೇಳಿದ್ದಾರೆ. ಅಂದರೆ ಅವರ ಪ್ರಕಾರ, ಈ ದೇಶವನ್ನು ರಾಜ್ಯಗಳ ಒಕ್ಕೂಟ ಅಂತ ಹೇಳುವುದೇ ತಪ್ಪು. ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಕೇಂದ್ರಕ್ಕೆ ನೀಡಿದ ಹಾಗೆಯೇ ಆಯ್ದ ವಿಷಯಗಳಲ್ಲಿ ರಾಜ್ಯಗಳಿಗೂ ನೀಡಿದೆ. ಆದಕಾರಣ ಇದು ಒಕ್ಕೂಟ. ಆದರೆ, ಮಾಜಿ ಮಂತ್ರಿಯೂ ಆಗಿರುವ ಆ ಬಿಜೆಪಿ ನಾಯಕರ ಪ್ರಕಾರ, ಒಕ್ಕೂಟ ಅಂತ ಹೇಳುವುದೇ ದ್ರೋಹ. ಹೀಗೆ ಅವರು ಹೇಳಿದಾಗ ಅವರು ಪರ್ಯಾಯವಾಗಿ ಹೇಳುವುದು ಈ ಸಂವಿಧಾನವನ್ನು ಬದಲಾಯಿಸಬೇಕು ಅಂತಲೇ. ಯಾಕೆಂದರೆ, ಒಕ್ಕೂಟ ವ್ಯವಸ್ಥೆಯೂ ಮೂಲ ಸಂವಿಧಾನದ ಭಾಗ.

ಹಾಗಾಗಿ, ಸಂವಿಧಾನವನ್ನು ಬದಲಾಯಿಸಬೇಕು ಅಥವಾ ಈ ಸಂವಿಧಾನದ ಸ್ಥಾನದಲ್ಲಿ ಹೊಸ ಸಂವಿಧಾನ ಬರಬೇಕು ಎನ್ನುವ ಹೇಳಿಕೆಯನ್ನು ವಿವಿಧ ಪದಗಳಲ್ಲಿ, ವಿವಿಧ ದೃಷ್ಟಾಂತಗಳ ಮೂಲಕ, ವಿವಿಧ ಉಪಮೆಗಳ ಮೂಲಕ, ವಿವಿಧ ಪ್ರತಿಮೆಗಳ ಮೂಲಕ ಮತ್ತೆ ಮತ್ತೆ ಹೇಳಲಾಗುತ್ತಿದೆ. ಅರ್ಥಾತ್ ಜನಮಾನಸವನ್ನು ‘ಮಾರಿಜಾತ್ರೆ’ಗೆ ಅಣಿಗೊಳಿಸಲಾಗುತ್ತಿದೆ. ಪ್ರತಿಭಟಿಸಬೇಕು ಎಂದಿದ್ದವರು ಈ ಇಡೀ ಹುನ್ನಾರದ ವಿರುದ್ಧ ಪ್ರತಿಭಟಿಸದೆ, ಒಬ್ಬ ವ್ಯಕ್ತಿಯನ್ನೇ ಗುರಿಯಾಗಿಸಿಕೊಳ್ಳುವುದರಿಂದ ಸಂವಿಧಾನದ ರಕ್ಷಣೆ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.