ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

Published : 15 ಸೆಪ್ಟೆಂಬರ್ 2024, 23:30 IST
Last Updated : 15 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

‘ತುಷ್ಟೀಕರಣದ ಭರದಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವಕ್ಕೆ ಅಡ್ಡಿಪಡಿಸಲಾಗಿದೆ. ವಿಘ್ನನಿವಾರಕನ ಪೂಜೆಗೆ ವಿಘ್ನ ಸೃಷ್ಟಿಸಲಾಗಿದೆ. ಗಣಪತಿಜೀಯನ್ನು ಕಂಬಿಯ ಹಿಂದೆ ಕೂರಿಸಲಾಗಿದೆ...’

ಪ್ರಧಾನಿ ನರೇಂದ್ರ ಮೋದಿ‌ ಅವರು ಆಡಿದ ಮಾತುಗಳಿವು. ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಶನಿವಾರ ಚಾಲನೆ ನೀಡಿದ ಅವರು, ನಾಗಮಂಗಲದ ಹೆಸರು ಉಚ್ಚರಿಸಲಿಲ್ಲ. ಗಲಭೆಯನ್ನಷ್ಟೇ ಉಲ್ಲೇಖಿಸಿದರು. ಮಣಿಪುರದಲ್ಲಿ ವರ್ಷದುದ್ದಕ್ಕೂ ನಡೆದ ಹಿಂಸೆ, ದೇಶದ ಉದ್ದಗಲಕ್ಕೂ ಆಗಾಗ್ಗೆ ನಡೆಯುತ್ತಲೇ ಇರುವ ಕೋಮುಹಿಂಸೆಗಳ ಬಗ್ಗೆ ಎಂದೂ ತುಟಿ ಬಿಚ್ಚದ ಮೋದಿ, ಕರ್ನಾಟಕದ ತಾಲ್ಲೂಕು ಕೇಂದ್ರವೊಂದರಲ್ಲಿ ಒಂದೇ ದಿನದಲ್ಲಿ ನಿಯಂತ್ರಣಕ್ಕೆ ಬಂದ ಹಿಂಸಾತ್ಮಕ ಪ್ರಕರಣವನ್ನು ವಿಶ್ವ ಮಟ್ಟದ ಸುದ್ದಿ ಎಂಬಂತೆ ಬಿಂಬಿಸಿದ್ದಾರೆ.

ಪ್ರಧಾನಿಯಾಗಿ 10 ವರ್ಷ ಪೂರೈಸಿರುವ ಅವರು, ತಮ್ಮ ನಿವಾಸದಲ್ಲಿ ಆಗತಾನೇ ಜನಿಸಿದ ಹಸುಗರುವನ್ನು ಮುದ್ದಿಸುತ್ತಿರುವ ಚಿತ್ರವನ್ನು ‘ಎಕ್ಸ್‌’ನಲ್ಲಿ ಹಾಕಿಕೊಳ್ಳುವಷ್ಟು ಮುಗ್ಧತನ ತೋರಿಸುತ್ತಾರೆ. ಆದರೆ, ದೇಶದಲ್ಲಿ ನಡೆಯುವ ಹಿಂಸೆ, ಕ್ಷೋಭೆಯನ್ನು ನಿಗ್ರಹಿಸಿ, ‘ಇಲ್ಲಿದೆ ನೆಮ್ಮದಿ ತಾಣ’ ಎಂದು ಭರವಸೆ ಮೂಡಿಸುವ ಹೃದಯವಂತಿಕೆಯನ್ನು ಅವರೆಂದೂ ತೋರಲಿಲ್ಲ. ಪ್ರಧಾನಿಯಾದವರು ದೇಶದ ಹಿತಚಿಂತನೆ ಮಾಡಬೇಕೇ ವಿನಾ ತಾಲ್ಲೂಕೊಂದರಲ್ಲಿ ನಡೆದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನೇ ದೇಶದ ಸಮಸ್ಯೆ ಎಂಬಂತೆ ಬಣ್ಣಿಸುವುದು ಆ ಹುದ್ದೆಗೆ ಶೋಭೆ ತರುವಂಥ ನಡೆಯಲ್ಲ. ಮಾತನಾಡಬೇಕಾದ ವಿಷಯಗಳಲ್ಲಿ ಮೌನ ತಳೆಯುವ ಮೋದಿಯವರು, ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದರೆ ಸಾಕು, ಮೈಮೇಲೆ ಆವೇಶ ಬಂದಂತೆ ವರ್ತಿಸುತ್ತಾರೆ. ನಾಗಮಂಗಲ ಪ್ರಕರಣದ ಉಲ್ಲೇಖ ಇದಕ್ಕೊಂದು ನಿದರ್ಶನ.

‘ಹೆಣ ಬಿದ್ದರೆ ಹದ್ದುಗಳಿಗೆ ಹಬ್ಬ, ಗಲಭೆಯೆದ್ದರೆ ರಾಜಕಾರಣಿಗಳಿಗೆ ಸ್ವರ್ಗ’ ಎಂಬುದು ಇವತ್ತಿನ ರಾಜಕೀಯ ವಾಸ್ತವ. ಗಣೇಶ ಮೂರ್ತಿಯ ಮೆರವಣಿಗೆಯ ವಿಷಯದಲ್ಲಿ ನಡೆದ ಘರ್ಷಣೆಯು ಹಿಂಸೆಗೆ ತಿರುಗಿತು. ಹಿಂದೂ, ಮುಸ್ಲಿಂ ಸಮುದಾಯದವರು ವಿವೇಚನೆಯಿಂದ ವರ್ತಿಸಿದ್ದರೆ ಇದೊಂದು ತಪ್ಪಿಸಬಹುದಾದ ಪ್ರಕರಣವಾಗಿತ್ತು. ತಮ್ಮ ಸಮುದಾಯದವರ ಮಿದುಳಿನಲ್ಲಿ ವಿಷವನ್ನು ತುಂಬಿ ಗಲಭೆಗೆ ಪ್ರಚೋದಿಸುವ, ಹಿಂಸೆಗೆ ಉತ್ತೇಜನ ನೀಡುವ ಕೆಲವು ಜಂತುಗಳು ಎರಡೂ ಸಮುದಾಯಗಳಲ್ಲಿ ಇವೆ. ಹೀಗಾಗಿ, ಹಾದಿಬೀದಿಯ ಜಗಳ ಸಹ ಅಂಗಡಿ, ಮಳಿಗೆಗಳನ್ನು ಸುಟ್ಟು, ದ್ವೇಷದ ಜ್ವಾಲೆ ಹಬ್ಬುವುದಕ್ಕೆ ದಾರಿ ಮಾಡಿಕೊಡುತ್ತದೆ.

ಇಂತಹ ಪ್ರಕರಣಗಳು ನಡೆದಾಗ, ನೇತಾರರು ಎನ್ನಿಸಿಕೊಂಡವರು ಸಂಯಮದಿಂದ ವರ್ತಿಸಿ, ಶಾಂತಿ ಸ್ಥಾಪಿಸಬೇಕಾದುದು ಮೊದಲ ಕೆಲಸ. ಆದರೆ, ಕೋಮುಘರ್ಷಣೆಯನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುವ ಚಾಳಿ ಎಲ್ಲ ಪಕ್ಷದವರಲ್ಲೂ ಇದೆ. ತುಷ್ಟೀಕರಣವು ಒಂದು ಪಕ್ಷ, ಒಂದು ಸಮುದಾಯದವರಿಗೆ ಸೀಮಿತವಾಗಿಲ್ಲ. ಓಲೈಕೆಯ ಜತೆಗೆ, ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಇಂತಹ ಪ್ರಕರಣಗಳೇ ಊರುಗೋಲು ಎಂಬುದು ರಾಜಕಾರಣಿಗಳ ಮತಿಹೀನ ತಿಳಿವಳಿಕೆ ಹಾಗೂ ಅಪಾಯಕಾರಿ ನಡವಳಿಕೆ. 

ಆಡಳಿತ ನಡೆಸಿದ ಅನುಭವ ಇರುವ ಗೃಹ ಸಚಿವ ಜಿ.ಪರಮೇಶ್ವರ ಇಂತಹ ಸನ್ನಿವೇಶ ಸೃಷ್ಟಿಯಾದಾಗಲೆಲ್ಲ, ಹೊಣೆಯರಿತು ಮಾತನಾಡಿದ್ದೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಪೊಲೀಸ್ ಅಧಿಕಾರಿಗಳ ವಿವೇಚನೆಗೆ ಬಿಡುವುದು ಬಿಟ್ಟು, ತಮ್ಮದೊಂದು ಅಸಂಬದ್ಧ ‘ಪ್ರಮಾಣಪತ್ರ’ ನೀಡಿಬಿಡುವುದು ಅವರಿಗೆ ರೂಢಿಯಾಗಿದೆ. ಈ ವಿಷಯದಲ್ಲೂ ‘ಇದೊಂದು ಸಣ್ಣ ಘಟನೆ’ ಎಂದು ಹೇಳಿ ಬಿಜೆಪಿಯವರನ್ನು ರೊಚ್ಚಿಗೆಬ್ಬಿಸಿದರು.

ನಾಗಮಂಗಲದ ಪ್ರಕರಣ ನಡೆದ ಮರುಕ್ಷಣವೇ ಬಿಜೆಪಿ– ಜೆಡಿಎಸ್ ನಾಯಕರು ಧಿಗ್ಗನೆದ್ದು ಕುಳಿತರು. ಕಾಣಿಸಿಕೊಂಡ ಕಿಡಿಯನ್ನು ಉರಿವ ಜ್ವಾಲೆಯನ್ನಾಗಿಸಲು ಹೊಂಚು ಹಾಕಿ ಕುಳಿತಂತಿತ್ತು ನಾಯಕರ ವರ್ತನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ದಂಡು ಕಟ್ಟಿಕೊಂಡು, ಎದ್ದೆನೋ ಬಿದ್ದೆನೋ ಎಂದು ನಾಗಮಂಗಲಕ್ಕೆ ದೌಡಾಯಿಸಿ, ‘ಗಲಭೆಯ ಹಿಂದೆ ಕಾಂಗ್ರೆಸ್ ಪಿತೂರಿ ಇದೆ, ಹಿಂದೂಗಳು ಆತಂಕಕ್ಕೆ ಒಳಗಾಗಿದ್ದಾರೆ’ ಎಂದೆಲ್ಲಾ ಬಡಬಡಿಸಿದರು.

ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರಂತೂ ಮತ್ತೂ ಒಂದು ಹೆಜ್ಜೆ ಮುಂದೆ ಹೋದರು. ‘ಹಿಂದೂಗಳನ್ನೇ ಗುರಿಯಾಗಿಸಿಕೊಂಡು, ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಪೂರ್ವಯೋಜಿತವಾಗಿ ದುಷ್ಕೃತ್ಯ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಸ್ಲಿಂ ಮತಾಂಧರನ್ನು ಓಲೈಸಲು, ಹಿಂದೂಗಳನ್ನು ಬಲಿ ಕೊಡಲು ಸಿದ್ಧ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದಂತಿದೆ. ಇಷ್ಟಕ್ಕೂ ಮಸೀದಿ ಅಥವಾ ದರ್ಗಾದ ಮುಂದೆ ಗಣೇಶೋತ್ಸವದ ಮೆರವಣಿಗೆ ಹಾದು ಹೋಗಬಾರದು ಎನ್ನುವುದಕ್ಕೆ ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ’ ಎಂದು ಪಡ್ಡೆ ಹುಡುಗರಂತೆ ಪ್ರಶ್ನಿಸಿದರು. ದರ್ಗಾ ಅಥವಾ ಮಸೀದಿ ಮುಂದೆ ಮೆರವಣಿಗೆ ಮಾಡಬೇಕು, ಅರ್ಧಗಂಟೆ ನಿಂತು ಭಜನೆ ಮಾಡಬೇಕು ಎಂದು ಯಾವ ಧರ್ಮ ಅಥವಾ ಶಾಸ್ತ್ರಗ್ರಂಥ ಹೇಳುತ್ತದೆ ಎಂದು‌ ಅಶೋಕ ಅವರಿಗೆ ಕೇಳಲೇಬೇಕಾಗಿದೆ.

ಎರಡು ಬಾರಿ ಮುಖ್ಯಮಂತ್ರಿಯಾಗಿ, ಸದ್ಯ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ, ತಾನು ಮಂಡ್ಯದ ಜನರ ಮತಗಳಿಂದ ಗೆದ್ದಿದ್ದೇನೆ ಎಂಬ ಪರಿವೆಯೂ ಇಲ್ಲದಂತೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟರು. ‘ಬರೀ ಹತ್ತು ನಿಮಿಷದಲ್ಲಿ ಅಷ್ಟೊಂದು ಪ್ರಮಾಣದ ಕಲ್ಲು, ಚಪ್ಪಲಿ, ಕಬ್ಬಿಣದ ಪೈಪ್‌ಗಳು, ಪೆಟ್ರೋಲ್ ಬಾಂಬ್‌ಗಳು ಎಲ್ಲಿಂದ ಬಂದವು? ಹತ್ತೇ ನಿಮಿಷದಲ್ಲಿ ಇವನ್ನೆಲ್ಲಾ ಸಂಗ್ರಹ ಮಾಡಿಕೊಳ್ಳಲು ಸಾಧ್ಯವೇ? ಇಡೀ ಗಲಭೆಯ ರೀತಿಯನ್ನು ನೋಡಿದರೆ ಹಿಂದೆ ದೊಡ್ಡ ಪಿತೂರಿ ಅಡಗಿರುವಂತೆ ತೋರುತ್ತದೆ. ಕಾಂಗ್ರೆಸ್ ಪ್ರಾಯೋಜಿತ ಗಲಭೆ’ ಎಂಬಲ್ಲಿಯವರೆಗೆ ಕುಮಾರಸ್ವಾಮಿಯವರ ‘ಸಂಘಪ್ರೇಮ’ದ ಉನ್ಮಾದ ಹರಿಯಿತು.

‘ರಾಜ್ಯ ರಾಜಕಾರಣಕ್ಕೆ ಸದ್ಯ ನೀವು ಬೇಡ’ ಎಂದು ಕುಮಾರಸ್ವಾಮಿಯವರನ್ನು ನಾಡಿನ ಜನ ದೆಹಲಿಗೆ ಕಳುಹಿಸಿದ್ದಾರೆ. ಅವರ ಪಕ್ಷ ಗೆದ್ದಿರುವುದು ಎರಡೇ ಕ್ಷೇತ್ರಗಳಲ್ಲಾದರೂ ದೇಶದ ಕೈಗಾರಿಕೆಗಳನ್ನು ಮುನ್ನಡೆಸುವ ಬಹುದೊಡ್ಡ ಜವಾಬ್ದಾರಿಯನ್ನು ಪ್ರಧಾನಿ ಮೋದಿಯವರು ಕೊಟ್ಟಿದ್ದಾರೆ. ದೇಶೋದ್ಧಾರದ ಕೆಲಸವನ್ನು ಬಿಟ್ಟು, ವಾರಕ್ಕೊಮ್ಮೆ ಇಲ್ಲಿಗೆ ಬಂದು ಸ್ಥಳೀಯ ರಾಜಕಾರಣದಲ್ಲಿ, ಹಗೆತನದ ಕಸುಬಿನಲ್ಲಿ ತಲ್ಲೀನರಾಗುವುದು ಅವರ ಹಿರಿತನಕ್ಕೆ ತಕ್ಕ ನಡೆಯಲ್ಲ. ಇದು ಪ್ರಲ್ಹಾದ ಜೋಶಿಯವರಿಗೂ ಸಲ್ಲುವ ಮಾತು.

ಕೋಮುಘರ್ಷಣೆಯ ವಿಷಯದಲ್ಲಿ ರಾಜಕಾರಣಿಗಳ ಮಾತು, ನಡೆಗಳನ್ನು ನೋಡಿದರೆ ಯಾರೊಬ್ಬರಿಗೂ ಸಾರ್ವಜನಿಕ ಲಜ್ಜೆಯಾಗಲಿ, ಜನಹಿತದ ಕಾಳಜಿಯಾಗಲಿ ಇದ್ದಂತೆ ಕಾಣುವುದಿಲ್ಲ. ರಾಜಕೀಯ ಫಸಲು ತೆಗೆಯಲು ‌ಯಾರನ್ನಾದರೂ ಬಲಿ ಕೊಡಲು ಎಲ್ಲರೂ ಹತಾರ ಹಿಡಿದು ನಿಂತಂತೆ ಇರುತ್ತದೆ. ಉರಿವ ಮನೆಯ ಗಳ ಹಿರಿದು ತಮ್ಮ ಕಾಲಬುಡವನ್ನು ಬೆಚ್ಚಗೆ, ಭದ್ರ ಮಾಡಿಕೊಳ್ಳುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕಿದೆ.

‘ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ

ನೆರೆಮನೆಯ ಸುಡದೋ

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ

ತನಗಾದ ಆಗೇನು ಅವರಿಗಾದ ಕೇಡೇನು...’

ಎಂಬ ಬಸವಣ್ಣನವರ ವಚನವನ್ನು ಅರ್ಥ ಮಾಡಿಕೊಂಡು ಅನುಸರಿಸಿದರೆ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ಕರ್ನಾಟಕ ತೆರೆದಂತೆ ಆಗುತ್ತದೆ. ಆಗ, ಪ್ರೀತಿಯ ಹೂಗಳು ಎಲ್ಲರ ಎದೆಯೊಳಗೆ ಅರಳತೊಡಗಿ, ದ್ವೇಷದ ಬೆಂಕಿ ತಂತಾನೇ ಆರಿಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT