ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ ಅಂಕಣ: ಸ್ತನದತೊಟ್ಟಿನಲ್ಲಿ ಸ್ರಾವ ಅಪಾಯದ ಸೂಚನೆಯೇ?

Published 14 ಜೂನ್ 2024, 23:40 IST
Last Updated 14 ಜೂನ್ 2024, 23:40 IST
ಅಕ್ಷರ ಗಾತ್ರ

ನನಗೆ ಎರಡು ಮಕ್ಕಳಿವೆ, ಮಕ್ಕಳಾಗದ ಹಾಗೇ ಟುಬೆಕ್ಟಮಿಯೂ ಆಗಿದೆ. ಇಬ್ಬರು ಮಕ್ಕಳಿಗೂ 2ವರ್ಷ ಹಾಲುಣಿಸಿದ್ದೇನೆ, ಎರಡನೇ ಮಗಳಿಗೀಗ 4ವರ್ಷಗಳು ನನಗೆ ಈಗಲು ಎರಡು ಎದೆತೊಟ್ಟಿನಲೂ ನೀರಿನಂತಹ, ಕೆಲವೊಮ್ಮೆ ಬಿಳಿಯಾದ ದ್ರವಬರುತ್ತಿದೆ. ನನ್ನ ಹೆರಿಗೆ ಮಾಡಿಸಿದ ವೈದ್ಯರು ಭಯವೇನಿಲ್ಲ ಎಂದು ಹೇಳಿದ್ದಾರೆ. ನನಗೆ ಕ್ಯಾನ್ಸರ್ ಭಯ.

–ಮಮತ ಶಿಕ್ಷಕಿ, ಬೆಂಗಳೂರು  

ಹೆರಿಗೆಯಾಗಿ 4ವರ್ಷಗಳಾಗಿರುವುದರಿಂದ, ಸ್ತನ್ಯಪಾನವನ್ನು ನಿಲ್ಲಿಸಿರುವುದರಿಂದ ಈ ದ್ರವಸ್ರಾವವು ಅಸಹಜ ಎನಿಸುತ್ತಿದೆ. ಆಗಾಗ್ಗೆ ಎದೆಯಲ್ಲಿ ನೀರಿನಂತಹ/ ಬಿಳಿಯಾದ ಸ್ರಾವವಾಗುವುದು ಕಾಯಿಲೆಯಲ್ಲ, ಕೆಲವೊಮ್ಮೆ ಕಾಯಿಲೆಯ ಲಕ್ಷಣವಿರಬಹುದು. ಹಾಲುಸ್ರವಿಕೆ ಗರ್ಭಧಾರಣೆಯಲ್ಲಿ ಮತ್ತು ಎದೆಹಾಲುಣಿಸುವಾಗ ಸಹಜವಾದರೂ ಬೇರೆ ಸಮಯದಲ್ಲಿ ಕೂಡಾ ಆಗಬಹುದು.

ನೀವೇನಾದರೂ ಕೆಲವು ಖಿನ್ನತೆ ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ, ವಾಂತಿಯಾಗದ ಹಾಗೆ ಸೇವಿಸುವ ಮೇಟಕ್ಲೋಪ್ರಮೇಡ್ ಮಾತ್ರೆ, ಹೊಟ್ಟೆಯ ಅಲ್ಸರ್ ಚಿಕಿತ್ಸೆಗೆ ತೆಗೆದುಕೊಳ್ಳುವ ರ‍್ಯಾನಿಟಿಡಿನ್ ಮಾತ್ರೆ ಇತ್ಯಾದಿಗಳಿಂದಲೂ ಹಾಲಿನಂತಹ ಸ್ರಾವ ಉಂಟಾಗಬಹುದು. ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನಿನ ಅಸಹಜ ಸ್ರಾವದಿಂದಲೂ ಹಾಲಿನಂತಸ್ರಾವ ಉಂಟಾಗಬಹುದು. ಅತಿಯಾಗಿ ಎದೆತೊಟ್ಟು ಉತ್ತೇಜಿಸುವುದರಿಂದ, ಕೆಲವೊಮ್ಮೆ ಥೈರಾಯ್ಡ್‌ ಗ್ರಂಥಿಯ  ಸ್ರಾವ ಕಡಿಮೆಯಿದ್ದಾಗಲೂ, ಪಿಟ್ಯೂಟರಿಯ ಗ್ರಂಥಿಯ ಗಡ್ಡೆಗಳಿದ್ದಾಗಲೂ, ಹರ್ಪಿಸ್‌ಸೋಂಕಿನ ನಂತರವೂ ಈ ರೀತಿಯ ಸ್ರಾವ ಉಂಟಾಗಬಹುದು.

ನೀರಿನಂತಹ ದ್ರವದ ಸ್ರಾವವು ಎದೆತೊಟ್ಟಿನಲ್ಲಿ ಹಾಲಿನ ನಾಳದಲ್ಲಿ ಗಂಟುಗಳಿದ್ದಾಗ ಮತ್ತು ಹಾಲಿನನಾಳದಲ್ಲಿ ಬದಲಾವಣೆಗಳಿದ್ದಾಗ (ಡಕ್ಟ್ ಎಕ್ಟೇಸಿಯಾ), ಸ್ತನದಲ್ಲಿ ಫೈಬ್ರೋಸಿಸ್ಟಿಕ್ ಬದಲಾವಣೆಗಳಾದಾಗ ದ್ರವರೂಪದ ಸ್ರಾವವಾಗಬಹುದು. ಇಂತಹ ಸ್ರಾವ ಸಾಮಾನ್ಯವಾಗಿ ಎರಡೂ ಎದೆತೊಟ್ಟಿನಲ್ಲಿ ಕಂಡುಬರಬಹುದು.

ನೀವು ಇನ್ನೊಮ್ಮೆ ತಜ್ಞವೈದ್ಯರಿಂದ ಸೂಕ್ತ ತಪಾಸಣೆಗೊಳಗಾಗಿರಿ. ಸಾಮಾನ್ಯವಾಗಿ ಸ್ತನದ ತೊಟ್ಟಿನಲ್ಲಿ ಸ್ರಾವವಾದಾಗ ಒಮ್ಮೆಲೇ ಆರಂಭವಾದರೆ ಮತ್ತು ದೀರ್ಘಾವದಿಯವರೆಗೆ ಹಾಗೇ ಇದ್ದರೆ ಎದೆತೊಟ್ಟಿನ ಸ್ರಾವದ ಜೊತೆಗೆ ಎದೆಯಲ್ಲಿ ಗಂಟುಗಳೂ ಇದ್ದರೆ ಸ್ರಾವ ರಕ್ತ ಮಿಶ್ರಿತವಾಗಿದ್ದರೆ, ಎದೆತೊಟ್ಟಿನ ಆಕಾರದಲ್ಲಿ ವ್ಯತ್ಯಾಸವಾಗಿದ್ದರೆ ಇವೆಲ್ಲಾ ಅಪಾಯದ ಚಿಹ್ನೆಗಳಾಗಿರಬಹುದು (ರೆಡ್ ಪ್ಲಾಗ್ ಸೈನ್ಸ್) ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷಿಸದೇ ವೈದ್ಯರು ಸೂಚಿಸಿದ ಪರೀಕ್ಷೆಗಳಿಗೊಳಗಾಲೇ ಬೇಕು.

ಅಪಾಯದ ಚಿಹ್ನೆಗಳಿಲ್ಲದಿದ್ದರೂ ವೈದ್ಯರಿಂದ ಸೂಕ್ತ ತಪಾಸಣೆಗೊಳಗಾಗಿ ಥೈರಾಯ್ಡಪರೀಕ್ಷೆ, ರಕ್ತದಲ್ಲಿ ಪ್ರೊಲ್ಯಾಕ್ಟಿನ್ ಪರೀಕ್ಷೆ ಮಾಡಿಕೊಳ್ಳುವುದು, ಅವಶ್ಯಬಂದಲ್ಲಿ ಪಿ ಟ್ಯೂಟರಿಗ್ರಂಥಿಯ ಗಡ್ಡೆಗಳಿದೆಯೇ ಎಂದು ಪರೀಕ್ಷಿಸಲು ಎಂ.ಆರ್.ಐ ಸ್ಕಾö್ಯನಿಂಗ್, ಡಕ್ಟೋಸ್ಕೋಫಿ, ಸ್ರಾವವನ್ನ ಸೂಕ್ಷö್ಮದರ್ಶಕದಲ್ಲಿ ಪರೀಕ್ಷೆಮಾಡುವುದು, ಬಯಾಪ್ಸಿ ಇತ್ಯಾದಿ ಸಂದರ್ಭ ಬಂದಲ್ಲಿ ವೈದ್ಯರ ಸಲಹೆಯಮೇರೆಗೆ ಮಾಡಬೇಕಾಗುತ್ತದೆ.

ನೀವು ಹೇಳುತ್ತಿರುವ ರೀತಿನೋಡಿದರೆ ನಿಮಗೆ ಬಹುಶಃ ಅತಿಸಾಮಾನ್ಯ ಹಾನಿಕಾರಕವಲ್ಲದ ಸ್ತನದ ಸಮಸ್ಯೆಯಾದ ಫೈಬ್ರೋಸಿಸ್ಟಿಕ್ ಸಮಸ್ಯೆ ಇರುವ ಹಾಗೇ ಅನಿಸುತ್ತದೆ. ಇದು ಸಾಮಾನ್ಯವಾಗಿ ಈಸ್ಟ್ರೋಜನ್ ಹಾರ್ಮೋನುಗಳ ಹೆಚ್ಚಳದಿಂದಾಗುತ್ತದೆ. ಇದು ಮುಟ್ಟಿನ ದಿನಗಳು ಹತ್ತಿರ ಬಂದಾಗ ಹೆಚ್ಚಾಗಬಹುದು. ಇದನ್ನ ಸೂಕ್ತವಾದ ಬ್ರಾಗಳನ್ನು ಧರಿಸುವುದರಿಂದ, ಅತಿಯಾಗಿ ಉಪ್ಪು, ಅತಿಯಾದ ಕೊಬ್ಬಿನ ಸೇವನೆ ಇತ್ಯಾದಿಗಳನ್ನ ತ್ಯಜಿಸಿ, ನಿಯಮಿತ ವ್ಯಾಯಾಮ ಮಾಡುವುದರಿಂದ ಮತ್ತು ವೈದ್ಯರ ಸಲಹೆಯಮೇರೆಗೆ ಪಿರಿಡಾಕ್ಷಿನ್ (ಬಿ6) ಮತ್ತು ವಿಟಮಿನ್ ಇ ಮಾತ್ರೆಗಳನ್ನು ಕೆಲವುಕಾಲ ಸೇವಿಸಿದಾಗ ನಿಯಂತ್ರಿಸಬಹುದು. ನೀವು ಕ್ಯಾನ್ಸರ್‌ಭಯವನ್ನ ಬಿಟ್ಟು ಮುಂಜಾಗ್ರತೆಗಾಗಿ ವೈದ್ಯರಿಂದ ತಪಾಸಣೆಗೊಳಗಾಗಿ ಸೂಕ್ತಚಿಕಿತ್ಸೆ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT