ಅಭ್ಯಂಜನ, ಹೋಳಿಗೆ ಊಟ, ಪಟಾಕಿಗಳ ಚಿತ್ತಾರ... ದೀಪಾವಳಿ ಎಂದೊಡನೆ ಮನಸ್ಸಿನಲ್ಲಿ ಸುಳಿಯುವ ಚಿತ್ರಗಳಿವು. ಆದರೆ, ಇಂಥ ಆಚರಣೆಗಳಿಂದ ಹೊರತಾಗಿರುವ, ಬಂಜಾರರು ಆಚರಿಸುವ ‘ದವಾಳಿ’ ಹಬ್ಬವು ಪ್ರಕೃತಿಯ ಆರಾಧನೆ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಸಕಲರಿಗೂ ಲೇಸು ಬಯಸುವ ಕಾರಣದಿಂದಾಗಿ ವಿಭಿನ್ನವಾಗಿ ಕಾಣುತ್ತದೆ.

ರಂಗು ರಂಗಿನ ಉಡುಪು ಮತ್ತು ವಿಶಿಷ್ಟ ಭಾಷೆಯ ಕಾರಣಕ್ಕಾಗಿ ಥಟ್ಟನೆ ಗಮನ ಸೆಳೆಯುವ ಬಂಜಾರರು (ಲಂಬಾಣಿ) ಮೂಲತಃ ಬುಡಕಟ್ಟು ಸಮುದಾಯದವರು. ಸಿಂಧು ಕಣಿವೆಯ ನಾಗರಿಕತೆಯೊಂದಿಗೆ ನಂಟು ಹೊಂದಿರುವಂಥ ಈ ಸಮುದಾಯ ವಿಶ್ವದ 114 ದೇಶಗಳಲ್ಲಿ ಲಂಬಾಣಿ, ಲಮಾಣಿ, ಲಬಾನ್, ಸುಗಾಲಿ ಹೀಗೆ ನಾನಾ ಹೆಸರುಗಳಲ್ಲಿ ಹರಿದು ಹಂಚಿಹೋಗಿದೆ. ಆಧುನಿಕ ಕಾಲಘಟ್ಟದಲ್ಲೂ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಜೋಪಾನವಾಗಿರಿಸಿಕೊಂಡಿರುವ ಈ ಸಮುದಾಯದವರ ವಿಭಿನ್ನ ಆಚರಣೆಗಳು ಇಂದಿಗೂ ಗಮನ ಸೆಳೆಯುತ್ತವೆ.

ಅಂಥ ಆಚರಣೆಗಳಲ್ಲಿ ವಿಶಿಷ್ಟವಾದದ್ದು ಬಂಜಾರರ ‘ದವಾಳಿ’ ಅರ್ಥಾತ್ ದೀಪಾವಳಿ.

ಪ್ರಕೃತಿ ಜತೆಗಿನ ಪ್ರೀತಿ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಜಾನುವಾರುಗಳೆಡೆಗಿನ ಪ್ರೇಮ ಹಾಗೂ ಸಕಲರಿಗೂ ಲೇಸು ಬಯಸುವ ಗುಣ ಇವರು ಆಚರಿಸುವ ದವಾಳಿಯ ವಿಶೇಷ. ಕಾಳಿ ಆಮಾಸ್, ನಸಾಬ್, ಧಬುಕಾರ್, ಮೇರಾ, ಫೂಲ್ ತೋಡನ್, ಗೊದಣೋ, ಸಳೋಯಿ ಸೇವನೆ ಲಂಬಾಣಿಗರ ದವಾಳಿಯ ವಿಶಿಷ್ಟ ಆಚರಣೆಗಳು. ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಇತರ ಭಾಗಗಳಲ್ಲಿ ದವಾಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಕಾಳಿ ಅಮಾಸ್

ಕಾಳಿ ಅಮಾಸ್ (ದೀಪಾವಳಿ ಅಮಾವಾಸ್ಯೆ) ದಿನದಂದು ಮನೆಯನ್ನು ಅಲಂಕರಿಸಿ ದನಕರುಗಳ ಮೈತೊಳೆಯುತ್ತಾರೆ, ಕೊಟ್ಟಿಗೆಯ ಬಾಗಿಲಿಗೆ ಬೇವಿನ ಸೊಪ್ಪನ್ನು ಕಟ್ಟುವುದು ವಾಡಿಕೆ. ಕೆಲ ತಾಂಡಾಗಳಲ್ಲಿ ಜಾನುವಾರುಗಳ ಮೈಮೇಲಿನ ಉಣ್ಣೆ ಮತ್ತಿತರ ಕೀಟಗಳ ನಿರ್ಮೂಲನೆಗಾಗಿ ಗುಬ್ಬಿಯ ಗೂಡುಗಳಿಗೆ ಬೆಂಕಿ ಹಾಕಿ ಅದನ್ನು ದನಕರುಗಳ ಮೈಮೇಲೆ ಸವರುವುದೂ ಇದೆ. ಗಂಡು ಮಕ್ಕಳು ‘ಮೊರ’ವನ್ನು (ಛಾದಲ) ಹಿಡಿದುಕೊಂಡು ಅದನ್ನು ಕೋಲಿನಿಂದ ಬಾರಿಸುತ್ತಾ ‘ಆಳಸ ನಿಕಳ್ ಪಾಳಸ್, ಊಟ್ ಲಂಡಿ ಭಾರ್ ಬೇಸ್’, ‘ಝಡ ಬಗಜಡ್ ಗಂಗೋಡ್ ಝಡ್’ ಎಂದು ಕೂಗುತ್ತಾ ತಾಂಡಾದ ಸುತ್ತಲೂ ಸುತ್ತುತ್ತಾರೆ. ‘ಬಗಜಡ್ ಗಂಗೋಡಾ’ ಅರ್ಥಾತ್ ಉಣ್ಣೆಗಳು ಉದುರಿ ಹೋಗಿ, ದನಕರುಗಳು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಈ ಆಚರಣೆ ಕೆಲ ತಾಂಡಾಗಳಲ್ಲಿ ಮಾತ್ರ ಇದ್ದು, ಹಲವೆಡೆ ಬಹುತೇಕ ನಿಂತಿದೆ.

ಹಿರಿಯರ ಆರಾಧನೆ ‘ಧಬುಕಾರ್’

ಕುಟುಂಬದ ಹಿರಿಯರನ್ನು ಸ್ಮರಿಸುವ ಆಚರಣೆಗೆ ‘ಧಬುಕಾರ್’ ಅನ್ನಲಾಗುತ್ತದೆ. ಹಿರಿಯರಿಂದ ಪ್ರಾರಂಭವಾಗಿ ಇತ್ತೀಚೆಗೆ ಮೃತರಾದವರವರೆಗೆ ಎಲ್ಲರನ್ನೂ, ಕೆಲವೆಡೆ ತಮ್ಮ ಸಾಕುಪ್ರಾಣಿಗಳ ಹೆಸರುಗಳನ್ನೂ ಸ್ಮರಿಸುತ್ತಾ ಸಿಹಿ ಅಡುಗೆ ಎಡೆ ಹಾಕುತ್ತಾರೆ. ಮನೆಯ ಒಲೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಅಲಂಕರಿಸುತ್ತಾರೆ. ಅಕ್ಕಿ ಹಿಟ್ಟು ಬೆಲ್ಲ ಹಾಕಿದ ನೀರನ್ನು ಕಲಸಿ, ಬೇಯಿಸಿದ ಮುದ್ದೆ ಹಿಟ್ಟಿನಂಥ ಹದವಾದ ಸಿಹಿ ಖಾದ್ಯದ ಜತೆಗೆ ತುಪ್ಪ ಸೇರಿಸಿ ಈ ಒಲೆಯ ಕೆಂಡದಲ್ಲಿಯೇ ಹಿರಿಯರಿಗಾಗಿ ಎಡೆ ಹಾಕುತ್ತಾರೆ.

ಎಡೆ ಹಾಕುವಾಗ ಲಯಬದ್ಧವಾಗಿ...

ಬಾಂಡ್ಯಾ ಬೂಚ್ಯಾ/ಖೆವಡ್ಯಾ ಮೆವಡ್ಯಾ/ಘೋಡೆರಿ ಘೂಸಾಳೆ/ಉಂಟೇರಿ ಕೂಂಟಾಳೆ/ಛದ್ಲಾಸ್ ಕಾನೇರಿ/ಡುಂಗರೇ ಖೋಳಾತಿ/ತಡ್ಕಿ ಭಡ್ಕಿ/ಜೆನ್ನಿರೊ ಝರ್ಕೊ/ಲೂಣಿರೊ ಲಚ್ಕೊ/ಕೆಳಕೆಲ್ಡಾರಿ ಹಾರೆ/ಪಿಲ್ಪಿಲಾರಿ ಹಾರೆ.../ದವಾಳಿ, ಯಾಡಿ ನ, ಬಾಪು ನ, ಸೇನ ಘಣೋ ಘಣೋ ವೇಸ್... ಎಂದು ಹಾಡುತ್ತಾ ಹಿರಿಯರ ಹೆಸರನ್ನು ಸ್ಮರಿಸುತ್ತಾರೆ. ಇದು ತಾಂಡಾದ ಪ್ರತಿ ಮನೆಯಲ್ಲೂ ನಡೆಯುವ ಆಚರಣೆ. ಗುಂಪುಗುಂಪಾಗಿ ಸಂಬಂಧಿಗಳು ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ಯುವತಿಯರ ‘ಮೇರಾ’

ಲಂಬಾಣಿಗರ ದವಾಳಿಯ ಕೇಂದ್ರ ಬಿಂದು ತಾಂಡಾದ ಯುವತಿಯರ ‘ಮೇರಾ’ (ಶುಭ ಕೋರುವುದು) ಆಚರಣೆ. ಮದುವೆಯಾಗದ ಯುವತಿಯರಷ್ಟೇ ಇದನ್ನು ಆಚರಿಸುತ್ತಾರೆ. ‘ಮೇರಾ’ಕ್ಕಾಗಿ ಹಬ್ಬಕ್ಕೂ ತಿಂಗಳ ಮುನ್ನವೇ ತಾಂಡಾದ ಸೇವಾಲಾಲ್ ಮಟ್ಟು (ದೇಗುಲ) ಎದುರು ಯುವತಿಯರ ಹಾಡು, ಕುಣಿತದ ತಯಾರಿ ನಡೆದಿರುತ್ತದೆ. ಇದಕ್ಕೆ ತಾಂಡಾದ ಹಿರಿಯ ಮಹಿಳೆಯರ ಮಾರ್ಗದರ್ಶನವಿರುತ್ತದೆ. ಮುಖ್ಯವಾಗಿ ಇಂಥ ಹಾಡು, ನೃತ್ಯಗಳ ಸಂದರ್ಭಗಳಲ್ಲಿ ಯುವತಿಯರಲ್ಲಿ ತಮ್ಮ ಮನದನ್ನೆಯನ್ನು ಯುವಕರು ಆರಿಸಿಕೊಳ್ಳುವುದು ವಿಶೇಷ. ಇಂಥ ಯುವತಿ ಇಷ್ಟವಾಗಿದ್ದಾಳೆ ಎಂದು ಯುವಕ ಮನೆಯ ಹಿರಿಯರಿಗೆ ಹೇಳಿದರೆ, ಪರಸ್ಪರರ ಮನೆಗಳಲ್ಲಿ ಮಾತುಕತೆ ನಡೆಯುತ್ತದೆ. ಹೀಗೆ ವಿವಾಹಕ್ಕೆ ‘ಮೇರಾ’ ಮುನ್ನುಡಿ ಆಗುತ್ತದೆ.

ಕಾಳಿ ಅಮಾಸ್‌ನ ಸಂಜೆ ಲಂಬಾಣಿಗರು ತಮ್ಮಲ್ಲಿನ ಆತ್ಮರಕ್ಷಕ ಶಸ್ತ್ರಾಸ್ತ್ರ, ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಈಗ ಇದು ಲಕ್ಷ್ಮೀ ಪೂಜೆಯಾಗಿ ಬದಲಾಗಿದೆ. ಪೂಜೆ ಬಳಿಕ ಯುವತಿಯರು ಔಡಲ ಎಣ್ಣೆ ಬಳಸಿದ ದೀಪಗಳನ್ನು ಹಚ್ಚಿಕೊಂಡು ಹಾಡುಗಳ ಮೂಲಕ ತಾಂಡಾದ ನಾಯೇಕ್ (ನಾಯಕ) ಮನೆಗೆ ಹೋಗಿ ಮನೆ ಮಂದಿಯನ್ನೆಲ್ಲಾ ಹೆಸರಿಸಿ ಮೇರಾ ಕೋರುತ್ತಾರೆ. ಉದಾ: ನಾಯಕ ತೊನ ಮೇರಾ, ಕಾಕಾ ತೊನ ಮೇರಾ, ದಾದಿ ತೋನ ಮೇರಾ, ಛೋಟು ತೊನ ಮೇರಾ. ಇದರರ್ಥ: ‘ನಾಯಕ ನಿಮಗೆ ಒಳಿತಾಗಲಿ'. ನಂತರ ಅವನ ಹೆಂಡತಿ ನಾಯಕಣ್ ತೋನ ಮೇರಾ ಎಂದೂ ಹೇಳುತ್ತಾರೆ. ಹೀಗೆ ಕುಟುಂಬದ ಸದಸ್ಯರೆಲ್ಲರ ಹೆಸರು ಹೇಳಿ ‘ಮೇರಾ’ (ಶುಭ) ಕೋರುತ್ತಾರೆ. ರಾತ್ರಿಯಿಡೀ ತಾಂಡಾದ ಪ್ರತಿ ಮನೆಗೂ ಹೋಗಿ ಈ ರೀತಿ ಶುಭ ಕೋರುತ್ತಾರೆ. ಯುವತಿಯರ ಖುಷಿಗಾಗಿ ಕೆಲವರು ಒಂದಷ್ಟು ಹಣ ಇಲ್ಲವೆ ಕಾಣಿಕೆ ನೀಡುತ್ತಾರೆ.

ಫೂಲ್ ತೋಡನ್

ಕಾಳಿ ಅಮಾಸ್‌ನ ಮರುದಿನ ಬೆಳಿಗ್ಗೆ ಯುವತಿಯರು ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಪು ತೊಟ್ಟು ಬುಟ್ಟಿ ಹಿಡಿದುಕೊಂಡು ಕಾಡು ಇಲ್ಲವೇ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಸಿಗುವ ಕೆಲವು ಹೂಗಳನ್ನು ತರಲು ಹೋಗುತ್ತಾರೆ. ಬರುವಾಗ ರಾಗಿ, ಜೋಳದ ತೆನೆ ಅಥವಾ ಬೆಳೆದ ಬೆಳೆಗಳನ್ನು ತರುವರು. ದಾರಿಯುದ್ದಕ್ಕೂ ಹಾಡು–ಕುಣಿತದ ಸಾಥ್ ಇರುತ್ತದೆ. ಕಾಡಿನಲ್ಲಿರುವ ವಿಶೇಷ ಹೂಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲೂ ಹಳದಿ ಬಣ್ಣದ ಹೊನ್ನಂಬರಿ (ಆವರಿಕೆ) ಹೂಗಳನ್ನೂ ತರುತ್ತಾರೆ. ‘ಮೇರಾ’ದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಖರೀದಿಸಿದ ತಿಂಡಿ–ತಿನಿಸನ್ನು ಕಾಡಿನಲ್ಲಿಯೇ ಒಂದೆಡೆ ಕುಳಿತು ಯುವತಿಯರು ಹಂಚಿಕೊಂಡು ತಿಂದು ತಾಂಡಾಕ್ಕೆ ಮರಳುವರು. ಬಳಿಕ ತಾಂಡಾದ ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿ ಐದೈದು ಗೊದಣೋ (ಸಗಣಿಯ ಉಂಡೆ) ಮಾಡುತ್ತಾರೆ. ಇವುಗಳನ್ನು ಹೂಗಳಿಂದ ಅಲಂಕರಿಸಿ ಒಳಿತಾಗಲಿ ಎಂದು ಕೋರಿ ಐದು ಕಡೆ ಅಂದರೆ ದನದ ಕೊಟ್ಟಿಗೆ, ಅಡುಗೆ ಮನೆ, ದೇವರ ಹತ್ತಿರ, ಮುಖ್ಯ ಬಾಗಿಲು, ಮನೆ ಮಾಳಿಗೆ ಮೇಲೆ ಇಡುತ್ತಾರೆ.

ತೀಜ್ ಹಬ್ಬವನ್ನು (ಬುಟ್ಟಿಗಳಲ್ಲಿ ಗೋಧಿಹುಲ್ಲು ಬೆಳೆಸುವುದು) ತಾಂಡಾದಲ್ಲಿ ಸಂತೋಷದ ವಾತಾವರಣವಿದ್ದಾಗ ಆಚರಿಸಲಾಗುತ್ತದೆ. ಚೈತ್ರ, ವೈಶಾಖ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ತೀಜ್ ಆಚರಿಸಲಾಗುತ್ತದೆ. ಕೆಲವೆಡೆ ದೀಪಾವಳಿಯಲ್ಲೂ ಇದನ್ನು ಯುವತಿಯರು ಆಚರಿಸುತ್ತಾರೆ.

ಪ್ರಕೃತಿಯ ಆರಾಧನೆ: ಬಂಜಾರರು ಮೂಲತಃ ಪ್ರಕೃತಿಯ ಆರಾಧಕರು. ಗಾಳಿ, ನೀರು, ಬೆಂಕಿ, ಭೂಮಿ, ಆಕಾಶ, ಚಂದ್ರ, ಸೂರ್ಯನನ್ನು ಪೂಜ್ಯನೀಯ ಎಂದು ಪರಿಗಣಿಸುತ್ತಾರೆ.ಇವು ಸಮಚಿತ್ತದಂತೆ ಇರುವಂತೆ ಸಾಮೂಹಿಕವಾಗಿ ಪ್ರಾರ್ಥಿಸುತ್ತಾರೆ. ಅದರ ಭಾಗವಾಗಿಯೇ ಏಳು ಚಿಕ್ಕಚಿಕ್ಕ ಉದ್ದನೆಯ ಕಲ್ಲುಗಳಿಗೆ ಕೆಂಪು ಮಣ್ಣಿನ ಬಣ್ಣ ಬಳಿದು ಪ್ರಾತಿನಿಧಿಕವಾಗಿ ಅವುಗಳನ್ನು ಸಪ್ತ ಮಾತೃಕೆಯರ ಕಲ್ಪನೆಯಂತೆ ಪೂಜಿಸುತ್ತಾರೆ. ‘ಕಿಡಿ ಮುಂಗಿನ ಸಾಯಿವೇಸ್’ ಅಂದರೆ ‘ಸಕಲ ಜೀವರಾಶಿಗಳಿಗೆ ಲೇಸಾಗಲಿ’ ಎಂದು ಪ್ರಾರ್ಥಿಸುತ್ತಾರೆ.

ಬಂಜಾರರ ಯಾವುದೇ ಆಚರಣೆ, ಉತ್ಸವಗಳು ನೃತ್ಯ ಮತ್ತು ಹಾಡುಗಳಿಲ್ಲದೇ ಪೂರ್ಣಗೊಳ್ಳುವುದಿಲ್ಲ. ಮನುಷ್ಯನ ಹುಟ್ಟಿನಿಂದ ಸಾವಿನ ತನಕ ಆಚರಣೆಯ ಹಾಡುಗಳು ಈ ಸಮುದಾಯದವರಲ್ಲಿ ಮೌಖಿಕವಾಗಿ ಹರಿದುಬಂದಿವೆ. ದವಾಳಿಯಂದು ಸಮುದಾಯವು ಸಾಮೂಹಿಕ ನೃತ್ಯ ಮತ್ತು ಹಾಡುಗಳಲ್ಲಿ ಪಾಲ್ಗೊಳ್ಳುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಾಂಡಾಗಳಲ್ಲಿ ಅಬ್ಬರದ ಡಿ.ಜೆ. ಹಾಡುಗಳೇ ಮೇಲುಗೈ ಸಾಧಿಸಿ, ದೇಸಿಯ ಸೊಗಡಿನ ಗಾಯನ ಕ್ಷೀಣಿಸುತ್ತಿದೆ.

ಕಾಳಿ ಅಮಾಸ್ ನಸಾಬ್: ನಾಯಕ್, ಡಾವೊ, ಕಾರಬಾರಿ, ನಸಾಬಿ, ಹಸಾಬಿಗಳ ಪ್ರಾತಿನಿಧಿಕ ನಸಾಬ್ (ಪಂಚಾಯತ್) ವ್ಯವಸ್ಥೆ ಇವರಲ್ಲಿ ಆದಿಕಾಲದಿಂದಲೂ ಇದೆ. ಹಬ್ಬದಂದು ತಾಂಡಾಗಳಲ್ಲಿ ಒಗ್ಗೂಡುವುದರಿಂದ ಈ ಹಿಂದೆ ಜಗಳ ಮಾಡಿಕೊಂಡವರು ನಾಯಕನ ಬಳಿ ನ್ಯಾಯ ಕೇಳಲು ಬರುತ್ತಾರೆ. ಪಂಚಾಯತ್‌ನವರು ನ್ಯಾಯ ತೀರ್ಮಾನಿಸಿ ಎರಡೂ ಕಡೆಯವರನ್ನು ರಾಜಿ ಮಾಡಿಸುತ್ತಾರೆ. ಪರಸ್ಪರ ಹೊಂದಿಕೊಂಡು ಬಾಳುವಂತೆ ಸಲಹೆ ನೀಡುತ್ತಾರೆ.

ಸಳೋಯಿ, ಕಾನಾಬಾಜ್: ಕಾಳಿ ಅಮಾಸ್ ದಿನ ಬಂಜಾರರು ಸಾಮೂಹಿಕವಾಗಿ ಬೇಟೆಯಾಡುವುದು ವಾಡಿಕೆ. ಆದರೆ, ಈಗ ಬೇಟೆ ನಿಷಿದ್ಧವಿರುವುದರಿಂದ ಕುರಿ, ಮೇಕೆ ಕೊಯ್ದು ಅದನ್ನೇ ತಾಂಡಾದ ಪ್ರತಿ ಮನೆಗೂ ಸಮಪಾಲು ಹಾಕುತ್ತಾರೆ. ಕುರಿಯ ಪ್ರತಿ ಅಂಗದ ತುಂಡೂ ಪ್ರತಿ ಮನೆಗೂ ತಲುಪುವಂತೆ ಪಾಲು ಹಾಕುತ್ತಾರೆ. ಈ ಮೂಲಕ ಎಲ್ಲರೂ ಸಮಾನರು ಎನ್ನುವ ಸಮಾನತೆಯ ಗುಣವನ್ನು ಪ್ರತಿಪಾದಿಸುತ್ತಾರೆ.

ಕುರಿಯ ಕರಳು ಇತ್ಯಾದಿ ಹಾಗೂ ರಕ್ತದಿಂದ ಮಾಡಿದ ಸಳೋಯಿ ಎನ್ನುವ ವಿಶಿಷ್ಟ ಮಾಂಸದಡುಗೆ ಮತ್ತು ಕಾನಾಬಾಜ್ (ಸುಟ್ಟ ಕುರಿಯ ತಲೆಯ ಕಿವಿಯ ಸಮೇತ ತೆಗೆದ ಚರ್ಮ) ಖಾದ್ಯವನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಾರೆ.

ದುಡಿಮೆಗೆಂದು ದೂರದ ಊರುಗಳಿಗೆ ವಲಸೆ ಹೋಗಿರುವವರು ತಪ್ಪದೇ ದವಾಳಿಯಂದು ತಾಂಡಾಕ್ಕೆ ಬರುತ್ತಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗಿಯಾಗಿ, ಹಿರಿಯರನ್ನು ನೆನೆದು, ಒಟ್ಟಾಗಿ ಊಟ ಮಾಡಿ ಕಷ್ಟ–ಸುಖ ಹಂಚಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.