ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಗಣಿ ಅಕ್ರಮಕ್ಕೆ ಲಾಡ್‌ ಕಾರಣವೇ ಹೊರತು ರೆಡ್ಡಿಯಲ್ಲ: ಬಂಗಾರು ಹನುಮಂತ

Published : 10 ನವೆಂಬರ್ 2024, 0:20 IST
Last Updated : 10 ನವೆಂಬರ್ 2024, 0:20 IST
ಫಾಲೋ ಮಾಡಿ
Comments
ಪ್ರ

ಜನರ ಸ್ಪಂದನೆ ಹೇಗಿದೆ? 

ಜನರಿಂದ ಉತ್ತಮ ಸ್ಪಂದನೆಯಿದೆ. ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‌ ಸೋಲು ಖಚಿತ, ಬಿಜೆಪಿ ಗೆಲುವು ನಿಶ್ಚಿತ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. 

ಪ್ರ

ತಾವು ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ ಇಟ್ಟುಕೊಂಡವರು. ಎರಡೂ ಕ್ಷೇತ್ರಗಳನ್ನು ಹೇಗೆ ನಿಭಾಯಿಸುತ್ತೀರಿ? 

ನಾನು ಪಕ್ಕಾ ರಾಜಕಾರಣಿ. 20 ವರ್ಷದಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಎಬಿವಿಪಿ, ಬಿಜೆಪಿಯ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದೇನೆ. 2008ರಲ್ಲೇ ನಾನು ಕೂಡ್ಲಿಗಿಯಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದೆ. 2013 ಮತ್ತು 2018ರಲ್ಲಿ ಸಾಧ್ಯವಾಗಲಿಲ್ಲ. ಈ ಮಧ್ಯೆ ನನ್ನ ಪರಿಚಿತರೊಬ್ಬರು ಸಿನಿಮಾ ಮಾಡಲು ಬಲವಂತ ಮಾಡಿದರು. ಆಗ ನಾನೇ ನಟಿಸಿದೆ. ಆದರೆ, ನನಗೆ ಆ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ರಾಜಕಾರಣದಲ್ಲೇ ಮುಂದುವರಿಯುವೆ. 

ಪ್ರ

ಬಿಜೆಪಿ ಗೆದ್ದರೆ ಅಕ್ರಮ ಗಣಿಗಾರಿಕೆಯ ಯುಗ ಮತ್ತೆ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ. 

ವಿಎಸ್‌ಎಲ್‌ ಗಣಿ ಯಾರದ್ದು? ಸಂತೋಷ್‌ ಲಾಡ್ ಅವರದ್ದಲ್ಲವೇ. ಅವರೇ ಅಕ್ರಮ ಗಣಿಗಾರಿಕೆ ಮಾಡಿದವರು. ಅದಕ್ಕೇ ಅವರ ಗಣಿ ‘ಸಿ’ ವರ್ಗ ಸೇರಿತು. ಜನಾರ್ದನ ರೆಡ್ಡಿ ಮತ್ತೆ ಅಕ್ರಮ ಮಾಡುತ್ತಾರೆ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ರೆಡ್ಡಿ ಅವರದ್ದು ಒಂದೇ ಒಂದು ಗಣಿ ಇಲ್ಲ. ಆಂಧ್ರಪ್ರದೇಶದಲ್ಲಿ ಇತ್ತಷ್ಟೆ. ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಇಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಅಕ್ರಮ ಶುರುವಾಗಿದ್ದೇ ಸಂತೋಷ್‌ ಲಾಡ್‌ ಅವರಿಂದ. 

ಪ್ರ

ಆರಂಭದಲ್ಲಿ ಟಿಕೆಟ್‌ ಗೊಂದಲಗಳಿದ್ದವು. ದಿವಾಕರ್‌ ಮುನಿಸಿಕೊಂಡಿದ್ದರು. ಈಗ ಪರಿಸ್ಥಿತಿ ಹೇಗಿದೆ? 

ಟಿಕೆಟ್‌ ಕೈ ತಪ್ಪಿದರೆ ಸಾಮಾನ್ಯವಾಗಿ ಒಂದೆರಡು ದಿನ ನೋವಿರುತ್ತದೆ. ಆದರೆ, ಅವರು ಈಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ದಿವಾಕರ್‌ ಅವರಿಗೆ ಪಕ್ಷದಲ್ಲಿ ಕಾರ್ಯದರ್ಶಿಯಾಗಿ ಉನ್ನತ ಸ್ಥಾನ ನೀಡಲಾಗಿದೆ. ಈಗ ಪರಿಸ್ಥಿತಿ ಸಹಜವಾಗಿದೆ. 

ಪ್ರ

ಇಲ್ಲಿನ ಪ್ರಮುಖ ಸಮಸ್ಯೆಗಳು ಏನು? 

ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಶಾಲೆಗಳಿಲ್ಲ. ಶಾಲೆಗಳು ಇರುವಲ್ಲಿ ಕೊಠಡಿಗಳಿಲ್ಲ. ಹೈಟೆಕ್‌ ಆಸ್ಪತ್ರೆ ಇಲ್ಲ. ನಿರುದ್ಯೋಗ ಹೆಚ್ಚಾಗಿದೆ. ಹಾಗಾಗಿಯೇ ಪ್ರತಿ ಗ್ರಾಮಗಳಲ್ಲೂ ಸಂತೋಷ್‌ ಲಾಡ್‌ಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ದುಡ್ಡು ಕೊಡಲಾಗಿದೆ. ಇವರು ಕೆಲಸ ಮಾಡಿದ್ದರೆ, ಗ್ಯಾರಂಟಿ ಕೆಲಸ ಮಾಡಿದ್ದರೆ ದುಡ್ಡು ಕೊಟ್ಟು ಜನರನ್ನು ಸೇರಿಸಬೇಕಿತ್ತಾ? ಹಣ ಹಂಚದೇ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ಯಾವುದಾದರೂ ಗುಡಿಯಲ್ಲಿ ಪ್ರಮಾಣ ಮಾಡಲಿ. 

ಪ್ರ

ನಿಮ್ಮ ಅಫಿಡವಿಟ್‌ನಲ್ಲಿ ದೋಷ ಇದೆ ಎನ್ನಲಾಗಿದೆಯಲ್ಲ?

ಗೊಂದಲ ಏನಿಲ್ಲ. ಗೊಂದಲ ಮಾಡಲು ಪ್ರಯತ್ನಿಸಿದರು. ಆಗಲಿಲ್ಲ. ಬೆಳ್ಳಿ ಸಿಂಹಾಸನವನ್ನು ಮಠಗಳಿಗೆ ನೀಡಿದ್ದೇನೆ ಎಂದು ಅಪಪ್ರಚಾರ ಮಾಡಿದರು. ಸಿಂಹಾಸನವನ್ನು ಭಕ್ತರು ಕೊಟ್ಟರು. ನಾನು ಅಲ್ಲಿದ್ದ ಮಾತ್ರಕ್ಕೆ ಬಂಗಾರು ಹನುಮಂತ ನೇತೃತ್ವ ವಹಿಸಿದರು ಎಂದರು. ನಾನು ನನ್ನ ಖಾತೆಯಿಂದ ದುಡ್ಡು ಖರ್ಚು ಮಾಡಿ ಕೊಟ್ಟಿದ್ದರೆ ಅದನ್ನು ಹೇಳಲಿ.  ಇನ್ನೊಂದು ವಿಷಯವೆಂದರೆ, ತುಕಾರಾಂಗೆ ಹಣ ಮಾಡಿಕೊಳ್ಳಲು ಗೊತ್ತೇ ವಿನಾ ಕೊಡಲು ಗೊತ್ತಿಲ್ಲ. ಹಾಗಾಗಿ ಇಂತ ವಿಷಯಗಳಲ್ಲಿ ತಪ್ಪು ಹುಡುಕುತ್ತಾರೆ. 

ಪ್ರ

ಗೆದ್ದ ಕೂಡಲೇ ಮಾಡಲೇಬೇಕು ಎಂದುಕೊಂಡಿರುವ ಕೆಲಸಗಳೇನು?  

ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದು ನನ್ನ ಮೊದಲ ಆದ್ಯತೆ. ಕ್ಷೇತ್ರದಾದ್ಯಂತ ರಸ್ತೆಗಳು ಹದಗೆಟ್ಟಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಒಂದೋ ಬಳ್ಳಾರಿಗೆ ಹೋಗಬೇಕು, ಇಲ್ಲವೇ ಹೊಸಪೇಟೆಗೆ ಹೋಗಬೇಕು. ಆದ್ದರಿಂದ ಕ್ಷೇತ್ರದಲ್ಲಿ ಒಂದು ಸುವ್ಯವಸ್ಥಿತ ಆಸ್ಪತ್ರೆ ಕಟ್ಟಿಸುವ ಗುರಿಯಿದೆ.

ಪ್ರ

ಸಂಡೂರು ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲವೇ?

ಇದು ಮೀಸಲು ಕ್ಷೇತ್ರ. ಇಲ್ಲಿ ಸಾಮಾಜಿಕ ನ್ಯಾಯ ಬದಿಗಿರಿಸಿ ತುಕಾರಾಂ ಮತ್ತು ಅವರ ಪತ್ನಿಗೆ ಟಿಕೆಟ್‌ ಕೊಡಲಾಗಿದೆ. ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಾರೆ. ಆದರೆ ಇಲ್ಲಿ ಅವ್ಯವಸ್ಥೆಯೇ ಹೆಚ್ಚಿದೆ. ಅನುದಾನಕ್ಕಾಗಿ ನಕಲಿ ಬಿಲ್ ಸೃಷ್ಟಿಸಿದರೇ ಎಂಬ ಅನುಮಾನವಿದೆ. ಅವ್ಯವಹಾರ ಹೊರಬರುತ್ತದೆ ಎಂಬ ಭಯದಿಂದ ಬೇರೆ ಯಾರೂ ಶಾಸಕರು ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT