ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಇವರು ಕಡಿಮೆ ಅವಧಿಯ ಸಂಸದರು

Published 24 ಏಪ್ರಿಲ್ 2024, 5:43 IST
Last Updated 24 ಏಪ್ರಿಲ್ 2024, 5:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲವು ಸಂಸದರು ಅಲ್ಪಾವಧಿಯ ಕಾಲವಷ್ಟೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇಂದಿರಾ ಗಾಂಧಿ, ಬಿ.ಎಲ್.ಶಂಕರ್, ಡಿ.ವಿ.ಸದಾನಂದಗೌಡ ಮತ್ತು ಜಯಪ್ರಕಾಶ್ ಹೆಗ್ಡೆ ಪ್ರಮುಖರು.

19 ಚುನಾವಣೆಗಳಲ್ಲಿ 11 ಜನ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಐದು ವರ್ಷಗಳ ಅವಧಿ ಪೂರೈಸದ ಸಂಸದರೆಂದರೆ ಈ ನಾಲ್ವರು. 

1996ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಬಿ.ಎಲ್‌.ಶಂಕರ್‌ ಅವರು 1,95,857 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ ಅವರು 1,91,798 ಮತಗಳನ್ನು ಪಡೆದಿದ್ದರು. 17 ಅಭ್ಯರ್ಥಿಗಳು ಕಣದಲ್ಲಿದ್ದರು. 

ಆದರೆ, ಕೇಂದ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಹನ್ನೊಂದನೇ ಲೋಕಸಭೆ ವಿಸರ್ಜನೆಯಾಗುತ್ತದೆ. 1998ರಲ್ಲಿ ಮತ್ತೊಮ್ಮೆ ಚುನಾವಣೆ ನಡೆದು ಹನ್ನೇರಡನೇ ಲೋಕಸಭೆ ಅಸ್ಥಿತ್ವಕ್ಕೆ ಬರುತ್ತದೆ. ಆಗ ಬಿಜೆಪಿಯ  ಡಿ.ಸಿ.ಶ್ರೀಕಂಠಪ್ಪ ಅವರು ಸಂಸದರಾಗಿ ಆಯ್ಕೆಯಾಗುತ್ತಾರೆ. ಮತ್ತೊಮ್ಮೆ ಬಿ.ಎಲ್.ಶಂಕರ್ ಸ್ಪರ್ಧೆ ಮಾಡಿದರೂ ಗೆಲುವು ಸಾಧಿಸುವುದಿಲ್ಲ.

‌2009ರಲ್ಲಿ ನಡೆದ ಹದಿನೈದನೇ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡ ಅವರು 4,01,441 ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು 3,74,423 ಮತ ಪಡೆದಿದ್ದರು. ಕಣದಲ್ಲಿ 9 ಅಭ್ಯರ್ಥಿಗಳಿದ್ದರು.

ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ಮುಖ್ಯಮಂತ್ರಿ ಸ್ಥಾನ ಖಾಲಿಯಾಗುತ್ತದೆ. 2011ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಡಿ.ವಿ.ಸದಾನಂದಗೌಡ ಅವರಿಗೆ ದೊರಕುತ್ತದೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ. ಮತ್ತೆ ಈ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುವುದಿಲ್ಲ. ಇದರಿಂದ ತೆರವಾಗುವ ಸ್ಥಾನಕ್ಕೆ 2012ರಲ್ಲಿ ಉಪಚುನಾವಣೆ ನಡೆಯುತ್ತದೆ. 

ಡಿ.ವಿ.ಸದಾನಂದಗೌಡರ ವಿರುದ್ಧ ಸೋತಿದ್ದ ಜಯಪ್ರಕಾಶ್ ಹೆಗ್ಡೆ ಅವರೇ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗುತ್ತಾರೆ. ಜಯಪ್ರಕಾಶ್‌ ಹೆಗ್ಡೆ ಅವರು 3,98,723 ಮತ ಪಡೆದು ಜಯಗಳಿಸಿದ್ದರು. ಬಿಜೆಪಿಯ ಸುನೀಲ್‌ಕುಮಾರ್‌ ಅವರು 3,52,999 ಮತ ಪಡೆದಿದ್ದರು. 14 ಮಂದಿ ಕಣದಲ್ಲಿದ್ದರು. 2014ರಲ್ಲಿ ಸಾರ್ವರ್ತಿಕ ಚುನಾವಣೆ ನಡೆಯುವುದರಿಂದ ಕಡಿಮೆ ಅವಧಿಗೆ ಸಂಸದರಾಗುತ್ತಾರೆ. ಈಗ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

1977ರ ಚುನಾವಣೆಯಲ್ಲಿ ಗೆಲ್ಲುವ ಡಿ.ಬಿ.ಚಂದ್ರೇಗೌಡ ಅವರು ಇಂದಿರಾ ಗಾಂಧಿ ಅವರಿಗೆ ಅವಕಾಶ ಮಾಡಿಕೊಡಲು ಕೆಲವೇ ತಿಂಗಳಲ್ಲಿ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ, ಅದರ ಹಿಂದಿನ ಅವಧಿಯಲ್ಲಿ ಐದು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 

ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ
ಜಯಪ್ರಕಾಶ್ ಹೆಗ್ಡೆ
ಜಯಪ್ರಕಾಶ್ ಹೆಗ್ಡೆ
ಇಂದಿರಾ ಗಾಂಧಿ
ಇಂದಿರಾ ಗಾಂಧಿ

ಕ್ಷೇತ್ರ ಪ್ರತಿನಿಧಿಸಿದ್ದ ಇಂದಿರಾ ಗಾಂಧಿ

1977ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯಬರೇಲಿಯಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಸೋಲು ಕಂಡಿದ್ದರು ಬೇರೆ ಕ್ಷೇತ್ರದಿಂದ ನಿಲ್ಲಿಸಿ ಗೆಲ್ಲಿಸುವ ಬಗ್ಗೆ ಕಾಂಗ್ರೆಸ್ ಒಲವು ತೋರಿತ್ತು. ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ್ ಅರಸು ಅವರು ಕರ್ನಾಟಕದಿಂದಲೇ ಸ್ಪರ್ಧೆ ಮಾಡಲು ಕರೆ ತಂದರು. ಚಿಕ್ಕಮಗಳೂರಿನಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಇಂದಿರಾ ಗಾಂಧಿ ಅವರು 1978ರಿಂದ 1980ರವರೆಗೆ ಎರಡು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT