ಹಾವೇರಿ: ವೈದ್ಯರ ಕೊರತೆ ಹಾಗೂ ಮೂಲ ಸೌಕರ್ಯಗಳ ಅಲಭ್ಯತೆಯಿಂದ ಜಿಲ್ಲೆಯ ಪಶು ಆಸ್ಪತ್ರೆಗಳು ನಾನಾ ಸಮಸ್ಯೆಯಿಂದ ಬಳಲುತ್ತಿವೆ. ಹುದ್ದೆಗಳ ಭರ್ತಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಡಳಿತದಿಂದ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದರೂ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿಯುತ್ತಿವೆ.

‘ಹಾವೇರಿ, ಕೃಷಿ ಪ್ರಧಾನ ಜಿಲ್ಲೆ. ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಗೆ ಪಶುಗಳ ಪಾತ್ರ ಪ್ರಮುಖವಾಗಿದೆ. ಆದರೆ, ಇಲ್ಲಿಯ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಇದರಿಂದಾಗಿ, ಪಶುಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ಯಲಗಚ್ಚದ ಕೃಷಿಕ ಹನುಮಂತಪ್ಪ ಹೇಳಿದರು.

‘ಲಭ್ಯವಿರುವ ವೈದ್ಯರು, ಎರಡು ಅಥವಾ ಅದಕ್ಕಿಂತ ಹೆಚ್ಚು ಆಸ್ಪತ್ರೆಗಳ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಒತ್ತಡದಿಂದಾಗಿ ಅವರಿಂದಲೂ ಸಮರ್ಪಕವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ತಿಳಿಸಿದರು.

ಜಿಲ್ಲೆಯ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ 594 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ ಸದ್ಯಕ್ಕೆ 171 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 423 ಹುದ್ದೆಗಳು ಖಾಲಿ ಇವೆ. ಇದರಲ್ಲಿ ತಾತ್ಕಾಲಿಕವಾಗಿ 81 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ.

ಪಶು ಆಸ್ಪತ್ರೆಗಳಲ್ಲಿ ಕೆಲಸ ಮಾಡಲು 108 ಪಶುವೈದ್ಯರ ಪೈಕಿ ಕೇವಲ 47 ವೈದ್ಯರಿದ್ದಾರೆ. 61 ಹುದ್ದೆಗಳು ಖಾಲಿ ಇವೆ.

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಸ್ಥಿತಿ ಚಿಂತಾಜನಕ: ರಾಣೆಬೆನ್ನೂರು ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಾನುವಾರುಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಂಚಾರ ಪಶುಚಿಕಿತ್ಸಾಲಯ (ಆಂಬುಲೆನ್ಸ್) ಇದೆ. ವೈದ್ಯರ ಕೊರತೆಯಿಂದಾಗಿ ಆಂಬುಲೆನ್ಸ್ ಸೇವೆ ಲಭ್ಯವಾಗುತ್ತಿಲ್ಲ.

ತಾಲ್ಲೂಕಿನ ಐರಣಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯಕ್ಕೆ ಹೊಸ ಕಟ್ಟಡ ಕಟ್ಟಿಸಿದ್ದಾರೆ. ಸಿಬ್ಬಂದಿ ಕೂಡ ಇದ್ದಾರೆ. ಕಟ್ಟಡ ರಸ್ತೆ ಬದಿಗೆ ಇದ್ದು, ಆವರಣ ಗೋಡೆ ಇಲ್ಲದ ಕಾರಣ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಈ ಸ್ಥಳ ಜೂಜಾಟದ ತಾಣವಾಗಿದೆ.

ತಾಲ್ಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ಕೆರೆ ದಡದ ಮೇಲೆ ಪಶು ಆಸ್ಪತ್ರೆ ಕಟ್ಟಡವಿದ್ದು, ತೇವಾಂಶ ಹೆಚ್ಚಾಗಿ ಕಟ್ಟಡ ಬೀಳುವ ಹಂತ ತಲುಪಿದೆ. ಮಳೆಗಾಲದಲ್ಲಿ ನೀರು ಸೋರುತ್ತದೆ. ಕೆರೆಯಲ್ಲಿನ ಕೀಟಗಳು, ಹಗಲು ಹೊತ್ತಿನಲ್ಲಿ ಆಸ್ಪತ್ರೆ ಒಳಗೆ ಸೇರಿಕೊಳ್ಳುತ್ತಿವೆ. ಕಟ್ಟಡದ ಚಾವಣಿಯ ಕಾಂಕ್ರಿಟ್ ಕಿತ್ತು ಹೋಗಿದೆ.

ತಾಲ್ಲೂಕಿನಲ್ಲಿ 11 ಪಶು ಚಿಕಿತ್ಸಾಲಯಗಳು, 10 ಪ್ರಾಥಮಿಕ ಪಶು ಚಿಕಿತ್ಸಾಲಯಗಳು, 3 ಪಶು ಆಸ್ಪತ್ರೆ ಮತ್ತು ಒಂದು ಮೊಬೈಲ್ ವೆಟರ್ನರಿ ಕ್ಲಿನಿಕ್ ಇದೆ. ಇಲ್ಲಿಯ ಬಹುಪಾಲು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಡಿ ದರ್ಜೆ ಸಿಬ್ಬಂದಿ ಕೊರತೆ ಕಾಡುತ್ತಿದೆ.

‘ತಾಲ್ಲೂಕಿನ ಕಾಕೋಳ ಮತ್ತ ಹಲಗೇರಿ ಗ್ರಾಮಗಳಿಗೆ ಹೊಸದಾಗಿ ಎರಡು ಪಶು ಚಿಕಿತ್ಸಾಲಯಗಳು ಮಂಜೂರಾಗಿವೆ. ಆದರೆ, ಕಟ್ಟಡ ಕಟ್ಟಲು ಸೂಕ್ತ ನಿವೇಶನ ಲಭ್ಯವಿಲ್ಲ. ರಾಣೆಬೆನ್ನೂರಿಗೆ ಪಶು ಪಾಲಿಕ್ಲಿನಿಕ್ ಮಂಜೂರಾಗಿದ್ದು, ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಸಹಾಯಕ ನಿರ್ದೇಶಕ ಡಾ. ನೀಲಕಂಠ ಅಂಗಡಿ ತಿಳಿಸಿದರು.

ಹಿರೇಕೆರೂರು ತಾಲ್ಲೂಕಿನಲ್ಲಿ ಸಿಗದ ಸಮರ್ಪಕ ಚಿಕಿತ್ಸೆ: ಹಿರೇಕೆರೂರು ತಾಲ್ಲೂಕಿನ ಹಲವು ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ಲಭ್ಯವಾಗುತ್ತಿಲ್ಲ.

ತಾಲ್ಲೂಕಿನ ಪಶು ಪಾಲನಾ ಇಲಾಖೆಯಲ್ಲಿ 48 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 24 ಹುದ್ದೆಗಳು ಭರ್ತಿಯಾಗಿವೆ. 34 ಹುದ್ದೆಗಳು ಖಾಲಿ ಉಳಿದಿವೆ. ತಾಲ್ಲೂಕಿನಲ್ಲಿ ಪಶು ವೈದ್ಯಾಧಿಕಾರಿಗಳ 6 ಹುದ್ದೆಗಳಲ್ಲಿ 2 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 4 ಹುದ್ದೆಗಳು ಖಾಲಿ ಇವೆ.

‘ವೈದ್ಯರ ಕೂರತೆ ಇದ್ದರೂ ಲಭ್ಯವಿರುವ ವೈದ್ಯರು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ಸಂಜೀವಿನಿ ಆಂಬುಲೆನ್ಸ್ ಬಳಕೆ ಮಾಡಲಾಗುತ್ತಿದೆ’ ಎಂದು ಮುಖ್ಯ ಪಶುವೈದ್ಯಾಧಿಕಾರಿ ಕಿರಣ್ ಎಲ್. ತಿಳಿಸಿದರು.

ಶಿಗ್ಗಾವಿ ತಾಲ್ಲೂಕಿನಲ್ಲಿ ರೈತರ ಪರದಾಟ: ಶಿಗ್ಗಾವಿ ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರಿಂದ, ರೈತರು ಪರದಾಡುತ್ತಿದ್ದಾರೆ.

ಮುಖ್ಯ ಪಶುವೈದ್ಯಾಧಿಕಾರಿಗಳು, ಪಶುವೈದ್ಯರು, ಜಾನುವಾರುಗಳ ಅಭಿವೃದ್ಧಿ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು, ಕಿರಿಯ ಪಶುವೈದ್ಯಕೀಯ ಸಹಾಯಕರು ಸೇರಿದಂತೆ 45 ಹುದ್ದೆಗಳು ಖಾಲಿಯಿವೆ.

ಕಾಲುಬೇನೆ, ಬಾಯಿ ಬೇನೆ ರೋಗಗಳ ನಿಯಂತ್ರಣಕ್ಕಾಗಿ ವರ್ಷದಲ್ಲಿ ಎರಡು ಬಾರಿ ಜಾನುವಾರುಗಳಿಗಾಗಿ ಶಿಬಿರ ಆಯೋಜಿಸಿ ಚಿಕಿತ್ಸೆ ನೀಡಬೇಕು. ನಿತ್ಯ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ವೈದ್ಯರ ಕೊರತೆ ಇರುವುದರಿಂದ, ಜಾನುವಾರುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ.

ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ಸೇವೆಯಲ್ಲಿ ವ್ಯತ್ಯಯ: ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 8 ಪಶುಚಿಕಿತ್ಸಾಲಯ, 10 ಪ್ರಾಥಮಿಕ ಪಶು ಚಿಕಿತ್ಸಾಲಯ, 1 ತಾಲ್ಲೂಕು ಪಶು ಆಸ್ಪತ್ರೆ ಇದೆ. ಒಟ್ಟು 19 ಪಶು ವೈದ್ಯರ ಅವಶ್ಯಕತೆಯಿದೆ. ಆದರೆ, ಸದ್ಯ 4 ಪಶು ವೈದ್ಯರು ಮಾತ್ರ ಸೇವೆಯಲ್ಲಿದ್ದಾರೆ. ವೈದ್ಯರ ಕೊರತೆಯಿಂದಾಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

‘ಪಟ್ಟಣದ ತಾಲ್ಲೂಕು ಪಶು ಆಸ್ಪತ್ರೆ ಚಿಕ್ಕಯಡಚಿ ರಸ್ತೆಯಲ್ಲಿದೆ. ಆಸ್ಪತ್ರೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ಜಾನುವಾರುಗಳನ್ನು ವಾಹನಗಳಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲು ಸಮಸ್ಯೆಯಾಗುತ್ತಿದೆ’ ಎಂದು ರೈತ ಲಕ್ಷ್ಮಣ ಸಾಳುಂಕೆ ದೂರಿದರು.

ಬ್ಯಾಡಗಿಯಲ್ಲೂ ವೈದ್ಯರ ಕೊರತೆ: ಬ್ಯಾಡಗಿ ತಾಲ್ಲೂಕಿನಲ್ಲಿ 16 ಪಶು ಚಿಕಿತ್ಸಾ ಕೇಂದ್ರಗಳಿದ್ದು, 12 ವೈದ್ಯರ ಪೈಕಿ 8 ಹುದ್ದೆಗಳು ಖಾಲಿಯಿವೆ. 26 ಪಶು ಪರೀಕ್ಷಕರ ಪೈಕಿ 14 ಹುದ್ದೆಗಳು ಖಾಲಿಯಿವೆ. ಹುದ್ದೆಗಳ ಭರ್ತಿಗಾಗಿ ಹತ್ತು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಪಶುಗಳ ಚಿಕಿತ್ಸೆಗೆ ಗಂಟೆಗಟ್ಟಲೆ ರೈತರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಬ್ಬರೇ ವೈದ್ಯರು ಎರಡಕ್ಕಿಂತ ಹೆಚ್ಚು ಆಸ್ಪತ್ರೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಲ ಹಳ್ಳಿಗಳ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೈತ ಕಿರಣ ಗಡಿಗೋಳ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಸಂಚಾರಿ ಚಿಕಿತ್ಸಾ ಘಟಕಕ್ಕೆ ಒಬ್ಬ ವೈದ್ಯರನ್ನು ನಿಯೋಜಿಸಿ ವಾರದಲ್ಲಿ ನಾಲ್ಕು ದಿನ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1962 ಆಂಬುಲೆನ್ಸ್ ಸೇವೆ ಲಭ್ಯವಿದ್ದು, ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವೈದ್ಯರ ಹಾಗೂ ಪರೀಕ್ಷಕರ ಕೊರತೆ ಇದ್ದರೂ ರೈತರಿಗೆ ಸಮರ್ಪಕ ಸೇವೆ ನೀಡಲಾಗುತ್ತಿದೆ’ ಎಂದು ಸಹಾಯಕ ನಿರ್ದೇಶಕ ಎನ್.ಎಸ್. ಚೌಡಾಳ ಮಾಹಿತಿ ನೀಡಿದರು.

ಸವಣೂರಿನಲ್ಲೂ ರೈತರ ಗೋಳು: ಸವಣೂರಿನಲ್ಲಿ ಪಶು ವೈದ್ಯರ ಕೊರತೆಯಿಂದಾಗಿ ಕೆಲ ಆಸ್ಪತ್ರೆಗಳ ಬಾಗಿಲು ಬಂದ್ ಆಗಿವೆ. ಗ್ರಾಮೀಣ ಪ್ರದೇಶದ ರೈತರು, ಜಾನುವಾರುಗಳ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಜಾನುವಾರುಗಳಿಗೆ ಕಾಲು ಬಾಯಿ, ಬಾಯಿ ಬೇನೆ ರೋಗಗಳು ಉಲ್ಭಣಿಸುವ ಸಾಧ್ಯತೆ ಹೆಚ್ಚು. ಜಾನುವಾರುಗಳ ಆಸ್ಪತ್ರೆಗಳು ಗ್ರಾಮೀಣ ಪ್ರದೇಶದಲ್ಲಿದ್ದರೂ ಅವುಗಳಿಗೆ ವೈದ್ಯರ ನಿಯೋಜನೆ, ಸಮರ್ಪಕವಾದ ಔಷಧಿಗಳ ಪೂರೈಕೆ ಲಭ್ಯವಿಲ್ಲ.

ಜಾನುವಾರುಗಳಿಗೆ ಅನಾರೋಗ್ಯ ಎದುರಾದಾರೆ ರೈತರು ತಾಲ್ಲೂಕು ಕೇಂದ್ರದ ತಾಲ್ಲೂಕು ಪಶು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಶು ವೈದ್ಯು ಹಾಗೂ ಮೂಲ ಸೌಕರ್ಯಗಳ ಕೊರತೆ ನೀಗಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಜರುಗಿಸುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

16 ಜಾನುವಾರು ಸಾಕಿದ್ದೇನೆ. ಕೃಷಿ ಹೈನುಗಾರಿಕೆಗೆ ಜಾನುವಾರುಗಳು ಅಗತ್ಯ. ಆದರೆ ಪಶುಪಾಲನಾ ಇಲಾಖೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ
ದಿನೇಶ್ ನಿಂಗೋಜಿ ರೈತ

Quote -

‘11 ವೈದ್ಯರಿಗೆ ಆಫರ್: 5 ಮಂದಿ ಮಾತ್ರ ಸೇರ್ಪಡೆ’

‘11 ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿತ್ತು. ಸಂದರ್ಶನ ನಡೆಸಿ 11 ವೈದ್ಯರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆದರೆ ಅದರಲ್ಲಿ 5 ಮಂದಿ ಮಾತ್ರ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ತಿಳಿಸಿದರು. ‘ಖಾಲಿ ಇರುವ ಪಶು ವೈದ್ಯರ ಹುದ್ದೆಗಳ ಭರ್ತಿ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಕಾಲ ಕಾಲಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ’ ಎಂದರು.

12.41 ಲಕ್ಷ ಜಾನುವಾರು

20ನೇ ಜಾನುವಾರು ಗಣತಿ ಪ್ರಕಾರ ಹಾವೇರಿ ಜಿಲ್ಲೆಯಲ್ಲಿ ಒಟ್ಟು 12.41 ಲಕ್ಷ ಜಾನುವಾರುಗಳಿವೆ. ಇದರಲ್ಲಿ 3.46 ಲಕ್ಷ ದೊಡ್ಡ ಜಾನುವಾರು ಹಾಗೂ 4.30 ಲಕ್ಷ ಕುರಿ–ಆಡುಗಳಿವೆ. ಕುದುರೆ ಕತ್ತೆ ಮೊಲ ಹಾಗೂ ಇತರೆ ಪ್ರಾಣಿಗಳು ಸೇರಿ 6.50 ಲಕ್ಷಕ್ಕೂ ಅಧಿಕ ಸಣ್ಣ ಜಾನುವಾರುಗಳಿವೆ. ರಾಷ್ಟ್ರೀಯ ಜಾನುವಾರು ಅಭಿವೃದ್ಧಿ ಮಾರ್ಗಸೂಚಿ ಅನ್ವಯ ಪ್ರತಿ 5 ಸಾವಿರ ಜಾನುವಾರಕ್ಕೆ ಒಬ್ಬ ಪಶು ವೈದ್ಯರಿರಬೇಕು. ಆದರೆ ಜಿಲ್ಲೆಯಲ್ಲಿ 12.41 ಲಕ್ಷ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಕೇವಲ 42 ಪಶು ವೈದ್ಯರಿದ್ದಾರೆ.

ಸಕಾಲಕ್ಕೆ ಸಿಗದ ಚಿಕಿತ್ಸೆ

ಹಾನಗಲ್ ತಾಲ್ಲೂಕಿನಲ್ಲಿ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಪಶು ಚಿಕಿತ್ಸಾ ಕೇಂದ್ರಗಳಿವೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕಾರಣದಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ತಾಲ್ಲೂಕಿನಲ್ಲಿ 22 ಪಶು ಚಿಕಿತ್ಸಾ ಕೇಂದ್ರಗಳಿವೆ. ನರೇಗಲ್ ಕೇಂದ್ರ ಹೊರತುಪಡಿಸಿ ಎಲ್ಲವೂ ಉತ್ತಮ ಕಟ್ಟಡ ಹೊಂದಿವೆ. ತಾಲ್ಲೂಕಿನಲ್ಲಿ 20 ಪಶು ವೈದ್ಯ ಹುದ್ದೆಗಳಿವೆ. ಆದರೆ ಐವರು ವೈದ್ಯರು ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 88 ಸಿಬ್ಬಂದಿ ಪೈಕಿ 12 ಸಿಬ್ಬಂದಿ ಮಾತ್ರ ಸೇವೆಯಲ್ಲಿದ್ದಾರೆ. ನಿಗದಿಯಂತೆ ಜಾನುವಾರುಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ.

ಜಾನುವಾರುಗಳು ಕಾಯಿಲೆಗೆ ತುತ್ತಾದಾಗ ಔಷಧ ಉಪಚಾರಕ್ಕೆ ರೈತರು ಪರದಾಡುವ ಸ್ಥಿತಿ ಇದೆ. ‘ಹೈನುಗಾರಿಕೆ ಉದ್ದೇಶವಿಟ್ಟುಕೊಂಡು ಶಿರಗೋಡ ಭಾಗದಲ್ಲಿ ರೈತರು ಜಾನುವಾರು ಸಾಕುತ್ತಿದ್ದಾರೆ. ಶಿರಗೊಡ್ ಪಶು ಚಿಕಿತ್ಸಾಲಯದಲ್ಲಿ ಹಲವು ದಿನಗಳಿಂದ ವೈದ್ಯರ ಕೊರತೆ ಇದೆ. ಒಬ್ಬ ದಿನಗೂಲಿ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ರೈತ ಮಾಲತೇಶ ಪರಪ್ಪನವರ ಹೇಳಿದರು.

(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಶಂಕರ ಕೊಪ್ಪದ, ಎಂ.ವಿ. ಗಡಾದ, ಮಾರುತಿ ಪೇಟಕರ, ಪ್ರದೀಪ ಕುಲಕರ್ಣಿ, ಪ್ರಮೀಳಾ ಹುನಗುಂದ, ಗಣೇಶಗೌಡ ಪಾಟೀಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.