‘ರೈತರ ಕಾನೂನು ಹೋರಾಟಕ್ಕೆ ಬೆಂಬಲ’
‘ವಕ್ಫ್ ಆಸ್ತಿ ವಿಚಾರಕ್ಕೆ ಮಗ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಂದೆ ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದಿದ್ದೇವೆ. ರಾಜ್ಯದಲ್ಲಿ 9 ಲಕ್ಷ ಎಕರೆ ವಕ್ಫ್ ಆಸ್ತಿಯೆಂದು ಕಬಳಿಸುವ ಹುನ್ನಾರ ನಡೆದಿದೆ. ರೈತರ ಕಾನೂನು ಹೋರಾಟ ನಮ್ಮ ಬೆಂಬಲವಿದ್ದು ಎಲ್ಲ ವೆಚ್ಚವನ್ನು ನಾವೇ ಭರಿಸಲಿದ್ದೇವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬಿಜೆಪಿ ನಿಯೋಗದ ನೇತೃತ್ವ ವಹಿಸಿಕೊಂಡು ಶನಿವಾರ ರುದ್ರಪ್ಪ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವಕ್ಫ್ ಆಸ್ತಿ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದನ್ನು ಉಲ್ಲಂಘಿಸಿ ಯಾವುದೇ ನೋಟಿಸ್ ನೀಡದೇ ಜಮೀನು ವಕ್ಫ್ ಆಸ್ತಿ ಮಾಡಿರುವುದು ಗಮನಕ್ಕೆ ಬಂದಿದೆ’ ಎಂದರು. ‘ರೈತರಿಗೆ ನೀಡಿರುವ ನೋಟಿಸ್ ವಾಪಸು ಪಡೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಇದೇ ತಿಂಗಳು ಹಾನಗಲ್ ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಮುಖ್ಯಮಂತ್ರಿ ಆದೇಶಕ್ಕೆ ಕಿಮ್ಮತ್ತು ಇಲ್ಲವೇ’ ಎಂದು ಪ್ರಶ್ನಿಸಿದರು. ಹುಬ್ಬಳ್ಳಿ ವರದಿ:‘ಎಲ್ಲೇ ಆಗಲಿ ವಕ್ಫ್ ಆಸ್ತಿ ಮಾಡಲು ಬಂದರೆ ಅವರನ್ನು ಓಡಿಸಿ. ಯಾರೇ ಆಗಲಿ ಯಾವುದೇ ವಕ್ಫ್ ಆಸ್ತಿ ಮಾಡಲೆಂದು ಬಂದರೆ ಅಲ್ಲಿನ ಜನರೆಲ್ಲಾ ಸೇರಿ ಓಡಿಸಬೇಕು’ ಎಂದು ಪ್ರಲ್ಹಾದ ಜೋಶಿ ಹೇಳಿದರು. ‘ಈಗಿನ ಸರ್ಕಾರದಲ್ಲಿ ಯಾರದ್ದು ಯಾವ ಜಮೀನು ವಕ್ಫ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ ಆರ್.ಟಿ.ಸಿ ತೆಗೆದು ನೋಡುತ್ತಿರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದಲಾಗುವವರೆಗೆ ಮತ್ತು ಲೋಕಸಭೆಯಲ್ಲಿನ ವಕ್ಫ್ ಕಾಯ್ದೆ (ತಿದ್ದುಪಡಿ) ಮಸೂದೆ ಪಾಸಾಗುವವರೆಗೆ ಆಗಾಗ ಎಲ್ಲಾರೂ ಪಹಣಿ ಪರಿಶೀಲಿಸುತ್ತಿರಿ’ ಎಂದು ಸಲಹೆ ನೀಡಿದರು.