ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Dasara 2024: ದಸರಾ ಉದ್ಘಾಟನೆಗೆ ಹಂಪ ನಾಗರಾಜಯ್ಯ

Published : 20 ಸೆಪ್ಟೆಂಬರ್ 2024, 19:53 IST
Last Updated : 20 ಸೆಪ್ಟೆಂಬರ್ 2024, 19:53 IST
ಫಾಲೋ ಮಾಡಿ
Comments

ಮೈಸೂರು: ‘ಹೆಸರಾಂತ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಂಪನಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಜಿಲ್ಲಾಡಳಿತದವರು ಶೀಘ್ರ ಅಧಿಕೃತ ಆಹ್ವಾನ ನೀಡಲಿದ್ದಾರೆ. ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಉದ್ಘಾಟಕರ ಆಯ್ಕೆಯನ್ನು ನನ್ನ ವಿವೇಚನೆಗೆ ಬಿಡಲಾಗಿತ್ತು; ನಾನು ಈ ತೀರ್ಮಾನ ಮಾಡಿದ್ದೇನೆ’ ಎಂದರು. ಈ ಬಾರಿಯ ದಸರಾ ಮಹೋತ್ಸವವು ಅ.3ರಿಂದ ನಡೆಯಲಿದೆ.

ಸಂತೋಷಾಘಾತ: ಹಂಪನಾ

‘ಇದು ಅನಿರೀಕ್ಷಿತವಾಗಿ ದೊರೆತ ಅಪೂರ್ವ, ಅವಿಸ್ಮರಣೀಯ ಸಂತೋಷದ ಸಂದರ್ಭ. ಸಾಮಾನ್ಯವಾಗಿ ವಿದ್ಯುದಾಘಾತವಾಗುವಂತೆ ನನಗೀಗ ಸಂತೋಷಾಘಾತವಾಗಿದೆ’ ಎಂದು ಹಂಪನಾ ಪ್ರತಿಕ್ರಿಯಿಸಿದರು.

‘ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಾಲ್ಕು ವರ್ಷ ಬಿ.ಎ ಆನರ್ಸ್ ಹಾಗೂ ನಂತರ ಎಂ.ಎ. ಓದಿದವನು ನಾನು. ಯಾವ ಊರಿನಲ್ಲಿ ನನ್ನ ಬದುಕಿನ ಜ್ಞಾನ ಉಂಟಾಯಿತೋ, ಅಕ್ಷರ ಲೋಕಕ್ಕೆ ಬಾಗಿಲು ತೆರೆದು ಸರಸ್ವತಿ ಬರಮಾಡಿಕೊಂಡೊಳೋ ಅದೇ ಊರಿನಲ್ಲಿ ದಸರೆಯ ಉತ್ಸವ ಉದ್ಘಾಟಿಸುವ ಮೊದಲ ಅಗ್ರವೀಳ್ಯವನ್ನು ಪಡೆದಿದ್ದೇನೆ. ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಹೇಳುವೆ’ ಎಂದರು.

‘ದಸರೆಯನ್ನು ನಾನಷ್ಟೆ ಉದ್ಘಾಟಿಸುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಯಾಗಿ, ರಾಜ್ಯ ಕನ್ನಡಿಗರ ಪರವಾಗಿ ಉದ್ಘಾಟಿಸುವೆ ಎಂದು ವಿನಯಪೂರ್ವಕವಾಗಿ ನಿವೇದಿಸಿಕೊಳ್ಳುವೆ. ನಾನು 50 ದಸರೆಯನ್ನು ನೋಡಿರುವೆ. ಯಾವ ದಸರಾವನ್ನು ನೋಡಿ ಸಡಗರ–ಸಂಭ್ರಮವನ್ನು ಬದುಕಿನಲ್ಲಿ ಅನುಭವಿಸಿ ಪುಳಕಗೊಂಡಿದ್ದೆನೋ, ರೋಮಾಂಚನಗೊಂಡಿದ್ದೆನೋ ಅಂಥ ಉತ್ಸವ ಉದ್ಘಾಟಿಸುವ ಅವಕಾಶ ಬಂದಿದೆ’ ಎಂದು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT