ಎಂಟು ದಿನಗಳಲ್ಲಿ ಭೂಮಿಗೆ ಮರಳುವ ಯೋಜನೆಯೊಂದಿಗೆ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಭಾರತ ಮೂಲದ ಸುನಿತಾ ವಿಲಿಯಮ್ಸ್ ಅವರು ಎರಡು ತಿಂಗಳಿಂದ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ಕೋಶ/ನೌಕೆಯಲ್ಲಿ (ಸ್ಪೇಸ್ ಕ್ಯಾಪ್ಸೂಲ್– ಇದರ ಒಳಗಡೆ ಗಗನಯಾತ್ರಿಗಳಿರುತ್ತಾರೆ. ಹಿಂದೆ ಬಳಸುತ್ತಿದ್ದ ಗಗನನೌಕೆಗೆ ಪರ್ಯಾಯವಾಗಿ ಇದನ್ನು ಈಗ ಬಳಸಲಾಗುತ್ತಿದೆ) ತಾಂತ್ರಿಕ ದೋಷ ಕಂಡುಬಂದ ಕಾರಣದಿಂದ ಪೂರ್ವನಿಗದಿಯಂತೆ ಅವರಿಗೆ ವಾಪಸ್ ಬರುವುದಕ್ಕೆ ಆಗಿಲ್ಲ. ದೋಷ ಇನ್ನೂ ಸರಿಹೋಗಿಲ್ಲ. ಸ್ಟಾರ್‌ಲೈನರ್‌ನಲ್ಲೇ ಅವರು ವಾಪಸ್ ಬರುತ್ತಾರೆಯೇ ಅಥವಾ ಇಬ್ಬರನ್ನು ಭೂಮಿಗೆ ಕರೆತರಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆಯೇ ಎಂಬುದನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸ್ಪಷ್ಟವಾಗಿ ಹೇಳಿಲ್ಲ. ಗಗನಯಾತ್ರಿಗಳು ವಾಪಸ್ ಬರುವ ದಿನಾಂಕದ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವುದರಿಂದ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಇಬ್ಬರು ಐಎಸ್‌ಎಸ್‌ಗೆ ಹೋಗಿದ್ದೇಕೆ?

ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ಕೋಶ/ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಇಬ್ಬರೂ ಗಗನಯಾತ್ರಿಗಳು ಜೂನ್ 5ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಒಂದು ವಾರ ಅಲ್ಲಿದ್ದು ಜೂನ್ 14ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ಮರಳಬೇಕಾಗಿತ್ತು. ಆದರೆ, ಯೋಜಿಸಿದಂತೆ ಯಾವುದೂ ನಡೆಯಲಿಲ್ಲ. ಅನಿಶ್ಚಿತ ಸ್ಥಿತಿ ಹೀಗೆಯೇ ಮುಂದುವರಿದರೆ 2025ರ ಫೆಬ್ರುವರಿಯವರೆಗೂ ಅವರು ಅಲ್ಲೇ ಉಳಿಯಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಬೋಯಿಂಗ್ ಸ್ಟಾರ್‌ಲೈನರ್ ಏಕೆ?

ನಾಸಾವು ಈ ಹಿಂದೆ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳು/ಸರಕುಗಳನ್ನು ಒಯ್ಯಲು, ಅಲ್ಲಿಂದ ಭೂಮಿಗೆ ಕರೆತರಲು ಬಾಹ್ಯಾಕಾಶ ನೌಕೆಗಳನ್ನು (ಸ್ಪೇಸ್ ಷಟಲ್) ಬಳಸುತ್ತಿತ್ತು. ಈಗ ಇವುಗಳನ್ನು ಬಳಸುತ್ತಿಲ್ಲ. ಬದಲಿಗೆ, ವಾಣಿಜ್ಯ ಉದ್ದೇಶದ ಗಗನಯಾನಿಗಳ ಕಾರ್ಯಕ್ರಮ ರೂಪಿಸಿದ್ದು, ಅದರ ಭಾಗವಾಗಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಮತ್ತು ಬೋಯಿಂಗ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಗಳು ತಯಾರಿಸುವ ಆಧುನಿಕ ಬಾಹ್ಯಾಕಾಶ ಕೋಶ/ನೌಕೆಗಳನ್ನು (ಸ್ಪೇಸ್ ಕ್ಯಾಪ್ಸ್ಯೂಲ್) ಗಗನಯಾತ್ರಿಗಳ ಪ್ರಯಾಣಕ್ಕೆ ಬಳಸುವುದು ಈ ಕಾರ್ಯಕ್ರಮದ ಉದ್ದೇಶ.

ಸ್ಪೇಸ್‌ಎಕ್ಸ್ ಕಂಪನಿಯು ಈ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದು, ಅದು ತಯಾರಿಸಿರುವ, ‘ಡ್ರ್ಯಾಗನ್’ (DRAGON) ಎಂದು ಕರೆಯಲಾಗುತ್ತಿರುವ ಬಾಹ್ಯಾಕಾಶ ಕೋಶಗಳಲ್ಲೇ ಈಗ ಗಗನಯಾತ್ರಿಗಳು ಪ್ರಯಾಣಿಸುತ್ತಿದ್ದಾರೆ.

ವಿಮಾನ ತಯಾರಿಕಾ ಕ್ಷೇತ್ರದ ಬೃಹತ್ ಕಂಪನಿ ಬೋಯಿಂಗ್ ಕೂಡ ಈ ಕೋಶಗಳನ್ನು ತಯಾರಿಸುತ್ತಿದ್ದು, ಅದಕ್ಕೆ ಸ್ಟಾರ್‌ಲೈನರ್ ಎಂದು ಹೆಸರಿಟ್ಟಿದೆ. ಸ್ಪೇಸ್‌ಎಕ್ಸ್‌ಗೆ ಹೋಲಿಸಿದರೆ, ಬೋಯಿಂಗ್ ಕಂಪನಿಯ ಯೋಜನೆ ಅನುಷ್ಠಾನ ನಿಧಾನವಾಗಿದೆ.

ಏಳು ಗಗನಯಾತ್ರಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಸ್ಟಾರ್‌ಲೈನರ್‌ನ ಮೊದಲ ಪರೀಕ್ಷಾರ್ಥ ಪ್ರಯಾಣ 2019ರಲ್ಲಿ ಮಾನವರಹಿತವಾಗಿ ನಡೆದಿತ್ತು. ಆಗ ಕಕ್ಷೆಗೆ ಸೇರಲು ಯಶಸ್ವಿಯಾಗಿದ್ದ ಅದಕ್ಕೆ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. 2022ರಲ್ಲಿ ಮತ್ತೊಮ್ಮೆ ನಡೆಸಿದ ಪರೀಕ್ಷೆ ಯಶಸ್ವಿಯಾಗಿತ್ತು. ಭೂಮಿಗೆ ಹಿಂದಿರುಗಿದ ಕೋಶದಲ್ಲಿ ಹಲವು ದೋಷಗಳು ಇದ್ದುದನ್ನು ನಂತರ ಪತ್ತೆ ಮಾಡಲಾಗಿತ್ತು.

ಮೂರನೇ ಹಂತದಲ್ಲಿ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣ ಹಮ್ಮಿಕೊಳ್ಳಲು ನಡೆಸಲು ನಾಸಾ ಮತ್ತು ಬೋಯಿಂಗ್ ಸಿದ್ಧತೆ ನಡೆಸಿದ್ದವು. ಸ್ಟಾರ್‌ಲೈನರ್‌ನ ಅಭಿವೃದ್ಧಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮೊದಲ ಮಾನವ ಸಹಿತ ಪರೀಕ್ಷಾರ್ಥ ಬಾಹ್ಯಾಕಾಶ ಪ್ರಯಾಣಕ್ಕೆ ಆಯ್ಕೆಯಾಗಿದ್ದರು.

ಜೂನ್ 1ರಂದೇ ನೌಕೆ ನಭಕ್ಕೆ ಚಿಮ್ಮಬೇಕಿತ್ತು. ಆದರೆ, ಇದನ್ನು ಹೊತ್ತೊಯ್ಯಬೇಕಿದ್ದ ಅಟ್ಲಾಸ್–5 ರಾಕೆಟ್‌ನಲ್ಲಿ ದೋಷ ಕಂಡು ಬಂದ ಕಾರಣಕ್ಕೆ ಕೊನೆ ಕ್ಷಣದಲ್ಲಿ ಉಡಾವಣೆ ಮುಂದೂಡಲಾಗಿತ್ತು.

ಐಎಸ್‌ಎಸ್ ತಲುಪಿದ ನಂತರ ಏನಾಯಿತು?

ಜೂನ್ 5ರಂದು ಸ್ಟಾರ್‌ಲೈನರ್ ಹೊತ್ತೊಯ್ದಿದ್ದ ರಾಕೆಟ್ ಫ್ಲಾರಿಡಾದಿಂದ ಬಾಹ್ಯಾಕಾಶದತ್ತ ಚಿಮ್ಮಿತು. 6ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪಿದ ಸ್ಟಾರ್‌ಲೈನರ್ ನೌಕೆಯ ನೋದಕ ವ್ಯವಸ್ಥೆ ಮತ್ತು ಎಂಜಿನ್‌ಗಳಲ್ಲಿ (ಥ್ರಸ್ಟರ್‌ಗಳು) ದೋಷ ಕಂಡಿದ್ದರಿಂದ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಲು (DOCKING) ಇಬ್ಬರೂ ಗಗನಯಾತ್ರಿಗಳು ಪ್ರಯಾಸ ಪಡಬೇಕಾಯಿತು. ಸ್ವಯಂಚಾಲಿತವಾಗಿ ನಡೆಯಬೇಕಾಗಿದ್ದ ಈ ಪ್ರಕ್ರಿಯೆಯನ್ನು ಗಗನಯಾತ್ರಿಗಳು ಮಧ್ಯಪ್ರವೇಶಿಸಿ (ಮ್ಯಾನ್ಯುವಲ್) ಮಾಡಬೇಕಾಯಿತು. ಜೂನ್ 14ರಂದು ಸ್ಟಾರ್‌ಲೈನರ್, ನಿಲ್ದಾಣದಿಂದ ಬೇರ್ಪಟ್ಟು ಭೂಮಿಗೆ ಬರಬೇಕಾಗಿತ್ತು. ತಾಂತ್ರಿಕ ಸಮಸ್ಯೆ ಬಗೆಹರಿಯದೇ ಇರುವುದರಿಂದ ಮರುಪ್ರಯಾಣ ಸಾಧ್ಯವಾಗಿಲ್ಲ. ಹೀಗಾಗಿ ಸುನಿತಾ ಮತ್ತು ವಿಲ್ಮೋರ್ ಬಾಹ್ಯಾಕಾಶದಲ್ಲೇ ದಿನದೂಡುವಂತಾಗಿದೆ. ನಿಲ್ದಾಣದಲ್ಲಿ ವಿವಿಧ ಪ್ರಯೋಗಗಳಲ್ಲಿ ತೊಡಗಿರುವ ಇತರ ಏಳು ಗಗನಯಾತ್ರಿಗಳ ಕೆಲಸಗಳಿಗೆ ಇವರಿಬ್ಬರು ಸದ್ಯ ನೆರವಾಗುತ್ತಿದ್ದಾರೆ.

ಪ್ರಯಾಣ ಸುಲಭವಲ್ಲ

400 ಕಿ.ಮೀ ದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬರುವುದು ಸುಲಭವಲ್ಲ. ಗಗನಯಾತ್ರಿಗಳು ಒಮ್ಮೆ ಹೋದರೆ ಕನಿಷ್ಠ ಆರು ತಿಂಗಳು ನಿಲ್ದಾಣದಲ್ಲಿ ಇರಬೇಕಾಗುತ್ತದೆ. ವರ್ಷದವರೆಗೂ ಉಳಿಯಬೇಕಾದ ಪರಿಸ್ಥಿತಿ ಬರಬಹುದು. ಗಗನಯಾನಿಗಳು ಇದೆಲ್ಲದಕ್ಕೂ ಸಜ್ಜಾಗಿರುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ.

ಸುನಿತಾ ಮತ್ತು ವಿಲ್ಮೋರ್ ಅವರು ವಾರದ ಮಟ್ಟಿಗೆ ಹೋದವರು. 2025ರ ಫೆಬ್ರುವರಿಯವರೆಗೂ ಅಲ್ಲೇ ಉಳಿಯಬೇಕಾಗಿ ಬಂದರೆ ಅದು ಅತ್ಯಂತ ಸವಾಲಿನ ಕಾರ್ಯವಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಾಡಬಹುದು.

ವಿಕಿರಣಗಳಿಗೆ ಸುಲಭವಾಗಿ ತೆರೆದುಕೊಳ್ಳುವುದರಿಂದ ವಿವಿಧ ಕಾಯಿಲೆಗಳಿಗೆ ಬಹುಬೇಗ ಒಳಗಾಗುವ ಅಪಾಯ ಇರುತ್ತದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವ ಇರುವುದರಿಂದ ಮೂಳೆ ಸಾಂದ್ರತೆ ಕಡಿಮೆಯಾಗುವ, ಮಾಂಸ ಖಂಡಗಳು ಕ್ಷೀಣಿಸುವ ಅಪಾಯ ಎದುರಾಗಬಹುದು. ಮಾನಸಿಕವಾಗಿ ಕುಗ್ಗಬಹುದು.

ಆದರೆ, ಇಬ್ಬರೂ ಅನುಭವಿ ಗಗನಯಾತ್ರಿಗಳಾಗಿದ್ದು, ಬಾಹ್ಯಾಕಾಶದಲ್ಲಿ ಎದುರಾಗುವ ಎಂತಹದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು ಎಂಬ ವಿಶ್ವಾಸವನ್ನು ನಾಸಾ ವಿಜ್ಞಾನಿಗಳು, ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಅನುಭವಿ ಗಗನಯಾನಿ ಸುನಿತಾ

ಸುನಿತಾ ವಿಲಿಯಮ್ಸ್ ಅತ್ಯಂತ ಅನುಭವಿ ಮಹಿಳಾ ಗಗನಯಾನಿ. ಬಾಹ್ಯಾಕಾಶಕ್ಕೆ ತೆರಳಿದ ಭಾರತ ಮೂಲದ ಎರಡನೇ ಮಹಿಳಾ ಗಗನಯಾತ್ರಿ. ಅವರಿಗಿಂತಲೂ ಮೊದಲು ಕಲ್ಪನಾ ಚಾವ್ಲಾ ಅವರು ಐಎಸ್‌ಎಸ್‌ಗೆ ಹೋಗಿದ್ದರು.

ಸುನಿತಾ ತಂದೆ ಡಾ.ದೀಪಕ್ ಅವರು ಗುಜರಾತ್‌ನ ಮೆಹಸನಾ ಜಿಲ್ಲೆಯವರು. 1965ರ ಸೆ.19ರಂದು ಅಮೆರಿಕದ ಒಹಿಯೊದಲ್ಲಿ ಜನಿಸಿದ್ದ ಸುನಿತಾ, ಅಮೆರಿಕ ನೌಕಾ ಪಡೆಯಲ್ಲಿ ಕ್ಯಾಪ್ಟನ್ ಆಗಿದ್ದವರು. 1998ರಲ್ಲಿ ನಾಸಾವು ಅವರನ್ನು ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತು.

58 ವರ್ಷ ವಯಸ್ಸಿನ ಅವರು ಇದಕ್ಕೂ ಮೊದಲು ಎರಡು ಬಾರಿ (2007, 2012) ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಮೊದಲ ಬಾರಿ ಹೋಗಿದ್ದಾಗ ನಾಲ್ಕು ಬಾರಿ ಬಾಹ್ಯಾಕಾಶ ನಡಿಗೆ ಮಾಡಿ ಅತಿ ಹೆಚ್ಚು ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳಾ ಗಗನಯಾನಿ ಎಂದು ದಾಖಲೆ ಬರೆದಿದ್ದರು. ಎರಡನೇ ಬಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ನಿಲ್ದಾಣದ ಹೊರಭಾಗದ ದುರಸ್ತಿಗಾಗಿ ಮೂರು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದರು. ಎರಡು ಅವಧಿಯಲ್ಲಿ ಅವರು ಒಟ್ಟು 322 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ.

ಇದು ಬಾಹ್ಯಾಕಾಶ ನಿಲ್ದಾಣಕ್ಕೆ ಅವರ ಮೂರನೇ ಭೇಟಿ. ಅವರಿಗೆ ಪತಿ ಮೈಕೆಲ್ ಇದ್ದಾರೆ.

ಬಾಹ್ಯಾಕಾಶದಲ್ಲಿ 178 ದಿನ
ಬುಚ್ ವಿಲ್ಮೋರ್ ಕೂಡ ಅಮೆರಿಕ ನೌಕಾ ಪಡೆಯ ನಿವೃತ್ತ ಕ್ಯಾಪ್ಟನ್. 61 ವರ್ಷ ವಯಸ್ಸಿನ ವಿಲ್ಮೋರ್, ಅಮೆರಿಕದ ಟೆನೆಸ್ಸಿಯವರು. 2000ದಲ್ಲಿ ಅವರು ಗಗನಯಾತ್ರಿಯಾಗಿ ಆಯ್ಕೆಯಾಗಿದ್ದರು. ಇವರು ಕೂಡ ಈ ಹಿಂದೆ ಎರಡು ಬಾರಿ (2009 ಮತ್ತು 2015) ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ನಾಲ್ಕು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿರುವ ಅವರು ಒಟ್ಟು 178 ದಿನಗಳನ್ನು ಐಎಸ್‌ಎಸ್‌ನಲ್ಲಿ ಕಳೆದಿದ್ದಾರೆ.

ಕಾಡುವ ಕಲ್ಪನಾ ಸಾವು

ಸುನಿತಾ ಮತ್ತು ವಿಲ್ಮೋರ್ ಸ್ಟಾರ್‌ಲೈನರ್ ನೌಕೆಯಲ್ಲೇ ವಾಪಸ್ ಬರಬಹುದು ಎಂದು ಹೇಳಲಾಗುತ್ತಿದ್ದರೂ ಭೂಮಿಗೆ ಮರಳುವಾಗ ಏನಾದರೂ ಅನಾಹುತವಾದರೆ ಎಂಬ ಆತಂಕ ಕಾಡುತ್ತಿದೆ.

ಭಾರತ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು, 2003ರ ಫೆ.1ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದರು. ನೌಕೆಯು ಭೂ ವಾತಾವರಣ ಪ್ರವೇಶಿಸುವಾಗ ಹೊತ್ತಿ ಉರಿದಿತ್ತು. ಚಾವ್ಲಾ ಸೇರಿದಂತೆ ಏಳು ಗಗನಯಾತ್ರಿಗಳು ಅಸುನೀಗಿದ್ದರು.

ನೌಕೆಯ ಉಡಾವಣೆ ಸಂದರ್ಭದಲ್ಲಿ ನೌಕೆಯ ಉಷ್ಣ ನಿರೋಧಕ ವ್ಯವಸ್ಥೆಗೆ ಆದ ಹಾನಿಯಿಂದಾಗಿ ಈ ದುರಂತ ಸಂಭವಿಸಿತ್ತು ಎಂದು ಹೇಳಲಾಗಿತ್ತು.

ಮುಂದೇನು?

ಈ ಪ್ರಶ್ನೆಗೆ ನಾಸಾ ಇನ್ನೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಸ್ಟಾರ್‌ಲೈನರ್‌ನಲ್ಲಿನ ದೋಷಗಳು ಪರಿಹಾರವಾಗಲಿವೆ ಎಂಬ ವಿಶ್ವಾಸದಲ್ಲಿ ನಾಸಾ, ಬೋಯಿಂಗ್ ಇವೆ. ಯೋಜನೆಯಂತೆ ಅದರಲ್ಲೇ ಇಬ್ಬರೂ ಭೂಮಿಗೆ ಮರಳಲು ಸಾಧ್ಯ ಎಂಬ ನಿರೀಕ್ಷೆಯಲ್ಲಿ ವಿಜ್ಞಾನಿಗಳಿದ್ದಾರೆ.

ಇದೇ ವೇಳೆ, ಇಬ್ಬರನ್ನು ಭೂಮಿಗೆ ಕರೆತರಲು ಪರ್ಯಾಯ ಮಾರ್ಗದ ಬಗ್ಗೆಯೂ ನಾಸಾ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪರ್ಯಾಯ ಮಾರ್ಗ ಎಂದರೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕೋಶ/ನೌಕೆಯಲ್ಲಿ ಅವರನ್ನು ಕರೆತರುವುದು. ಸ್ಪೇಸ್‌ಎಕ್ಸ್‌ನ ನೌಕೆಯ ಉಡಾವಣೆಗೆ ಇದೇ 18ರಂದು ದಿನಾಂಕ ನಿಗದಿಪಡಿಸಲಾಗಿದೆ. ಈ ನೌಕೆಯಲ್ಲಿ ಭೂಮಿಗೆ ಮರಳುವುದಾದರೂ ಅದಕ್ಕೆ ಇನ್ನೂ ಆರು ತಿಂಗಳ ಕಾಲ ಕಾಯಬೇಕು. ಆದರೆ, ಈ ಬಗ್ಗೆ ನಾಸಾ ಇನ್ನೂ ಸ್ಪೇಸ್‌ಎಕ್ಸ್ ಕಂಪನಿ ಜೊತೆ ಮಾತುಕತೆ ನಡೆಸಿಲ್ಲ ಎಂದು ವರದಿಯಾಗಿದೆ.

ಆಧಾರ: ಎಎಫ್‌ಪಿ, ನ್ಯೂಯಾರ್ಕ್ ಟೈಮ್ಸ್, ಎಪಿ, ನಾಸಾ, ಬೋಯಿಂಗ್ ವೆಬ್‌ಸೈಟ್‌ಗಳು. ಚಿತ್ರಗಳು: ನಾಸಾ, ಬೋಯಿಂಗ್ ವೆಬ್‌ಸೈಟ್, ಬೋಯಿಂಗ್ ಸ್ಪೇಸ್, ಸುನಿತಾ ಎಕ್ಸ್ ಖಾತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.