ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸ | ವಿವಿಡ್‌ ಸಿಡ್ನಿ: ಬೆಳಕಿನ ಬೆರಗು

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಚಳಿಗಾಲ. ಶರತ್ಕಾಲ ಕಳೆದು ಮೈ ಕೊರೆಯುವ ಚಳಿಗಾಲ ಶುರುವಾಗುತ್ತಿದ್ದಂತೆಯೇ ಪ್ರತಿ ವರ್ಷ, ನ್ಯೂ ಸೌತ್ ವೇಲ್ಸ್ ರಾಜ್ಯದ ರಾಜಧಾನಿಯಾದ ಸಿಡ್ನಿಯಲ್ಲಿ 23 ದಿನಗಳ ‘ವಿವಿಡ್ ಸಿಡ್ನಿ’ ಎಂಬ ಹೆಸರಿನ ಬೆಳಕಿನ ಉತ್ಸವವೂ ಆರಂಭವಾಗುತ್ತದೆ. ಕೊರೆಯುವ ಚಳಿಗೆ ಬೆಚ್ಚನೆಯ ಮುದ ನೀಡುತ್ತಲೇ ಬೌದ್ಧಿಕ ಕೋಲ್ಮಿಂಚುಗಳನ್ನೂ ನೀಡುವಂತಹದ್ದು ಈ ಉತ್ಸವ. ಸೃಜನಾತ್ಮಕತೆ, ಆವಿಷ್ಕಾರ, ವಿಚಾರ ಹಾಗೂ ತಂತ್ರಜ್ಞಾನಗಳ ಸಂಯೋಜನೆಗಳ ಸಂಭ್ರಮಾಚರಣೆಯ ‘ವಿವಿಡ್ ಸಿಡ್ನಿ’, ಸಿಡ್ನಿ ನಗರದ ಹಗಲು-ರಾತ್ರಿಗಳಿಗೆ ಹೊಸ ರಂಗು ತುಂಬುತ್ತದೆ.

ಮೇ 24ರಂದು ಆರಂಭಗೊಂಡ ಈ ಉತ್ಸವ ಜೂನ್ 15ಕ್ಕೆ ಮುಕ್ತಾಯಗೊಂಡಿತು. ಉತ್ಸವದ ಈ ವರ್ಷದ ಘೋಷವಾಕ್ಯ ‘ಮಾನವೀಯತೆ’. ಕಳೆದ ವರ್ಷ, ಇದೇ ಅವಧಿಯಲ್ಲಿ ಸಿಡ್ನಿ ನಗರದಲ್ಲಿ ‘ವಿವಿಡ್ ಉತ್ಸವ’ದ ಬೆಳಕಿನ ಲೋಕದಲ್ಲಿ ನಡೆದಾಡಿ ಕಣ್ಮನಗಳನ್ನು ನಾವೂ ತುಂಬಿಕೊಂಡಿದ್ದೆವು. ಒಪೆರಾ ಹೌಸ್, ಹಾರ್ಬರ್ ಬ್ರಿಜ್‌, ಕಸ್ಟಮ್ ಹೌಸ್‌ನಂತಹ ಸಿಡ್ನಿ ನಗರದ ಸುಪ್ರಸಿದ್ಧ ತಾಣಗಳು ಸೇರಿದಂತೆ ನಗರದ  ಪ್ರಮುಖ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು, ರಾತ್ರಿಗಳಲ್ಲಿ ವಿವಿಧ ರಂಗುಗಳ ಬೆಳಕಿನಲ್ಲಿ ತೋಯುತ್ತಾ ಸೃಷ್ಟಿಸುವಂತಹ ಮಾಂತ್ರಿಕತೆ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸಿಡ್ನಿಯ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣ ‘ಡಾರ್ಲಿಂಗ್ ಹಾರ್ಬರ್’ನಲ್ಲಿ ಲೇಸರ್ ಷೋ ನಡೆಯುವಂತಹ ನೀರಿರುವ ಕಡೆ ಕುಳಿತು ನೀರಿನ ಮಧ್ಯೆ ಎದ್ದು ಬರುವ ಬೆಳಕಿನ ವಿನ್ಯಾಸಗಳ ಪ್ರದರ್ಶನಗಳನ್ನು ನಾವು ನೋಡಿದ್ದೆವು. ಈ ಲೇಸರ್ ಲೈಟ್ ಷೋಗಳ ವೀಕ್ಷಣೆಗೆ ಅಲ್ಲಿ ಅಂದು ಜನ ಜಾತ್ರೆಯೇ ನೆರೆದಿತ್ತು. ಮಕ್ಕಳು ರಂಗುರಂಗಿನ ಲೈಟುಗಳಿರುವ ಕತ್ತಿ, ಗದೆಗಳಂತಹ ಆಟಿಕೆಗಳನ್ನು ಕೈಯಲ್ಲಿ ಹಿಡಿದು ಝಳಪಿಸಿ ಆಟವಾಡುತ್ತಾ ಕಿನ್ನರ ಲೋಕವನ್ನು ಸೃಷ್ಟಿಸಿದ್ದರು.

ಬೆಳಕು, ಸಂಗೀತ, ಹೊಸ ವಿಚಾರಧಾರೆ ಹಾಗೂ ಆಹಾರ ವೈವಿಧ್ಯ- ಈ ಉತ್ಸವದ ಮುಖ್ಯ ಅಂಶಗಳು. ಹೀಗಾಗಿ, ಆರ್ಟ್ ಇನ್‌ಸ್ಟಾಲೇಷನ್‌ಗಳು, 3 ಡಿ ಲೈಟ್ ಪ್ರೊಜೆಕ್ಷನ್‌ಗಳು, ಸ್ಪೂರ್ತಿದಾಯಕ ವಿಚಾರ-ವಿನಿಮಯಗಳು, ಸಂಗೀತದಲ್ಲಿ ಮೀಯಿಸುವ ಕಾರ್ಯಕ್ರಮಗಳು, ಆಹಾರ ವೈವಿಧ್ಯದ ಸವಿ ಉಣಿಸುವ ಕಾರ್ಯಕ್ರಮಗಳು ಸಿಡ್ನಿ ನಗರಕ್ಕೆ ಹೊಸ ಮೆರುಗು ತುಂಬುತ್ತವೆ. ವಿಶ್ವಮಟ್ಟದ ಶೆಫ್‌ಗಳು ಹಾಗೂ ರೆಸ್ಟೊರೆಂಟ್‌ಗಳು, ಪಾಕಶಾಸ್ತ್ರದ ಪ್ರಾವೀಣ್ಯವನ್ನು ಪ್ರಸ್ತುತಿ ಪಡಿಸುತ್ತವೆ.

ಡಾರ್ಲಿಂಗ್ ಹಾರ್ಬರ್ ಕಡೆಗೆ ಹೆಜ್ಜೆ ಹಾಕುವಾಗಲೇ ಉದ್ದಕ್ಕೂ ವೈವಿಧ್ಯಮಯ ತಿನಿಸುಗಳ ಅಂಗಡಿ ಮಳಿಗೆಗಳಿದ್ದುದನ್ನು ನೋಡಿದ್ದೆವು. ಆಸ್ಟ್ರೇಲಿಯಾದಲ್ಲಿ ಎಲ್ಲೆಡೆ ಕಾಣಸಿಗುವ ಜನಪ್ರಿಯ ಬರ್ಗರ್ ಅಂಗಡಿ ‘ಬೆಟ್ಟಿಸ್ ಬರ್ಗರ್’ನಿಂದ ವೆಜ್ ಹಾಗೂ ಚಿಕನ್ ಬರ್ಗರ್‌ಗಳನ್ನು ಖರೀದಿಸಿದ್ದೆವು. ಜೊತೆಗೆ, ಡಬಲ್ ಸ್ಕೂಪ್ ಐಸ್ ಕ್ರೀಂ ವಿಥ್ ರಮ್ ಆ್ಯಂಡ್‌ ರೆಸಿನ್, ಮತ್ತೊಂದು ಸ್ಕೂಪ್ ಐಸ್ ಕ್ರೀಮ್ ವಿಥ್ ಚೆರ್ರಿ ಬ್ರಾಂಡಿ ಮತ್ತು ಕಾಫಿಯ ಸ್ವಾದ ಚಳಿಯನ್ನು ದೂರವಾಗಿಸಲು ನೆರವಿಗೆ ಬಂದವು. ಅಂದು ಸೋಮವಾರವಾಗಿದ್ದರೂ(ಜೂನ್‌ 12, 2023) ‘ಕಿಂಗ್ಸ್ ಬರ್ತ್ ಡೇ’ ಎಂಬ ಕಾರಣಕ್ಕಾಗಿ ಸಾರ್ವಜನಿಕ ರಜೆ ಇದ್ದದ್ದರಿಂದ ಮಕ್ಕಳ ಜೊತೆಗೆ ಬಂದ ಕುಟುಂಬಗಳಿಂದಾಗಿ ಜನಜಂಗುಳಿ ಹೆಚ್ಚಿತ್ತು. ಈವರೆಗೆ ‘ಕ್ವೀನ್ಸ್ ಬರ್ತ್ ಡೇ’ ಎಂದು ಆಚರಿಸಲಾಗುತ್ತಿದ್ದುದು ಕಳೆದ ವರ್ಷವಷ್ಟೇ ‘ಕಿಂಗ್ಸ್ ಬರ್ತ್ ಡೇ’ ಎಂದಾಗಿತ್ತು. ಆಸ್ಟ್ರೇಲಿಯಾ, ಬ್ರಿಟಿಷ್ ವಸಾಹತು ಆಗಿದ್ದಂತಹ ಕಾಮನ್ ವೆಲ್ತ್ ರಾಷ್ಟ್ರ. ಬ್ರಿಟನ್ ರಾಣಿ  2ನೆ ಎಲಿಜಬೆತ್ ತೀರಿಕೊಂಡು ದೊರೆ ಚಾರ್ಲ್ಸ್ ಸಿಂಹಾಸನವೇರಿದ ನಂತರ ಆಗಿದ್ದ ಬದಲಾವಣೆ ಅದು. ವಿಚಿತ್ರವೆಂದರೆ ಚಾರ್ಲ್ಸ್ ನಿಜವಾದ ಜನ್ಮದಿನ ಇರುವುದು ನವೆಂಬರ್ 14ಕ್ಕೆ. ಆದರೆ, ಸಾರ್ವಜನಿಕ ಆಚರಣೆಗಳ ಅನುಕೂಲಕ್ಕಾಗಿ ದಿನಾಂಕ ಬದಲಿಸಿ ಜನರಿಗೆ ದೀರ್ಘ ವಾರಾಂತ್ಯ ರಜೆಯ ಲಭ್ಯತೆಗಾಗಿ ಸೋಮವಾರಗಳಂದೇ ಈ ಜನ್ಮದಿನವನ್ನು ಆಚರಿಸುವ ಸಂಪ್ರದಾಯ ಬಂದಿದೆ. ಆಸ್ಟ್ರೇಲಿಯಾದ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ತಿಂಗಳುಗಳಲ್ಲಿ ದೊರೆಯ ಜನ್ಮದಿನಕ್ಕೆ ಸಾರ್ವಜನಿಕ ರಜಾ ದಿನವನ್ನು ಘೋಷಿಸುತ್ತವೆ. ಹೀಗಾಗಿ ಈ ವರ್ಷ, ಜೂನ್ 10ರ ಸೋಮವಾರ, ನ್ಯೂ ಸೌತ್ ವೇಲ್ಸ್‌ನಲ್ಲಿ ‘ಕಿಂಗ್ಸ್ ಬರ್ತ್ ಡೇ’ಗಾಗಿ ಸಾರ್ವಜನಿಕ ರಜೆ ಇತ್ತು.

ದಕ್ಷಿಣ ಗೋಳಾರ್ಧದಲ್ಲಿಯೇ ಅತಿ ದೊಡ್ಡ ಕಲಾ ಉತ್ಸವ ‘ವಿವಿಡ್ ಸಿಡ್ನಿ’ ಎಂಬಂಥ ಪ್ರತಿಪಾದನೆಗಳೂ ಇವೆ. ಅಂತರರಾಷ್ಟ್ರೀಯ ಉತ್ಸವ ಹಾಗೂ ಕಾರ್ಯಕ್ರಮಗಳ ಸಂಘದಿಂದಲೂ (ಐಎಫ್ಇಎ) ‘ವಿವಿಡ್ ಸಿಡ್ನಿ’ ಮಾನ್ಯತೆ ಗಳಿಸಿಕೊಂಡಿದ್ದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳು ಆಸ್ಟ್ರೇಲಿಯಾದ ಅತ್ಯುತ್ತಮ ಪ್ರವಾಸಿ ಕಾರ್ಯಕ್ರಮ ಎಂಬಂಥ ಮಾನ್ಯತೆಯನ್ನೂ ‘ವಿವಿಡ್ ಸಿಡ್ನಿ’ ಗಳಿಸಿಕೊಂಡಿದೆ.

ಸಿಡ್ನಿ ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ‘ವಿವಿಡ್ ಸಿಡ್ನಿ’ ಮುಖ್ಯವಾದುದು. ಈ ಉತ್ಸವ ಆಸ್ಟ್ರೇಲಿಯಾದ ಪ್ರವಾಸಿಗರನ್ನಷ್ಟೇ ಅಲ್ಲದೆ ಹೊರ ದೇಶಗಳ ಪ್ರವಾಸಿಗರನ್ನೂ ಆಕರ್ಷಿಸುತ್ತದೆ.

ಈ ವರ್ಷದ ‘ವಿವಿಡ್ ಸಿಡ್ನಿ 2024’ -ನಾವು ಮನುಷ್ಯರಾಗಿರುವುದನ್ನು ಅನ್ವೇಷಿಸಿದೆ. ಜತೆಗೆ ಒಟ್ಟಾಗಿ ನಾವು ಉತ್ತಮ ಪ್ರಪಂಚ ಹೇಗೆ ಕಟ್ಟಬಲ್ಲೆವು ಎಂಬುದನ್ನೂ ಪ್ರತಿಪಾದಿಸಿದೆ ಎಂದು ಈ ಉತ್ಸವದ ನಿರ್ದೇಶಕಿ ಗಿಲ್ ಮಿನೆರ್ವಿನಿ ಹೇಳುತ್ತಾರೆ.

ಬದಲಾಗುತ್ತಿರುವ ಕಾಲ ಹಾಗೂ ಪ್ರಪಂಚದಲ್ಲಿ ಬದುಕಿನ ಅರ್ಥ ಹಾಗೂ ಉದ್ದೇಶದ ನಮ್ಮ ಅನ್ವೇಷಣೆಗೆ ಹೊಸ ತುರ್ತು ಎದುರಾಗಿರುವ ಸಂದರ್ಭ ಇದು. ನಾವು ಯಾರು ಹಾಗೂ ನಮ್ಮಿಂದ ಏನು ಸಾಧ್ಯ ಎಂಬುದನ್ನು ಕಂಡುಕೊಳ್ಳಲು ಅಂತರಂಗದ ಶೋಧನೆ ಅಗತ್ಯ. ನಮ್ಮನ್ನು ಮಾನವೀಯಗೊಳಿಸುವಂತಹ ಪ್ರೀತಿ, ದಯೆ, ಕರುಣೆ, ಸೃಜನಾತ್ಮಕತೆಯ ಅಂಶಗಳನ್ನು ಕಂಡುಕೊಳ್ಳಲು ನಮ್ಮೊಳಗೆ ನಾವು ನೋಡಿಕೊಳ್ಳಬೇಕು.

ಸೃಜನಾತ್ಮಕತೆ ಇಲ್ಲದಿದ್ದಲ್ಲಿ ಮನುಷ್ಯತ್ವ ಬದುಕುಳಿಯದು. ನಮ್ಮ ಜನರು ಹಾಗೂ ನಮ್ಮ ಭೂಮಿಯನ್ನು ಗೌರವಿಸುವ ವಿಶ್ವವನ್ನು ಸೃಷ್ಟಿಸಲು ನಾವು ಒಳ್ಳೆಯ ಮನುಷ್ಯರಾಗಬೇಕು ಎಂಬ ಸಂದೇಶ ‘ವಿವಿಡ್ ಸಿಡ್ನಿ 2024’ರಲ್ಲಿತ್ತು. ಸಶಕ್ತ ಸಮುದಾಯಗಳು, ಸುಸ್ಥಿರ ಪರಿಸರ ಹಾಗೂ ಬೌದ್ಧಿಕ ಸ್ವಾತಂತ್ರ್ಯಕ್ಕೆ ನೆರವಾಗುವಂತಹದ್ದು ‘ಸೃಜನಾತ್ಮಕತೆ’; ನಾವು ಮನುಷ್ಯರಾಗಿರುವುದರ ಬೆನ್ನೆಲುಬು ಅದು. ಕಲೆ, ಬದುಕಿಗೆ ಅರ್ಥವನ್ನು ನೀಡುತ್ತದೆ, ನಮ್ಮ ಬದುಕಿನ ಗುಣಮಟ್ಟ ಸುಧಾರಿಸುತ್ತದೆ. ಸುಖದ ಭಾವನೆಯನ್ನೂ ನೀಡುತ್ತದೆ. ನಮ್ಮ ಮನಸ್ಸನ್ನು ಹೊಸ ವಿಚಾರಗಳಿಗೆ ತೆರೆಸುತ್ತದೆ.. ಕಥೆ, ಕಲೆ, ಸಂಗೀತ, ಆಹಾರ ಮತ್ತಿತರ ಸೃಜನಾತ್ಮಕ ಅಭಿವ್ಯಕ್ತಿಗಳ ಮೂಲಕ ಮನುಷ್ಯರಾಗಿ ನಾವು ಬೆಸೆದುಕೊಳ್ಳುತ್ತೇವೆ. ಸೃಜನಾತ್ಮಕತೆ, ಕಲ್ಪನೆ ನಮ್ಮನ್ನು ಮಾನವೀಯವಾಗಿಸುತ್ತದೆ. ಮಾನವ ಸೃಜನಾತ್ಮಕತೆ ತಂತ್ರಜ್ಞಾನ ಅಭಿವೃದ್ಧಿಗೆ ಅವಕಾಶ ಮಾಡುತ್ತದೆ; ಸಮಸ್ಯೆಗಳನ್ನು ಪರಿಹರಿಸಿ ಹೊಸ ಬಗೆಯ ಪರಿಹಾರಗಳನ್ನು ಸೃಷ್ಟಿಸುತ್ತದೆ ಎಂಬಂಥ ತಾತ್ವಿಕತೆ ‘ವಿವಿಡ್ ಸಿಡ್ನಿ’ ಉತ್ಸವದ ಹಿಂದೆ ಇದೆ.

14ನೇ ಉತ್ಸವ

ಈ ವರ್ಷ, ಈ ಉತ್ಸವದ 14ನೇ ವರ್ಷಾಚರಣೆ. ಯಾವುದೇ ಚೌಕಟ್ಟುಗಳಿಲ್ಲದೆ, ಸರಹದ್ದುಗಳಾಚೆಗೆ ನಿಂತು ಚಿಂತಿಸುವ ಕಲಾವಿದರು, ಸಂಗೀತಗಾರರು, ಚಿಂತಕರು ಹಾಗೂ ಪಾಕಶಾಸ್ತ್ರ ಪ್ರವೀಣರ ಅಭಿವ್ಯಕ್ತಿಗಳ ಹೊಸ ಸಾಧ್ಯತೆಗಳ ಅನಾವರಣವು ಪ್ರವಾಸಿಗರಿಗೆ ಹಾಗೂ ಸಿಡ್ನಿ ಸೈಡರ್ಸ್‌ಗೆ (ಸಿಡ್ನಿ ನಿವಾಸಿಗಳು) ಮುದ ನೀಡಿವೆ ಎಂಬುದು ಉತ್ಸವ ಸಂಘಟಕರ ಹೇಳಿಕೆ. ಪ್ರತಿ ವರ್ಷ ಬಹಳಷ್ಟು ಉಚಿತ ಪ್ರದರ್ಶನಗಳಿದ್ದರೂ ಕೆಲವು ಬೆಳಕಿನ ಪ್ರದರ್ಶನಗಳನ್ನು ವೀಕ್ಷಿಸಲು ಟಿಕೆಟ್‌ಗಳನ್ನು ಖರೀದಿಸಬೇಕು. ಈ ಬಾರಿ ಸಿಡ್ನಿಯ ಆಕರ್ಷಕ ತಾಣಗಳ ಮಾರ್ಗಗಳಲ್ಲಿ ಹಾದು ಹೋಗುವ ಕೆಲವು ಸ್ಥಳೀಯ ರೈಲುಗಳಲ್ಲೂ ಸಂಗೀತದ ನಿನಾದದೊಂದಿಗೆ ಬೆಳಕಿನ ಪ್ರದರ್ಶನಗಳಿದ್ದವು. ‘ಟೆಕ್ನೊ ಟ್ರೇನ್’ಗಳು ಎಂದು ಕರೆಯಲಾಗುವ ಈ ಟ್ರೇನ್‌ಗಳಲ್ಲಿ ಸಂಚರಿಸಲು ವಿಶೇಷ ಟಿಕೆಟ್‌ಗಳನ್ನು ಖರೀದಿಸಬೇಕು.

ನದಿ ನೀರಿನಲ್ಲಿ ವರ್ಣಚಿತ್ರದಂತೆ ಕಂಡ ಸಿಡ್ನಿ ಹಾರ್ಬರ್‌ ಬ್ರಿಜ್‌
ನದಿ ನೀರಿನಲ್ಲಿ ವರ್ಣಚಿತ್ರದಂತೆ ಕಂಡ ಸಿಡ್ನಿ ಹಾರ್ಬರ್‌ ಬ್ರಿಜ್‌

14ನೇ ಉತ್ಸವ

ಈ ವರ್ಷ ಈ ಉತ್ಸವದ 14ನೇ ವರ್ಷಾಚರಣೆ. ಯಾವುದೇ ಚೌಕಟ್ಟುಗಳಿಲ್ಲದೆ ಸರಹದ್ದುಗಳಾಚೆಗೆ ನಿಂತು ಚಿಂತಿಸುವ ಕಲಾವಿದರು ಸಂಗೀತಗಾರರು ಚಿಂತಕರು ಹಾಗೂ ಪಾಕಶಾಸ್ತ್ರ ಪ್ರವೀಣರ ಅಭಿವ್ಯಕ್ತಿಗಳ ಹೊಸ ಸಾಧ್ಯತೆಗಳ ಅನಾವರಣವು ಪ್ರವಾಸಿಗರಿಗೆ ಹಾಗೂ ಸಿಡ್ನಿ ಸೈಡರ್ಸ್‌ಗೆ (ಸಿಡ್ನಿ ನಿವಾಸಿಗಳು) ಮುದ ನೀಡಿವೆ ಎಂಬುದು ಉತ್ಸವ ಸಂಘಟಕರ ಹೇಳಿಕೆ. ಪ್ರತಿ ವರ್ಷ ಬಹಳಷ್ಟು ಉಚಿತ ಪ್ರದರ್ಶನಗಳಿದ್ದರೂ ಕೆಲವು ಬೆಳಕಿನ ಪ್ರದರ್ಶನಗಳನ್ನು ವೀಕ್ಷಿಸಲು ಟಿಕೆಟ್‌ಗಳನ್ನು ಖರೀದಿಸಬೇಕು. ಈ ಬಾರಿ ಸಿಡ್ನಿಯ ಆಕರ್ಷಕ ತಾಣಗಳ ಮಾರ್ಗಗಳಲ್ಲಿ ಹಾದು ಹೋಗುವ ಕೆಲವು ಸ್ಥಳೀಯ ರೈಲುಗಳಲ್ಲೂ ಸಂಗೀತದ ನಿನಾದದೊಂದಿಗೆ ಬೆಳಕಿನ ಪ್ರದರ್ಶನಗಳಿದ್ದವು. ‘ಟೆಕ್ನೊ ಟ್ರೇನ್’ಗಳು ಎಂದು ಕರೆಯಲಾಗುವ ಈ ಟ್ರೇನ್‌ಗಳಲ್ಲಿ ಸಂಚರಿಸಲು ವಿಶೇಷ ಟಿಕೆಟ್‌ಗಳನ್ನು ಖರೀದಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT