ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

J & K Elections 2024 | ಮೊದಲ ಹಂತದಲ್ಲಿ ಶೇ 61.38ರಷ್ಟು ಮತದಾನ: ಚುನಾವಣಾ ಆಯೋಗ

Published : 20 ಸೆಪ್ಟೆಂಬರ್ 2024, 12:51 IST
Last Updated : 20 ಸೆಪ್ಟೆಂಬರ್ 2024, 12:51 IST
ಫಾಲೋ ಮಾಡಿ
Comments

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅಧಿಕೃತವಾಗಿ ಶೇ 61.38ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಶೇ 63.75ರಷ್ಟು ಪುರುಷರು, ಶೇ 58.96ರಷ್ಟು ಮಹಿಳೆಯರು, ಶೇ 40ರಷ್ಟು ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬುಧವಾರ (ಸೆ.18ರಂದು) ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತ ಚಲಾವಣೆಯಾಗಿತ್ತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆಗಳ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಕ್ಷೇತ್ರದಲ್ಲಿ ಮರು ಮತದಾನ ನಡೆಸುವ ಅಗತ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ವಿಧಾನಸಭೆಯ 90 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 7 ಜಿಲ್ಲೆಗಳ 24 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿತ್ತು. ಇದರಲ್ಲಿ ಕಾಶ್ಮೀರ ಕಣಿವೆ ಪ್ರದೇಶದ 16 ಮತ್ತು ಜಮ್ಮು ಪ್ರದೇಶದ 8 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 90 ಪಕ್ಷೇತರ ಅಭ್ಯರ್ಥಿಗಳು, 9 ಮಹಿಳೆಯರು ಸೇರಿದಂತೆ 219 ಅಭ್ಯರ್ಥಿಗಳು ಕಣದಲ್ಲಿದ್ದರು.

ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್‌ನಲ್ಲಿ ಹಿಂಪಡೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಆದಾದ ಬಳಿಕ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಇದು ಹಿಂದಿನ ಏಳು ಚುನಾವಣೆಗಳಲ್ಲಿ (ನಾಲ್ಕು ಲೋಕಸಭೆ ಮತ್ತು ಮೂರು ವಿಧಾನಸಭಾ ಚುನಾವಣೆ) ನಡೆದ ಮತದಾನಕ್ಕಿಂತ ಹೆಚ್ಚು ಎಂದು ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ.ಪೋಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT